ಶರಣರು ಬಾಗಲಕೋಟೆಯಿಂದ ಕಲಾದಗಿ, ಲೋಕಾಪುರ, ಸತ್ತಿಗೇರಿ ಕಡೆ ಒಂದು ಗುಂಪು, ಮತ್ತೊಂದು ಗುಂಪು ಲೋಕಾಪುರ, ಗೊಡಚಿ ಕಡೆ ಹೀಗೆ ಎರಡು ಗುಂಪುಗಳಾಗಿ ಉಳವಿಯೆಡೆಗೆ ಹೋಗಿರಬೇಕು. ಸತ್ತಿಗೆರೆ, ತಳವೂರು ಮೂಲಕ ಎಂದು ಕಾಲಜ್ಞಾನ ವಚನ ಹೇಳುತ್ತದೆ. ಡಾ. ಆರ್.ಸಿ. ಹಿರೇಮಠ ಅವರು ತೊರಗಲ್ಲಿನಿಂದ ಹೋಗಿರಬೇಕು ಎಂದು ಹೇಳುತ್ತಾರೆ. ಸೋದೆ ಸದಾಶಿವರಾಯರು ಹೇಳುವಂತೆ ಡಾ. ಕಲ್ಬುರ್ಗಿಯವರು ಪಟ್ಟಿ ಮಾಡುತ್ತಾರೆ.
ಎಚ್. ತಿಪ್ಪೇರುದ್ರ ಸ್ವಾಮಿ ಅವರು ತಡಗೋಡ, ಗೊಡಚಿ ಇಲ್ಲಿಂದಲೇ ಆರಂಭಿಸುತ್ತಾರೆ. ಪ್ರೊ. ಜಿ.ಎಚ್. ಹನ್ನೆರಡು ಮಠ ಅವರು ತೊರಗಲ್ ತಡಗೋಡ, ಗೊಡಚಿ, ಸತ್ತಿಗೇರೆ ಊರುಗಳನ್ನು ಉಲ್ಲೇಖಿಸುತ್ತಾರೆ. ಈ ಎಲ್ಲರ ಅಭಿಪ್ರಾಯದಂತೆ ತೊರಗಲ್, ಸತ್ತಿಗೆರೆ ಕಡೆ ಶರಣರ ಒಂದು ತಂಡ, ಇನ್ನೊಂದು ತಂಡ ಗೊಡಚಿ ಕಡೆ ಹೋಗಿರಬೇಕು. ಆದರೆ ಕಟಕೋಳ, ಗೊಡಚಿ, ಮೊದಲೂರು, ಮುರಗೋಡಗಳಲ್ಲಿ ಯುದ್ಧ ಆಗುತ್ತದೆ ಎಂಬುದು ನಮಗೆ ಗೊತ್ತಾಗುತ್ತದೆ. ಇವೆಲ್ಲವೂ ಬೆಳಗಾವಿ ಜಿಲ್ಲೆಯಲ್ಲಿಯೇ ಬರುತ್ತವೆ.
ಗೊಡಚಿ: ರಾಮದುರ್ಗ ತಾಲ್ಲೂಕಿನ ಈ ಊರಲ್ಲಿ ದೊಡ್ಡ ವೀರಭದ್ರೇಶ್ವರ ದೇವಸ್ಥಾನವಿದ್ದು, ಹೊಸ ವೀರಭದ್ರೇಶ್ವರ ದೇವಸ್ಥಾನವನ್ನು ತೊರಗಲ್ ಶಿಂಧೆ ರಾಜಮನೆತದವರು ಕಟ್ಟಿಸಿದ್ದಾರೆ. ಇಲ್ಲಿ ಮತ್ತೊಂದು ಹಳೆಯ ವೀರಭದ್ರೆಶ್ವರ ದೇವಲಯವಿದೆ. ಒಳಗಡೆ ಮೂಲವೀರಭದ್ರೇಶ್ವರ ಮೂರ್ತಿಯಿದ್ದು, ಇಷ್ಟಲಿಂಗ, ರುದ್ರಾಕ್ಷಿ, ನಾಲ್ಕು ಕೈ, ತ್ರಿಶೂಲ ಎಡತೊಡೆ ಮಡಚಿರುವುದನ್ನು ನೋಡಿದರೆ ಗೊಡಚಿ ಮುದಿವೀರಣ್ಣನೆಂದು ಪೂಜಿಸುವ ಮೂರ್ತಿ ಮಾಚಿದೇವರ ಶಿಲ್ಪ ಇರಬೇಕು ಎಂದು ಆರ್.ಸಿ. ಹಿರೇಮಠ ಹೇಳುತ್ತಾರೆ. “ಗೊಡಚಿಯ ಗಿಡದ ಹುತ್ತಿನಲ್ಲಿ ಚಿಕ್ಕ ಗುಡಿಯನ್ನು ಕಟ್ಟಿ ಮಡಿವಾಳಯ್ಯನನ್ನು ಇಟ್ಟು” ಎಂದು ಕಾಲಜ್ಞಾನ ವಚನ ಹೇಳುತ್ತದೆ. ಮಡಿವಾಳ ಮಾಚಿದೇವರ ಜೀವ ಕಾರಿಮನೆಯಲ್ಲಿ ಹೋಯ್ತು ಎಂದು ಕೂಡ ಹೇಳಲಾಗುತ್ತದೆ. ದೇವರ ಹಿಪ್ಪರಗಿಯಲ್ಲಿ ಅವರ ಗದ್ದುಗೆ ತೋರಿಸುತ್ತಾರೆ.
ಗೊಡಚಿಯ ವೀರಭದ್ರೇಶ್ವರ ದೇವಾಲಯದ ೪ ಕಡೆ ಕೂಗು ಬಸವಣ್ಣ ಮೂರ್ತಿಗಳಿವೆ. ಕಟ್ಟೆಯ ಮೇಲೆ ಒಂದು, ಕಂಬದ ಮೇಲೆ ಕೂಡಿಸಿದ ಕೂಗು ಬಸವಣ್ಣನ ೩ ಶಿಲ್ಪಗಳಿವೆ. ಶರಣರ ತಂಡಕ್ಕೆ ಮಾರ್ಗದರ್ಶನ ನೀಡುವ ಶರಣನ ಹೆಸರು ಕೂಗುಮಾರಿ ಶರಣ ಎಂದಾಗಿರಬೇಕು. ಗೊಡಚಿಯಿಂದ ಸಿದ್ನಾಳ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಕದನ (ರಣಬಾಜಿ) ನಡೆದ ಸುಮಾರು ೨೨ ಎಕರೆ ವಿಶಾಲ ಸ್ಥಳವಿದೆ. ಈ ಜಾಗ ಮೊದಲು ಸರ್ಕಾರಕ್ಕೆ ಸೇರಿದ್ದಾಗಿತ್ತು. ನಂತರ ಪಂಜಾಬಿನ ನಿರಾಶ್ರಿತರಿಗೆ ನೀಡಲಾಗಿತ್ತು. ಮುಂದೆ ಅವರು ಸ್ಥಳೀಯ ಒಕ್ಕಲಿಗರಿಗೆ ಮಾರಿದ್ದಾರೆ.
ಊರೊಳಗೆ ಮೂರು ಚಿಕ್ಕ ಶಿವದೇವಾಲಯಗಳಿವೆ. ಎರಡು ಗುಡಿಗಳನ್ನು ಕಲ್ಮಂದಿರಗಳೆಂದು, ಇನ್ನೊಂದನ್ನು ಕಲ್ಮೇಶ್ವರ ದೇವಾಲಯ ಎಂದು ಕರೆಯುತ್ತಾರೆ.
ತೊರಗಲ್ಲ: ಮಲಪ್ರಭಾ ನದಿಯ ದಂಡೆಯ ಮೇಲೆ ಇರುವ ಸುಂದರ ಊರು ಇದು. ಈ ಹಿಂದೆ ಇದು ಶಿಂಧೆ ಮನೆತನದ ಆಡಳಿತಗಾರರ ರಾಜಧಾನಿಯಾಗಿತ್ತು. ಇಲ್ಲಿಯ ಕೋಟೆ ೧೨೮೦ರಲ್ಲಿ ನಿರ್ಮಾಣ ಮಾಡಿದ್ದು ಎಂಬುದು ತಿಳಿದು ಬರುತ್ತದೆ. ಇಲ್ಲೊಂದು ಹಳೆಯ ಭೂತನಾಥ ದೇವಾಲಯವಿದೆ. ಪವಾಡ ಬಸವಣ್ಣನ ಗುಡಿಯೊಳಗೆ ನೀಲಮ್ಮನ ಶಿಲಾಮೂರ್ತಿ ಇದೆ. ಕವಡಿ ಬಸವಣ್ಣನ ಗುಡಿ, ಊರಿನ ಹೊರ ವಲಯದ ಹೊಲವೊಂದರಲ್ಲಿ ಸಂಗಮೇಶ್ವರ ದೇವಾಲಯ ಸಿಗುತ್ತದೆ. ಗ್ರಾಮದ ಪಶ್ಚಿಮ ದಿಕ್ಕಿನ ವಿಶಾಲವಾದ ಪ್ರದೇಶದಲ್ಲಿ ಆಗ ಶರಣರು ಬೀಡು ಬಿಟ್ಟಿದ್ದರು ಎನ್ನುವುದಕ್ಕೆ ಚೆನ್ನಬಸವಣ್ಣನವರ ಚಿಕ್ಕ ಗುಡಿ ಇದೆ. ಈ ಗುಡ್ಡ ದಾಟಿದರೆ ಮುರಗೋಡ ಬರುತ್ತದೆ.
ಕಟಕೋಳ: ಸತ್ತಿಗೇರಿ-ಗೊಡಚಿ ಮಧ್ಯೆದದಲ್ಲಿ ಬರುವ ಊರು. ಈ ಗ್ರಾಮದ ಬೆಟ್ಟದಲ್ಲಿ ಮುರಗೋಡ ಮಹಾಂತಪ್ಪಗಳು ತಪಸ್ಸು ಮಾಡಿದ ಸ್ಥಳವಾಗಿರುವುದರಿಂದ ಭಕ್ತರು ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಿದ್ದಾರೆ. ಈ ಬೆಟ್ಟದ ಕೆಳಗಿನ ಮೈದಾನದಲ್ಲಿ ಕದನ ನಡೆಯಿತು ಎಂದು ಹೇಳಲಾಗುತ್ತದೆ. ಗ್ರಾಮದ ಹೊರಗೆ ನಂದಿ ಬಸವಣ್ಣನ ಗುಡಿ ಇದೆ. ಇಲ್ಲಿಯೂ ಇಷ್ಟಲಿಂಗ ಧರಿಸಿದ ವೀರಭದ್ರೇಶ್ವರನ ಮೂರ್ತಿ ಇದೆ. ಕಾಳಿ ದೇವಸ್ಥಾನ, ಮಗ್ಗುಲಲ್ಲೇ ಕಲ್ಮೇಶ್ವರ ದೇವಾಲಯ ಇದೆ.
ಸತ್ತಿಗೇರಿ: ಸೌದತ್ತಿ ತಾಲ್ಲೂಕಿನ ಸತ್ತಿಗೇರಿಗೆ ಶರಣರ ಮತ್ತೊಂದು ತಂಡ ಬಂದಿರಬೇಕು. ಶರಣರು ಉಳಿದುಕೊಂಡ ಪ್ರಮುಖ ಸ್ಥಳ ಇದಾಗಿದ್ದು, ಇಲ್ಲಿ ನಡೆದ ಕಾದಾಟದಲ್ಲಿ ಕೆಂಪಯ್ಯ ಎಂಬ ಶರಣನೊಬ್ಬ ಲಿಂಗೈಕ್ಯರಾಗುತ್ತಾರೆ ಎಂದು ಹೇಳಾಗುತ್ತಿದೆ. ಹೀಗಾಗಿ ಅಲ್ಲೊಂದು ಕೆಂಪಯ್ಯ ಹೆಸರಿನ ಗದ್ದುಗೆ ಸ್ಮಾರಕ ನಿರ್ಮಿಸಲಾಗಿದೆ. ಇಲ್ಲಿಗೆ ಒಂದು ಕಿ.ಮೀ. ಅಂತರದಲ್ಲಿ ಬಯಲು ಬಸವನ ದೇವಾಲಯವಿದ್ದು, ಇದನ್ನು ಶರಣರು ಬೀಡು ಬಿಟ್ಟ ಇನ್ನೊಂದು ಸ್ಥಳ ಎಂದು ಗುರುತಿಸಲಾಗುತ್ತಿದೆ. ಊರೊಳಗೆ ವೀರಭದ್ರೇಶ್ವರ ಮಂದಿರವಿದ್ದು, ಇಷ್ಟಲಿಂಗ ಧರಿಸಿದ ವೀರಭದ್ರನ ಶಿಲಾಮೂರ್ತಿಯಿದೆ. ಹಾಗೆಯೇ ರಾಮಲಿಂಗೇಶ್ವರ, ಕಲ್ಮೇಶ್ವರ, ಬಸವಣ್ಣನ ದೇವಸ್ಥಾನಗಳಿರುವುದನ್ನು ಕಾಣಬಹುದು.
ಮಿಲಾನಮಟ್ಟಿ: ಶರಣರು ಇಲ್ಲಿ ಬೀಡುಬಿಟ್ಟಿದ್ದರು ಎನ್ನುವುದಕ್ಕೆ ಇಲ್ಲೊಂದು ಬಸವಣ್ಣನ ದೇವಾಲಯವಿರುವುದನ್ನು ಕಾಣಬಹುದು. ಧರ್ಮ ಪ್ರಸಾರ, ಧರ್ಮ ಪ್ರಚಾರಕ್ಕಾಗಿ ಹೊರಟ ಶರಣರು ಆಗ ಇಂತಹ ಹಳೆಯ ಗುಡಿ-ಗುಂಡಾರಗಳಲ್ಲಿಯೇ ವಾಸವಾಗಿರುತ್ತಿದ್ದರು.
ಮುರಗೋಡ: ಮುರಗೋಡ ಪ್ರವೇಶಕ್ಕೆ ಮುನ್ನ ಕಾಣುವ ವಿಶಾಲ ಮೈದಾನದಲ್ಲಿ ಈ ಹಿಂದೆ ಕದನ ನಡೆಯಿತು ಎಂದು ಹೇಳಲಾಗುತ್ತಿದ್ದು, ಅಲ್ಲೊಂದು ಚೆನ್ನಬಸವಣ್ಣನವರ ಸ್ಮಾರಕವಿದೆ. ಸ್ಮಾರಕದ ಎದುರು ದೊಡ್ಡ ಬಾವಿ, ಮಗ್ಗುಲಲ್ಲಿ ಒಂದು ಕೆರೆ ಇದೆ. ಪೂರ್ವ ದಿಕ್ಕಿನಲ್ಲಿ ಪ್ರಕೃತಿದತ್ತ ಗವಿಯಿದೆ. ಶರಣರು ಇಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಊರೊಳಗಿನ ಜಂಬುಲಿಂಗೇಶ್ವರ ದೇವಸ್ಥಾನದಲ್ಲಿ ಚೆನ್ನಬಸವಣ್ಣನವರು ಇರುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿ ಲಿಂಗಪೀಠದ ಮೇಲೆ ವೀರಭದ್ರನ ಮೂರ್ತಿ ಇರುವುದನ್ನು ಗಮನಿಸಬಹುದು. ಕೊರವೆರ ಗಲ್ಲಿಯಲ್ಲಿ ಬೊಮ್ಮಯ್ಯನ ಸ್ಮಾರಕವಿರುವ ಸ್ಥಳದಲ್ಲಿ ಹೆಣ್ಣು ದೇವತೆಯ ಮೂರ್ತಿ ಇಟ್ಟು ಪೂಜಿಸುತ್ತಿದ್ದಾರೆ.
ಮುರಗೋಡದ ದಕ್ಷಿಣದ ತುದಿಯಲ್ಲಿ ಬಯಲು ಬಸವಣ್ಣನ ಕಟ್ಟೆ, ಮಡಿವಾಳ ಮಾಚಿದೇವರ ಗುಡಿ, ಕೂಗು ಬಸವಣ್ಣ (ಕೂಗುಮಾರಿ ಶರಣ), ಉಳವಿಯಕಡೆ ಬಾಗಿಲು ಎಂಬ ಕಮಾನು ನಿರ್ಮಿಸಿ ಅಲ್ಲೊಂದು ಚೆನ್ನಬಸವಣ್ಣನವರ ನಿಂತಿರುವ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ನಾವು ಕಾಣಬಹುದು. ಮುರುಗೋಡದಲ್ಲಿ ರೇವಣಸಿದ್ಧೇಶ್ವರ, ಸಿದ್ಧರಾಮೇಶ್ವರ, ಮಡಿವಳ ಮಾಚಿದೇವ, ಘಟ್ಟಿವಾಳಯ್ಯ, ಆದಯ್ಯ, ಫಕಿರೇಶ್ವರ ಮುಂತಾದ ಹೆಸರಿನ ೧೦೦ ಮಠಗಳಿವೆ ಎಂದು ಅಲ್ಲಿನ ಹಿರಿಯರು ಹೇಳುತ್ತಾರೆ.
ಬಿಜ್ಜಳನ ಸೈನಿಕರು ಮತ್ತು ಶರಣರ ನಡುವೆ ನಡೆದ ಈ ಕಾದಾಟದಲ್ಲಿ ಕದಂಬ ಅರಸರರು ಶರಣರ ಪರವಾಗಿ ಹೋರಾಟ ಮಾಡಿದರು. ಕಾದರವಳ್ಳಿಯ “ಕಾಡರ್” ಎನ್ನುವ ಕಾಡು ಜನಾಂಗವೂ ಶರಣರಿಗೆ ಸಹಾಯ ಮಾಡಿದರು. ಆ ಸೈನಿಕರ ಮಾರ್ಗದರ್ಶನದಲ್ಲಿ ಶರಣರು ಮುನ್ನಡೆದರು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಶರಣರ ಬಗೆಗಿನ ಈ ಅಧ್ಯಯನವು ಕೇವಲ ಲಿಂಗಾಯತ ಸಂಸ್ಕೃತಿಯಲ್ಲ. ಕರ್ನಾಟಕದ ಸಂಸ್ಕೃತಿಯ ಇತಿಹಾಸದಲ್ಲಿ ಮುಖ್ಯವಾದ ಚರಿತ್ರೆಯಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…