ಅಂಕಣ ಬರಹ

ಆ ತಲೆಮಾರಿನ ತಳಮಳವೊಂದು ತಣ್ಣಗಾಯ್ತು

ಮರಣ ಯಾತನೆ ಶುರುವಾಗುವ
ಮೊದಲು ಅವಳ ಮುಖ ಹೇಗೆ ಕಾಣಿಸುತ್ತಿತ್ತೆಂದು
ನನಗೀಗ ನೆನಪಿಗೆ ಬರಲೊಲ್ಲದು.
ಅವಳು ಆಯಾಸದಿಂದ ತನ್ನ ಬಡಕಲ ಹಣೆಯ
ಮೇಲಿನ ಕಪ್ಪುಗೂದಲನ್ನು ಸರಿಪಡಿಸಿಕೊಳ್ಳುತ್ತಿದ್ದಾಗಿನ
ಕೈಚಲನೆಯೊಂದು ಮಾತ್ರ ಈಗಲೂ ಕಣ್ಣಿಗೆ ಕಟ್ಟಿದೆ….
                                               – ಬೆರ್ಟೋಲ್ಟ್ ಬ್ರೆಕ್ಟ್

ಕಂಡದ್ದನ್ನು ಕಂಡ ಹಾಗೆ ಬರೆಯಬಲ್ಲ ಛಾತಿ ಹೊಂದಿದ್ದ ಲಿಂಗಣ್ಣ ಸತ್ಯಂಪೇಟೆ ’ಹೀಗಿದ್ದರು……’ ಎಂದು ಅಂದುಕೊಳ್ಳುತ್ತಿರುವಾಗಲೇ ’ಈಗಿಲ್ಲ…..’ ಎಂಬುದನ್ನು ನಂಬುವುದಕ್ಕೆ ಆಗುತ್ತಲೇ ಇಲ್ಲ.

ಮೇಷ್ಟ್ರು ಆಗಿದ್ದವರು, ’ಲಂಕೇಶ ಪತ್ರಿಕೆ’ಗೆ ಬರೆಯುವ ಮೂಲಕ ಪತ್ರಕರ್ತರಾಗಿ ಹೊರಹೊಮ್ಮಿದವರು. ರೈತ ಹೋರಾಟಗಳಿಂದಾಗಿ ಜನಮನ ಸೆಳೆದವರು. ’ಅಗ್ನಿ ಅಂಕುರ’ ಪತ್ರಿಕೆಯ ಬರಹಗಳಿಂದ ಚಾಟಿಯೇಟು ನೀಡಿದವರು, ವಯಸ್ಸಾದಂತೆಲ್ಲಾ ಮಾಗಿದ ಅನುಭವವಾಗಿ ಬಸವ ಫಿಲಾಸಫಿಯನ್ನು ಹೆಚ್ಚು ಓದಿಕೊಂಡು, ’ಬಸವ ಮಾರ್ಗ’ ಎಂಬ ಧಾರ್ಮಿಕ ಮ್ಯಾಗಝೀನ್ ಪ್ರಕಟಿಸುತ್ತಿದ್ದರು. ಆ ಮೂಲಕ ಬಸವ ಅನುಯಾಯಿಗಳಿಗೊಂದು ರಹದಾರಿ, ಬಸವಣ್ಣನನ್ನು ಅರಿಯಲು ಯತ್ನಿಸುವವರಿಗೊಂದು ಕೈಪಿಡಿ, ವಚನಕಾರರನ್ನು ಪರಿಚಯಿಸಿಕೊಳ್ಳುವವರಿಗೊಂದು ಪರಿಚಯಿಕೆ, ಸ್ವಾಮಿಕುಲ ಚಕ್ರವರ್ತಿಗಳಿಗೊಂದು ’ಮಾರ್ಗ’, ಶರಣರಿಗೊಂದು ’ಅನುಭವ ಮಂಟಪ’ದ ಮುಖವಾಣಿ, ಶರಣ ಚಿಂತಕರಿಗೊಂದು ವೇದಿಕೆ, ಹಾಗೇ ಸುಮ್ಮನೆ ಓದುವವರಿಗೊಂದು ದೀವಿಗೆ, ಸಮಸ್ತರಿಗೊಂದು ಬಸವ ಬೆಳಗು ಆಗಿದ್ದ ಬಸವ ’ಮಾರ್ಗ’ಕಾರ ಕಳೆದು ಹೋದರು ಎಂಬ ಸತ್ಯವನ್ನು ನುಂಗಲು ಈಗಲೂ ಆಗುತ್ತಿಲ್ಲ.
’……ಇಷ್ಟು ಬೇಗ ಯಾಕೆ ಹೋದಿರಿ?

ಹೋಗುವಾಗ ನಮ್ಮನ್ನೆಲ್ಲಾ ಯಾಕೆ ನೆನೆಸಿಕೊಳ್ಳಲಿಲ್ಲ? ಕಡೆ ಗಳಿಗೆಯಲ್ಲಿ ನಮಗೊಂದು ಮಾತು ಕೂಡ ಹೇಳಲಿಲ್ಲ?…’ ಹಾಗಂತ ಕೇಳಬೇಕೆನಿಸಿದರೂ ಬಾಯಿಂದ ಮಾತೇ ಹೊರಡುತ್ತಿಲ್ಲ. ಹೇಳುವುದಕ್ಕೇನೂ ಇಲ್ಲದಿದ್ದರೆ ಲಿಂಗಣ್ಣ ಸತ್ಯಂಪೇಟೆ ಅವರು ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಇಲ್ಲಿಯವರೆಗೂ ಅವರು ಬರೆದಿದ್ದಾರಲ್ಲಾ…. ಅದರಲ್ಲಿ, ಏನಾದರೊಂದು ಬಾಳಿಗೆ, ನಮ್ಮ ಬದುಕಿಗೆ, ಬಸವಾದಿ ಶರಣರ ಬದುಕಿನ ಬೋಧನೆಗಳಿಗೆ ಸಂಬಂಧಿಸಿದ ವಿಷಯಗಳನ್ನೆತ್ತಿ ಹೇಳುತ್ತಾ ಬಂದಿದ್ದಾರೆ.

ಅದು ಲಂಕೇಶ ಪತ್ರಿಕೆ ಹಾಗೂ ಅಗ್ನಿ ಅಂಕುರ ಪತ್ರಿಕೆಗಳ ಮೂಲಕ ಮಾನವೀಯ ಕಾಳಜಿಯ ವರದಿಗಳಾಗಿರಬಹುದು, ರಾಜಕಾರಣಿಗಳ ಲಂಪಟತನವಾಗಿರಬಹುದು, ಅಧಿಕಾರಿಗಳ ಲಂಚಗುಳಿತನವಾಗಿರಬಹುದು, ಬಸವ ಮಾರ್ಗದ ಮೂಲಕ ಆಚಾರ-ವಿಚಾರಗಳಲ್ಲಿ ಕಾಯಕ ಸಂಸ್ಕೃತಿಯನ್ನು ಮಾಡಿಕೊಂಡು ಬರುತ್ತಿರುವ ಶರಣ ಪ್ರಮಥರ ಸಾಧನೆಯನ್ನು ಎತ್ತಿಹಿಡಿಯುವ ಲೇಖನಗಳಾಗಿರಬಹುದು, ಢೋಂಗಿ ಸ್ವಾಮಿಗಳನ್ನು ಬೆತ್ತಲೆ ಮಾಡುವ ನಿಷ್ಠುರ ವರದಿಗಳಾಗಿರಬಹುದು…. ಹೀಗೆ ಇನ್ನೇಸೋ….!
ಅವರದು ಅರ್ಥವಿಲ್ಲದ ವ್ಯರ್ಥ ಬರವಣಿಗೆಯಲ್ಲ.

ಅವರ ಬರವಣಿಗೆಯಲ್ಲಿದ್ದ ಒಗರು, ವಿಚಾರ ವ್ಯವಸ್ಥೆ, ಹೇಳುವ ತಾಕತ್ತು ಬೇರಾರಲ್ಲೂ ಇಲ್ಲ. ಆಡು ಮಾತಿನಲ್ಲಿ ಸೊಗಯಿಸಿ ಬರುವ ಅವರ ಬರವಣಿಗೆಗೆ ಓದುಗರನ್ನು ಒಮ್ಮೆಲೇ ಆತ್ಮೀಯರನ್ನಾಗಿಸಿಕೊಳ್ಳುವ ಸ್ವಭಾವವಿತ್ತು. ಅಲ್ಲಿ ವಿಚಾರಗಳಿಗೆ ಕೊರತೆಯಿಲ್ಲ. ನಮಗೆ ಒಪ್ಪಿಗೆ ಆಗುತ್ತದೋ ಇಲ್ಲವೋ ವಿವೇಚನೆಗೆ ಎಳೆಯುವ ಅವರ ಬರವಣಿಗೆಯಲ್ಲಿ ಕಾವಿದ್ದು ಮಾನವೀಯ ಕಂಪನವಿತ್ತು. ದುಷ್ಟತನವನ್ನು ಮೂಟೆಕಟ್ಟಿ ಎಳೆದು ಅಪ್ಪಳಿಸುವ ಎದೆಗಾರಿಕೆ ಹೊಂದಿದ್ದರು. ಲವಲವಿಕೆಯ ಅಗ್ಗಳಿಕೆಯಿತ್ತು. ಅವರಲ್ಲಿದ್ದ ಆತ್ಮವಿಶ್ವಾಸ ಅಸದೃಶವಾಗಿತ್ತು. ಬೌದ್ಧಿಕ ಬಲ ಇರುವ ಕಾರಣದಿಂದಾಗಿಯೇ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಆಷಾಢಭೂತಿಗಳ ವಿರುದ್ದ ಸೆಡ್ಡು ಹೊಡೆದು ನಿಲ್ಲುತ್ತಿದ್ದರು. ಸತ್ಯಕ್ಕೆ ತಲೆಬಾಗುತ್ತಿದ್ದರು. ಅಸತ್ಯ ಕಂಡರೆ ಹಿಡಿದು ಬಾರಿಸುತ್ತಿದ್ದರೇನೋ ಎಂಬಷ್ಟರ ಮಟ್ಟಿಗೆ ಸಿಟ್ಟಿಗೇಳುತ್ತಿದ್ದರು.

ಲಿಂಗಣ್ಣ ಸತ್ಯಂಪೇಟೆ ಅವರ ಬರಹ ಬಿಸಿಲಲ್ಲಿ ಹಾಕಿದ ಬಣವೆಯಂತಲ್ಲ. ಅವರ ಬರಹ ಓದುವುದೆಂದರೆ, ಹುಣಸೆಹಣ್ಣಿಗೆ ಉಪ್ಪು-ಖಾರ-ಬೆಲ್ಲ ಸೇರಿಸಿ, ಬೆರೆಸಿ, ಕುಟ್ಟಿ ಮಾಡಿಕೊಂಡ ಉಂಡೆಯನ್ನು ಚಪ್ಪರಿಸಿದಂತೆ, ತಿಂದಷ್ಟೂ ತಿನ್ನಬೇಕೆನ್ನುವ ಚಪಲ.

ಅವರ ಬರಹ ಎಷ್ಟು ಸೊಗಸೋ, ಮಾತೂ ಅಷ್ಟೇ ಸೊಗಸು. ಹರಟೆಮಲ್ಲರಿಗೆ ಅಲ್ಲಿ ಅವಕಾಶಗಳಿಲ್ಲ. ನಡೆ ನುಡಿ ಒಂದಾಗದವರ ಮಾತುಗಳಿಗೆ ಒಪುತ್ತಿರಲಿಲ್ಲ. ಆದರೆ, ವಿಷಯಗಳನ್ನು ಚರ್ಚಿಸಲು ಸ್ನೇಹಿತರನ್ನು ಬಯಸುತ್ತಿದ್ದರು.
ಎರಡ್ಮೂರು ಸಲ ಶಹಾಪುರದ ಮನೆಗೆ ಹೋಗಿದ್ದೆ. ಪ್ರೀತಿಯಿಂದ ಬರಮಾಡಿಕೊಂಡಿದ್ದರು. ತಾವು ಬರೆಯುತ್ತ ಕುಳಿತಿದ್ದರೂ ನನಗಾಗಿ ಸಮಯವನ್ನು ನೀಡಿದರು. ಬರೆಯುವ ಸಂದರ್ಭದಲ್ಲಿ ಬಂದು ತೊಂದರೆ ಮಾಡಿರುವುದಕ್ಕೆ ಕ್ಷಮೆ ಕೇಳಿದರೆ, ’ಅದೆಲ್ಲ ಇದ್ದದ್ದೇ’ ಎಂದು ಹೇಳಿ, ಕೂಡಿಸಿಕೊಂಡು ಉಭಯಕುಶಲೋಪರಿ ಸಾಂಪ್ರತ ಮಾತುಗಳು ನಡೆಯುತ್ತಿದ್ದವು. ಕೊನೆಗೆ ಊಟ ಮಾಡಿಸದೇ ಎಂದಿಗೂ ನನ್ನನ್ನು ಕಳಿಸಿಯೇ ಇಲ್ಲ. ಬೇಡವೆಂದರೂ ಕೇಳುತ್ತಿರಲಿಲ್ಲ.
ಇಷ್ಟೆಲ್ಲ ಇದ್ದರೂ ಇತ್ತೀಚೆಗೆ, ತೀರಾ ಇತ್ತೀಚೆಗೆ ಸಾಫ್ಟ್ ಆಗಿದ್ದರು ಎಂದು ಅನಿಸುತ್ತಿತ್ತು. ಅವರು ಆಡುವ ಮಾತುಗಳು ತಂದೆಯೊಬ್ಬ ತನ್ನ ಮಕ್ಕಳಿಗೆ ತಿಳಿಹೇಳುವ ರೀತಿಯಲ್ಲಿ ನನಗೆ ಸಾಕಷ್ಟು ಹೇಳಿದ್ದಾರೆ. ಅವರ ಪ್ರತೀ ಮಾತುಗಳು ಕೇಳಿದಾಗಲೂ ನನಗೆ ನನ್ನ ತಂದೆ ನೆನಪಾಗಿದ್ದರು. ಅವರ ಮಕ್ಕಳಿಗೆ ಹೇಗೆ ಹೇಳುತ್ತಿದ್ದರೋ….. ನನಗೂ ಹಾಗೇ ಹೇಳುತ್ತಿದ್ದರು.

ಕಳೆದ ವರ್ಷ ಅಮ್ಮ ಪ್ರಶಸ್ತಿಗೆ ದಶಮಾನೋತ್ಸವದ ಸಂಭ್ರಮ ಇತ್ತು. ಯಾವತ್ತೂ ಪ್ರಶಸ್ತಿಗಳಿಗೆ ಒಪ್ಪುವುದಿಲ್ಲ ಅವರು. ಹಾಗಂತ ಶಿವರಂಜನ್‌ಗೆ ಹೇಳಿ, ತಂದೆಗೆ ಒಪ್ಪಿಸಬಹುದೇ ಎಂದು ಕೇಳಿದ್ದೆ. ಆದರೆ, ’ನನ್ನ ಮಾತಿಗಿಂತ ನಿನ್ನ ಬಗ್ಗೆ ಅವರಿಗೆ ಅಭಿಮಾನವಿದೆ. ನೀನೇ ಮಾತಾಡು’ ಎಂದಿದ್ದರು ಶಿವರಂಜನ್. ನೇರವಾಗಿ ಅವರಿಗೆ ಫೋನ್ ಮಾಡಿದೆ. ಅವರಿಗೆ ಅಮ್ಮ ಪ್ರಶಸ್ತಿ ಬಗ್ಗೆ ಗೊತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬರುತ್ತಿರುವ ಈ ಕಾರ್ಯದ ಬಗ್ಗೆ ಅವರಿಗೆ ಹೆಮ್ಮೆಯಿತ್ತು. ’ಮನೆಯವರಿಗೇ ಪ್ರಶಸ್ತಿ ಕೊಟ್ರೆ ಹೆಂಗ್, ಹೊರಗಿನವರಿಗೆ ಕೊಡು’ ಅಂದಿದ್ದರು. ’ಅದೆಲ್ಲ ಗೊತ್ತಿಲ್ಲರೀ, ನೀವು ಒಪ್ಪಬೇಕು’ ಅಂತ ಲಾಡಕೀ ಮಾತಾಡಿದ್ದೆ. ಮರು ಮಾತನಾಡದೇ, ಒಪ್ಪಿಕೊಂಡಿದ್ದರು. ಇದನ್ನು ಕೇಳಿಯೇ ಅನೇಕರು ಆಶ್ಚರ್ಯವೂ ಆಗಿದ್ದರು.

ಅಪ್ರಿಯ ಎನಿಸುವ ಸಂಗತಿಗಳಿಗೆ ಟೀಕೆ ಮಾಡುವ ಗುಣ ಹೇಗಿತ್ತೋ, ಪ್ರಿಯ ಎನಿಸುವ ಒಳ್ಳೆಯ ಕಾರ್ಯಗಳಿಗೆ ಉತ್ತೇಜನ, ಪ್ರೋತ್ಸಾಹ ಮಾಡುವ ಗುಣವೂ ಇತ್ತು ಅವರಲ್ಲಿ.

ಲಿಂಗಣ್ಣ ಸತ್ಯಂಪೇಟೆ ಅವರಿಗೆ ಅಮ್ಮ ಪುರಸ್ಕಾರ ನೀಡಿ ಗೌರವಿಸಿದ್ದೆ. ಪ್ರಶಸ್ತಿ ಸ್ವೀಕರಿಸಿ ಅಂದು ಅವರಾಡಿದ ಮಾತುಗಳು, ಎಂದಿಗೂ ಮರೆಯುವುದಿಲ್ಲ. ಮರುದಿನ ಬೆಳಿಗ್ಗೆ ಮನೆಗೆ ಬಂದಿದ್ದರು. ಅವರ ಜೊತೆಗೆ, ನಾಡಿನ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಇದ್ದರು. ಮೊಸರು ಜೊತೆಗೆ ಇದ್ದ ಒಗ್ಗರಣೆ ತಿನ್ನುತ್ತಲೇ, ನನ್ನ ಹೆಂಡತಿಯೊಂದಿಗೆ ಮಾತಾಡುತ್ತಿದ್ದರು. ಮಗಳನ್ನು ಮಾತಾಡಿಸಿದಂತೆ, ಸೊಸೆಯೊಂದಿಗೆ ಮಾತಾಡಿಸಿದಂತ್ತಿತ್ತು. ಆವತ್ತು ಅವರು ಹೇಳಿದ ಬುದ್ದಿಮಾತು ಇಂದಿಗೂ, ಎಂದಿಗೂ ಮಾಯವಾಗುವುದಿಲ್ಲ.

’ಅಪ್ಪ -ಅಮ್ಮನ ಬಗ್ಗೆ ನೀವಿಬ್ಬರೂ ಇಟ್ಟುಕೊಂಡಿರುವ ಪ್ರೀತಿ ಇದೆಯಲ್ಲ… ಅದಕ್ಕೆ ಶರಣಾರ್ಥಿ’ ಎಂಬಂತಹ ಮಾತಾಡಿದ್ದರು.

ತೀರಾ ಮೊನ್ನೆ ಮೊನ್ನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಎರಡೂವರೆ ತಿಂಗಳಿಗೆ ಕನ್ನಡ ಭವನಕ್ಕೆ ನಡೆದುಕೊಂಡು ಬಂದಿದ್ದರು. ಅವರು ಬರುತ್ತಿರುವ ವಿಷಯ ಗೊತ್ತು ಮಾಡಿಕೊಂಡಿದ್ದ ಪರಿಷತ್ತಿನ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ, ಇನ್ನೋರ್ವ ಕಾರ್ಯದರ್ಶಿ ಬಿ.ಎಚ್.ನಿರಗುಡಿ ಅವರು ಲಿಂಗಣ್ಣ ಸತ್ಯಂಪೇಟೆ ಅವರನ್ನು ಸನ್ಮಾನಿಸುವುದಕ್ಕಾಗಿ ಶಾಲು, ಪುಸ್ತಕದ ತಯಾರಿ ಮಾಡಿದ್ದರು. ಕನ್ನಡ ಭವನದೊಳಗೆ ಬರುತ್ತಲೇ ಶುಭ ಹಾರೈಸಿದ್ದರು.

’ಪರವಾಗಿಲ್ಲ, ನೀನು ಬಂದ ಮೇಲೆ ಸಾಹಿತ್ಯ ಕಾರ್ಯಕ್ರಮಗಳು ಚೆನ್ನಾಗಿ ಆಗುತ್ತಿವೆ. ಹೀಂಗ ಮಾಡಿಕೊಂಡು ಹೋಗು. ಕಟ್ಟಡ ಕಟ್ಟೋದಕ್ಕಿಂತ ಗುಲ್ಬರ್ಗದೊಳಗ ಸಾಹಿತ್ಯ ಕಾರ್ಯಕ್ರಮಗಳು ಕಡಿಮೆ ಆಗ್ಯಾವ. ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡು. ಒಳ್ಳೆಯ ಹೆಸರು ತರ‍್ತೀ ಅಂತ ಭರವಸೆ ನನಗಿದೆ. ನಿಮ್ಮ ಟೀಂ ಕೂಡ ಆಕ್ಟಿವ್ ಇದೆ’ ಎಂದರು.

ಮೊದಲ ಬಾರಿ ಕನ್ನಡ ಭವನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ’ಇದೆಲ್ಲ ಯಾಕಪ್ಪ’ ಎಂದರೂ ನಾವು ಕೇಳಲಿಲ್ಲ. ನಂತರ ಅವರನ್ನು ಬೀಳ್ಕೊಡಲು ಕನ್ನಡ ಭವನದ ಗೇಟ್‌ವರೆಗೂ ನಡೆದುಕೊಂಡು ಬಂದೆವು. ಕಾರಿನಲ್ಲಿ ಕೂತು, ಕೈಯಾಡಿಸಿ, ’ಹೋಗಿ ಬರ‍್ತೀನಿ’ ಅಂದರು. ಆವತ್ತು ಆಡಿರುವ ಮಾತು, ಮಾಡಿದ ಟಾ ಟಾ.. ಅದೇ ಕೊನೆಯಾಯಿತು. ಆ ತಲೆಮಾರಿನ ತಳಮಳವೊಂದು ತಣ್ಣಗಾಯಿತು. ಇನ್ನ್ಯಾವತ್ತೂ ಕನ್ನಡ ಭವನಕ್ಕೆ ಅವರು ಬರುವುದಿಲ್ಲ ಎಂಬುವದನ್ನು ನೆನೆಸಿಕೊಂಡರೆ, ದುಃಖ ಉಮ್ಮಳಿಸುತ್ತದೆ.

’ನಿಮ್ಮ ನೆನಹು ಮತ್ತು ಹಾಕಿಕೊಟ್ಟ ಮಾರ್ಗ ನಮಗೆಲ್ಲಾ ದೀವಿಗೆ. ಹಾಗಂತ ಮೋಡದಾಚೆಯ ಲೋಕದೊಳಗಿಂದ ನಮಗೆ ಹರಸಿ’.

– ಮಹಿಪಾಲರೆಡ್ಡಿ ಮುನ್ನೂರ್

emedialine

View Comments

  • ಸರ್ ನಿಮ್ನ ಬರಹದಲ್ಲಿ ಸತ್ಯವಿದೆ... ಯುವ ಪಿಳಿಗೆಯನ್ನು ಪ್ರೊತ್ಸಾಹಿಸುವ..ಉದಯೊನ್ಮುಖರಿಗೆ ಮಾರ್ಗದರ್ಶನ ... ಮರೆಯಲು ಅಸಾದ್ಯ... ನಾವಿಂದು ತಬ್ಬಲಿಗಳು...

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

3 hours ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

15 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

16 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

17 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

17 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

17 hours ago