ಅಂಕಣ ಬರಹ

ಶರಣರ ಉಳವಿ ದಾರಿ: ಕಾರಿಮನಿಯಿಂದ ಲಿಂಗನಮಠದವರೆಗೆ

ಉಳವಿಯೆಡೆಗೆ ಹೊರಟ ಶರಣರ ತಂಡಗಳಲ್ಲಿ ಒಂದು ತಂಡ ಮುರಗೋಡನಲ್ಲಿ ತಂಗಿದಂತೆ ಇನ್ನೊಂದು ತಂಡ ಕಾರಿಮನೆಯಲ್ಲಿ ಉಳಿದಿತ್ತು. ಮುರಗೋಡನಿಂದ ಮೂರು ಕಿ. ಮೀ. ಅಂತರದಲ್ಲಿ ಕಾರಿಮನಿ ಸಿಗುತ್ತದೆ. ಮರಗೋಡದಲ್ಲಿ ಸೈನಿಕರೊಂದಿಗಿನ ಕಾದಾಟದಲ್ಲಿ ಮಡಿವಾಳ ಮಚಿದೇವರಿಗೆ ಭರ್ಚಿ ಚುಚ್ಚಿ ಗಾಯಗೊಂಡಾಗ ಶರಣರೆಲ್ಲರೂ ಅವರನ್ನು ಕಾರಿಮನೆಗೆ ಹೊತ್ತು ತಂದರು. ಇವರು ಇಲ್ಲಿಯೇ ಲಿಂಗೈಕ್ಯರಾದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಮಡಿವಾಳ ಮಾಚಿದೇವರ ಗದ್ದುಗೆ-ಗುಡಿ ಇದೆ. ಗರಗದ ಮಡಿವಳಪ್ಪ ಕೆಲದಿನ ಇಲ್ಲಿದ್ದು ತಪಸ್ಸು ಮಾಡಿದ್ದರ ನೆನಪಿಗೆ ಅವರ ಗದ್ದುಗೆ ಕೂಡ ನಿರ್ಮಿಸಲಾಗಿದೆ.

ಕಾರಿಮನಿ ದಾಟುವ ದಾರಿಯಲ್ಲಿ ಬಸವಣ್ಣನ ಗುಡಿಯಿದ್ದು, ಅದರ ಮುಂದೊಂದು ಬಾವಿಯಿತ್ತೆಂದೂ  ಮಡಿವಾಳ ಮಾಚಿದೇವರ ಶವ ಸಂಸ್ಕಾರ ಮಾಡಿದ ಶರಣರು ಆಗ ಇದೇ ಬಾವಿಯಲ್ಲಿ ಕೈ-ಕಾಲು, ಮುಖ ತೊಳೆದು ಮುಂದೆ ನಡೆದರು ಎಂಬ ಸಮಾಚಾರ ಸಿಗುತ್ತದೆ. ಗುಡ್ಡದ ವಾರಿಯಲ್ಲಿ ಸಿಗುವ ಸಿದ್ದನಗವಿಯಲ್ಲಿ ಲಿಂಗ ಮತ್ತು ನಂದಿ ಮೂರ್ತಿಗಳಿವೆ. ಹಿಂದಿನ ಮಗ್ಗಲು ಬಾಗಿಲು ಇದೆ. ಶರಣರು ತಾವು ತಂದಿದ್ದ ವಚನದ ತಾಡೋಲೆಗಳನ್ನು ಒಳಗಿಟ್ಟು ಉಳವಿಯೆಡೆಗೆ ಹೋದರು ಎಂದು ಹೇಳಲಾಗುತ್ತಿದೆ. ಊರು ದಾಟಿ ಎಡಗಡೆ ಪೂರ್ವಕ್ಕೆ ತೆರೆಳಿದರೆ ಮೈಲಾರಲಿಂಗ ದೇವಸ್ಥಾನವಿದೆ. ಇಲ್ಲಿದ್ದ ಶರಣರು ಕಾರಿಮನೆ ಹೊರ ವಲಯದಲ್ಲಿ ಇರುವ ಉಳವಿಯೆಡೆಗೆ ಬಾಗಿಲು (ಅಗಸಿ-ಕಮಾನ್) ಮೂಲಕ ಹೊರಗಾದರು ಎಂದು ಹೇಳಲಾಗುತ್ತಿದೆ.

ಸೊಗಲ, ಹೊಸೂರು: ಕಾರಿಮನೆಯಿಂದ ನಾಲ್ಕೈದು ಕಿ. ಮೀ. ಪೂರ್ವಕ್ಕೆ   ಹೋದರೆ ಸೊಗಲ ಬರುತ್ತದೆ. ಇಲ್ಲಿ ಪ್ರಸಿದ್ಧ ಸೋಮೇಶ್ವರ ದೇವಾಲಯವಿದೆ. ಶರಣರು ಇಲ್ಲಿಯೂ ತಂಗಿರಬೇಕು. ಸ್ವಲ್ಪ ದೂರದಲ್ಲಿ ಬರುವ ಹೊಸೂರಿನಲ್ಲಿ ಚೆನ್ನಬಸವಣ್ಣನ ದೇವಾಲಯ, ಇದರ ಮಗ್ಗುಲಲ್ಲಿ ಬಸವಣ್ಣನವರ ಗುಡಿಯಿದೆ. ಚೆನ್ನಬಸವಣ್ಣನವರ ಮತ್ತು ಬಸವಣ್ಣನವರ ಗುಡಿ ಮಧ್ಯೆ ದಾನಮ್ಮ ಅಜ್ಜಿಯ ಸಮಾದಿ ಇರುವುದನ್ನು ವಿಶೇಷವಾಗಿ ಕಾಣಬಹುದು. ಶರಣರು ಇಲ್ಲಿಂದ ಹಾದು ಹೋಗುತ್ತಿರಬೇಕಾದರೆ ಹೊಸೂರಿನ ಈ ಅಜ್ಜಿ ಶರಣರಿಗೆ ಪ್ರಸಾದ ಮಾಡಿ ಬಡಿಸಿದಳು. ತಂಡದಲ್ಲಿದ್ದ ಚೆನ್ನಬಸವಣ್ಣನವರನ್ನುದ್ದೇಶಿಸಿ “ಬಸವಣ್ಣನವರು ಈ ಕಡೆ ಯಾವಾಗ ಬರುತ್ತಾರೆ? ಅವರನ್ನು ನೋಡಿ ನಾನು ಸಾಯಬೇಕು ಎಂದು ಭಾವುಕಳಾಗಿ  ಕೇಳಿದಳಂತೆ. ಆಗ ಚೆನ್ನಬಸವಣ್ಣನವರು “ಅವರು ನಾಳೆಗೆ ಬರುತ್ತಾರೆ” ಎಂದು ಹೇಳಿ, ಮರು ದಿನ ತಾವೇ ಬಸವಣ್ಣನ ರೂಪು ಹೊತ್ತು ದರ್ಶನ ನೀಡಿದರು ಎಂದು ಅಲ್ಲಿನ ಜನ ಈ ದಾನಮ್ಮನ ಸಮಾಧಿ ನಿರ್ಮಾಣದ ಕಾರಣ ಹೇಳುತ್ತಾರೆ.

ಇಂಚಲ, ಸಂಪಗಾಂವ: ಇಂಚಲದಲ್ಲಿ  ಬಂಕನಾಥೇಶ್ವರ ದೇವಾಲಯವಿದೆ. ರಟಗಲ್‌ನಲ್ಲಿಯೂ ಈ ಶರಣನ ಹೆಸರಿನಲ್ಲಿ ಸ್ಮಾರಕವಿರುವುದನ್ನು ನಾವು ಕಾಣಬಹುದು. ಇಂಚಲ ಬಂಕನಾಥ ದೇವಾಲಯದ ಮಗ್ಗುಲಿಗೆ  ಪ್ರಾಚೀನ ಈಶ್ವರ ದೇವಾಲಯವಿದೆ. ಶರಣರು ಇಲ್ಲಿಯೇ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ಬೈಲಹೊಂಗಲ ತಾಲ್ಲೂಕಿನ ಸಂಪಗಾಂವನಲ್ಲಿ ಚೆನ್ನಬಸವಣ್ಣನವರ ದೇವಾಲಯವಿದೆ. ಹಳೆ ದೇವಾಲಯದ ಕಟ್ಟಡ ತೆಗೆದು ಹೊಸ ದೇವಾಲಯ ಕಟ್ಟಿದ್ದಾರೆ.

ಮುರಕಿಬಾವಿ: ಊರ ಹೊರಗೆ ನೀಲಮ್ಮನವರ ಶಿಲಾಮೂರ್ತಿ ಇರುವ ಸ್ಮಾರಕವೊಂದು ಕಾಣಿಸುತ್ತದೆ. ಇಲ್ಲಿಯೆ ಹಳೆಯದಾದ ಬಾವಿಯಿದೆ. ಶರಣರೊಂದಿಗೆ ಉಳವಿ ಕಡೆಗೆ ಹೊರಟಾಗ ನೀಲಮ್ಮನವರು ಕುಳಿತ ಮೇನೆಯ ನೊಗ ಮುರಿಯಿತು. ಇದಕ್ಕಾಗಿ ಆ ಊರಿಗೆ ಮುರಕಿ ಬಾವಿ ಎಂಬ ಹೆಸರು ಬಂತು. ಅಲ್ಲಿ ’ಕಲ್ಯಾಣ ನೀಲಮ್ಮದೇವಿಯ ಸ್ಮಾರಕ’ ಎಂದು ಬರೆದಿರುವುದನ್ನು ಗಮನಿಸಿದರೆ ಅಕ್ಕನಾಗಮ್ಮ, ಗಂಗಾಂಬಿಕೆ ಮತ್ತು ನೀಲಾಂಬಿಕೆ ಮುಂತಾದವರೂ ಇತರ ಶರಣರೊಂದಿಗೆ ಉಳವಿಯೆಡೆಗೆ ಹೊರಟಿದ್ದರು ಎಂಬುದು ನಮಗೆ ಗೊತ್ತಾಗುತ್ತದೆ.

ಕಲ್ಲೂರ: ಶರಣ ಸಮಗಾರ ಹರಳಯ್ಯನ ಪತ್ನಿ ಕಲ್ಯಾಣಮ್ಮನವರ ಸ್ಮಾರಕ ಇಲ್ಲಿ ಇರುವುದನ್ನು ಗಮನಿಸಿದರೆ ಇವರ ಮಗ ಶೀಲವಂತನೇ ಬಿಜನಳ್ಳಿವರೆಗೆ ಪಾದುಕೆಗಳನ್ನು ಹೊತ್ತು ತಂದಿರಬೇಕು ಎಂಬುದು ಖಾತ್ರಿಯಾಗುತ್ತದೆ. ಶರಣರೊಂದಿಗೆ ಉಳವಿ ಕಡೆಗೆ ಹೊರಟಿದ್ದ ಕಲ್ಯಾಣಮ್ಮನವರ ಜೀವ ಇಲ್ಲಿಯೇ ಹೋಯಿತು. ಇಲ್ಲಿಂದ ಸಮೀಪದಲ್ಲಿರುವ ತಿಗಡಿಯಲ್ಲಿ ಕಲ್ಯಾಣಮ್ಮನವರ ಶವ ಸಂಸ್ಕಾರ ಮಾಡಲಾಯಿತು ಎಂದು ಹೇಳಲಾಗುತ್ತಿದೆ. ಇಲ್ಲಿ ಬಸವಣ್ಣನವರ ದೇವಾಲಯವಿದ್ದು, ಪ್ರತಿ ವರ್ಷ ಜಾತ್ರೆ ನಡೆಯುವ ವೇಳೆಯಲ್ಲಿ ಕಲ್ಯಾಣಮ್ಮನ ಸ್ಮಾರಕದವರೆಗೆ ಪಲ್ಲಕ್ಕಿ ಉತ್ಸವ ನಡೆಸುತ್ತಾರೆ

ತಿಗಡಿ: ಈಗ ಕೆಳದಿ ರಾಜಮನೆತನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಕಲ್ಯಾಣಮ್ಮನವರ ದೇವಸ್ಥಾನವಿದೆ. ಕಲ್ಲೂರು ಮತ್ತು ತಿಗಡಿ ಎರಡೂ ಕಡೆ ಭಾರತ ಹುಣ್ಣಿಮೆಯಂದು ಜಾತ್ರೆ ನಡೆಸುತ್ತಾರೆ. ಕಲ್ಯಾಣಮ್ಮನವರ ಪಲ್ಲಕ್ಕಿ ರಾತ್ರಿ ೧೧ ಗಂಟೆಗೆ ಹೊರಟು, ರುದ್ರಮುನಿ ಸ್ಮಾರಕವಿರುವ ಹುಣಸಿಕಟ್ಟೆಗೆ ಹೋಗುತ್ತದೆ. ಮಧ್ಯರಾತ್ರಿ ೨ರ ಸುಮಾರಿಗೆ ನದಿಗೆ ಬಂದು, ಮೊದಲು ಮಲಪ್ರಭಾ ನದಿಯಲ್ಲಿ ತೆಪ್ಪದ ಮೇಲೆ ನೈವೇದ್ಯವಿಟ್ಟು ನದಿಗೆ ಪೂಜೆ ಸಲ್ಲಿಸುತ್ತಾರೆ. ಹಾಗೂ ನದಿಯಲ್ಲಿ ಸ್ನಾನ ಮಾಡುತ್ತ ಕಲ್ಯಾಣಮ್ಮನ ಲಿಂಗ ಶೋಧಿಸುವ ವಿಶಿಷ್ಟ ಸಂಪ್ರದಾಯವನ್ನು ಅಲ್ಲಿನ ಜನ ಇಂದಿಗೂ ಆಚರಿಸಿಕೊಂಡು ಬಂದಿದ್ದಾರೆ. ನಂತರ ನೈವೇದ್ಯ ತಯಾರಿಸಿ, ಮುಂಜಾನೆ ಹೊರಟು ರುದ್ರಮುನಿ ಗದ್ದುಗೆಗೆ ಬಂದು ಪೂಜೆ ನೈವೇದ್ಯ ಅರ್ಪಿಸುತ್ತಾರೆ. ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಹೊರಟು ಕಲ್ಲೂರ ಮೂಲಕ ಪುನಃ ತಿಗಡಿಗೆ ಬಂದು ಸೇರುತ್ತದೆ. ತಿಗಡಿಯಲಿ ಒಂದು ಚೆನ್ನಬಸವಣ್ಣನ ದೇವಾಲಯವಿದೆ.

ಮರಡಿ ನಾಗಲಾಪುರ: ಶರಣರು ಬೀಡು ಬಿಟ್ಟ ನೆನಪಿಗೆ ಭಕ್ತರು ಅಕ್ಕನಾಗಮ್ಮನವರ ಸ್ಮಾರಕವೊಂದನ್ನು  ನಿರ್ಮಿಸಿಕೊಂಡಿದ್ದಾರೆ. ಅಕ್ಕನಾಗಮ್ಮನ ಶಿಲಮೂರ್ತಿ ಇರುವುದನ್ನು ನಾವು ಕಾಣಬಹುದು.

ಎಂ.ಕೆ. ಹುಬ್ಬಳ್ಳಿ: ತಂಗಡಗಿಯಲ್ಲಿ ನೀಲಾಂಬಿಕೆ ಸ್ಮಾರಕ ಇರುವಂತೆ ಇಲ್ಲಿ ಗಂಗಾಂಬಿಕೆಯ ಸ್ಮಾರಕವಿದೆ. ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪದಂತೆ ಕಾಣುವ ಈ ಸ್ಮಾರಕದೊಳಗಿಳಿದು ನೋಡಿದಾಗ, ಇಲ್ಲಿಯೇ ಅವರು ಲಿಂಗೈಕ್ಯರಾದರು ಎಂಬುದಕ್ಕೆ ಹಳೆಯ ದೇವಾಲಯವಿದೆ. ಗಂಗಾಂಬಿಕೆ ಹೆಸರಿನ ಶಿವಲಿಂಗ ಕೂಡ ಇಲ್ಲಿದೆ. ಕಾದರೊಳ್ಳಿಯಲ್ಲಿ ನಡೆದ ಕದನದಲ್ಲಿ ಗಂಗಾಂಬಿಕೆಯವರ ಜೀವ ಹೋಗಿರುವ ಸಾಧ್ಯತೆ ಇದೆ.

ಹುಣಸಿಕಟ್ಟೆ: ರೇವಣಸಿದ್ಧರ ಮಗ ರುದ್ರಮನಿ ದೇವಾಲಯವಿದ್ದು, ಅದರ ಹಿಂದೆ ಸಿದ್ಧರಾಮೇಶ್ವರ ಸ್ಮಾರಕ ಇರುವುದನ್ನು ನೋಡಿದರೆ, ಹುಣಸಿಕಟ್ಟೆ-ಕಾದರವಳ್ಳಿ ನಡುವಿನ ಸ್ಥಳದಲ್ಲಿ ಕಾದಾಟ ನಡೆದಾಗ ಗಂಗಾಂಬಿಕೆ ಮತ್ತು ರುದ್ರಮುನಿಯವರ ಜೀವ ಹೋದಂತೆ ತೋರುತ್ತದೆ. ಗಂಗಾಂಬಿಕೆ ಮತ್ತು ರುದ್ರಮನಿ ಜಾತ್ರೆ ಬಸವಜಯಂತಿಯಂದು ಆಗುತ್ತದೆ. ಚೆನ್ನಬಸವಣ್ಣನವರ ಸ್ಮಾರಕವೂ ಇಲ್ಲಿದೆ.

ಕಾದರವಳ್ಳಿ: ಇಲ್ಲೊಂದು ರಾಮಲಿಂಗೇಶ್ವರ ದೇವಾಲಯವಿದೆ. ಇದರ ಮಗ್ಗುಲಲ್ಲಿ ಇರುವ ಮಲಪ್ರಭಾ ನದಿಯ ದಂಡೆಯ ಮೇಲೆ ಶರಣರು ಮತ್ತು ಸೈನಿಕರ ಮಧ್ಯೆ ಯುದ್ಧ ನಡೆಯಿತು ಎಂದು ಹೇಳಲಾಗುತ್ತಿದೆ. ನದಿಯ ದಂಡೆಯಲ್ಲಿ ಇಂದಿಗೂ ಆಯುಧಗಳ ಚೂರು-ಪಾರುಗಳು ಸಿಗುತ್ತವೆ ಎಂದು ಹೇಳುತ್ತಾರೆ.

ಬಸರಕೋಡಚಿಕ್ಕನಂದಿಹಳ್ಳಿ: ಬಸರಕೋಡದಲ್ಲಿ ಚೆನ್ನಬಸವಣ್ಣನವರ ಗುಡಿಯಿದೆ. ಶರಣರ ದಂಡು ಇಲ್ಲಿ ತಂಗಿರುವ ವೇಳೆ ಚೆನ್ನಬಸವಣ್ಣನರಿಗೆ ಸಮೀಪದ ಚಿಕ್ಕನಂದಿಹಳ್ಳಿಯ ಶಿವಲಿಂಗ ದೇವಸ್ಥಾನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಕಿತ್ತೂರು: ಇಲ್ಲಿನ ರಣಗಟ್ಟಿ ಕೆರೆ ಬಳಿ ಇರುವ ಕಟ್ಟೆಯ ಮೇಲೆ ಕಾದಾಟ ನಡೆಯಿತು. ಇಲ್ಲಿಯೇ ಆಯುಧ ತೊಳೆದಿರುವುದರಿಂದ ಇದಕ್ಕೆ ರಣಗಟ್ಟೆ ಕೆರೆ ಎಂಬ ಹೆಸರು ಬಂದಿರಬೇಕು. ಇದರ ಸುತ್ತಮುತ್ತಲಿನ ಸ್ಥಳಕ್ಕೆ ರಣಗಟ್ಟಿ ಓಣಿ ಎನ್ನುತ್ತಾರೆ.

ಬೈಲೂರು: ಬೈಲಹೊಂಗಲ ತಾಲ್ಲೂಕಿನ ಬೈಲೂರಿನಲ್ಲಿ ಚೆನ್ನಬಸವಣ್ಣನವರ ದೇವಾಲವಿದ್ದು, ಜೋಡು ನಂದಿಗಳಿವೆ. ಭಾರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.

ಕಕ್ಕೇರಿ: ಶರಣ ಡೋಹರ ಕಕ್ಕಯ್ಯನವರ ನೇತೃತ್ವದಲ್ಲಿ ಕದನ ನಡೆದು ಅವರು ಇಲ್ಲಿಯೇ ಹಸುನೀಗಿದರು ಎನ್ನುವುದಕ್ಕೆ ಕಕ್ಕಯ್ಯನವರ ಸಮಾಧಿ ತೋರಿಸುತ್ತಾರೆ. ಕಕ್ಕಯ್ಯನವರ ಹತ್ಯೆಯ ನಂತರ ಇವರ ಪತ್ನಿ ಬಿಷ್ಟಾದೇವಿ ವೀರಾವೇಷದಿಂದ ಹೋರಾಟ ಮಾಡಿದರು. ಗ್ರಾಮದಲ್ಲಿ ಬಿಷ್ಟಾದೇವಿ ದೇವಾಲಯವಿದೆ. ಅದೀಗ ಗ್ರಾಮ ದೇವತೆ ಎಂದು ಪ್ರಸಿದ್ಧಿಗೆ ಬಂದಿದೆ. ಅಲ್ಲಿರುವ ಮರಾಠರು ಇದು ಶರಣರ ಸ್ಮಾರಕ ಎಂಬುದನ್ನು ಮರೆಮಾಚಿ, ಕೇವಲ ಗ್ರಾಮದೇವತೆ ಎಂದು ಹೇಳುತ್ತಾರೆ.

ಲಿಂಗನಮಠ: ಬೆಳಗಾವಿ ಜಿಲ್ಲೆಯ ಕೊನೆ ಊರು ಇದಾಗಿದ್ದು, ದಾರಿಗುಂಟ ಚೆನ್ನಬಸವಣ್ಣನವರ ಹೊಸ ಸ್ಮಾರಕವನ್ನು ಭಕ್ತರು ನಿರ್ಮಿಸಿಕೊಂಡಿದ್ದಾರೆ. ಊರೊಳಗೆ ಬಸವಣ್ಣ ಗುಡಿ (ಚೆನ್ನಬಸವಣ್ಣ), ಪೂರ್ವಕ್ಕೆ ಕಲ್ಮೇಶ್ವರ ದೇವಾಲಯವಿದ್ದು, ಖಂಡಿತವಾಗಿಯೂ ಇದು ಮಡಿವಾಳ ಮಾಚಿದೇವರ ಸ್ಮಾರಕವಾಗಿದೆ. ಇದರ ಮಗ್ಗುಲಲ್ಲಿ ಕಲ್ಲಪ್ಪನ ಕೆರೆ ಇದೆ. ಇಲ್ಲಿಂದ ಶರಣರು ಕಾರವಾರ ಜಿಲ್ಲೆ ಪ್ರವಾಸ ಮಾಡುತ್ತಾರೆ.

                                     ಯಾರು ಈ ಕೂಗುಮಾರಿ ತಂದೆ?                                
ಗೊಡಚಿಯಲ್ಲಿ ಮಾತ್ರ ಕಾಣಸಿಗುವ ಕೂಗು ಬಸವನ ಸ್ಮಾರಕಗಳು ಬೇರೆಲ್ಲೂ ಕಂಡು ಬರುವುದಿಲ್ಲ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಕೂಗನೂರ ಎಂಬ ಗ್ರಾಮವಿದ್ದು, ಅಲ್ಲೊಂದು ಕಲ್ಯಾಣ ಮಠವಿದೆ. ಕೂಗಿನ ಮಾರಿ ತಂದೆ ಇಲ್ಲಿಗೆ ಆಗಮಿಸಿದ್ದಾಗ ಇದೇ ಮಠದಲ್ಲಿ ಉಳಿದಿದ್ದರು. ಅಲ್ಲಿರುವ ಗದ್ದುಗೆ ಬಹುಶಃ ಕೂಗು ಮಾರಿ ತಂದೆಗಳದ್ದೆ ಆಗಿರಬೇಕು. ಮಠದ ಎಡಗಡೆ ಲಕ್ಷ್ಮೀ ದೇವಾಲಯವಿದ್ದು, ಅಡ್ಡ ಮಲಗಿಸಿದ ಸಮಾದಿ ಆಕಾರದ ಕಟ್ಟೆ ಕಟ್ಟಿ ಆ ಕಟ್ಟೆಗೆ ಪೂಜೆ ಮಾಡುವುದನ್ನು ನೋಡಿದರೆ ಬಹುಶಃ ಇದು ಅವರ ಪತ್ನಿ ಬಿಷ್ಟಾದೇವಿಯ ಸಮಾದಿಯಾಗಿರಬೇಕು ಎಂಬುದು ಅನುಮಾನ. ಈ ಕೂಗುಮಾರಿ ತಂದೆ ಕೂಗುಮಾರಿ ಬಸವಣ್ಣಗಳ ತಂಡ ರಚಿಸಿರಬೇಕು. ಇವರು ಶರಣರಿಗೆ ದಾರಿ ತೋರಿಸುವ ಮತ್ತು ಶತ್ರುಗಳ ಬಗ್ಗೆ ಶರಣರಿಗೆ ಎಚ್ಚರಿಕೆ ನೀಡುವ ಕಾಯಕ ಮಾಡುತ್ತಿದ್ದಿರಬೇಕು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

                        ಮಡಿವಾಳ ಮಾಚಿದೇವರು ಐಕ್ಯರಾದ ಸ್ಥಳ ಯಾವುದು?                   
ವೀರ ಗಣಾಚಾರಿ ಮಡಿವಾಳ ಮಾಚಿದೇವರ ಐಕ್ಯ ಸ್ಥಳ ಯಾವುದು ಎನ್ನುವುದರ ಬಗ್ಗೆ ಈವರೆಗೆ ಯಾವುದೇ ಒಟ್ಟಾಭಿಪ್ರಾಯ ಮೂಡಿಲ್ಲ. ಮುರಗೋಡ ಸಮೀಪದ ಕಾರಿಮನೆ, ಬೆಳಗಾವಿ ಜಿಲ್ಲೆಯ ಗೊಡಚಿ ಹಾಗೂ ಅವರ ಸ್ವಂತ ಊರು ದೇವರಹಿಪ್ಪರಗಿಯಲ್ಲಿರುವ ಅವರ ಸಮಾದಿ, ಸ್ಮಾರಕ ಸ್ಥಳಗಳೆಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇವುಗಳಲ್ಲಿ ಯಾವುದು ನಿಜವಾದ ಸಮಾದಿ ಸ್ಥಳ ಎಂಬುದು ಗೊತ್ತಾಗುತ್ತಿಲ್ಲ. ಈ ವಿಷಯ ಸಂಶೋಧನೆಗೆ ಸವಾಲಾಗಿದೆ. ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ಆಗಬೇಕಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago