ಶರಣರ ಉಳವಿ ದಾರಿ: ಧಾರವಾಡದಿಂದ ಹುಬ್ಬಳ್ಳಿವರೆಗೆ

ಕಿತ್ತೂರಿನಿಂದ ಬೇರೆಯಾದ ಶರಣರ ಗುಂಪು ಧಾರವಾಡದ ಕಡೆ ಬರುತ್ತದೆ. ಈ ಗುಂಪಿನಲ್ಲಿ ಚೆನ್ನಬಸವಣ್ಣನವರು ಇದ್ದಿರಬೇಕು. ಅಂತೆಯೇ ಧಾರವಾಡದಲ್ಲಿ ಉಳಿಬಸವಣ್ಣನ ದೇವಾಲಯವಿದೆ. ಭವ್ಯವಾದ ದ್ವಾರ ಬಾಗಿಲಿದ್ದು, ಗರ್ಭಗೃಹದಲ್ಲಿ ನೈಸರ್ಗಿಕವಾದ ಕಲ್ಲು ನಂದಿ ಆಕಾರದಲ್ಲಿದೆ. ಗೋಡೆಯ ಹಿಮ್ಮಗ್ಗಲು ಇಂಥದೆ ನಂದಿ ಮೂರ್ತಿಯಿದ್ದು, ಇಲ್ಲಿ ಈ ಮೊದಲು ಚೆನ್ನಬಸವಣ್ಣನ ತಾಯಿ ಅಕ್ಕನಾಗಮ್ಮನ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ಈಗ ಬಯಲು ಬಸವಣ್ಣ ಎಂದು ಕರೆಯಲು ಆರಂಭಿಸಿದ್ದಾರಂತೆ. ಸಾಮಾನ್ಯರೆಲ್ಲರೂ ಸೇರಿಕೊಂಡು “ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ” ಕಟ್ಟಿಕೊಂಡು ದೇವಸ್ಥಾನದ ಪ್ರವೇಶ ದ್ವಾರದ ಮುಂದೆ ಕೈಯಲ್ಲಿ ಖಡ್ಗ, ಢಾಲು ಹಿಡಿದ ಅಕ್ಕನಾಮಗಮ್ಮನ ಹೊಸ ಶಿಲಾಮೂರ್ತಿಯನ್ನು ಹೊಸದಾಗಿ ಪ್ರತಿಷ್ಠಾಪಿಸಿದ್ದಲ್ಲದೆ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಬೆಳವಣಿಗೆಗೆ ಕಾರಣವಾಗಿದ್ದಾರೆ.

ಚೆನ್ನಬಸವಣ್ಣನವರ ದೇವಾಲಯದ ಕಾಂಪೌಂಡ್ ಆ ಕಡೆ ರಸ್ತೆ ಮಧ್ಯದಲ್ಲಿ ವೀರಭದ್ರೇಶ್ವರ ಹೆಸರಿನಲ್ಲಿ ಪೂಜಿಸುವ ನೈಸರ್ಗಿಕ ಶಿವಲಿಂಗವಿದ್ದು, ಈಗ ಹೊಸ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮಡಿವಾಳ ಮಾಚಿದೇವರ ಮತ್ತು ಚೆನ್ನಬಸವಣ್ಣನವರ ನೇತೃತ್ವದ ಶರಣರ ಎರಡು ತಂಡಗಳು ಇಲ್ಲಿ ಬೀಡು ಬಿಟ್ಟಿರುವುದಕ್ಕೆ ಈ ಎರಡು ಸ್ಮಾರಕಗಳು ಸಾಕ್ಷಿಯಾಗಿವೆ.

ಸತ್ತೂರು: ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ 6 ಕಿ. ಮೀ. ದೂರದ ರಸ್ತೆಯಲ್ಲಿ ಬರುವ ಸತ್ತೂರಿನಲ್ಲಿ ಕಲ್ಮೇಶ್ವರ ದೇವಾಲಯವಿದೆ. ಗರ್ಭಗುಡಿಯೊಳಗೆ ನಂದಿ ಶಿವಲಿಂಗ ಇರುವುದನ್ನು ನಾವು ಗಮನಿಸಬಹುದು. ಈ ಸತ್ತೂರು ಕ್ಯಾಂಪಿನ ಬಗೆಗೆ ಎಲ್ಲ ವಿದ್ವಾಂಸರು ಮಾಹಿತಿ ನೀಡಿದ್ದಾರೆ. ಊರ ಒಳಗೆ ಬಸವಣ್ಣನ (ಚೆನ್ನಬಸವಣ್ಣ) ಗುಡಿ ಇರುವಲ್ಲಿ ಶರಣರ ಒಂದು ತಂಡ, ಊರು ಬಿಟ್ಟು 1 ಕಿ.ಮೀ. ನಂತರ ಬರುವ ಮಡ್ಡಿಯಲ್ಲಿ ಮತ್ತೊಂದು ಗುಂಪು, ಸತ್ತೂರು ಮಡ್ಡಿ ಬಸವಣ್ಣನ ಕಟ್ಟೆಯಲ್ಲಿ ಒಂದು ಗುಂಪು ಹೀಗೆ ಮೂರು ಶರಣರ ಗುಂಪುಗಳು ಆಗ ಇಲ್ಲಿ ತಂಗಿರಬೇಕು ಎಂದು ಹೇಳಲಾಗುತ್ತಿದೆ.

ಅಮ್ಮಿನಬಾವಿ: ಇಲ್ಲಿನ ಪಂಚಗ್ರಹ ಹಿರೇಮಠದಲ್ಲಿ ಶರಣರು ವಾಸ್ತವ್ಯ ಹೂಡಿದ್ದರು ಎಂದು ಹೇಳಲಾಗುತ್ತಿದೆ. ಮಠದೊಳಗೆ ಮಡಿವಾಳ ಮಾಚಿದೇವರ ಶಿಲಾಮೂರ್ತಿ ಇರುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಮೂರ್ತಿಯ ಪಾದಗಟ್ಟೆಯಲ್ಲಿ ಮೂರು ಸಾಲಿನ ಶಾಸನವಿದ್ದು (1284), ಮಡಿವಾಳ ಮಾಚಿದೇವರು ಲಿಂಗೈಕ್ಯರಾದ ಒಂದು ನೂರು ವರ್ಷದ ನೆನಪಿಗೆ ನಿಲ್ಲಿಸಿದ ಶಿಲ್ಪವಾಗಿದೆ. ಇದನ್ನು ಮೊದಲು ಗುರುತಿಸಿದವರು ಆರ್. ಎಸ್. ಗುರವ ಎಂಬುವವರು. ಈ ಮಠಕ್ಕೆ ಭೇಟಿ ನೀಡಿದ ಹಿರಿಯ ಸಂಶೋಧಕರಾದ ಡಾ. ಎಂ.ಎಂ. ಕಲ್ಬುರ್ಗಿಯವರು, “ಮಡಿವಾಳ ಮಾಚಿದೇವರು ಲಿಂಗೈಕ್ಯರಾಗಿ ಒಂದು ಶತಮಾನದಷ್ಟೊತ್ತಿನಲ್ಲೇ ದೇವತಾಸ್ವರೂಪರಾಗಿ ಕಂಡು ಪೂಜೆಗೊಳುತ್ತಿರುವುದು ನಮಗೆ ಗೊತ್ತಾಗುತ್ತದೆ” ಎಂದು ಬರೆದಿದ್ದಾರೆ. ಈ ವಿಗ್ರಹವನ್ನು ಕರ್ನಾಟಕ ಅಧ್ಯಯನ ಸಂಸ್ಥೆಯಲ್ಲಿ ತಂದಿಟ್ಟಿದ್ದಾರೆ. ಗದಗ ಜಿಲ್ಲೆಯ ಮುಳಗುಂದ ಮೇಲು ಮಠದ ಆವರಣದಲ್ಲಿ ಕೂಡ ಇಂಥದೆ ಆನೆ ಮರ್ಧನ ಮಾಡಿದ ಮಡಿವಾಳ ಮಾಚಿದೇವರ ವಿಗ್ರಹವಿದೆ. ರಾಯಚೂರಿನ ಗುಡ್ಡದ ಹೆಬ್ಬಂಡೆಯ ಮೇಲೆ ಆನೆ ಮರ್ಧಿಸುತ್ತಿರುವ ಮಡಿವಾಳ ಮಾಚಿದೇವರ ಉಬ್ಬು ಚಿತ್ರವಿರುವುದನ್ನು ಗಮನಿಸಿದರೆ ಇದು ಬಹಳ ಮಹತ್ವದ ಸಂಗತಿ ಎಂಬುದು ತಿಳಿದುಬರುತ್ತದೆ.

ಹೀರೆಮಠದ ಎಡ ಮಗ್ಗಲು ವೀರಭದ್ರೇಶ್ವರ ದೇವಸ್ಥಾನ, ಬಲ ಮಗ್ಗಲು ಕಲ್ಮೇಶ್ವರ ದೇವಾಲಯ, ಊರೊಳಗೆ ಬಸವಣ್ಣ ದೇವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿಯೇ ನೀಲಮ್ಮನ ಶಿಲಾಮೂರ್ತಿಯ ಗರ್ಭಗುಡಿ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿ ಸೋಮವಾರ ಇಲ್ಲಿಂದ ಮರೆವಾಡಿಯ ಚೆನ್ನಬಸವಣ್ಣನ ಗುಡಿಗೆ ಪಲ್ಲಕ್ಕಿ ಉತ್ಸವ ಹೋಗುತ್ತದೆ.

ಮರೆವಾಡಿ: ಇಲ್ಲಿನ ಚೆನ್ನಬಸವಣ್ಣನ ದೇವಾಲಯದೊಳಗೆ ನಂದಿ ವಿಗ್ರಹದ ಜೊತೆಗೆ ಶರಣರು ಬಂದು ಹೋದುದರ ವಿವರವನ್ನು ಪತ್ರಿಕೆಯಲ್ಲಿ ಅಚ್ಚು ಹಾಕಿಸಿ ಇಟ್ಟಿರುವುದನ್ನು ಕಾಣಬಹುದು. ಶರಣರು ಇಲ್ಲಿಗೆ ಬಂದಿಳಿದಾಗ ಎರಡು ದಿನ ಸತತ ಮಳೆ ಬಂದಿತು. ಶರಣರೆಲ್ಲರಿಗೆ ಈ ಊರವರು ದಿನಾಲು ಪ್ರಸಾದ ಮಾಡಿ ಬಡಿಸಿದರಂತೆ. ಜನರಗೌರವಾದರಳನ್ನು ಕಂಡ ಚೆನ್ನಬಸವಣ್ಣನವರು “ನೀವು ಮರೆಯಲಾರದ ಗೌರವ ನಮಗೆ ಕೊಟ್ಟಿದ್ದೀರಿ” ಎಂದು ಹೇಳಿದ್ದರಂತೆ. ಅಂದಿನಿಂದ ಅರಳೆಕಟ್ಟೆ ಹೆಸರಿನ ಈ ಊರು ಮರೆವಾಡಿಯಾಗಿ ಪರಿವರ್ತನೆಗೊಂಡಿದೆ. ದೇವಾಲಯದ ಹಿಮ್ಮಗ್ಗಲು ಇರುವ ಗಿಡವನ್ನು ಚೆನ್ನಬಸವಣ್ಣನವರೇ ನೆಟ್ಟಿರುವುದು ಎಂದು ಅಲ್ಲಿನ ಜನ ಈಗಲೂ ಆ ಗಿಡವನ್ನು ತೋರಿಸುತ್ತಾರೆ.

ಉಣಕಲ್: ಶರಣರು ಹುಬ್ಬಳ್ಳಿ ಮಠದಲ್ಲಿ ದೊಡ್ಡ ಕ್ಯಾಂಪ್ ಹಾಕಿದಾಗ, ಚೆನ್ನಬಸವಣ್ಣನವರು ತಮ್ಮ ಸಂಗಡಿಗರ ಜೊತೆ ಇದೇ ಕೆರೆಯ ಸ್ಥಳದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಅವರ ನೆನಪಿಗಾಗಿ ಕೆರೆಯ ದಂಡೆಯ ಮೇಲೆ ನಂದಿ ಸ್ಥಾಪಿಸಲಾಗಿತ್ತು. ಬ್ರ್ರಿಟಿಷರು 1886ರಲ್ಲಿ ಚೆನ್ನಬಸವಣ್ಣನ ಹೆಸರಿನಲ್ಲಿ ಅಲ್ಲೊಂದು ಸ್ಮಾರಕವನ್ನು ಕಟ್ಟಿಸಿದರು ಎಂಬುದು ನಮಗೆ ಗೊತ್ತಾಗುತ್ತದೆ.

ಮೂರು ಸಾವಿರ ಮಠ: ಓಲೆಮಠ ಈ ಮಠದೊಳಗೆ ಗುರುಸಿದೇಶ್ವರರ ಗದ್ದುಗೆಯಿದೆ. ಇವರು ಈ ಮಠದ ನಿರ್ಮಾಪಕರು. ಶರಣರು ದಂಡು ಮೂರು ಸಾವಿರಕ್ಕೂ ಹೆಚ್ಚು ಇತ್ತು. ಅಲ್ಲಮಪ್ರಭುಗಳ ಸೂಚನೆಯಂತೆ ಅಲ್ಲಿರುವ ಗುರುಸಿದ್ಧೇಶ್ವರರನ್ನು ಕಾಣಲು, ಅವರು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ಹೀಗಾಗಿ ಈ ಮಠಕ್ಕೆ ಮೂರು ಸಾವಿರ ಮಠ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತಿದೆ. ಶರಣರು ತಮ್ಮ ತಲೆಯ ಮೇಲೆ ಹೊತ್ತು ತಂದಿದ್ದ ಬಹುತೇಕ ತಾಡೋಲೆಗಳನ್ನು ಗುರುಸಿದ್ಧೇಶ್ವರರಿಗೆ ಒಪ್ಪಿಸಿದರು. ಅವುಗಳನ್ನು ಸಮೀಪದಲ್ಲಿರುವ ಮಠದಲ್ಲಿಟ್ಟು ಸಂರಕ್ಷಿಸಿದರು.

ಹೀಗಾಗಿ ಆ ಮಠಕ್ಕೆ ಓಲೆ ಮಠ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತಿದ್ದು, ಹಾಳಾದ ಈ ಮಠ ಇರುವ ಜಾಗದಲ್ಲಿ ಈಗ ಮೂರು ಸಾವಿರ ಮಠದವರು ಅಲ್ಲೊಂದು ಬಹು ಮಹಡಿಯ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಮೂಲ ಮಠವನ್ನು ಜೀರ್ಣೋದ್ಧಾರ ಮಾಡಿಟ್ಟಿದ್ದರೆ ಒಳ್ಳೆಯದಿರುತ್ತಿತ್ತು. ಕೆಲವು ಶರಣರ ಜೊತೆ ಚೆನ್ನಬಸವಣ್ಣನವರು ಉಳವಿಯೆಡೆಗೆ ಪ್ರಯಾಣ ಬೆಳೆಸಲಾಗಿ ಉಳಿದ ಮೂರು ಸಾವಿರ ಪ್ರಮಥರನ್ನು ಗುರುಸಿದ್ಧೇಶ್ವರರು ಧರ್ಮ ಪ್ರಚಾರಕ್ಕಾಗಿ ಬಳಸಿಕೊಂಡರು. ಈ ಪ್ರಮಥರು ಕರ್ನಾಟಕ, ಆಂದ್ರ, ತಮಿಳುನಾಡುಗಳಿಗೆ ಸಂಚರಿಸಿ ಮೂರು ಸಾವಿರ ಶಾಖಾಮಠಗಳನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತಿದೆ.

ಕಲ್ಯಾಣಮಠ: ಮಂಗಳವಾರಪೇಟೆಯಲ್ಲಿ ಕಲ್ಯಾಣ ಮಠವಿದೆ. ಮೂರು ಸಾವಿರ ಮಠಕ್ಕೆ ಬರುವ ಮುನ್ನ ಶರಣರು ಇಲ್ಲಿಯೇ ಉಳಿದಿದ್ದರು ಎಂದು ಹೇಳಲಾಗುತ್ತಿದ್ದು, ಈ ಜಾಗ ಇದೀಗ ವ್ಯಾಜ್ಯದಲ್ಲಿರುವುದು ಕಂಡು ಬರುತ್ತದೆ.

ಜೋಡಳ್ಳಿ, ಚೆಳಮಟ್ಟಿ-ಬೂದನಗುಡ್ಡ: ಕಲಘಟಗಿ ತಾಲ್ಲೂಕಿನ ದೇವಲಿಂಗಿಕೊಪ್ಪ, ದಾಸನೂರು ಊರುಗಳು ಹಾಳಾಗಿ ಹೋದಾಗ, ಎರಡು ಊರಿವರು ಸೇರಿ ಒಂದು ಊರು ನಿರ್ಮಿಸಿಕೊಂಡರು. ಅದಕ್ಕಾಗಿಯೇ ಈ ಗ್ರಾಮವನ್ನು ಜೋಡಳ್ಳಿ ಎಂದು ಕರೆಯಲಾಗುತ್ತಿದೆ. ಈ ಊರಲ್ಲಿ ಚೆನ್ನಬಸವಣ್ಣನ ದೇವಾಲಯ ಇದೆ. ಇಲ್ಲಿಂದ 8. ಕಿ.ಮೀ. ದೂರದ ಚಳಮಟ್ಟಿಯ ಬೂದನಗುಡ್ಡದಲ್ಲಿ ಬಸವಣ್ಣ ದೇವಸ್ಥಾನವಿದೆ. ಶರಣರ ಕ್ಯಾಂಪ್ ಇಲ್ಲಿ ಇತ್ತು ಎಂದು ಹೇಳುತ್ತಾರೆ. ಚೆನ್ನಬಸವಣ್ಣವರು ಗುಡ್ಡ ಹತ್ತುವ ಮುಂಚೆ ವಿಶ್ರಾಂತಿ ಪಡೆದಿರುವುದರ ನೆನಪಿಗೆ ಗುಡ್ಡದ ಕೆಳಗೆ ಅವರು ತಂಗಿದ್ದ ಸ್ಥಳದಲ್ಲಿ ಸಣ್ಣ ಗುಡಿ ಕಟ್ಟಿದ್ದಾರೆ.

ಹಿರೆಹೊನ್ನಿಹಳ್ಳಿ: ಊರೊಳಗೆ ಬಸವಣ್ಣನ ಗುಡಿಯಿದೆ. ಮಡ್ಡಿ ಬಸವಣ್ಣನ ಗುಡಿ, ಕಲ್ಮೇಶ್ವರ ದೇವಾಲಯ ಈ ಮೂರು ಕಡೆ ಶರಣರು ವಾಸ್ತವ್ಯ ಹೂಡಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿನ ಜನ ಇದೀಗ ಆ ಮೂರು ದೇವಸ್ಥಾನಗಳನ್ನು ಹೊಸದಾಗಿ ಕಟ್ಟಿಸಿರುವುದನ್ನು ನಾವು ನೋಡಬಹುದು.

ಸಂಗಟಿಕೊಪ್ಪ/ದುತಿಕೊಪ್ಪ: ಈ ಊರು ಈಗ ಸಂಪೂರ್ಣವಾಗಿ ಹಾಳಾಗಿದೆ. ಹಳೆಯ ಕಾಲದ ಕಲ್ಲಿನ ನಂದಿ ವಿಗ್ರಹ, ಬಾವಿ, ವೀರಗಲ್ಲು, ಮಾಸ್ತಿಕಲ್ಲು, ಹಳೆಯ ಕಂಬಗಳು, ಕಟ್ಟಡದ ಭಾಗಗಳು ಇಲ್ಲಿ ಸಿಗುತ್ತವೆ.

ತಂಬೂರ: ಇದು ಧಾರವಾಡ ಜಿಲ್ಲೆಯ ಕೊನೆಯ ಊರು. ಶರಣರ ದೊಡ್ಡ ಕ್ಯಾಂಪ್ ಇಲ್ಲಿತ್ತು ಎನ್ನುವುದಕ್ಕೆ ಬಸವಣ್ಣನ ಹಳೆ ಗುಡಿ ಇದೆ. ಚೆನ್ನಬಸವಣ್ಣ ಮತ್ತು ಬಸವಣ್ಣ ಅಣ್ಣ-ತಮ್ಮಂದಿರು ಎಂಬುದು ಆ ಭಾಗದ ಜನರ ನಂಬುಗೆ. ಊರಲ್ಲಿ ಲಿಂಗಾಯತ ಸಮುದಾಯದ ಒಂದೆರಡು ಮನೆಗಳನ್ನು ಬಿಟ್ಟರೆ ಮರಾಠ ಜನಾಂಗದವರೇ ಜಾಸ್ತಿ. ಅವರು ಕೂಡ ಭಕ್ತಿ, ಭಾವ, ಅಭಿಮಾನದಿಂದ ನಡೆದುಕೊಳ್ಳತ್ತಿದ್ದಾರೆ.

ಇಲ್ಲಿ ದೊರೆತಿರುವ ಶಾಸನ (1136) ವು “ಬಿಜ್ಜಳದೇವನು ಹಾನಗಲ್ ಕೋಟೆಗೆ ಮುತ್ತಿದಾಗ ಕೇತಯ್ಯ ನಾಯಕ ಆನೆಯೊಡನೆ ಕಾದು ಮಡಿದ” ಎಂಬ ವಿಷಯ ಹೇಳುತ್ತಿರುವುದರಿಂದ ಆಗ ಆನೆಯೊಡನೆ ಹೋರಾಡುವ ಕಲಿಗಳಿದ್ದರು ಎಂಬುದು ವಿಧಿತವಾಗುತ್ತದೆ. ಇದರಿಂದಾಗಿ ಮಡಿವಾಳ ಮಾಚಿದೇವರ ಮೇಲೆ ಆನೆ ಬಿಟ್ಟಿರುವುದು ದೊಡ್ಡದಲ್ಲ. ಬಹುಶಃ ಮಡಿವಾಳ ಮಾಚಿದೇವ ಆನೆಯೊಂದಿಗೆ ಹೋರಾಡಿರಬೇಕು ಎಂದು ನಾವು ಇಟ್ಟುಕೊಳ್ಳಬಹುದು. ಬಿಜ್ಜಳ 1130-62ರವರೆಗೆ ಮಂಗಳವೇಡೆಯಲ್ಲಿ ಅಧಿಕಾರಕ್ಕೆ ಬಂದಿದ್ದ. 1962-67ರವರೆಗೆ ಕಲ್ಯಾಣದೊಳಗೆ ಆಳಿದ ಇತಿಹಾಸ ಸಿಗುತ್ತದೆ ಎಂದು ಪಿ.ಬಿ. ದೇಸಾಯಿ ಉಲ್ಲೇಖಿಸುತ್ತಾರೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

7 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

10 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

14 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

15 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

17 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420