ಕಲಿಯುಗದ ಕಡೇ ಶರಣ ಸದ್ಗುರು ಶ್ರೀ ಬಸವಲಿಂಗೇಶ್ವರರು ಬೆಳೆದು ಬಂದ ಹಾದಿಯನ್ನು ಗಮನಿಸುವುದಾದರೆ ಶರಣರು ನಮಗೆಲ್ಲಾ ಬಸವಲಿಂಗಪ್ಪ ತಾತ ಎಂದೇ ಚಿರಪರಿಚಿತರು. ಇವರು 18 ನೇ ಶತಮಾನದ ಕೊನೆಯಲ್ಲಿ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಳಿಚಕ್ರ ಗ್ರಾಮದಲ್ಲಿ ಮಹಾದೇವಪ್ಪ ಮತ್ತು ಗಂಗವ್ವ ಎಂಬ ದಂಪತಿಗಳ ಮಗನಾಗಿ ಹುಟ್ಟಿದರು, ಇವರ ಜೀವನ ಮತ್ತು ನಡೆದು ಬಂದ ದಾರಿಯ ಬಗ್ಗೆ ಕವಿಗಳಾದ ಶ್ರೀ ನರಸಿಂಹ ಗುಪ್ತರು, ಶಾಂತರಸರು,ಎಂ.ಎಸ್.ಲಠ್ಠೆರವರು,ಡಾ. ರುದ್ರಪ್ಪನವರು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರು, ಧಾರವಾಡ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕರುಗಳು ಹಾಗೂ ಕೂಡಲೂರು, ಬಳಿಚಕ್ರ, ಖಾನಾಪೂರ ಶರಣಬಸವೇಶ್ವರ ಸಂಸ್ಥಾನದ ಮುಖಂಡರು ಇನ್ನೂ ಅನೇಕರು ಬಸವಲಿಂಗಪ್ಪ ತಾತನ ಕಾರ್ಯಕ್ಷೇತ್ರ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಬಸವಲಿಂಗಪ್ಪ ತಾತನ ಮನೆತನವು ಪಲ್ಲೇದ ಮನೆತನ ಆಗಿತ್ತು,ಇವರ ದಂಪತಿಗಳು ಶರಣ ಮಾರ್ಗದಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದರು, ಕಾಯಿ ಪಲ್ಯ ಮಾರುವುದೇ ಇವರ ಕಾಯಕ, ತಮ್ಮ ಮಗುವಿಗೆ ಪ್ರೀತಿಯಿಂದ ಬಸವಲಿಂಗಪ್ಪ ಎಂದು ಹೆಸರಿಟ್ಟರು, ಐದು ವರ್ಷದವನಿದ್ದಾಗ ಅಕ್ಷರಿಭ್ಯಾಸಕ್ಕೆ ಸೇರಿಸಿದರು.
ಕನ್ನಡದ ಎಲ್ಲಾ ಮಜಲುಗಳಲ್ಲಿ ಇವರಿಗೆ ಬೋಧನೆ ಆರಂಭವಾಯಿತು, ಹತ್ತು ಹನ್ನೆರಡು ವರ್ಷ ವಯಸ್ಸಿನ ವರೆಗೆ ಎಲ್ಲವನ್ನೂ ಕಲಿತ, ನಂತರ ಆಗ ಪ್ರಚಲಿತವಿದ್ದ ಉರ್ದು,ಫಾರಸಿ ಅರಬ್ಬಿ ಭಾಷೆಗಳನ್ನೂ, ತೆಲುಗು ಭಾಷೆಯನ್ನು ಕಲಿಯುವ ಮೂಲಕ ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ, ಆಟ ಪಾಠ ಗಳಲ್ಲಿ ಶರಣರ ವಚನಗಳಲ್ಲಿ ಆಸಕ್ತಿ ವಹಿಸಿದ್ದ, ‘ನಿಜಗುಣರ ತತ್ವಪದಗಳು ಆತನನ್ನು ಆಕರ್ಷಿಸಿದವು, ಹಾಗೆಯೇ ಶಾಲೆಯ ಶಿಕ್ಷಕರಿಂದ ಅನುಭಾವದ ಅನೇಕ ಬಗೆಯ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ, ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಲ್ಲಿಗೂ ಹೋಗಲಿಲ್ಲ, ಇಲ್ಲಿಗೆ ಅವರ ವಿದ್ಯಾಭ್ಯಾಸ ನಿಂತು ಹೋಯಿತು.
ಬಸವಲಿಂಗನ ದಂಪತಿಗಳು ತಮ್ಮ ವೃತ್ತಿಯ ಜೊತೆಗೆ ತಮ್ಮ ಮಗನಿಗೆ ಶಾಲೆಯನ್ನು ಬಿಡಿಸಿ ದನ ಕಾಯುವ ಕೆಲಸಕ್ಕೆ ಹಚ್ಚಿದರು, ಇದು ಅವರ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ, ದಿನಾಲೂ ದನಗಳನ್ನು ಮೇಯಿಸಲು ಹೋದಾಗ ಸಂಗಡಿಗರೊಂದಿಗೆ ಸಂತೋಷದಿಂದ ಕಾಲ ಹರಣ ಮಾಡುತ್ತಿದ್ದ, ದಿನಾಲೂ ಈತನು ದನಗಳನ್ನು ಮೇಯಿಸಲು ಹೋದಾಗ ಅವರು ದನಗಳ ಜೊತೆಗೆ ಆಗಾಗ ಬೇರೊಂದು ಆಕಳು ಬಂದು ಸೇರುತ್ತಿತ್ತು,ಅದು ದಿನಾಲೂ ಬಂದು ಹೋಗುತ್ತಿತ್ತು, ಹೀಗೆ ಒಂದು ದಿನ ದನಗಳನ್ನು ಮೇಯಿಸಿ ಸಾಯಂಕಾಲ ಮನೆಗೆ ಹೋಗ್ತಾ ಇರುವಾಗ ಆ ಆಕಳು ಗುಡ್ಡದ ಕಡೆ ಹೋಯಿತು, ಬಸವಲಿಂಗ ಅದರ ಬಾಲ ಹಿಡಿದು ಅದರ ಹಿಂದೆಯೇ ಹೋದ, ಆ ಆಕಳು ಗುಡ್ಡದ ಗವಿಯ ಒಳಗೆ ಹೋಯಿತು, ಅಲ್ಲಿ ಅನೇಕ ಸನ್ಯಾಸಿಗಳು ಕಂಡರು, ಆಗ ಬಸವಲಿಂಗ ಇದು ಯಾರ ಆಕಳು? ಇದನ್ನು ನಾನು ದಿನಾ ಕಾಯುತ್ತಾ ಇದ್ದೇನೆ,ಇದರ ‘ಕೂಲಿ’ ಯಾರು ಕೊಡುತ್ತೀರಿ! ಎಂದು ಕೇಳಿದನಂತೆ, ಆಗ ಅಲ್ಲಿದ್ದವರು ಹುಡುಗನನ್ನು ನೋಡಿ ಗಹಗಹಿಸಿ ನಗುತ್ತಾ ನಿನಗೆ ಕೂಲಿ ಕೊಡಬೇಕೇ! ಆಗಲಿ ಕೊಡುತ್ತೇನೆ ಬಾ ಎಂದು ಒಬ್ಬ ಸನ್ಯಾಸಿ ಬಾಲಕ ಬಸವಲಿಂಗನ ಮಸ್ತಕದ ಮೇಲೆ ತಮ್ಮ ಹಸ್ತವನ್ನಿಟ್ಟು ಆಶಿರ್ವದಿಸಿ ಬಸವಲಿಂಗನ ನಾಲಿಗೆಯ ಮೇಲೆ ತಮ್ಮ ಬೆರಳುಗಳಿಂದ ಮಂತ್ರವನ್ನು ಬರೆದು, ಹೋಗು ಮಗು ನೀನು ಈ ನಾಡಿನ,ಈ ದೇಶದ ಒಬ್ಬ ಪ್ರಸಿದ್ಧ ವ್ಯಕ್ತಿಯಾಗುತ್ತಿಯಾ ಎಂದು ಹರಸಿ ಕಳಿಸಿದರಂತೆ, ಅಂದಿನಿಂದ ದಿನಾಲೂ ಆ ಸಿದ್ದರ ದರ್ಶನ ಪಡೆದು ಬರುತ್ತಿದ್ದನಂತೆ, ಹೀಗೆಯೇ ಅವಲ ದಿನಗಳು ಕಳೆದವು.
ಬಸವಲಿಂಗ ವಯಸ್ಸಿಗೆ ಬಂದ ಮೇಲೆ ಅವರ ಮನೆಯವರು ಅವರಿಗೆ ಮದುವೆ ಮಾಡಬೇಕೆಂದು ತಿಳಿಸಿದರು, ಅದಕ್ಕೆ ಆತ ಒಪ್ಪಲಿಲ್ಲ, ಆಗ ಅವರ ತಂದೆ ತಾಯಿಗಳು ಚಿಂತೆಗಿಡಾದರು, ಸನ್ಯಾಸಿಗಳ ಸಂಪರ್ಕದಿಂದ ಹೀಗಾಗಿ ದ್ದಾನೆ ಎಂದು ತಿಳಿದು ದನಕಾಯುವ ಕೆಲಸವನ್ನೇ ಬಿಡಿಸಿದರು. ತಮ್ಮ ವೃತ್ತಿಯಾದ ಕಾಯಿಪಲ್ಲೆ ಮಾರುವ ಕೆಲಸಕ್ಕೆ ಹಚ್ಚಿದರು, ಸುತ್ತ ಮುತ್ತಲಿನ ಊರುಗಳಿಗೆ ಹೋಗಿ ಕಾಯಿ ಪಲ್ಯ ಮಾರಿ ಬರುತ್ತಿದ್ದ, ಹೀಗೆ ಒಂದು ದಿನ ಕೂಡಲೂರಿಗೆ ಕಾಯಿ ಪಲ್ಯ ಮಾರಲು ಬಂದ,ಕೂಡಲೂರಿನಲ್ಲಿ ಕಾಯಿ ಪಲ್ಯ ಮಾರುತ್ತಾ ಊರ ಅಗಸಿ ಬಾಗಿಲಿಗೆ ಹೋಗುತ್ತಿದ್ದ, ಅಲ್ಲಿ ಒಬ್ಬ ಅನುಭಾವಿಕ ವ್ಯಕ್ತಿಯನ್ನು ಕಂಡ, ದಿನಾಲೂ ಬಳಿಚಕ್ರದಿಂದ ಕಿಲ್ಲನಕೇರ ಮಾರ್ಗದಲ್ಲಿ ಕಾಯಿ ಪಲ್ಯ ಮಾರುತ್ತಾ ಕೂಡಲೂರಿಗೆ ಬಂದು ಪುನಃ ಹೋಗುವಾಗ ತಕ್ಕಡಿ ಇನ್ನಿತರ ವಸ್ತುಗಳನ್ನು ಅಕ್ಕಸಾಲಿಗರಾದ ತಿಪ್ಪಣ್ಣಪ್ಪ ರವರ ಮನೆಯಲ್ಲಿ ಇಡುತ್ತಿದ್ದ, ಪುನಃ ಹೋಗಿ ಬಂದು ವ್ಯಾಪಾರ ವಹಿವಾಟು ಮಾಡುತ್ತಿದ್ದ, ಹೀಗೆ ಅವರಿಗೆ ಅನುಭಾವಿ ತಿಪ್ಪಣ್ಣಪ್ಪ ರವರ ಪರಿಚಯ ಆಗುತ್ತದೆ, ಅವರಿಂದ ಪ್ರಭಾವಿತರಾಗಿ ಅವರಿಂದ ತಾತ್ವಿಕ ವಿಚಾರಗಳನ್ನು, ವೇದಾಂತ, ಯೋಗ,ಶರಣರ ವಚನಗಳ ವಿಶೇಷ ಜ್ಞಾನವನ್ನು ಪಡೆದು ಒಳ್ಳೆಯ ಸಂಸ್ಕಾರಗಳನ್ನು ಸಾತ್ವಿಕ ವೃತ್ತಿ ಜೀವನದ ವಿವಿಧ ವಿಷಯಗಳನ್ನು ತಿಳಿದುಕೊಂಡರು.
ಈತನ ಪ್ರಾಮಾಣಿಕತೆ, ಸಾತ್ವಿಕತೆ, ಮೊದಲಾದ ಸದ್ಗಣಗಳಿಗೆ ಸಾಕ್ಷಿ ಎಂಬಂತೆ ಜನರು ಕಾಯಿ ಪಲ್ಯವನ್ನು ತಾವೇ ಸ್ವತಃ ತೆಗೆದುಕೊಂಡು ಬಸವಲಿಂಗನ ಚೀಲದಲ್ಲಿ ದವಸ ಧಾನ್ಯಗಳನ್ನು ಹಾಕುತ್ತಿದ್ದರಂತೆ, ಹೀಗೆಯೇ ತಂದೆ ತಾಯಿ ಇಬ್ಬರೂ ಹಾಗೂ ಬಳಿಚಕ್ರ ಕೂಡಲೂರಿನ ಜನತೆ ಈತನ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸಂಪ್ರೀತರಾಗಿದ್ದರಂತೆ, ಸುಮಾರು 25 ವರ್ಷದ ವರೆಗೆ ಹೀಗೆ ನಡೆದು ಬಂದ,ಬಳಿಚಕ್ರ, ಕೂಡಲೂರಿನ ಸುತ್ತ ಮುತ್ತಲಿನ ಪರಿಸರದಲ್ಲಿ ವ್ಯವಹಾರ ಜ್ಞಾನ ಮುತ್ತು ವಿವೇಕದ ಮಾತುಗಳಿಂದ ತತ್ವಜ್ಞಾನದ ಕಡೆಗೆ ಹೆಚ್ಚಿನ ಗಮನ ಹರಿಸಿದ, ಹೀಗಾಗಿ ಅವರ ತಂದೆ ತಾಯಿಗಳು ಅವರಿಗೆ ಮದುವೆ ಮಾಡಬೇಕೆಂದು ತಿಳಿಸಿದರು, ಆದರೆ ಅವರು ಅದಕ್ಕೆ ಒಪ್ಪಲಿಲ್ಲ, ಹಿರಿಯರಿಂದ ಹೇಳಿಸಿದರೂ ಕೇಳಲಿಲ್ಲ, ಇನ್ಯಾಕೆ ಎನ್ನ ಮದುವೆಯ ಚಿಂತೆ ಎಂದು ಆಗಲೇ ಹಾಡಿದ್ದು.
ಮುಂದೆ ಆ ದಿನಗಳಲ್ಲಿ ಅನುಭವ ಗೋಷ್ಠಿಗಳು ನಡೆದವು, ಕಡಕೋಳ ಮಡಿವಾಳಪ್ಪ ಆದಿಯಾಗಿ ವಿವಿಧ ಅನುಭಾವಿಗಳು ಬಸವಲಿಂಗನಿಗೆ ವಿವಿಧ ರೀತಿಯಲ್ಲಿ ಬೋಧಿಸಿದರು, ಮುಂದೆ ಬಸವಲಿಂಗಪ್ಪ ಲೌಕಿಕ ಮತ್ತು ಪಾರಮಾರ್ಥಿಕ ಎರಡೂ ವ್ಯಾಪಾರ ಕೂಡಿಯೇ ನಡೆಸಿ ವ್ಯಾಪಾರ ಎನಗಾಯಿತೋ ಕೂಡ್ಲೂರ ಸಂತೆಯಲಿ ವ್ಯಾಪಾರ ಎನಗಾಯಿತೋ ಎಂದು ಹಾಡಿದನು.
ಅಣ್ಣ ತಮ್ಮಂದಿರಿಂದ ಅನ್ಯಾಯವಾಗಿ ತನ್ನ ಮನಸ್ಸಿಗೆ ನೋವಾದ್ರೆ ಅದನ್ನು ಹೇಗೆ ಸಹಿಸಿಕೊಳ್ಳಬೇಕು ಎಂದು ತಿಳಿದು ಬಸವಲಿಂಗ ಮನೆ,ಊರು ಬಿಟ್ಟು ಹಳ್ಳಿ ಹಳ್ಳಿಗಳಲ್ಲಿ ಸುತ್ತುತ್ತಾ ಕಂಡ ಕಂಡ ಭಕ್ತರಿಗೆ ಸದುಪದೇಶ ಮಾಡುತ್ತಾ ಸಂಚರಿಸಿದನು, ಬರಬರುತ್ತಾ ತನ್ನ ಪವಾಡಗಳಿಂದ ಜನರಲ್ಲಿ ಜ್ಞಾನ ಬಿಂಬವನ್ನು ಮೂಡಿಸಿದನು, ಉದಾಹರಣೆಗೆ:
ನೀರು ಜಗ್ಗಲು ಬಾವಿಯ ಹತ್ತಿರ ತರಣಿಯೊಬ್ಬಳು ನಿಂತಿದ್ದಳಂತೆ, ಆಗ ಬಸವಲಿಂಗನು ಆಕೆಗೆ ನೀರು ಹಾಕಲು ಕೇಳಿದಾಗ ಆಕೆ ‘ನಾನು ಒಂದು ಮನೆಯ ಹೆಣ್ಣು,ಜನ ತಪ್ಪು ತಿಳಿಯುತ್ತಾರೆ ಎಂದು ಹೇಳಿದಳಂತೆ, ಆಗ ಬಸವಲಿಂಗನು ಯಾರೂ ಏನೂ ಅನ್ನುವುದಿಲ್ಲ ಹಾಕು ‘ ಎಂದಾಗ ಆಕೆ ನೀರು ಹಾಕಿದಳಂತೆ, ಇಲ್ಲಿ ಈತನಿಗೆ ನೀರು ಹಾಕಿದಂತೆ ಮನೆಯಲ್ಲಿನ ಎಲ್ಲಾ ಹಂಡೆಗಳು ತುಂಬಿದವಂತೆ, ಆ ಹೆಣ್ಣು ಮಗಳು ಮನೆಗೆ ಹೋಗಿ ನೋಡಿದಾಗ ಬೆಕ್ಕಸ ಬೆರಗಾದಳಂತೆ,.. ಹೀಗೆ ತನ್ನ ರುಮಾಲು ನುಂಗಿ ತೆಗೆದದ್ದು, ರೈತನ ಬುತ್ತಿ ಉಂಡದ್ದು ಒಂದೇ ಎರಡೇ! ಅಂತಹ ಸಾವಿರಾರು ಪವಾಡಗಳನ್ನು ಮಾಡಿ ತೋರಿಸಿದ್ದಾರೆ.
ಸುಮಾರು 25-30 ವರ್ಷಗಳ ಕಾಲ ಹೀಗೆಯೇ ಜೀವನ ಸಾಗಿಸಿ ಹೆಚ್ಚಿನ ಜ್ಞಾನ ಪಡೆಯಬೇಕೆಂಬ ಹಂಬಲದಿಂದ ಬಳಿಚಕ್ರ, ಕೂಡಲೂರಿನ ಸುತ್ತ ಮುತ್ತಲಿನ ಹಳ್ಳಿಗಳಿಂದ ಸಮೀಪದ ತೀರ್ಥಕ್ಷೇತ್ರಗಳ ಕಡೆಗೆ ವಾಲಿದ. ಎಲ್ಲೂ ಅವರಿಗೆ ಸಂತೃಪ್ತಿ ಸಮಾಧಾನ ಸಿಗಲಿಲ್ಲ, ಹೋಗುತ್ತಾ ಹೋಗುತ್ತಾ ಹಂಪೆ ವಿರೂಪಾಕ್ಷ ದೇವಾಲಯದ ದರ್ಶನಕ್ಕೆ ತೆರಳಿಧ, ಆಗ ಹಂಪೆ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಾಳು ಹಂಪೆ ಯಾಗಿತ್ತು, ಅಲ್ಲಿ ಜನವಸತಿ ಇರಲಿಲ್ಲ,ಗಿಡ ಗಂಟೆ ಪೊದೆ ಪೊದೆಯಾಗಿ ವಾತಾವರಣ ಅಂಜಿಕೆ ಬರುವಂತಿತ್ತು , ತುಂಗಭದ್ರಾ ನದಿ ತುಂಬಿ ಹರಿಯುತ್ತಿತ್ತು,ಇದೇ ಸ್ಥಳದಲ್ಲಿ ಇದ್ದು ಯೋಗ ಸಾಧನೆ ಮಾಡಲು ನಿಶ್ಚಯಿಸಿ, ಗವಿಯನ್ನು ಹೊಕ್ಕು ವಾಸ ಮಾಡಲು ತೊಡಗಿದರು, ಹಣ್ಣು ಹಂಪಲು, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ತಪಸ್ಸು ಮಾಡುತ್ತಿದ್ದರು, ಅವರು ತಾವು ಹಿಂದೆ ಸಿದ್ದರ ಬೆಟ್ಟಗಳಲ್ಲಿ ಸನ್ಯಾಸಿಗಳಿಂದ, ಕೂಡಲೂರು ಅಕ್ಕಸಾಲಿಗ ಮನೆತನದ ತಿಪ್ಪಣ್ಣಪ್ಪ ರವರಿಂದ,ಕಲಿತ ಯೋಗದ ಪ್ರಭೇದಗಳನ್ನು ಇಲ್ಲಿ ಮುಂದುವರಿದರು, ಹಂಪೆಯಲ್ಲಿ ದೀರ್ಘ ಸಮಯ ಸಾಧನೆ ಮಾಡಿ ಒಂದೆರಡು ವರ್ಷಗಳ ಅವಧಿಯಲ್ಲಿ ಸಿದ್ಧಿಯ ಶಿಖರವನ್ನೇರಿದರು..ಈ ತಪಸ್ಸಿನ ಸಾಧನೆಯಿಂದ ಅವರಿಗೆ “ಪರುಷ ಬಟ್ಟಲು” ದೊರೆಯಿತೆಂದು ತಿಳಿದುಬಂದಿದೆ. ಹೀಗೆ ಬಸವಲಿಂಗಪ್ಪ ಬಸವಲಿಂಗ ಶರಣನಾಗಿ ಮಾರ್ಪಟ್ಟರು.
ಹಂಪೆ ವಿರೂಪಾಕ್ಷನ ಪ್ರತ್ಯಕ್ಷ ದರ್ಶನ ಪಡೆದು ವಿಶ್ವ ಪುರುಷನಾಗಿ ಹೊರಹೊಮ್ಮಿ ತನ್ನ ಸ್ವಸ್ಥಾನ ಬಳಿಚಕ್ರಕ್ಕೆ ಬಂದನು.ಆಗ ಅಲ್ಲಿನ ಜನ ಇವರನ್ನು ಬಹಳ ಭಕ್ತಿಯಿಂದ ಕಾಣತೊಡಗಿದರು. ತಂಡೋಪತಂಡವಾಗಿ ಜನ ಇವರನ್ನು ಕಾಣಲು ಬಂದರು, ಎಲ್ಲರಿಗೂ ಶಾಂತಿ ನೆಮ್ಮದಿ ದೊರೆಯುತ್ತಿತ್ತು. ಸುಮಾರು 35-40 ವರ್ಷಗಳ ವಯಸ್ಸಿನ ಬಳಿಕ ಬಳಿಚಕ್ರ ಮತ್ತು ಕೂಡಲೂರನ್ನು ಬಿಟ್ಟು ಬೇರೆಡೆಗೆ ಮುನ್ನಡೆದನು, ಶ್ರೀ ಶೈಲಕ್ಕೆ ಹೋಗುವಾಗ ಆತ್ಮಕೂರಿನ ದರೋಡೆಕೋರರ ಅಟ್ಟಹಾಸವನ್ನು ಮೆಟ್ಟಿ ನಿಂತು ಸ್ಪರ್ಶ ಜ್ಞಾನದಲ್ಲಿ ಪ್ರಚಂಡ ಗೆಲುವು ಪಡೆಯುವ ಮೂಲಕ ಆ ದರೋಡೆಕೋರರು ಇನ್ನೋಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ಮಾಡಿದನು. ಕಿಲ್ಲನಕೇರ ಮಠದಲ್ಲಿ , ಕಲಬುರ್ಗಿಯಲ್ಲಿ, ಯಾದಗಿರಿಯಲ್ಲಿ ಅವರು ಮಾಡಿದ ಪವಾಡ ಜನರನ್ನು ಮೂಕವಿಸ್ಮತರನ್ನಾಗಿ ಮಾಡಿತು.
ಒಮ್ಮೆ ಬಸವಲಿಂಗರು ಸನ್ನತ್ತಿಯ ಚಂದ್ರಲಾ ಪರಮೇಶ್ವರಿ ಜಾತ್ರೆಗೆ ಹೋದಾಗ ಗರ್ಭಗುಡಿಯ ಜನದಟ್ಟಣೆ ಯಿಂದ ಇತ್ತು, ಇವರಿಗೆ ದೇವಿಯ ದರ್ಶನ ಆಗಲಿಲ್ಲ, ಗುಡಿಯ ಹಿಂದೆ ಹೋಗಿ ದೇವಿಯನ್ನು ಪ್ರಾರ್ಥಿಸಿದಾಗ,ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಹಿಂಭಾಗದ ಗೋಡೆ ಭೇದಿಸಿ ಬಸವಲಿಂಗಪ್ಪ ನಿಗೆ ದರ್ಶನ ಕೊಟ್ಟು “ಕೂಡಲೂರೇಶನೆಂಬ ಹೆಸರಿನಿಂದ ಪ್ರಖ್ಯಾತನಾಗು”ಎಂದು ಹರಸಿದಳಂತೆ, ಮುಂದೆ ಗೂಗಲ್ಲಿನ ಪ್ರಭುದೇವರ ದರ್ಶನದ ಸಂದರ್ಭದಲ್ಲಿ ಬೆಂಡೆಗಂಬಳಿಯ ಪರಪ್ಪಯ್ಯ ಮತ್ತು ಬಸವಲಿಂಗರ ನಡುವೆ ನಡೆದ ಸಂಭಾಷಣೆ ರೋಮಾಂಚನವನ್ನುಂಟು ಮಾಡುವುದು.
ಮೈಲಿಪೂರ ಮತ್ತು ಕನಗನಹಳ್ಳಿಯಲ್ಲಿ ಬಸವಲಿಂಗರು ತೋರಿದ ದಿವ್ಯ ದರ್ಶನ ಖ್ಯಾತವಾಗಿದೆ.
ಬಸವಲಿಂಗಪ್ಪನು ಪ್ರವಾಸ ಪ್ರಿಯನಂತೆ ತೋರುತ್ತದೆ, ಆತನು ಕರ್ನಾಟಕ, ಆಂಧ್ರ, ತಮಿಳುನಾಡು,ಕೇರಳ , ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಮಾಡಿ ಕೊನೆಗೆ ಖಾನಾಪೂರಕ್ಕೆ ಬಂದಿದ್ದು, ಅಲ್ಲಿ ಮಾಲಿಗೌಡರ ಮನೆಯಲ್ಲಿ, ಮತ್ತು ಪಂಚಾಳರ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ,ಆಗ ಅವರಿಗೆ 40-45 ವಯಸ್ಸು ಆಗಿರಬಹುದು, ಅವರು ಸುಮಾರು 60-72 ವರ್ಷ ಜೀವಿಸಿದ್ದು ದೇವದುರ್ಗ ತಾಲ್ಲೂಕಿನ ಖಾನಾಪೂರ (ಗಬ್ಬೂರು ಹತ್ತಿರ) ದಿಲ್ಲಿ ಸುಮಾರು 20-25 ವರ್ಷ ನೆಲೆಸಿದ್ದರು ಎಂದು ಹೇಳಲಾಗುತ್ತಿದೆ.
ಹೀಗೆ ಕಲಿಯುಗದ ಕಡೇ ಶರಣ ಎಂದೆನಿಸಿಕೊಂಡು ಜನರಲ್ಲಿ ಜ್ಞಾನ ಬಿಂಬವನ್ನು ಮೂಡಿಸಿ, “ಕೂಡಲೂರೇಶ “ಎಂಬ ಶಿರೋನಾಮೆಯಲ್ಲಿ ಸುಮಾರು 770 ಕ್ಕೂ ಅಧಿಕ ತತ್ವಪದಗಳನ್ನು ರಚಿಸಿ ನಮ್ಮೆಲ್ಲರಿಗೂ ದಾರಿ ದೀಪ ಆಗಿರುವ ಸದ್ಗುರು ಶ್ರೀ ಕೂಡಲೂರು ಬಸವಲಿಂಗೇಶ್ವರರ ಜಾತ್ರೆಯು ದವನದ ಹುಣ್ಣಿಮೆ ಮತ್ತು ಪಲ್ಲಕ್ಕಿ ಉತ್ಸವವು ಬೆನಕನ ಅಮವಾಸೆ ದಿನಗಳಂದು ಬಹು ವಿಜೃಂಭಣೆಯಿಂದ ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ, ಹಾಗೂ ಶಿವರಾತ್ರಿ ಪ್ರಯುಕ್ತ ಸೈದಾಪುರ ಮತ್ತು ನಾರಾಯಣ ಪೇಟೆ ಮುಖ್ಯ ರಸ್ತೆಯಲ್ಲಿ ಶ್ರೀ ಕೂಡಲೂರು ಬಸವಲಿಂಗೇಶ್ವರರ ಮಹಾದ್ವಾರದ ಮೂರ್ತಿಗಳಿಗೆ ವಿಶೇಷ ಅಭಿಷೇಕ ಮಾಡಿ ಪೂಜಿಸಿ ಅನ್ನದಾಸೋಹ ಮಾಡಲಾಗುತ್ತದೆ.
ಆದರೆ ಈ ವರ್ಷ ಮಹಾಮಾರಿ ‘ಕೊರೋನ ‘ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ತನ್ನ ಅಟ್ಟಹಾಸ ಮೇರೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೊರೋನಾ ಸಾರ್ವಜನಿಕರ ಮೇಲೆ ಯಾವುದೇ ತರಹದ ಪರಿಣಾಮ ಬೀರದಂತೆ ಶರಣರಲ್ಲಿ ಪ್ರಾರ್ಥಿಸುತ್ತ ವಿಶೇಷವಾದ ಪೂಜೆಯನ್ನು ಮತ್ತು ಪಲ್ಲಕಿ ಉತ್ಸವವನ್ನು ಅಮವಾಸ್ಶೆ ನಿಮಿತ್ಶ ಸರ್ಕಾರದ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಚರಿಸಲು ತಿರ್ಮಾನಿಸಲಾಗಿದೆ.
ಬಂದಯ್ಯ ಬ ಮಠದ್ ಕೂಡ್ಲೂರು
ಯಾದಗಿರಿ ಜಿಲ್ಲೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…