ಪತ್ರಿಕಾ ರಂಗವನ್ನು ಭಾರತದ ಸಂವಿಧಾನದ ನಾಲ್ಕನೇ ಆಧಾರ ಸ್ತಂಭವಾಗಿ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಬಳಿಕ ಪ್ರಜಾಪ್ರಭುತ್ವ ಭಾರತದಲ್ಲಿ ಪತ್ರಿಕಾ ಕ್ಷೇತ್ರವು ಅತಿ ಹೆಚ್ಚಿನ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.
ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಮಾಧ್ಯಮ ರಂಗದ ನಿಷ್ಪಕ್ಷಪಾತ ಕಾರ್ಯ ನಿರ್ವಹಿಸುವಿಕೆ, ನಿರ್ಧಿಷ್ಟವಾದ ರಾಜಕೀಯ ಪಕ್ಷಗಳ ಭಟ್ಟಂಗಿತನದಿಂದ ದೂರ ಇರುವಿಕೆ, ಪೂರ್ವಾಗ್ರಹ ಮನಸ್ಥಿತಿ ಹೊಂದದೆ, ಪರಿಪೂರ್ಣ ಸತ್ಯ ಸಂಗತಿಗಳ ಸುದ್ದಿ ಗಳನ್ನು ಜನತೆಗೆ ತಲುಪಿಸುವುದು ಬಹು ಮುಖ್ಯ ಉದ್ದೇಶವಾಗಿರಬೇಕಾಗುತ್ತದೆ.
ಆಳುವ ರಾಜಕೀಯ ಪಕ್ಷಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಜನಪರ ಹಾಗೂ ಸಂವಿಧಾನ ಬದ್ಧ ಆಡಳಿತ ನೀಡುವಾಗ ಪ್ರಶಂಸೆಯ ಮೂಲಕ ಬೆನ್ನು ತಟ್ಟಬೇಕು, ಹಾಗೆಯೇ ಜನ ವಿರೋಧಿ ಕೆಲಸಕ್ಕೆ ಕೈ ಹಾಕಿದಾಗ ಅಥವಾ ಸಂವಿಧಾನ ವಿರೋಧಿ ಕೃತ್ಯಕ್ಕೆ ಕೈಹಾಕಿದಾಗ ಸೂಕ್ತ ಟೀಕೆ ಟಿಪ್ಪಣಿಯ ಮೂಲಕ ಸರಿ ದಾರಿಗೆ ತರುವ ಜವಾಬ್ದಾರಿಯುತ ಸಲಹೆ ನೀಡುವ ಕರ್ತವ್ಯ ಮಾಧ್ಯಮ ರಂಗದ್ದಾಗಿರಬೇಕು.
ಈ ಹಿಂದೆ ಮಾಧ್ಯಮ ರಂಗದಿಂದ ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿಯ ವರದಿ ಪ್ರಕಟವಾದರೆ ಅದೇ ದೊಡ್ಡ ರಾಜಕೀಯ Propaganda ವಾಗುತ್ತಿತ್ತು. ಅಂತಹ ಮಹತ್ವ ಹೊಂದಿದ್ದ ಪತ್ರಿಕಾ ರಂಗ ಇಂದು ಯಾವ ಮಟ್ಟಕ್ಕೆ ಮುಟ್ಟಿದೆ ಎಂದು ಹೇಳಲೂ ನಾಚಿಕೆ ಪಡುವಂತಾಗಿದೆ.
ಈ ಹಿಂದೆ ಪ್ರತಿಯೊಂದು ಪತ್ರಿಕೆಗಳಾಗಲಿ ಅಥವಾ ದೃಶ್ಯ ಮಾಧ್ಯಮಗಳಾಗಲಿ ತಮ್ಮದೇ ಆದ ಕನಿಷ್ಠ ಇತಿಮಿತಿಯ ಸೈದ್ಧಾಂತಿಕ ಗಟ್ಟಿತನವನ್ನು ಹೊಂದಿದ್ದ ಕಾಲವೂ ನಾವು ನೋಡಿದ್ದೇವೆ. ರಾಜಕೀಯ ಪಕ್ಷಗಳ ನಾಯಕರಾಗಲಿ ಅಥವಾ ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಹೆಸರು ಕೆಲವೊಂದು ಪತ್ರಿಕೆಯಲ್ಲಿ ಅಚ್ಚಾಗಿದ್ದರೆ ಅದೆಷ್ಟೋ ಖುಷಿ ಪಡುವ ಕಾಲವಿತ್ತು.
ಅಂತಹ ಘನತೆ ಗೌರವ ಹೊಂದಿದ್ದ ಪತ್ರಿಕಾರಂಗವನ್ನು ಇಂದು ಸಾರ್ವಜನಿಕರು ಬೀದಿ ಬೀದಿಯಲ್ಲಿ ನಿಂತು ಕ್ಯಾಕರಿಸಿ ಉಗಿಯುವದನ್ನು ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿದ್ದ ಪತ್ರಿಕಾರಂಗ ಮುಂದೊಂದು ದಿನ ಇದೇ ಪ್ರಜಾಪ್ರಭುತ್ವದ ನಾಶಕ್ಕಾಗಿ ಟೊಂಕ ಕಟ್ಟಿ ನಿಲ್ಲುತ್ತದೆ ಎಂದು ಯಾರೂ ಸಹ ಭಾವಿಸಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವತಂತ್ರ್ಯ ಭಾರತದ ಕೇವಲ ಹತ್ತು ವರ್ಷಗಳ ಹಿಂದಿನ ತನಕ ಸೈದ್ಧಾಂತಿಕ
ತಳಹದಿಯ ಮೇಲೆ ತನ್ನ ಕಾರ್ಯ ನಿರ್ವಹಿಸುತ್ತಿದ್ದ ಮಾಧ್ಯಮ ರಂಗ ಏಕಾಏಕಿ ಕಾರ್ಪೋರೇಟ್ ವಲಯಕ್ಕೆ ತನ್ನನ್ನು ತಾನು ಬಿಕರಿಯಾಗುವ ಮೂಲಕ “Ethics of Journalism” ನ್ನು ಹತ್ಯೆಗೀಡು ಮಾಡಿರುವುದನ್ನು ಕಾಣಬಹುದಾಗಿದೆ.
ಮಾಧ್ಯಮ ರಂಗ ಕಾರ್ಪೋರೇಟ್ ವಲಯದ ವ್ಯಾಪಾರಿ ಹಿಡಿತಕ್ಕೆ ಬಲಿಯಾಗಿಯೋ ಅಥವಾ ನಿರಂಕುಶವಾದಿಗಳ ಪ್ರಬಲ ಹಿಡಿತಕ್ಕೆ ಸಿಕ್ಕು ಪ್ರಜಾಪ್ರಭುತ್ವದ ನಾಶಕ್ಕೆ ಪಣ ತೊಟ್ಟವರಂತೆ ವರ್ತಿಸುವದನ್ನು ಕಂಡಾಗ, ಈ ದೇಶದಲ್ಲಿ ಮಾಧ್ಯಮ ರಂಗ ಇರಬೇಕಾ? ಅಥವಾ ಬೇಡ ಎಂಬ ತೀರ್ಮಾನ ಕೈಗೊಳ್ಳುವ ಸಮಯ ದೇಶದ ಜನತೆಯ ಮುಂದಿದೆ.
ಮಾಧ್ಯಮ ರಂಗಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂಬ ಕಾರಣವನ್ನು ದುರುಪಯೋಗ ಮಾಡಿಕೊಂಡಿರುವ ಕೆಲವರು, ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿಯನ್ನು ಗಾಳಿಗೆ ತೂರಿ, ಬಳಸುವ ಭಾಷೆಯ ಹಿಡಿತವಿಲ್ಲದೆ, ನಿರ್ಧಿಷ್ಟವಾದ ರಾಜಕೀಯ ಪಕ್ಷಗಳ ಮುಖಂಡರ ವೈಯಕ್ತಿಕ ತೇಜೋವಧೆ ಮಾಡುವ ಅಥವಾ ನಿರ್ಧಿಷ್ಟವಾದ ರಾಜಕೀಯ ಪಕ್ಷದ ಮುಖಂಡರ ಪರ ಪುಂಗಿ ಊದುವ ನಿಟ್ಟಿನಲ್ಲಿ ತಮ್ಮ ಬಾಯಿಗೆ ಬಂದಂತೆ ಬೊಗಳುವುದೇ “Journalism” ಎಂದು ಭಾವಿಸಿದಂತಿದೆ ಇಂದಿನ ಪತ್ರಕರ್ತರ ಮನಸ್ಥಿತಿ.
ಯಾವುದೇ ದೇಶಗಳ ಪ್ರಭುತ್ವ ತನ್ನ ದೇಶದ ಪತ್ರಿಕಾರಂಗದ ಸ್ವಾತಂತ್ರ್ಯದ ಮೇಲೆ ಸಾಧಿಸುವ ಹಿಡಿತ ಅಥವ ನಿರ್ಬಂಧದ ಮೇಲೆ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ” ಸೂಚ್ಯಂಕವನ್ನು ಅಳೆಯಲಾಗುತ್ತದೆ. ಜಗತ್ತಿನ 180 ರಾಷ್ಟ್ರಗಳ ಪೈಕಿ ಭಾರತ ಇಂದು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 142ಕ್ಕೆ ಕುಸಿದಿದೆ. 2010 ರಲ್ಲಿ 120 ನೇ ಸ್ಥಾನದಲ್ಲಿದ್ದ ಭಾರತ ಕೇವಲ ಹತ್ತು ವರ್ಷಗಳಲ್ಲಿ 142 ನೇ ಸ್ಥಾನಕ್ಕೆ ಕುಸಿತ ಕಂಡಿರುವ ಕಾರಣ ಯಾವ ದಡ್ಡನಾದರೂ ಅರ್ಥಮಾಡಿಕೊಳ್ಳಬಹುದಲ್ಲವೆ?.
ಇದರಿಂದ ಸ್ಪಷ್ಟವಾಗಿ ಅರ್ಥವಾಗುವ ಸತ್ಯವೇನಂದರೆ, 1. ಭಾರತದಲ್ಲಿ ಪತ್ರಿಕಾರಂಗ ಪತ್ರಿಕೋದ್ಯಮವಾಗಿ ಮಾರ್ಪಟ್ಟಿದೆ.
ಇಷ್ಟೆಲ್ಲ ಹೇಳುವ ಕಾರಣ ಇಷ್ಟೆ, ಇತ್ತಿಚಿನ ದಿನಗಳಲ್ಲಿ ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಬಳಸುವ ಭಾಷೆ ಹಾಗೂ ವರ್ತನೆಯನ್ನು ಗಮನಿಸಿದಾಗ, ಇವರೆಲ್ಲ ಮನುಷ್ಯರೋ ಅಥವಾ ಮನುಷ್ಯ ರೂಪದ ಕಾಡು ಮೃಗಗಳೋ ಎಂಬಂತೆ ಭಾಸವಾಗುತ್ತಿದೆ.
ಕೇಲವು ಪತ್ರಕರ್ತರನ್ನು ನೋಡಿದರೆ ಇವರನ್ನು ಪತ್ರಕರ್ತನೆನ್ನಬೇಕೋ?, ಪತ್ರಕರ್ತನಾದ ಮಾತ್ರಕ್ಕೆ ಒಬ್ಬರನ್ನು ವೈಭವೀಕರಿಸುವ ಅಥವಾ ವೈಯಕ್ತಿಕ ಚಾರಿತ್ರ್ಯ ತೇಜೋವಧೆ ಮಾಡುವ ಭರದಲ್ಲಿ ಬಳಸುವ ಭಾಷೆಯನ್ನು ಮಾನವ ಭಾಷೆ ಎಂದು ಪರಿಗಣಿಸಬೇಕೋ?, ಈತನನ್ನು ಜಾಣನೆಂದು ಪರಿಭಾವಿಸಬೇಕೋ?, ಹುಚ್ಚನೆಂದು ತಿಳಿದುಕೊಳ್ಳಬೇಕೋ?, ಅರೆ ಹುಚ್ಚನೆಂದು ತಿಳಿದುಕೊಳ್ಳಬೇಕೋ?, ಶತಮೂರ್ಖನೆಂದು ಭಾವಿಸಬೇಕೋ? ಎಂಬುದೇ ಅರ್ಥವಾಗುತ್ತಿಲ್ಲ.
ಈ ವಿಷಯವಾಗಿ ನಾಡಿನ ಜನತೆಗೆ ಮಾರಕವಾಗುವ ಸುಳ್ಳು ಸುದ್ಧಿಗಳನ್ನು ಹರಡಿ, ಸಮಾಜದ ಸ್ವಾಸ್ಥ್ಯ ಕೆಡಿಸುವ ಇವರಿಗೆ ನಾಡಿನ ಜನತೆ ಸಂಘಟಿತವಾಗಿ ಬುದ್ದಿ ಹೇಳುವ ಅಗತ್ಯತೆ ಇದೆ ಎಂದು ನನಗನಿಸುತ್ತದೆ.
ಅಮಾಯಕ ಜನರ ಮೆದುಳಿನಲ್ಲಿ ಧಾರ್ಮಿಕ ವಿಷ ಬೀಜ ಬಿತ್ತುವ ಇಂತಹ ಮನಸ್ಥಿತಿಗಳಿಗೆ ನಿಜವಾಗಿಯೂ ಚಿಕಿತ್ಸೆಯ ಅಗತ್ಯವಿದೆ. ಇಂತಹ ಅಪಾಯಕಾರಿ ಮನಸ್ಥಿತಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಮಾಧ್ಯಮದ ಗೌರವ, ಘನತೆ, ಸ್ವಾತಂತ್ರ್ಯ, ಸೈದ್ಧಾಂತಿಕ ಮೌಲ್ಯವನ್ನು ಮರುಸ್ಥಾಪಿಸಬೇಕಿದೆ.
ಈ ನಿಟ್ಟಿನಲ್ಲಿ ಮಾಧ್ಯಮ ರಂಗದ ಬೌದ್ಧಿಕ ದಿವಾಳಿತನದ ಬಗ್ಗೆ ಸಮಗ್ರ ಚಿಂತನೆ ನಡೆಸುವ ಅಗತ್ಯ ನಮ್ಮ ನಾಡಿನ ಪ್ರಜ್ಞಾವಂತರ ಮುಂದಿದೆ. ಇಂತಹವರನ್ನು ಸರಿಯಾದ ಚಿಕಿತ್ಸೆಯ ಮೂಲಕ ಗುಣಪಡಿಸುವ ಆಶಾವಾದ ನನಗೆ ಇದೆ ಎಂದು ಹೇಳಬೇಕಾದರೆ, ಅದಕ್ಕೆ ಕಾರಣ, ಇಂತಹವರ ನಡುವೆಯೂ ನಮ್ಮ ಕೆಲವರು ನೈಜ ಪತ್ರಕರ್ತರೂ ಇರುವುದರಿಂದ ಇಷ್ಟೆಲ್ಲ ಹೇಳಬೇಕಾಯಿತು.
ಈ ವಿಷಯವಾಗಿ ಸಮಗ್ರವಾಗಿ ಆರೋಗ್ಯಪೂರ್ಣ ಚರ್ಚೆಯಾಗಲೆಂಬ ಕಾರಣದಿಂದ ಬರೆಯಬೇಕಾಯಿತು.
-: ಟಿ.ಶಶಿಧರ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…