ಕಲಬುರಗಿ: ಆಕಸ್ಮಿಕವಾಗಿ ಯಾವುದೋ ಅಚಾತುರ್ಯದಿಂದ ನಡೆದ ಘಟನೆಯನ್ನು ಪ್ರತಿಷ್ಠೆಯಾಗಿ ಮಾಡಿಕೊಂಡು ಸಮುದಾಯಗಳು ಪರಸ್ಪರ ಘರ್ಷಣೆ ಮಾಡುವುದು ಸರಿಯಲ್ಲ. ಆಗಿರುವ ಕಹಿ ಘಟನೆಯನ್ನು ಮರೆತು ಎಲ್ಲ ಸಮುದಾಯದವರು ಪರಸ್ಪರ ಸಹೋದರತ್ವದಿಂದ ಜೀವನ ನಡೆಸುವ ಮೂಲಕ ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ನಾಗರಹಳ್ಳಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಅವರು ಶುಕ್ರವಾರ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಕಳೆದ ಮೇ ೨೬ರಂದು ಮದುವೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರ-ಪರಿಶಿಷ್ಟ ಜಾತಿ ಸಮುದಾಯದವರ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನ ಕಟ್ಟೆಯಲ್ಲಿ ಗ್ರಾಮದ ಸರ್ವ ಜನಾಂಗದವರು ಮತ್ತು ಗ್ರಾಮದ ಹಿರಿಯ ಮುಖಂಡರ ಸಮಕ್ಷಮ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆ ಸೂಫಿ ಸಂತರ ನಾಡಾಗಿದ್ದು, ವಿವಿಧ ಧರ್ಮದ ಜನರು ಇಲ್ಲಿ ನೆಲೆಸಿದ್ದಾರೆ. ನಾಗರಹಳ್ಳಿಯಲ್ಲಿ ನಡೆದ ಮೇ ೨೬ರ ಘಟನೆ ಆಕಸ್ಮಿಕ ಎಂಬುದನ್ನು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶಾಂತಿ ಸಾಮರಸ್ಯಕ್ಕೆ ಹೆಸರು ವಾಸಿಯಾಗಿರುವ ನಾಗರಹಳ್ಳಿ ಗ್ರಾಮದಲ್ಲಿ ಈ ರೀತಿಯ ಸಮುದಾಯಗಳ ಮಧ್ಯೆ ಘರ್ಷಣೆ ನಡೆದಿರುವ ಉದಾಹರಣೆಯಿಲ್ಲ. ಗ್ರಾಮದ ಯುವಕರು ಯಾವುದೆ ಭಾವೋದ್ವೇಗಕ್ಕೆ ಒಳಗಾಗದೇ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಬಾರದು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಡಾ. ಬಿ.ಅರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಸರ್ವ ಜನಾಂಗಕ್ಕೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಅದನ್ನು ಅರಿತು ಅಭಿವೃದ್ಧಿಯ ಕಡೆ ನಮ್ಮ ನಡೆಯಾಗಬೇಕು. ಉತ್ತಮ ಶಿಕ್ಷಣ ಪಡೆಯುವುದು, ಸ್ವಾಭಿಮಾನದ ಬದುಕು ನಮ್ಮ ಆಶಯವಾಗಬೇಕು. ಅನಗತ್ಯ ಗಲಾಟೆ ಮಾಡಿಕೊಂಡು ಕೋರ್ಟ್, ಕಚೇರಿ ಅಲೆದಾಡುವುದರಿಂದ ವೈಯಕ್ತಿಕ ಅಭಿವೃದ್ಧಿ ಅಸಾದ್ಯ ಎಂಬುದನ್ನು ಮನಗಾಣಬೇಕು. ನಂತರ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದ ಅವರು ಇನ್ನು ಮುಂದೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು. ಒಂದು ವೇಳೆ ಶಾಂತಿಗೆ ಭಂಗವನ್ನುಂಟು ಮಾಡುವ ಯಾವುದೇ ಘಟನೆ ಪುನರಾವರ್ತನೆಯಾದ್ದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
ಈ ಭಾಗದ ಅಭಿವೃದ್ಧಿಗೆಂದೆ ೩೭೧(ಜೆ) ಮೀಸಲಾತಿ ಕಲ್ಪಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದೆ. ಗ್ರಾಮದ ಯುವಕರು-ವಿದ್ಯಾವಂತರು ಮೀಸಲಾತಿ ಪಡೆದು ಡಾಕ್ಟರ್, ಇಂಜಿನೀಯರ್, ನಾಗರಿಕ ಸೇವೆ ಹುದ್ದೆಗಳ ಪಡೆಯುವತ್ತ ಗಮನಹರಿಸಬೇಕೆ ಹೊರತು ಅನಗತ್ಯ ಗಲಭೆ ಸೃಷ್ಟಿಸಿ ಸ್ವಾಸ್ಥ ಸಮಾಜದ ಅಶಾಂತಿಗೆ ಕಾರಣರಾಗಬಾರದು ಎಂದು ಬುದ್ದಿವಾದ ಹೇಳಿದರು.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ದೂರು, ಪ್ರತಿ ದೂರು ದಾಖಲಾಗಿ ಅದರಂತೆ ಈವರೆಗೆ ೨೭ ಜನರನ್ನು ಬಂಧಿಸಲಾಗಿದೆ. ಗ್ರಾಮದ ಮುಖಂಡರು ಪ್ರಕರಣವನ್ನು ಆಕಸ್ಮಿಕವಾಗಿ ನಡೆದಿದ್ದು, ಇದನ್ನು ಇಲ್ಲಿಗೆ ಪೂರ್ಣವಿರಾಮ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಏಕಪಕ್ಷಿಯವಾಗಿ ಬಿ. ರಿಪೋರ್ಟ್ ಸಲ್ಲಿಸಲು ಅವಕಾಶವಿಲ್ಲ. ಎರಡು ಕಡೆಯವರು ಲಿಖಿತ ಹೇಳಿಕೆ ಸಲ್ಲಿಸಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಘಟನೆ ನಂತರ ಗ್ರಾಮ ಬಿಟ್ಟು ಹೋದ ಗ್ರಾಮಸ್ಥರು ಮರಳಿ ಗ್ರಾಮಕ್ಕೆ ವಾಪಸ್ಸಾಗಬೇಕು ಎಂದರು.
ಶಾಂತಿ ಸಭೆಯಲ್ಲಿ ಭಾಗವಹಿಸಿದ ಗ್ರಾಮದ ಅನೇಕ ಮುಖಂಡರು ಗ್ರಾಮದಲ್ಲಿ ನಡೆದ ಆಕಸ್ಮಿಕ ಘಟನೆ ಇದ್ದಾಗಿದ್ದು, ಯಾವುದೇ ದುರುದ್ದೇಶ ಕೂಡಿರಲಿಲ್ಲ. ಹೀಗಾಗಿ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಿ ಗ್ರಾಮಸ್ಥರು ಎಂದಿನ ಸಾಮರಸ್ಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರು.
ಶಾಂತಿ ಸಮಿತಿ ಸಭೆಯಲ್ಲಿ ಜೀವರ್ಗಿ ತಹಶೀಲ್ದಾರ ಸಿದ್ದು ಭಾಸಗಿ, ಯಡ್ರಾಮಿ ತಹಶೀಲ್ದಾರ ಬಸವಲಿಂಗಪ್ಪ ನಾಯ್ಕೋಡಿ, ಡಿಎಸ್ಪಿ ಗೋಪಾಲಕೃಷ್ಣ ಅರ್.ಗೌಡ, ಜಿಲ್ಲಾ ಪಂಚಾಯತ್ ಸದಸ್ಯ ದಂಡಪ್ಪ ಸಾವು, ಜೇವರ್ಗಿ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲನಗೌಡ ಎಸ್. ಪಾಟೀಲ, ಮಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಈರಣ್ಣ ಕುಂಬಾರ, ಗ್ರಾಮದ ಹಿರಿಯ ಮುಖಂಡರಾದ ಗೊಲ್ಲಾಳಪ್ಪ ಗೌಡ ಪಾಟೀಲ್ ಮಾಗಣಗೇರಿ, ಸಿದ್ದಣ್ಣ, ಶ್ರೀಕುಮಾರ್ ಕಟ್ಟಿಮನಿ, ಗುರಣ್ಣಾ ಐನಾಪುರ, ಸಂಗಪ್ಪ ಹಳ್ಳದಕೇರಿ, ಬಸವರಾಜ ಹಳ್ಳದಕೇರಿ, ಸಂಗರಾಜ ವಾಲಿಕರ್, ಹಯ್ಯಾಳಪ್ಪ ಗಂಗಾಳಕರ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…