ಕಲಬುರಗಿ: ಅಂದು ಲಕ್ಷಾಂತರ ಕನ್ನಡಿಗರು ಒಗ್ಗಟ್ಟು ತೋರಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಿದ್ದಾರೆ. ಆ ಹೋರಾಟಗಾರರು ತೋರಿದ ಒಗ್ಗಟ್ಟಿನ ಪ್ರದರ್ಶನವನ್ನು ನಾವು ಇಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ತೋರಬೇಕಿದೆ ಎಂದು ಜಿಲ್ಲಾಧಿಕಾರಿಗಳಾದ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಪ್ರತಿಪಾದಿಸಿದರು.
ಭಾನುವಾರ ನಗರದ ನಹರು ಗಂಜ್ ಪ್ರದೇಶದ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ನಾಡ ದೇವತೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಭಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ಅವರು ಕರೆ ನೀಡಿದರು.
ಕನ್ನಡಿಗರು ಸಹೃದಯಿಗಳು, ಧಾರ್ಮಿಕ ಸಹಿಷ್ಣುತೆವುಳ್ಳ ಪ್ರಜ್ಞಾವಂತರು. ನಮ್ಮಲ್ಲಿ ಧರ್ಮ, ಸಂಸ್ಕøತಿ, ಸಂಪ್ರದಾಯಗಳು ಹಲವು, ಆದರೆ ಭಾವನೆ ಮಾತ್ರ ಒಂದೇ ಎಂದು ಗುಣಗಾನ ಮಾಡಿದರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ಖರು, ಮುಂತಾದ ಎಲ್ಲಾ ಧರ್ಮಿಯರು, ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಅಂತೆಯೇ ದೇಶದಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿರುವ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಸಾಹಿತ್ಯಕ್ಕೆ ಇಂದು 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹಾಡಿಹೊಗಳಿದರು.
ಕನ್ನಡ ನಾಡು ವಿವಿಧ ಧರ್ಮ ಸಂಸ್ಕøತಿಗಳ ಸಮಾಗಮವಾಗಿದೆ. ಮೌರ್ಯರು, ಕದಂಬರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜಮನೆತನಗಳು ಈ ನಾಡನ್ನು ಆಳಿವೆ. ಈ ಮನೆತನಗಳ ಕೊಡುಗೆ ನಾಡಿಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫ್ ಅವರಂಥ ಸಂತ ಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಶರಣರು, ವಚನಕಾರರು, ಬಾಳಿ ಬದುಕಿದ ನೆಲ ನಮ್ಮದು ಎಂದು ಅವರು ಬಣ್ಣಿಸಿದರು.
ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸದ ಜಗತ್ತಿನ ಅಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಕಲ್ಯಾಣ ಕರ್ನಾಟಕ ಇದಾಗಿದೆ ಎಂದು ಹೆಚ್ಚೆಯಿಂದ ನುಡಿದರು.
“ಕವಿರಾಜ ಮಾರ್ಗ” ಎಂಬ ಕನ್ನಡಕ್ಕೆ ಮೊಟ್ಟ ಮೊದಲ ಕನ್ನಡದ ಗ್ರಂಥ ನೀಡಿದ್ದು ನೃಪತುಂಗನ ನಾಡು ಕಲಬುರಗಿ ಜಿಲ್ಲೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಕವಿ ಅಮೋಘವರ್ಷ ನೃಪತುಂಗನ “ಕವಿರಾಜ ಮಾರ್ಗ” ಕೃತಿಯು “ಕಾವೇರಿಯಿಂದ ಗೋದಾವರಿವರೆಗೆ” ಕನ್ನಡ ನಾಡು ವಿಸ್ತರಿಸಿರುವ ವೈಭವವನ್ನು ವರ್ಣಿಸಿದೆ ಎಂದು ಅವರು ಕಾವ್ಯದ ಮಹತ್ವ ತಿಳಿಸಿದರು.
ಅಂದು ಕರ್ನಾಟಕ ಏಕೀಕರಣದ ಕನಸನ್ನು ಕಂಡಿದ್ದ ಡೆಪ್ಯೂಟಿ ಚೆನ್ನಬಸಪ್ಪ ಅವರು 1856ರಲ್ಲಿ ಬಿತ್ತಿದ ಚಳವಳಿಯ ಬೀಜ ಹೆಮ್ಮರವಾಗಿ ಬೆಳೆದು ಒಂದು ನೂರು ವರ್ಷಗಳ ನಂತರ ಅಂದರೆ ನವೆಂಬರ್ 1, 1956 ರಂದು ಏಕೀಕೃತ “ಮೈಸೂರು” ರಾಜ್ಯ ಉದಯವಾಯಿತು. ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು “ವಿಶಾಲ ಮೈಸೂರು” ರಾಜ್ಯವನ್ನು ಉದ್ಘಾಟಿಸಿದರು. ಅದೇ ದಿನ ಬಳ್ಳಾರಿ ಜಿಲ್ಲೆಯ ಹಂಪಿಯ ಶ್ರೀ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕುಲ ಪುರೋಹಿತರೆನಿಸಿದ ಆಲೂರು ವೆಂಕಟರಾಯರ ನೇತೃತ್ವದಲ್ಲಿ “ರಾಜ್ಯೋತ್ಸವ” ಕಾರ್ಯಕ್ರಮ ನಡೆಯಿತು. ಭಾಷೆ ಮತ್ತು ಸಂಸ್ಕøತಿ ಬಗೆಗಿನ ಪ್ರೀತಿ ಮತ್ತು ಗೌರವ ಕಾರಣ ವಿವಿಧ ಪ್ರಾಂತ್ಯದಲ್ಲಿ ಹಂಚಿಹೋಗಿದ್ದ ಕನ್ನಡಿಗರು ಮತ್ತೆ ಒಂದಾಗಲು ನೂರಾರು ವರ್ಷಗಳೇ ಬೇಕಾಯಿತು ಎಂದು ಅವರು ಇತಿಹಾಸ ಮೆಲುಕು ಹಾಕಿದರು.
ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ ಪುಟ್ಟಪ್ಪ ಮುಂತಾದವರನ್ನು, ಅಸಂಖ್ಯಾತ ಲೇಖಕ-ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು, ಕನ್ನಡ ಕಟ್ಟಾಳುಗಳನ್ನು ಸ್ಮರಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ರಾಷ್ಟ್ರಧ್ವಜಾರೋಹಣಕ್ಕೂ ಮುನ್ನ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು, ನಾಡದೇವತೆ ತಾಯಿ ಭುವನೇಶ್ವರಿಗೆ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸಿ ನಾಡು-ನುಡಿಯ ಬಗ್ಗೆ ಭಕ್ತಿ-ಭಾವ ಮೆರೆದರು.
ಕಲಬುರಗಿ ಜಿಲ್ಲೆಯ ವಿವಿಧ ಸರ್ಕಾರಿ ಪ್ರೌಢಶಾಲೆಯ ಶಾಲೆಯ ಸಂಗೀತ ಶಿಕ್ಷಕರು, ನಾಡಗೀತೆ ಹಾಗೂ ರೈತಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಪೊಲೀಸ್ ಪೆರೇಡ್ ಕಮಾಂಡರ್ ಶ್ರೀ ಹಣಮಂತ ಹಾಗೂ ತಂಡವು ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರಿಗೆ ಹೂವಿನಹಾರ ಮತ್ತು ಇನ್ನಿತರೆ ಸನ್ಮಾನ ಸಾಮಾಗ್ರಿಗಳಿಗೆ ವೆಚ್ಚ ಮಾಡುವ ಬದಲು 2 ಸಾವಿರ ಮೊತ್ತವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಲಬುರಗಿ ಉಪಯೋಗಕ್ಕಾಗಿ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ಡಾ.ಶಂಕರ ವಣಿಕ್ಯಾಳ ಅವರು ಕಲಬುರಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶ್ರೀಮತಿ ವಿ.ವಿ.ಜ್ಯೋತ್ಸ್ನಾ ಅವರಿಗೆ 2 ಸಾವಿರ ರೂಪಾಯಿ ಚೆಕ್ ಹಸ್ತಾಂತರಿಸಿದರು.
ಶ್ರೀಕಾಂತ್ ಪುಲಾರಿ ಮತ್ತು ಮಡಿವಾಳಪ್ಪ ನಾಗರಹಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿಗಳಾದ ಡಾ.ಶಂಕರ್ ವಣಿಕ್ಯಾಳ ಅವರು ಗಣ್ಯರಿಗೆ ವಂದನಾರ್ಪಣೆ ಸಲ್ಲಿಸುತ್ತಾ, ಕೋವಿಡ್-19 ಹಾಗೂ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತಾದರೂ, ಬಹಳ ಸುಂದರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ, ವಿಧಾನ ಸಭೆ ಶಾಸಕರುಗಳಾದ ಖನೀಜ್ ಫಾತೀಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಕಲಬುರಗಿ ಉಪ ಪೊಲೀಸ್ (ಕಾ & ಸು) ಆಯುಕ್ತ ಡೆಕ್ಕಾ ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಗಣ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…