ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ತರಲು ಹೊರಟಿರುವ ಗೋಹತ್ಯೆ ನಿಷೇಧ ಕಾಯ್ದೆ ಕಠೋರ ಮತ್ತು ಅವೈಜ್ಞಾನಿಕ ಮಾತ್ರವಲ್ಲ, ಸಂಪೂರ್ಣ ರೈತವಿರೋಧಿಯಾಗಿದೆ. ಈ ಕಾಯ್ದೆಗೆ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದೆಯೇ ಹೊರತು ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿಂದು ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಜಾನುವಾರುಗಳ ಬಗ್ಗೆ ಬಿಜೆಪಿ ಸರ್ಕಾರ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಜಾನುವಾರು ಸಂಬಂಧಿ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನವನ್ನು ತಜ್ಞರಿಂದ ನಡೆಸಿ, ಅದರ ವರದಿ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನಂತರ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಗೋವುಗಳ ಬಗ್ಗೆ ಬಿಜೆಪಿಗೆ ಅಷ್ಟೊಂದು ಭಕ್ತಿ ಮತ್ತು ಕಾಳಜಿ ಹೊಂದಿದ್ದರೆ ಗೋವಾ, ಕೇರಳ ಮತ್ತು ಈಶಾನ್ಯ ರಾಜ್ಯಗಳೂ ಸೇರಿದಂತೆ ಇಡೀ ದೇಶಕ್ಕೆ ಅನ್ವಯವಾಗುವಂತಹ ಒಂದು ಕಾನೂನನ್ನು ಜಾರಿಗೆ ತನ್ನಿ, ಇದರ ಜೊತೆಗೆ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸವಾಲು ಹಾಕಿದ್ದಾರೆ.
ಗೋಹತ್ಯೆಯನ್ನು ನಿಷೇಧಿಸುವ ಮೊದಲು ಎಲ್ಲ ಅನುತ್ಪಾದಕ ಜಾನುವಾರುಗಳನ್ನು ಸರ್ಕಾರವೇ ಖರೀದಿಸಬೇಕು, ಅವುಗಳನ್ನು ರೈತರೇ ಸಾಕಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕು. ಇದಕ್ಕೆ ಸಿದ್ಧವಿದ್ದರೆ ಮುಂದಿನ ವಾರವೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಿ, ನಾವು ಭಾಗವಹಿಸುತ್ತೇವೆ ಎಂದು ಒತ್ತಾಯಿಸಿದರು.
ಗೋಹತ್ಯೆ ನಿಷೇಧ 1964 ರಿಂದಲೇ ಇದೆ, ಹಾಲು ನೀಡದ, ಕೃಷಿಗೆ ಯೋಗ್ಯವಲ್ಲದ, ರೋಗಗ್ರಸ್ತ ಗೋವುಗಳನ್ನು ಕೊಲ್ಲುವುದಕ್ಕೆ ಅವಕಾಶ ನೀಡಿರುವ ಆ ಕಾಯ್ದೆ ಉಳಿದಂತೆ ಗೋಹತ್ಯೆಯನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯಲು ಈ ಕಾಯ್ದೆಯನ್ನು ತರಲು ಹೊರಟಿದೆ ಎಂದರು.
ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಚರ್ಚೆಗೆ ಕೂಡ ಅವಕಾಶ ನೀಡದೆ ದಿಢೀರನೆ ಮಸೂದೆ ಮಂಡಿಸಿ ಅಂಗೀಕಾರ ಪಡೆಯುವ ಪ್ರಯತ್ನ ಮಾಡಿದೆ. ಇದು ಭಾರತೀಯ ಜನತಾ ಪಕ್ಷದ ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ನೂತನ ಗೋಹತ್ಯೆ ನಿಷೇಧ ಕಾಯ್ದೆಯನ್ನು ತರಲು ಹೊರಟಿರುವುದು, ಗೋಸಾಗಾಣಿಕೆದಾರರ ಮೇಲೆ ಸುಳ್ಳು ಆರೋಪ ಹೊರಿಸಿ ಅವರ ಮೇಲೆ ದೌರ್ಜನ್ಯ ನಡೆಸುವವರ ರಕ್ಷಣೆಗಾಗಿಯೇ ಹೊರತು ಗೋವುಗಳ ರಕ್ಷಣೆಗೆ ಅಲ್ಲ, ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 3.4 ಗಂಡು ಕರುಗಳು ಹುಟ್ಟುತ್ತವೆ ಮತ್ತು 3.5 ಕೋಟಿ ಜಾನುವಾರುಗಳು ಹೊಸದಾಗಿ ಕರು ಹಾಕುವ ವಯಸ್ಸಿಗೆ ಬರುತ್ತವೆ. ಗಂಡು ಕರುಗಳ ಸರಾಸರಿ ಆಯಸ್ಸು 10 ವರ್ಷ ಅಂದರೂ ಮುಂದಿನ 10 ವರ್ಷಗಳಲ್ಲಿ 34 ಕೋಟಿ ಗಂಡು ಕರುಗಳು ದೇಶದಲ್ಲಿರಲಿವೆ ಎಂದು ಅಂದಾಜು ವ್ಯಕ್ತಪಡಿಸಿದರು.
ಪ್ರತೀ ವರ್ಷ 6 ಕೋಟಿ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿ ಅನುತ್ಪಾದಕವಾಗುತ್ತವೆ. ಇವುಗಳಿಗೆ ದಿನಕ್ಕೆ ಸರಾಸರಿ ರೂ.100 ಖರ್ಚು ಎಂದು ಅಂದಾಜಿಸಿದರೂ ವರ್ಷಕ್ಕೆ ರೂ.36,500 ಬೇಕು. ಈ ಹಸುಗಳ ನಿರ್ವಹಣೆಗೆ 5 ಲಕ್ಷ ಎಕರೆ ಭೂಮಿ, ವಾಸಕ್ಕೆ ಶೆಡ್ಡು, ಗೋಶಾಲೆ ಇವೆಲ್ಲದರ ಒಟ್ಟು ಖರ್ಚು ರೂ.10 ಲಕ್ಷ ಕೋಟಿ ಎಂದು ಅಧ್ಯಯನ ಹೇಳುತ್ತದೆ.
2019 ರ ಜಾನುವಾರು ಗಣತಿ ಪ್ರಕಾರ ಹಸು, ಹೋರಿ, ಎಮ್ಮೆ ಮತ್ತು ಕೋಣಗಳು ಸೇರಿ ರಾಜ್ಯದಲ್ಲಿ ಒಟ್ಟು 84,69,004 ಜಾನುವಾರುಗಳಿವೆ. ಇವುಗಳ ಸಾಕಾಣಿಕೆಗೆ ವಾರ್ಷಿಕ 2 ಕೋಟಿ 76 ಲಕ್ಷ ಟನ್ ಮೇವಿನ ಅಗತ್ಯವಿದೆ. ಆದರೆ ನಮ್ಮಲ್ಲಿ ಲಭ್ಯವಿರುವ ಮೇವಿನ 1 ಕೋಟಿ 49 ಲಕ್ಷ ಟನ್ ಮಾತ್ರ.
ಕಳೆದ 20 ವರ್ಷಗಳಲ್ಲಿ ಕನಿಷ್ಠ 15 ವರ್ಷ ರಾಜ್ಯ ಬರಗಾಲ ಎದುರಿಸಿದೆ. ರೈತರು ಬೆಳೆದ ಬೆಳೆ ಕೈ ಸೇರದೆ, ಜಾನುವಾರುಗಳಿಗೆ ಮೇವು ಒದಗಿಸಲು ಅಸಾಧ್ಯ ಎಂಬ ಪರಿಸ್ಥಿತಿ ಎದುರಾದಾಗ ಸಹಜವಾಗಿಯೇ ಅವರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಹೊಸ ಕಾಯ್ದೆ ಇದಕ್ಕೆ ಅವಕಾಶ ನೀಡದಿದ್ದಾಗ ಸಹವಾಗಿಯೇ ಸಂಘರ್ಷ ಉಂಟಾಗುತ್ತದೆ.
ರಾಜ್ಯದಲ್ಲಿ ಒಟ್ಟು159 ಗೋಶಾಲೆಗಳು ಇವೆ, ಅಲ್ಲಿರುವ ಹಸು, ಹೋರಿಗಳಿಗೇ ಸರ್ಕಾರ ಸರಿಯಾಗಿ ಮೇವು ಒದಗಿಸುತ್ತಿಲ್ಲ. ಇನ್ನು ರೈತರು ತಮ್ಮ ಬಳಿಯಿರುವ ಹೋರಿ, ವಯಸ್ಸಾದ ಹಸುಗಳನ್ನು ಕೊಂಡುಹೋಗಿ ಗೋಶಾಲೆಗೆ ಬಿಟ್ಟರೆ ಅವುಗಳಿಗೆ ಮೇವು ಹಾಕೋರು ಯಾರು? ಇದರ ಪರಿಕಲ್ಪನೆಯಾದರೂ ಸರ್ಕಾರಕ್ಕಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ,ಕಾರ್ಯಾಧ್ಯಕ್ಷರಾದು ಈಶ್ವರ್ ಖಂಡ್ರೆ ,ಸಲೀಂ ಅಹ್ಮದ್ ,ಪ್ರಿಯಾಂಕ್ ಖರ್ಗೆ ಜೊತೆಗಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…