ಅಂಕಣ ಬರಹ

‘ಆಲಿದೇವ್ರು’ ಎಂಬ ಹೆಜ್ಜೆ ಕುಣಿತದಲ್ಲಿ ಹೂ ಬಿತ್ತುವ ಹಾಡು ಹಬ್ಬವೂ..

ಗೆಳೆಯ ಹನುಮಂತ ಹಾಲಿಗೇರಿಯು ಬಾಗಲಕೋಟೆಯ ಜಿಲ್ಲೆಯ ಬಾಗಲಕೋಟೆ ಸಮೀಪದ ತುಳಸಿಗೇರಿಯವರವನು.

ಹನಮಂತ ಹಾಲಿಗೇರಿಯು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದವನು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಗೆಳೆಯ ಹನುಮಂತ ಹಾಲಿಗೇರಿಯು ಆನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದವನು.

ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದವನು. ‘ಕೆಂಗುಲಾಬಿ’ ಕಾದಂಬರಿ ಪ್ರಕಟಿಸುವ ಮುನ್ನ ಅವನು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ನಾರಿ’ ಎಂಬ ನಾಟಕ ರಚಿಸಿದ್ದನು. ಅವನ ‘ದೇವರ ಹೆಸರಲ್ಲಿ’ ಎಂಬ ಮತ್ತೊಂದು ನಾಟಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಪಡೆದಿತ್ತು.

ವಿಜಯ ಕರ್ನಾಟಕ, ವಾರ್ತಾಭಾರತಿ, ಸುದ್ದಿ ಟಿ.ವಿ.ಯಲ್ಲದೇ ‘ಅಗ್ನಿ ಪತ್ರಿಕೆ’ಗಳಲ್ಲಿ ಪತ್ರಕರ್ತನಾಗಿಯೂ ಕಾರ್ಯ ನಿರ್ವಹಿಸಿದ್ದಾನೆ ಹನುಮಂತ ಹಾಲಿಗೇರಿಯು…

ಹೀಗೆಯೇ ಅವನ ಕೃತಿಗಳೆಂದರೆ : ಕೆಂಗುಲಾಬಿ, ಏಪ್ರೀಲ್ ಫೂಲ್ ಕಥೆಗಳು, ಗೆಂಡೆದೇವ್ರು, ಮಠದ ಹೋರಿ, ಕತ್ತಲಗರ್ಭದ ಮಿಂಚು, ನಾಟಕವಾದ ಊರು ಸುಟ್ಟರೂ ಹನುಮಪ್ಪ ಹೊರಗ..!
ಹೀಗೆಯೇ ಸಾಗಿದೆ ಗೆಳೆಯ ಹನುಮಂತ ಹಾಲಿಗೇರಿಯ ಸಾಹಿತ್ಯ ಪಯಣ ಸಾಗುತ್ತದೆ..!

ಇನ್ನೂ ಹನುಮಂತ ಹಾಲಿಗೇರಿಯ ‘ಆಲಿದೇವ್ರು’ ಎಂಬ ಹೆಜ್ಜೆ ಕುಣಿತದಲ್ಲಿ ಹೂ ಬಿತ್ತುವ ಹಾಡುಹಬ್ಬದ ಪರಿಯ ಬಗೆಗೆ ನೋಡೋಣ…

‘ಅಲೈದೇವ್ರು’ : ಹೆಜ್ಜೆ ಕುಣಿತದಲ್ಲಿ ಹೂ ಬಿತ್ತುವ ಹಾಡುಹಬ್ಬವೂ..!–

ಮೊಹರಂ ಎಂಬುದು ಸಾಂಸ್ಕೃತಿಕ ಮತ್ತು ಪಾರಂಪರಿಕ ಆಚರಣೆ ಮತ್ತು ಸೌಹಾರ್ದತೆಯ ಸೌಧ ಕಟ್ಟುವ ದೇಸಿ ಹಬ್ಬ. ಮೊಹರಂ ದೇವರನ್ನೆ ‘ಅಲೈದೇವ್ರು’ ಎಂದು ಕರೆಯುವುದು ಪದ್ದತಿ. ಒಂದೇ ತೋಟದ ಹಲವು ಹೂಗಳಂತೆ, ಒಂದೇ ದೇಶದ ಹಲವು ಸಂಸ್ಕೃತಿ, ಆಚರಣೆಗಳು ಬದುಕಿನ ಸೌಂದರ್ಯದ ಮೆರಗು ನೀಡಬಲ್ಲವು. ಮತ್ತು ಬದುಕಿನ ಸೌಹಾರ್ದತೆ ಮೆರುಗು ನೀಡುತ್ತವೆ ಕೂಡ. ಅಂಥ ಮೆರಗಿನ ಮುಕುಟ ಎನಿಸಿಕೊಂಡ ಭಾರತದಲ್ಲಿ ‘ಅಲೈದೇವ್ರು’ ಹಬ್ಬವೂ ಕೂಡ ಮನುಷ್ಯ ಪ್ರೇಮದ ಸಹಜ ಸೌಂದರ್ಯದ ಸ್ವರೂಪ ಎಂದರೆ ಅತಿಶಯೋಕ್ತಿಯಾಗಲಾರದು.

ಧರ್ಮಗಳೆಲ್ಲ ದಂಧೆಯಾಗಿ, ದವಾಖಾನೆಯ ರೋಗಿಯಾಗಿ, ಕಸಾಯಿಖಾನೆಯ ಕಟುಕನಾಗಿರುವ ಇಂಥ ದುರಿತ ಕಾಲದಲ್ಲಿ ಧಾರ್ಮಿಕ ಆಚರಣೆಯ ಮುಖೇನವೇ ಮಾನವೀಯತೆ, ಪ್ರೇಮ, ಸಹಬಾಳ್ವೆಯಂತ ಮೌಲ್ವಿಕ ಅಂಶಗಳನ್ನು ಬಿತ್ತುವುದಕ್ಕೆ ನಿಜಕ್ಕೂ ಭಂಡ ಧೈರ್ಯವೇನು ಬೇಕಿಲ್ಲ, ಹೃದಯದಲ್ಲಿ ಒಂದಿಷ್ಟು ಪ್ರೀತಿ ಇದ್ದರೆ ಸಾಕು. ಹನಮಂತ ಹಾಲಗೇರಿ ಅವರು ಇಲ್ಲಿ ಪ್ರೀತಿ ಬಿತ್ತುವ ಕೆಲಸವನ್ನೇ ಮಾಡಿದ್ದಾರೆ.

ಭಿನ್ನ ಧರ್ಮಿಯರ ಪ್ರೇಮಕ್ಕೆ ‘ಜಿಹಾದ್’ ಎಂದು ಹೆಸರಿಡುವವರ ಎದುರು ‘ರಫಿ ಮತ್ತು ಶಶಿಕಲಾ’ರ ಒಲುಮೆ ಮಸೀದಿಯ ಬಳ್ಳಿಗೆ ಮಂದಿರದ ಹೂ ಬಿಟ್ಟಷ್ಟು ಸೊಗಸಿದೆ. ದೇಶ ಪ್ರೇಮದ ಹೆಸರಲ್ಲಿ ಗಡಿಗಳ ಎಳೆದು ಬದುಕುವವರ ನಡುವೆ ಪಕ್ಕ್ಯಾನ ಮುಗ್ಧ ಪ್ರಶ್ನೆಗೆ ಗಡಿಗಳೇ ಗಡಿಪಾರಾಗುತ್ತವೆ. “ಅಲೈದೇವ್ರು ನಮ್ಮ ದೇವರಲ್ಲ” ಎನ್ನುವ ಮತ್ತು “ಅಲೈದೇವ್ರ ಕೂರಿಸಿ ಕುಣಿಯುವುದು ನಮ್ಮ ಧರ್ಮವಲ್ಲ” ಎನ್ನುವ ಧರ್ಮಾಧಿಕಾರಿಗಳಿಗೆ “ಹೆಂಗಿದ್ರು ಉದಿನಕಡ್ಡಿ ಹಚ್ಚಿರತೀವಿ, ಎಲ್ಲಾ ದೇವರಿಗೂ ಬೆಳಗಿ ಬಿಡೋಣ ಬಿಡು” ಎನ್ನುವ ಮೋನಪ್ಪಜ್ಜನ ವಿಶ್ವಮಾನವತ್ವದ ಮನೋ ಸಹಜ ಮಾತು ಈ ನೆಲದೆದೆಯ ಪಿಸು ನುಡಿಯಂತೆಯೇ ಇದೆ.

ನಾಟಕಕಾರರಾದ ಹನಮಂತ ಹಾಲಗೇರಿ ಅವರು ದೈವದ ಮುಖೇನವೇ ಧರ್ಮದ ನಿರಾಕರಣೆ ಮಾಡುತ್ತಿರುವುದು ‘ಅಲೈದೇವ್ರು’ ನಾಟಕದ ವಿಶೇಷಗಳಲ್ಲಿ ಒಂದು..! ಅಲ್ಲದೇ ಜನಸಾಮಾನ್ಯರ ನೋವಿಗೆ ಸ್ಪಂದಿಸುವ, ಬಡವರು ಬವಣೆಯಲ್ಲೂ ಖುಷಿಯಲ್ಲಿ ಕುಣಿಸಬಲ್ಲ ಸಾಮಾನ್ಯ ದೇವರು ಬೇಕೆಂದಿದ್ದಾರೆ ಹೊರೆತು, ಚಂದಾಪಟ್ಟಿ ಎತ್ತಿ ಗುಡಿಗುಂಡಾರ ಕಟ್ಟಿಸಿ, ಬಂಗಾರದ ಕಿರೀಟ ಇಡಿ ಎನ್ನುವ ದಲ್ಲಾಳಿ ದೇವರನ್ನಲ್ಲ ಎಂಬುದನ್ನು ಗಮನಿಸಿಬೇಕು. ಈ ನಾಟಕದ ‘ಆಲೈದೇವ್ರು’ ಯಾವುದೇ ಧರ್ಮಕ್ಕೂ ಧಕ್ಕದ ಮನೋಧಾರ್ಮಿಕ ದೈವತ್ವವಾಗಿದೆ. ಕುವೆಂಪು ಹೇಳಿದ “ಜಗದ ಜಲಗಾರ”
ನಂತೆ ‘ಆಲೈದೇವ್ರು’ ಕೂಡ ಧರ್ಮಾಧರ್ಮಗಳ ಕಸ ಗುಡಿಸುವ ಜಲಗಾರನಂತೆ ಇದ್ದಾನೆ..!

ಹನುಮಂತ ಹಾಲಗೇರಿ ಅವರಿಗೆ ಕೇವಲ ಮೊಹರಂ ಹಬ್ಬದ ಆಚರಣೆಯ ಕುರಿತು ಹೇಳುವ ಉದ್ದೇಶವಿದ್ದಂತೆ ಕಾಣುವುದಿಲ್ಲ; ಬದಲಿಗೆ ನಮ್ಮ ಪುಡಾರಿಗಳು ಧರ್ಮ, ಧರ್ಮಗಳ ನಡುವೆ ಕಟ್ಟಿದ ಗೋಡೆ ಕೆಡುವಲು, ಜಿಹಾದ್ ನ ಹೆಸರಿನಲ್ಲಿ ಕೊಲ್ಲಲ್ಪಟ್ಟ ಪ್ರೇಮಿಗಳ ಪಾದಗಳಿಗೆ ರೆಕ್ಕೆ ಬಿಗಿಯುವುದು, ಧರ್ಮದ ಧಂಗೆಯ ದಳ್ಳೂರಿಯನ್ನೂ ಧಾರ್ಮಿಕ ಆಚರಣೆಯ ಮುಖೇನ ಜಾನಪದಿಯ ಸಂಸ್ಕೃತಿ ಮತ್ತು ಜನಜೀವನದ ತಲ್ಲಣ ಚಿತ್ರಿಸುವ ರೀತಿ, ಮುಕ್ಕೋಟಿ ದೇವತೆಯ ಹೊತ್ತವಳೆಂಬ ಆರೋಪವಿರುವ ಪ್ರಾಣಿಯ ಹೆಸರಿನ ರಾಜಕಾರಣ ಮತ್ತು ಆಹಾರ ಸಂಸ್ಕೃತಿ. ಓದು ಕಲಿಕೆಯ ನೆಪದಲ್ಲಿ ಯುವ ಜನರ ಮನಸ್ಸಿನಲ್ಲಿ ಬಿತ್ತಿದ ದ್ವೇಷಗಳ ಮೊಳೆತ ಮೊಳಕೆಯ ಮೊನಚು… ಹೀಗೆಯೇ ಪ್ರಸ್ತುತ ಭಾರತದ ವಿರಾಟ ದರ್ಶನ ಮಾಡಿಸುವುದು ಹನಮಂತ ಹಾಲಗೇರಿ ಅವರ ಉದ್ದೇಶವಿದೆ ಎಂಬುದು ನಾಟಕ ನೋಡಿದವರಿಗಷ್ಟೇ ತಿಳಿಯುವುದು.

ಈ ನಾಟಕದ ಜೀವಾಳವೆನಿಸಿದ ‘ಆಲೈದೇವ್ರು’ ಕುಣಿತ ಅಥವಾ ಹೆಜ್ಜೆ ಕುಣಿತ ಜಾನಪದ ಕಲೆಗಳಲ್ಲಿ ಒಂದು. ಇಂಥ ಹಬ್ಬ ನಿಂತ್ತು ಹೋದರೆ ಒಂದು ಸಂಸ್ಕೃತಿ ನಿಂತ ಹಾಗೆ, ಒಂದು ಆಚರಣೆ ನಿಂತ ಹಾಗೆ, ನಮ್ಮ ಬದುಕೇ ನಿಂತ ಹಾಗೆ ಎನ್ನುವ ಮೋನಪ್ಪಜ್ಜನ ಮಾತಿನಲ್ಲಿ ನಮ್ಮ ಜಾನಪದಿಯ ಆಚರಣೆಯಲ್ಲಿ ಹುದುಗಿರುವ ಬದುಕನ್ನು ತೆರೆದಿಡುವ ಪ್ರಯತ್ನವನ್ನು ಈ ನಾಟಕ ಮಾಡಲಿದೆ. ಇದರ ಜೊತೆ ನಾಟಕದಲ್ಲಿ ಬರುವ ‘ರಿವಾಯತ್ ಪದಗಳು’ ಅಂದರೆ ‘ಮೊಹರಂ’ನ ಹಾಡುಗಳು ಮೌಖಿಕ ಪರಂಪರೆಯ ಮುಂದುವರಿದ ಸಂಸ್ಕೃತಿಯ ಭಾಗವೂ ಹೌದು. ಇವು ಭಾವೈಕ್ಯತೆ ಮತ್ತು ಮನುಷ್ಯ ಪ್ರೇಮವನ್ನು ಕೇಂದ್ರವನ್ನಾಗಿರಿಸಿಕೊಂಡು ರೂಪಗೊಂಡ ಹಾಡುಹಬ್ಬ.

ನಾಟಕದಲ್ಲಿ ಭಾಷೆಯ ದ್ವಂದ್ವತೆ ಇದೆ ಎಂದೆನಿಸಿದೇ ನಮಗೆ, ಉತ್ತರ ಕರ್ನಾಟಕದ ಆಡು ಭಾಷೆ ಮಾತಾಡುವ ಪಾತ್ರ ತನಗರಿವಿಲ್ಲದೆಯೇ ನಗರದ ಶಿಷ್ಟ ಭಾಷೆಯತ್ತ ಹೊರಳಿ ಬಿಡುತ್ತವೆ. ಬಹುಶಃ ಪಾತ್ರ ಮಾಡುವವರು ಉತ್ತರ ಕರ್ನಾಟಕದ ಜವಾರಿ ಭಾಷೆಗೆ ಇನ್ನೂ ಒಗ್ಗಿಲ್ಲ ಅನಿಸುತ್ತದೆ. ಅಲ್ಲದೇ ‘ಆಲೈದೇವ್ರ’ ಕುಣಿತವೂ ಸ್ವಲ್ಪ ಮಟ್ಟಿಗೆ ಮಾತ್ರ ಖುಷಿ ಕೊಟ್ಟಿತು. ಏಕೆಂದರೆ ಕರ್ನಾಟಕದ ಹಲವು ಭಾಗಗಳಲ್ಲಿ ಹಲವು ರೀತಿಯ ಹೆಜ್ಜೆ ಕುಣಿತಗಳಿದ್ದು, ಈ ನಾಟಕದಲ್ಲಿ ಇನ್ನೂ ಒಂದಷ್ಟು ನುರಿತ ತರಬೇತಿಯ ಅಗತ್ಯವಿದೆ ಎಂದು ಕಾಣುತ್ತದೆ. ಆದರೂ ಪೂರ್ಣವಾಗಿ ನಾಟಕ ತನ್ನ ಹರುವುವನ್ನೂ ಮತ್ತಷ್ಟು ಹೆಚ್ಚಿಸಿಕೊಳ್ಳಲು ಹವಣಿಸಿದೆ ಎಂದೇ ಹೇಳಬೇಕು.

ಇವುಗಳೆಲ್ಲದರ ನಡುವೆ ಈ ನಾಟಕ ನಮ್ಮ ದೇಶದ ಮೂಲೆ ಮೂಲೆಯಲ್ಲಿ ನಡೆದ ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳ ವರ್ಣ ಚಿತ್ರವನ್ನು ನಮ್ಮೆದುರಿಗೆ ಇರಿಸುತ್ತದೆ. ಒಟ್ಟಿಗೆ ಬಾಳುವವರ ನಡುವೆ ಇಟ್ಟಿಗೆ ಗೋಡೆ ಕಟ್ಟುವ ಧರ್ಮಾಂಧರ ಕುತಂತ್ರಗಳು ನಮಗೆ ಕಾಣಿಸದೇ ಇರದು. ಈ ಧರ್ಮದ ದಲ್ಲಾಳಿಗಳ ಮಾತಿಗೆ ರೊಚ್ಚಿಗೇಳುವ ಪಾತ್ರಗಳಿಗೆ ನಾಟಕಕಾರ ಸಶಕ್ತವಾದ ಸಂವೇದನೆ ಮತ್ತು ಸಹನಾ ಶಕ್ತಿಯನ್ನು ಕೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ತಲೆತಲಾಂತರದಿಂದಲೂ ಈ ನೆಲದಲ್ಲೆ ಬದುಕಿ ಬಾಳಿದ ಸಮುದಾಯಕ್ಕೆ ಪಕ್ಕದ ದೇಶಕ್ಕೆ ಪಾರ್ಸಲ್ ಮಾಡಲು ಟಿಕೆಟ್ ಬುಕಿಂಗ್ ಮಾಡುವ ಟ್ರಾವೆಲ್ ಏಜೆಂಟ್ ರಂಥ ಸ್ವಯಂ ಘೋಷಿತ ಪುಡಾರಿ ದೇಶಭಕ್ತರು, ಮಾರುದ್ದ ಗಡ್ಡ ಬಿಟ್ಟು ನಮಾಜ್ ಮಾಡುವುದಕ್ಕೆಂದೇ ಈ ಬದುಕಿನ ಮಂಡಿ ಸವೆಸಬೇಕೇ ಹೊರೆತು ಹಬ್ಬದ ನೆಪದಲ್ಲಿ ಕುಣಿದು ಕುಪ್ಪಳಿಸಲು ಅಲ್ಲ; ಎನ್ನುವ ಅಲ್ಲಾನ ಅನುಗ್ರಹ ಪಡೆದುಕೊಂಡಿರುವಂತೆ ವರ್ತಿಸುವ ಧಾರ್ಮಿಕ ನಟಭಯಂಕರಿಗೆ ‘ಅಲೈದೇವ್ರು’ ಸವಾಲಾಗಿದೆ ಎಂದರೆ ಈ ನಾಟಕ ಗೆದ್ದಿದೆ ಎಂದೆ ಅರ್ಥ.

ಒಟ್ಟಿನಲ್ಲಿ ಇಂಥ ಗಂಭೀರವಾದ ವಿಚಾರವನ್ನು ಸರಳವಾಗಿ ಹೇಳುವ ‘ಅಲೈದೇವ್ರು’ ನಾಟಕವನ್ನು ಬರೆದ ಗೆಳೆಯ ಹನಮಂತ ಹಾಲಗೇರಿ ಅವರಿಗೂ ಮತ್ತು ಅದ್ಭುತವಾಗಿ ರಂಗಪ್ರಯೋಗ ಮಾಡಿದ ನಿರ್ದೇಶಕರಾದ ಸಿದ್ದರಾಮ ಕೊಪ್ಪ ಅವರಿಗೂ ಮತ್ತು ಇಡೀ ವಿಶ್ವರಂಗದ ಎಲ್ಲ ಕಲಾವಿದರಿಗೂ ಅಭಿನಂದಿಸಲೇಬೇಕು.

ಚಾಂದ್ ಪಾಷ ಎನ್ ಎಸ್
ಬೆಂಗಳೂರು
ಮತ್ತು
ಕೆ.ಶಿವು.ಲಕ್ಕಣ್ಣವರ
emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

4 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

4 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

6 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

6 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

6 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

7 hours ago