ಜ್ಯೋತಿಷ್ಯಿಯ ಮಾತು ಕೇಳಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಬೂಚೇನಹಳ್ಳಿಯ ಯುವಕನೊಬ್ಬ ತನಗೆ ಹುಟ್ಟಿದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಸಾಯಿಸಿದ ಘಟನೆ ಮನುಷ್ಯ ಸಮಾನವನ್ನು ಬೆಚ್ಚಿ ಬೀಳಿಸಿದೆ. ದಿನ ಬೆಳಗಾದರೆ ಟಿ.ವಿ.ಯಲ್ಲಿ ಒಕ್ಕರಿಸಿ ಕನ್ನಡ ನಾಡಿನ ಜನಗಳ ಬುದ್ಧಿಯ ಮೇಲೆ ಕಲ್ಲು ಚಪ್ಪಡಿ ಎಳೆಯುವ ಜ್ಯೋತಿಷ್ಯಿಗಾರರ ಕಾಟ ಅತಿಯಾಯಿತು ಎನ್ನದೆ ವಿಧಿ ಇಲ್ಲವಾಗಿದೆ. ಯಾರು , ಜ್ಯೋತಿಷ್ಯ, ಭವಿಷ್ಯ, ವಾಸ್ತುಗಳನ್ನು ನಂಬುತ್ತಾರೋ ಮೊದಲು ಅವರನ್ನು ಮಾನಸಿಕ ತಜ್ಞರ ಹತ್ತಿರ ಕರೆದುಕೊಂಡು ಹೋಗಿ ಎಂಬ ಸ್ವಾಮಿ ವಿವೇಕಾನಂದರ ಮಾತು ಇಂದು ಹೆಚ್ಚು ಪ್ರಸ್ತುತವೆನಿಸುತ್ತಿದೆ.
ಪ್ರತಿಯೊಬ್ಬರ ಬದುಕಿನಲ್ಲಿ ಬರಬಹುದಾದ ಸಂಕಟ ನೋವುಗಳಿಗೆ ಜ್ಯೋತಿಷ್ಯ ಪರಿಹಾರ ಅಲ್ಲವೇ ಅಲ್ಲ. ಯಾರೋ ಒಬ್ಬ ಮಾಂತ್ರಿಕ ಶಕ್ತಿ ಹೊಂದಿದ್ದೇನೆಂದು ಎಲ್ಲರ ನಂಬಿಸುತ್ತಿದ್ದವನೊಬ್ಬ ಹಸಿವಿನಿಂದ ಕಂಗಾಲಾಗಿ ಮನೆಯೊಂದಕ್ಕೆ ಹೋಗಿ ಬಿಕ್ಷೆ ಬೇಡುತ್ತ, “ ತಾಯಿ ನಾಲ್ಕಾರು ದಿನಗಳಿಂದ ಊಟ ಮಾಡಿಲ್ಲ, ಒಂದು ರೊಟ್ಟಿ ಕೊಡಿ ಎಂದು ಅಂಗಲಾಚಿದನಂತೆ. ಅದಕ್ಕೆ ಪ್ರತಿಕ್ರಿಯಿಸಿದ ಆ ಮನೆಯ ಒಡತಿ, ವಾಸ್ತವ ಅರ್ಥ ಮಾಡಿಕೊಳ್ಳದೆ “ ಓ ಮಹಾತ್ಮನೆ ನೀನು ನನಗೇನು ಕೊಡುತ್ತಿ ?” ಎಂದು ಕೇಳಿದ್ದೆ ತಡ ಆ ಪಾಕಡಾ ಆಸಾಮಿ “ ನಿನಗೆ ಹಸಿವಿಲ್ಲದ ಮಂತ್ರ ಕಲಿಸಿಕೊಡುತ್ತೇನೆ !?” ಎಂದು ಹೇಳಿದನಂತೆ. ಆ ಮಹಿಳೆ ಲಗುಬಗೆಯಿಂದ ತನ್ನ ಮನೆಯಲ್ಲಿದ್ದ ರೊಟ್ಟಿಯೊಂದನ್ನು ಕೊಟ್ಟು ನಂತರ ಯೋಚಿಸತೊಡಗಿದಳಂತೆ. ಹಸಿವಿಲ್ಲದ ಮಂತ್ರ ನನಗೆ ಕಲಿಸುವ ಬದಲು, ಆತನಗೆ ತನ್ನಷ್ಟಕ್ಕೆ ತಾನು ಹಸಿವೆ ಆಗದೆ ಇರುವ ಮಂತ್ರ ಹೇಳಿಕೊಂಡು ಹಸಿವು ನೀಗಿಸಿಕೊಳ್ಳಬಹುದಿತ್ತಲ್ಲ ! ಎಂದು.
ಮಂತ್ರ, ಶಾಸ್ತ್ರ, ಬೊಗಳೆ ಪುರಾಣಗಳಿಗೆ ಹಸಿವನ್ನು ನೀಗಿಸುವ ಶಕ್ತಿ ಇರಲು ಸಾಧ್ಯವೇ ಇಲ್ಲ. ಹಾಗೆಯೇ ಜ್ಯೋತಿಷ್ಯವೂ ಸಹ. ಜ್ಯೋತಿಷ್ಯದ ಹೆಸರಿನ ಮೇಲೆ ಇಂದು ಸಮಾಜದಲ್ಲಿ ನಡೆದಿರುವ ನಂಗಾನಾಚ ಹೇಸಿಗೆ ತರಿಸುತ್ತಿದೆ. ಬರಗೆಟ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಶಾಹಿ ಜನಗಳು, ಲಜ್ಜೆಗೆಟ್ಟ ಬಂಡವಾಳ ಶಾಹಿಗಳ ಹಾದರದ ಕೂಸೆ ಜ್ಯೋತಿಷ್ಯ , ವಾಸ್ತು, ಮಂತ್ರ, ತಂತ್ರ ಇತ್ಯಾದಿ. ‘ಮಂತ್ರಕ್ಕೆ ಮಾವಿನ ಕಾಯಿಯೂ ಉದರೊಲ್ಲ’ ಎಂಬುದು ಬಡಜನತೆಗೆ ಗೊತ್ತು. ಆದರೆ ಅವರು ತಮಗಿಂತಲೂ ದೊಡ್ಡವರು, ಶ್ಯಾಣ್ಯಾ ಜನ ಎಂದು ಕೊಂಡ ಶ್ರೀಮಂತರು, ರಾಜಕಾಣಿಗಳು ಹಾಗೂ ಅಧಿಕಾರಿಗಳ ನಡೆ ನುಡಿಗಳಿಂದ ಪ್ರಭಾವಿತಗೊಂಡಿರುತ್ತಾರೆ.
ನಮ್ಮನ್ನು ಆಳುವ ಸರಕಾರಗಳು ತಮ್ಮ ಕೈಯಲ್ಲಿಯೆ ಇರುವ ಮುಜರಾಯಿ ಇಲಾಖೆಯ ಮೂಲಕ ನಿತ್ಯ ದೇವರಿಗೆ ನಡೆಸುವ ಅಭಿಷೇಕ, ಕುಂಭಾಬಿಷೇಕ, ರುದ್ರಾಭಿಷೇಕ, ಕೋಟಿ ಬಿಲ್ವ ಅರ್ಚನೆ, ಪರ್ಜನ್ಯ ಜಪ ಮುಂತಾದ ಅರ್ಥಹೀನ ಕೆಲಸವನ್ನು ಯಾವ ನಾಚಿಕೆಯೂ ಇಲ್ಲದೆ ನಡೆಸುತ್ತಿದೆ. ಅದೇನೋ ಹೇಳುತ್ತಾರಲ್ಲ, ದೊಡ್ಡವರೆ ಓಡಾಡಿ ಮೂತ್ರ ಮಾಡುವಾಗ , ಇನ್ನು ಚಿಕ್ಕವರು ? ಶಾಲಾ ಕಾಲೇಜು ಓದಿ ಡಿಗ್ರಿಯ ಮೂಲಕ ಬಹುದೊಡ್ಡ ಹುದ್ದೆ ಹೊಂದಿದ್ದೇವೆ ಎಂಬುವವರೆ ಮಂತ್ರವಾದಿಗಳಿಗೆ ಪಿಗ್ಗಿ ಬಿದ್ದಿದ್ದಾರೆ. ಹೇಗಾದರೂ ಸೈ ಜನತೆಯ ಮನವನ್ನು ಗೆಲ್ಲಬೇಕು. ಅವರ ಮೌನಸಿಕ ದೌರ್ಬಲ್ಯವನ್ನು ಬೆಳೆಸಿಕೊಂಡು ಮೇಲೆ ಬರಬೇಕೆಂದು ಹೊಂಚು ಹಾಕಿದ ರಾಜಕಾಣಿಗಳಂತೂ ನಿತ್ಯವೂ ಗುಡಿ,ಮಸೀದಿ, ಚರ್ಚಗಳಿಗೆ ಎಡತಾಕುತ್ತಾರೆ. ಇದರಿಂದಾಗಿ ದುಡಿಯದೆ ದುಃಖ ಪಡದೆ ಆರಾಮ ಇರುವ ಮುಲ್ಲಾ, ಪಾದ್ರಿ, ಪುರೋಹಿತ ಇವರೆಲ್ಲರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಆಟ ಆಡುತ್ತಾನೆ.
ಅಂದಿನ ರಾಜ ಮಹಾರಾಜರನ್ನೆ ತಮ್ಮ ಶಾಸ್ತ್ರದ ಬಲದಿಂದ ಪೋಜರಾಜರಂತೆ ಕುಣಿಸುತ್ತಿದ್ದರು. ಈಗಲೂ ಅವರು ಅಟಾಟೋಪ ನಿಂತಿಲ್ಲ. ಸುರಪುರದ ವೀರದೊರೆ ವೆಂಕಟಪ್ಪ ನಾಯಕರನ್ನು ಔರಂಗಜೇಬ ಕೂಡ ಸೋಲಿಸಲು ಸಾಧ್ಯವಾಗದೆ, ಆತನ ಶೌರ್ಯ ಪರಾಕ್ರಮವನ್ನು ನೋಡಿ ಬಿರುದು ಬಾವಲಿ ನೀಡಿ ಹೋದ. ಆದರೆ ಇಂಥ ಶೂರ ದೊರೆಯನ್ನು ಜ್ಯೋತಿಷ್ಯರು ಯಾವ ಮದ್ದು ಗುಂಡುಗಳನ್ನು ಬಳಸದೆ ಕೇವಲ ತಮ್ಮ ಶಾಸ್ತ್ರದ ಬಲದಿಂದ “ ರಾಜಾ ವೆಂಕಟಪ್ಪ ನಾಯಕ ಮುಂದಿನ ಯುದ್ಧದಲ್ಲಿ ಸೋತು ಹತನಾಗುತ್ತಾನೆ” ಎಂದು ಜ್ಯೋತಿಷ್ಯ ನುಡಿದರು. ಇದನ್ನು ಕೇಳಿ ಕಂಗಾಲಾದ ರಾಜ ಊರು ಬಿಟ್ಟು ಓಡಿ ಹೋಗಿಬಿಟ್ಟ. ವಾಸ್ತವವೆಂದರೆ ಮುಂದೆ ಯಾವ ಯುದ್ಧಗಳೂ ನಡೆಯೋದಿಲ್ಲ, ಆತ ಹತನಾಗುವ ಪ್ರಶ್ನೆಯೇ ಬರುತ್ತಿರಲಿಲ್ಲ. ಔರಂಗಜೇಬ ಸೋಲಿಸದೆ ಇರುವ ದೊರೆಯನ್ನು ಶಾಸ್ತ್ರಿಕರು ಸೋಲಿಸಿಬಿಟ್ಟರು.
ಹಲವು ವರ್ಷಗಳ ಹಿಂದೆ ಜ್ಯೋತಿಷ್ಯಿಯ ಮಾತು ಕೇಳಿ ಮದುವೆಯಾದ ನೇಪಾಳದ ದೊರೆ ಬೀರೇಂದ್ರ ನಾವೆಲ್ಲ ನೋಡ ನೋಡುತ್ತಲೆ ತನ್ನ ಇಡೀ ಪರಿವಾರವನ್ನು ಬಂದೂಕಿನಿಂದ ಹತ್ಯೆಗೈದು, ತಾನು ಹತನಾದ ದುರಂತ ಚಿತ್ರ ಕಣ್ಣ ಮುಂದೆಯೆ ಇದೆ. ಯಾರಲ್ಲಿ ಮನೋಬಲವಿಲ್ಲವೋ ಆತನ ಮಾತ್ರ ಜ್ಯೋತಿಷ್ಯರನ್ನು, ಕಣಿ ಹೇಳುವವರನ್ನು, ಪಂಚಾಂಗ ತಿರುವುವರನ್ನು ಭೇಟಿಯಾಗುತ್ತಾನೆ. ಯಾರಿಗೆ ತನ್ನ ಮೇಲೆ ತನಗೆ ನಂಬಿಕೆ ಇದೆಯೋ ಅವರು ಎಂದೂ ಜ್ಯೋತಿಷ್ಯಗಳೆಂಬ ಹಗಲುಗಳ್ಳರ ಹತ್ತಿರ ಕೂಡ ಸುಳಿಯಲಾರರು.
ಹಿಂದಿನ ಮಹಾತ್ಮ ಬುದ್ಧ, ಬಸವಣ್ಣನವರು ಸಹ ಈ ಜ್ಯೋತಿಷ್ಯಗಾರರಿಗೆ ಚಾಟಿ ಏಟು ಕೊಟ್ಟಿದ್ದಾರೆ. ಜಕ್ಕಣ್ಣಯ ಎಂಬ ಶರಣನೊಬ್ಬ
ವೇದ ದೊಡ್ಡದೆಂದು ನುಡಿವ ವದಿಯ ಮಾತ ಹೇಳಲಾಗದು
ಕೇಳಲಾಗದು, ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ ಹೇಳಲಾಗದು ಕೇಳಲಾಗದು.
ಪುರಾಣ ದೊಡ್ಡದೆಂದು ನುಡಿದ ಪುಂಡರ ಮಾತ ಹೇಳಲಾಗದು ಕೇಳಲಾಗದು
ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ ಹೇಳಲಾಗದು, ಕೇಳಲಾಗದು
ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತಕವ ಮಾತ ಹೇಳಲಾಗದು, ಕೇಳಲಾಗದು
ಎಂದು ಸ್ಪಷ್ಟವಾಗಿ ಇವರನ್ನು ಜಜ್ಜನೆ ಜರಿದಿದ್ದಾರೆ.
ಸೊಲ್ಲಾಪುರದ ಸಿದ್ಧರಾಮ ಶಿವಯೋಗಿಗಳು
ಲಗ್ನಕ್ಕೆ ವಿಘ್ನಬಾರದೆಂದು ಜ್ಯೋತಿಷ್ಯ ಕೇಳುವ ಅಣ್ಣಗಳಿರಾ
ಕೇಳಿರಯ್ಯಾ : ಅಂದೇಕೆ ವೀರಭದ್ರನ ಸೆರಗ ಸುಟ್ಟಿತ್ತು ?
ಅಂದೇಕೆ ಮಹಾದೇವಿಯವರ ಬಲಭುಜ ಹಾರಿತ್ತು ?
ಇಂದೇಕೆ ಎನ್ನ ವಾಮನೇತ್ರ ಚರಿಸಿತ್ತು ? ಕಪಿಲಸಿದ್ದಮಲ್ಲಿಕಾರ್ಜುನಾ
ಎಂದು ಇತಿಹಾಸದ ಪುಟಗಳಲ್ಲಿ ನಡೆದ ಘಟನೆಗಳನ್ನು ಉದಾಹರಿಸಿ ನಮ್ಮ ಕಣ್ಣು ತೆರೆಸುತ್ತಾರೆ. ಜ್ಯೋತಿಷ್ಯ ನೋಡಿಯೆ ಮದುಯಾದ ಎಷ್ಟೋ ಜೋಡಿಗಳು ವರ್ಷ ತುಂಬುವಷ್ಟರಲ್ಲಿಯೆ ಡೈವೋರ್ಸ ಪಡೆದಿವೆ. ಜ್ಯೋತಿಷ್ಯ ನೋಡಿಯೇ ಪ್ರಧಾನಿಯ ಪಟ್ಟ ಮತ್ತೆ ಇನ್ನಷ್ಟು ದಿನ ಉಳಿಸಿಕೊಳ್ಳಬೇಕೆಂದ ದೇವೇಗೌಡರು ರಾಜ್ಯಕ್ಕೆ ಮರಳಿ ಬರಲಿಲ್ಲವೆ ? ಜ್ಯೋತಿಷ್ಯಿಯ ಮಾತು ಕೇಳಿ ಹದಿ ಹರೆಯದ ಹುಡುಗಿಯನ್ನು ನಗ್ನ ಮಾಡಿ ಪೂಜಿಸಿದ ಆಂದ್ರದ ಮುಖ್ಯ ಮಂತ್ರಿ ಎನ್.ಟಿ.ಆರ್. ಅಧಿಕಾರ ಶಾಶ್ವತವಾಗಿ ಉಳಿಯಿತೆ ?
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು
ಜಗವೆಲ್ಲ ಕಾಬ ಕಣ್ಣು, ತನ್ನ ಕೊಂಬ ಕೊಲ್ಲೆಯ
ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು ತಮ್ಮ ಗುಣವನರಿಯರು
ಕೂಡಲಸಂಗಮದೇವಾ
ಮಡಿವಾಳ ಮಾಚಿದೇವನೆಂಬ ಶರಣರಂತು ‘ಗಿಳಿಯೋದಿ ತನ್ನ ಅಶುದ್ಧವ ತನ್ನ ಮೂಗಿನಲಿ ಕಚ್ಚಿ ತೆಗೆದಂತೆ’ ಜ್ಯೋತಿಷ್ಯ ಕಲಿತವರ ಹಣೆಬರಹ ಎಂದು ಹೇಳಿತ್ತಾರೆ.
ಒಟ್ಟಿನಲ್ಲಿ ನಮ್ಮ ಬದುಕು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿಯೆ ಇದೆ. ಇನ್ನಾರ ಕೈಯಲ್ಲಿಯೂ ಅದು ಇಲ್ಲವೆ ಇಲ್ಲ. ಆದ್ದರಿಂದಲೆ ಮಹಾತ್ಮ ಬುದ್ಧ ‘ನಿನಗೆ ನೀನೇ ಬೆಳಕು’ ಎಂದು ಹೇಳಿದರು. ನಮಗೆ ನಾವೆ ಬೆಳಕಾಗಬೇಕೆ ವಿನಃ ಕೊಳಕರ ಮಾತು ಕೇಳಿಕೊಂಡು ಜನ ಸಾಮಾನ್ಯರು ಹೊಲಸಿನ ಹೊಂಡಕ್ಕೆ ಬೀಳಬಾರದು. ತಮ್ಮ ಬದುಕನ್ನು ಕೆಡಿಸಿಕೊಳ್ಳಬಾರದು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…