ಉತ್ತರ ಕರ್ನಾಟಕದ ಬಹುತೇಕ ಕಡೆ ಇಂದಿಗೂ ಮಳೆ ಆಗಿಲ್ಲ. ಸುಮಾರು ಹತ್ತೆಂಟು ವರ್ಷಗಳಿಂದ ಮಳೆ ಕೈಕೊಡುತ್ತಲೆ ಬಂದಿದೆ. ರೈತ ಕಂಗಾಲಾಗಿ ಮುಗಿಲು ನೋಡುತ್ತ ಕುಳಿತು ಸಾಕಷ್ಟು ವರ್ಷಗಳು ಕಳೆದು ಹೋಗಿವೆ. ಜನ ಜಾನುವಾರಗಳು ಸಾಕಷ್ಟು ನೀರಿಲ್ಲದೆ ಕಂಗಾಲಾಗುವ ದಿನಗಳು ಪ್ರತ್ಯಕ್ಷವಾಗುತ್ತಿವೆ.ಕೆಲವು ನಗರಗಳಲ್ಲಿ ನೀರಿನ ತತ್ವಾರ ಉಂಟಾಗಿದೆ.
ಸದಾ ಸದ್ದು ಮಾಡುತ್ತ ಹರಿವ ಜಲಧಾರೆ ಸಂಪೂರ್ಣ ಬತ್ತಿ ಹೋಗಿವೆ. ನಮ್ಮ ದುರಾಸೆಯಿಂದ ಕೊರೆದ ಬೋರವೆಲ್ ಗಳು ನೀರಿಲ್ಲದೆ ಗೊರ್ ಗೊರ್ ಸದ್ದು ಮಾಡುತ್ತಿವೆ. ಕೆಲವು ರಾಜಕಾರಣಿ ಮತ್ತು ಧಾರ್ಮಿಕರೆಂಬ ಸೋಗು ಹಾಕಿದವರು ಮಾತ್ರ ಬರಗಾಲದಲ್ಲಿ ಬಿರಿಯಾನಿ ಉಂಡರು ಎಂದು ತಮ್ಮ ಗೋಪಾಳ ತುಂಬಿಕೊಳ್ಳಿತ್ತಿದ್ದಾರೆ.
ಜನ ಸಾಮಾನ್ಯ ಇದಾವುದರ ಅರಿವಿಲ್ಲದೆ ನೀರಿಗಾಗಿ ಆಜು ಬಾಜು ಮನೆ, ಹೊಲದವರ ಜೊತೆ ಕದನಕ್ಕೆ ಇಳಿದಿದ್ದಾನೆ. ಹಿರಿಯ ವಯಸ್ಸಿನ ಅಜ್ಜ- ಅಜ್ಜಿಯರು ಕಾಲ ಕೆಟ್ಟೋಯ್ತು. ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಇದು ಕಲಿಗಾಲ ಅಲ್ಲ, ಕೆಡುಗಾಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ನಾಲ್ಕಾರು ವರ್ಷದ ಪುಟ್ಟ ಕಂದಮ್ಮನ ಜೊತೆ ಚಕ್ಕಂದವಾಡುವ ಮನಸ್ಸು ಉಂಟಾಗುತ್ತಿದ್ದರೆ ದುರಂತದ ಕಾಲವೇ ಹೌದು ಎಂದು ತಮ್ಮ ಮಾತಿಗೆ ಸಮರ್ಥನೆ ನೀಡುತ್ತಿದ್ದಾರೆ.
‘ಮಗ ಉಂಡರೆ ಕೇಡಲ್ಲ, ಮಳೆ ಬಂದರೆ ಕೇಡಿಲ್ಲ’ ಎಂಬ ಮಾತಿಗೀಗ ಅರ್ಥವೇ ಇಲ್ಲ. ಮುಗಿಲ ತುಂಬ ಕಪ್ಪು ಬಿಳುಪು ಮೋಡಗಳೇನೋ ಹರಿದಾಡುತ್ತವೆ. ದಿನ ತುಂಬಿದ ಗರ್ಭಿಣಿ ಓಡಾಡಿದಂತೆ. ಆದರೆ ಮಳೆ ಹನಿಯನ್ನು ನೆಲಕ್ಕೆ ಉದುರಿಸದೆ ಹಾಗೆ ಮುಂದೆ ಹೊರಟಿವೆ. ಆ ಮೋಡಗಳು ಜನರೊಂದಿಗೆ ಸಿಟ್ಟು ಮಾಡಿಕೊಂಡಂತೆ ರಬಸವಾಗಿ ಹೋಗುತ್ತಿವೆ.
ಮತ್ತೊಂದು ಕಡೆ, ಹೋಮ ಹವನ ಯಜ್ಞ ಯಾಗಗಳು ಮಳೆ ಹೆಸರಿನ ಮೇಲೆ ನಡೆದಿವೆ. ಖುದ್ದು ಸರಕಾರವೇ ತನ್ನ ಸುಪರ್ದಿಯ ಮಠಗಳಲ್ಲಿ ಹೋಮ ಹವನ ನೆರವೇರಿಸಲು ಸುತ್ತೋಲೆಯನ್ನು ಹೊರಡಿಸಿದೆ. ಮಂತ್ರಕ್ಕೆ ಮಾವಿನ ಕಾಯಿಯೂ ಉದರೊಲ್ಲ ಎಂಬ ಜನಗಳೆ ಮತ್ತೆ ಮತ್ತೆ ಮಂತ್ರದಿಂದ ಶಕ್ತಿ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದೆಂಥ ಮನಸ್ಥಿತಿ.
ಮನುಷ್ಯನ ದೌರ್ಬಲ್ಯವನ್ನು ಸರಿಯಾಗಿ ಗಮನಿಸಿದ ಪುರೋಹಿತ ವರ್ಗ ‘ಕೆಬ್ಬಣ ಕಾದಾಗಲೇ ಬಡಿಯಬೇಕು’ ಎಂದು ಜನ ಕಂಗಾಲಾದಾಗಲೇ ಆತನ ಜೇಬು ಕತ್ತರಿಸಬೇಕೆಂದು ಆತನನ್ನು ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ಳುವಂತೆ ಮೆದುಳಿನ ಮೇಲೆ ಅಧಿಪತ್ಯ ಸ್ಥಾಪಿಸಿದ್ದಾರೆ. ಸಂಭ್ರಮದಲ್ಲೂ ಪುರೋಹಿತ ಜನ ಸಾಮಾನ್ಯನ ಜೇಬಿಗೆ ಕೈ ಇಡುತ್ತಾನೆ. ಆತನ ಆತಂಕದ ಸ್ಥಿತಿಯಲ್ಲೂ ಆತನ ಜೇಬು ಜಪ್ತಿ ಮಾಡುತ್ತಾನೆ. ಆದರೆ ಜೇಬು ಕತ್ತರಿಸುವವ ಜೊತೆಗೆ ಇದ್ದಾನೆ ಎಂಬ ಅರಿವು ಜನ ಸಾಮಾನ್ಯನಿಗೆ ಇಲ್ಲವಾಗಿದೆ.
ಸಾಕಷ್ಟು ನೀರು ಇದ್ದಾಗ ನಿರ್ಲಕ್ಷಿಸದೆ ಚೆಲ್ಲಿದ ಜನಕ್ಕೆ ಈಗ ಕಂಗಾಲಾಗುವ ಸರದಿ. ನೆಲವೇ ಕಾಣದಂತೆ ಕಾಂಕ್ರಿಟ್, ಡಾಂಬರ ರಸ್ತೆಗಳು ನಿರ್ಮಿಸಿ ಅಭಿವೃದ್ಧಿ ಆಗಿದ್ದೇವೆ ಎಂದು ಭಾವಿಸಿದ್ದೇವೆ. ಬಹಳ ವರ್ಷಗಳಿಂದ ನೆಲದ ಒಡಲು ಬರಿದಾಗಿದೆ. ಹನಿ ಹಸಿಯೂ ಇಲ್ಲದೆ ಅಕಳಿ ಎದ್ದಿವೆ. ನೆಲ ನೀರಿಲ್ಲದೆ ಬಿರಿಯುತ್ತಿವೆ. ನಿಜಕ್ಕೂ ಇದು ಎದೆ ತಲ್ಲಣಗೊಳಿಸುವ ಸಮಯ.
ಈ ಲಕ್ಷಣಗಳನ್ನು ನೋಡಿಯೂ ನಾವು ಮುಂದುವರೆದರೆ ನೀರಿಗಾಗಿಯೇ ನಾವೆಲ್ಲ ಬಡಿದಾಡಬೇಕಾದ ದಿನಗಳು ಬರಲಿವೆ. ನಾಡ ಪ್ರಜ್ಞೆಯಿಂದ ಕಾಡ ಪ್ರಜ್ಞೆ ಮರೆತಿದ್ದೇವೆ. ಮನೆಗೊಂದು ಮರ ನೆಡುವ ವಿವೇಕವೂ ನಮಗಿಲ್ಲ. ಮನೆಯ ಬಾಗಿಲು ಕಿಡಕಿ, ಫರ್ನಿಚರ್ ಗಳಿಗಾಗಿ ಕಾಡು ಕಡಿದು ಹಾಕಿದ್ದೇವೆ. ಹಸಿರೇ ಉಸಿರು ಎಂಬ ಶ್ಲೋಗನ ಬಾಯಿಪಾಠ ಮಾಡಿದ್ದೇವೆ. ಅದು ಚಲಾವಣೆಗೆ ಬರುತ್ತಿಲ್ಲ.
ಊಟವಿಲ್ಲದೆಯೂ ಮನುಷ್ಯ ನಾಲ್ಕಾರು ದಿನ ಬದುಕಬಹುದು. ಆದರೆ ನೀರಲ್ಲದೆ ?
ಆದ್ದರಿಂದ ಈಗಲೇ ಶಪಥ ಮಾಡೋಣ. ಮನೆಯ ಮುಂದೆ, ರಸ್ತೆಗಳಲ್ಲಿ ಒಂದೊಂದೆ ಮರ ನೆಡೋಣ, ಅವುಗಳನ್ನು ಹಾರೈಕೆ ಮಾಡಿ ಬೆಳೆಸೋಣ. ಕಾಡಿನ ಮರಗಳನ್ನು ಕಡಿಯುವವರನ್ನು ಹಿಡಿದು ಸರಕಾರಕ್ಕೆ ಮಾಹಿತಿ ನೀಡೋಣ. ನೀರನ್ನು ಹಿತ ಮಿತವಾಗಿ ಬಳಸೋಣ. ಜೀವ ಜಲ ಉಳಿಸೋಣ.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…