ನಾನು ಯಾವುದೋ ಕೆಲಸದ ನಿಮಿತ್ತವಾಗಿ ಶಿರಸಿ ಸಿದ್ದಾಪುರ, ಅಂಕೋಲಾ ಮತ್ತು ಕಾರವಾರದ ಪ್ರವಾಸದಲ್ಲಿ ಇದ್ದೇನು. ಹೀಗಾಗಿ ಯಾವುದೇ ಪತ್ರಿಕೆಯಾಗಲಿ, ಸುದ್ದಿ ವಾಹಿನಿಯಾಗಲಿ ಅಥವಾ ಫೇಸ್ ಬುಕ್ ಆಗಲಿ ನೋಡಿರಲಾಗಿರಲಿಲ್ಲ. ನನ್ನ ಪ್ರವಾಸದಾದ್ಯಂತ ವಿಪರೀತವಾಗಿ ಒಂದೇ ಸಮನೇ ಮಳೆ ಹಚ್ಚಿಹೊಡೆಯಿತಿತ್ತು. ಇಂತಹ ಸಂದರ್ಭದಲ್ಲಿ ನಾನು ಬಸ್ ನಲ್ಲಿ ಇದ್ದೆನು.
ಆಗ ಬರಸಿಡಿಲಿನಂತೆ ಆ ಸುದ್ದಿ ಬಂದೆರಗಿತು. ಆ ಸುದ್ದಿಯನ್ನು ಕೊಟ್ಟವರು ಸಾಹಿತಿ ಸತೀಶ ಕುಲಕರ್ಣಿಯವರು. ನನಗೆ ವಾಟ್ಸ್ ಆಪ್ ಮೂಲಕ ಕೊಪ್ಪಳದ ಸಾಹಿತಿ, ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ನಿಧನರಾದರು ಎಂದು ತಿಳಿಸಿದರು ಸಾಹಿತಿ ಸತೀಶ ಕುಲಕರ್ಣಿಯವರು.
ಆಗ ಒಂದು ಕ್ಷಣ ನನಗೆ ನಂಬಲಾಗಲಿಲ್ಲ. ಸಾಹಿತಿ ಮತ್ತು ಪತ್ರಕರ್ತರೂ ಆಗಿದ್ದ ವಿಠ್ಠಪ್ಪ ಗೋರಂಟ್ಲಿ ಇತ್ತೀಚೆಗೆ ರಾಜಕಾರಣಿಯಾಗಲೂ ಬಯಸಿ ಕೊಪ್ಪಳದ ಪಟ್ಟಣ ಪಂಚಾಯತಿಯ ಸದಸ್ಯರಾಗಿದ್ದರು. ಇಂತಹ ವಿಠ್ಠಪ್ಪ ಗೋರಂಟ್ಲಿ ಸಾವಿನ ಸುದ್ದಿಯನ್ನು ನನ್ನನ್ನು ಅರೆಕ್ಷಣ ದಂಗಾಗಿಸಿತು.
ಈ ವಿಠ್ಠಪ್ಪ ಗೋರಂಟ್ಲಿ ನನಗೆ ಪರಿಚಯವಾಗಿದ್ದು ಮೊದಲು ಬೆಂಗಳೂರಿನ ‘ಲಂಕೇಶ್ ಪತ್ರಿಕೆ’ ಕಚೇರಿಯಲ್ಲಿ. ಪರಿಚಯ ಮಾಡಿಸಿದ್ದು ‘ಲಂಕೇಶ್ ಪತ್ರಿಕೆ’ಯ ಸಂಪಾದಕರಾಗಿದ್ದ ಪಿ.ಲಂಕೇಶ್ ಅವರ ಸಹಾಯಕರಾಗಿದ್ದ ಮತ್ತು ಅವರ ನೆಚ್ಚಿನ ಶಿಷ್ಯರಾಗಿದ್ದ ನಮ್ಮ ಬಸುರಾಜ ಸರ್.
ಅಂದರೆ ನಾನು ಬೆಂಗಳೂರಿನ ಬಸವನಗುಡಿಯ ಇಎಟಿ ರಸ್ತೆಯ ‘ಲಂಕೇಶ್ ಪತ್ರಿಕೆ’ ಕಚೇರಿಗೆ ಹೋಗಿದ್ದು ಒಂದು ಸುದ್ದಿಯನ್ನು ಹೊತ್ತು ಮತ್ತು ಹುಬ್ಬಳ್ಳಿ ಭಾಗದ ವರದಿಗಾರನಾಗಬಯಸಿ.
ಮತ್ತು ಹಂಸಭಾವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಸೆಟ್ಟಿ ಎಂಬ ಕುರುಬಗೊಂಡದ ಕಾರ್ಲ್ಕಾನ ಹಂಸಭಾವಿ ಪಾಲಿಟೆಕ್ನಿಕ್ ನಲ್ಲಿ ಅದಾದುಂದಿಯ ಆಡಳಿತದ ಬಗೆಗೆ ಮತ್ತು ಆತ ದುಡ್ಡು ಹೊಡೆದು ಪಾಲಿಟೆಕ್ನಿಕ್ ವಿದ್ಯಾಲಯದ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುತ್ತಿದ್ದ ರೀತಿಯ ಕುರಿತು ಒಂದು ಸವಿಸ್ತಾರವಾಗಿ ವರದಿ ಮಾಡಿ, ಅದನ್ನು ‘ಲಂಕೇಶ್ ಪತ್ರಿಕೆ’ಗೆ ಕೊಡಲು ‘ಲಂಕೇಶ್ ಪತ್ರಿಕೆ’ಯ ಕಚೇರಿಗೇ ಹೋಗಿದ್ದೆನು. ಅಲ್ಲದೇ ಪಿ.ಲಂಕೇಶ್ ಮೇಷ್ಟ್ರುರನ್ನು ಭೇಟಿಯಾಗಲು ಹೋಗಿದ್ದೆನು. ಆಗ ನಾನು ಪಿಯುಸಿ ಓದುತ್ತಿದ್ದೆ. ಅದೇ ಸಂದರ್ಭದಲ್ಲಿ ಕಚೇರಿಗೆ ಬಂದಿದ್ದರು ವಿಠ್ಠಪ್ಪ ಗೋರಂಟ್ಲಿ.
ಆಗ ಬಸುರಾಜು ಸರ್ ನೀವು ಈಗ ನೇರವಾಗಿ ಪತ್ರಿಕೆಗೆ ಸುದ್ದಿಗಳನ್ನು ಕಳುಹಿಸುವುದು ಬೇಡ. ನೀವು ಕಳುಹಿಸಬೇಕೆನ್ನುವ ಸುದ್ದಿಗಳನ್ನೇ ವಿಠ್ಠಪ್ಪ ಗೋರಂಟ್ಲಿ ಅವರಿಗೆ ಕಳುಹಿಸಿ. ಅವರು ಎಡಿಟ್ ಮಾಡಿ ನಮಗೆ ಕಳುಹಿಸುತ್ತಾರೆ ಅಂದರು ಮತ್ತು ಅಲ್ಲಿಗೆ ಬಂದಿದ್ದ ವಿಠ್ಠಪ್ಪ ಗೋರಂಟ್ಲಿ ಅವರನ್ನು ಭೇಟಿ ಮಾಡಿಸಿದರು. ಮತ್ತು ಮಾತನಾಡಲು ಹತ್ತಿಸಿದರು. ಅದೇ ನನ್ನ ಮತ್ತು ವಿಠ್ಠಪ್ಪ ಗೋರಂಟ್ಲಿ ಅವರ ಮೊದಲ ಭೇಟಿ ಆಗಿತ್ತು. ಆ ನಂತರದಲ್ಲಿ ನಾನು ಸುದ್ದಿಗಳನ್ನು ವಿಠ್ಠಪ್ಪ ಗೋರಂಟ್ಲಿ ಅವರಿಗೇ ಕೊಡಲು ಆರಂಭಿಸಿದೆ.
ಹಾಗೆಯೇ ಕೊಟ್ಟ ಸುದ್ದಿಗಳಲ್ಲಿ ಹಂಸಭಾವಿ ಪಾಲಿಟೆಕ್ನಿಕ್ ವಿದ್ಯಾಲಯದ ಆಡಳಿತ ಮಂಡಳಿಯ ಕುರುಬಗೊಂಡದ ಬಸೆಟ್ಟಿ ಸುದ್ದಿಯೇ ಮೊದಲನೆಯದಾಗಿತ್ತು. ಅದನ್ನು ವಿಠ್ಠಪ್ಪ ಗೋರಂಟ್ಲಿ ಅವರು ಬಹಳ ಚೆಂದವಾಗಿ ಬರೆದು ‘ಲಂಕೇಶ್ ಪತ್ರಿಕೆ’ಯಲ್ಲಿ ಹಾಕಿದರು. ಆ ಸುದ್ದಿ ಬಂದ ನಂತರ ಆಡಳಿತ ಮಂಡಳಿಯವರು ಕುರುಬಗೊಂಡದ ಬಸೆಟ್ಟಿ ಯನ್ನು ಸಸ್ಪೆಂಡ್ ಮಾಡುವುದಲ್ಲ, ಡಿಸ್ ಮಿಸ್ಸೇ ಮಾಡಿದರು. ಅಲಿಂದ ಮುಂದೆ ನಾನು ಅನೇಕಾನೇಕ ಸುದ್ದಿಗಳನ್ನು ಕೊಟ್ಟೆನು ವಿಠ್ಠಪ್ಪ ಗೋರಂಟ್ಲಿ ಅವರಿಗೆ…
ಹಾಗೇಯೇ ಸಾಗಿತು ನನ್ನ ಮತ್ತು ವಿಠ್ಠಪ್ಪ ಗೋರಂಟ್ಲಿ ಅವರ ಗೆಳೆತನ. ನಿಜ ಹೇಳಬೇಕೆಂದರೆ ಈ ವಿಠ್ಠಪ್ಪ ಗೋರಂಟ್ಲಿ ಅವರು ನನಗೆ ಹಿರಿಯ ಗೆಳೆಯರಾಗಿಯೇ ನಡೆದುಕೊಂಡರು. ಮುಂದೆ ನನಗೆ ನನ್ನ ಪಿಯುಸಿ ವಿಜ್ಞಾನ ಶಿಕ್ಷಣದ ಕಾರಣಕ್ಕೆ ಮತ್ತು ನಾನು ಮುಂದೆ ಬಿಎಸ್ಸಿ ಪದವಿಗೆ ಹೆಚ್ಚಿದ್ದರಿಂದ ವರದಿಗಳನ್ನು ಕೊಡಲು ಆಗಲಿಲ್ಲ. ಆಗ ವಿಠ್ಠಪ್ಪ ಗೋರಂಟ್ಲಿ ಅವರೇ ಮೊದಲು ಶಿಕ್ಷಣ ಮುಗಿಸು ಎಂದು ಹೇಳಿದ್ದರಿಂದ ತಾತ್ಕಾಲಿಕವಾಗಿ ಪತ್ರಿಕೆಯ ವರದಿಗಾರಿಕೆ ಬಿಟ್ಟೆನು.
ಆನಂತರ ಹುಬ್ಬಳ್ಳಿ — ಧಾರವಾಡ ಭಾಗದಿಂದ ಮೋಹನ ನಾಗಮ್ಮನವರ ‘ಲಂಕೇಶ್ ಪತ್ರಿಕೆ’ಗೆ ವರದಿ ಮಾಡಲು ಶುರುಮಾಡಿದರು. ನಾನು ತಾತ್ಕಾಲಿಕವಾಗಿ ವರದಿಗಾರಿಕೆ ಬಿಟ್ಟರೂ ವಿಠ್ಠಪ್ಪ ಗೋರಂಟ್ಲಿ ಅವರೊಂದಿಗೆ ಮತ್ತು ಮೋಹನ ನಾಗಮ್ಮನವರೊಂದಿಗೆ ನನಗೆ ಸಂಪರ್ಕವಿತ್ತು.
ಅಲ್ಲಿಂದ ಮುಂದೆ ಏನೋ ಕೆಲಸದ ಕಾರಣಕ್ಕೆ ನಾನು ಕೊಪ್ಪಳಕ್ಕೇ ಹೋಗಿ ಬರುವ ಅನಿವಾರ್ಯತೆಗಾಗಿ ನಾನು ಕೊಪ್ಪಳಕ್ಕೆ ಹೋದೆನು. ಅಲ್ಲಿ ವಿಠ್ಠಪ್ಪ ಗೋರಂಟ್ಲಿ ಅವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಆಗ ಅವರ ಮನೆಗೆ ಹೋದಾಗ ತಿಳಿಯಿತು. ಎಷ್ಟೋ ವರ್ಷಗಳಿಂದ ‘ಲಂಕೇಶ್ ಪತ್ರಿಕೆ’ಯ ವರದಿಗಾರನಾಗಿದ್ದ ವಿಠ್ಠಪ್ಪ ಗೋರಂಟ್ಲಿ ಅವರ ಪ್ರಾಮಾಣಿಕತೆ. ಮತ್ತು ಕೈಯಿ — ಬಾಯಿ ಶುದ್ದವಿಟ್ಟುಕೊಂಡ ಮನುಷ್ಯನ ಸ್ಥಿತಿಗತಿ ಬಗೆಗೆ. ಅಂತಹ ಪರಿಶುದ್ಧ ಸಾಹಿತಿ ಮತ್ತು ಪತ್ರಕರ್ತ ಆಗಿದ್ದರು ವಿಠ್ಠಪ್ಪ ಗೋರಂಟ್ಲಿ.
ನಾನು ಹೋಗಿ ನೋಡಿದಾಗ ವಿಠ್ಠಪ್ಪ ಗೋರಂಟ್ಲಿ ಅವರಗೆ ಒಂದು ಸರಿಯಾದ ಮನೆಯೂ ಇರಲಿಲ್ಲ. ಒಂದು ತಗಡಿನ ಮನೆಯ ಹೊರತಾಗಿ ವಿಠ್ಠಪ್ಪ ಗೋರಂಟ್ಲಿ ಅವರಿಗೆ ಏನೂ ಅಂದರೆ ಏನೂ ಇರಲಿಲ್ಲ. ಓಡಾಲು ಒಂದು ಹಳೆಯ ಸ್ಕೂಟರ್ ಇತ್ತು. ಇಷ್ಟು ಮಾತ್ರದ ಆಸ್ತಿ ವಿಠ್ಠಪ್ಪ ಗೋರಂಟ್ಲಿ ಅವರದಾಗಿತ್ತು. ಏನೋ ಎರಡು ದಿನಗಳ ವರದಿಗಾರನಾದವನು ಎರಡು ದಿನಗಳಲ್ಲಿ ಐಷಾರಾಮಿ ಕಾರು ಮನೆ ಮತ್ತು ಅದೂ ಇದೂ ಮಾಡಿಕೊಳ್ಳುತ್ತಾನೆ. ಉದಾಹರಣೆಗೆ ರವಿ ಬೆಳಗೆರೆ.
ಇಂತಿಪ್ಪ ವಿಠ್ಠಪ್ಪ ಗೋರಂಟ್ಲಿ ಅವರ ಎಲ್ಲಾ ಹುಬ್ಬಳ್ಳಿ — ಧಾರವಾಡದ ಪತ್ರಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಗಳನ್ನೂ ಮುಂದೆ ಮೋಹನ ನಾಗಮ್ಮನವರೇ ನಿಭಾಯಿಸಹತ್ತಿದ್ದರು. ಹೀಗೆಯೇ ನನಗೆ ವಿಠ್ಠಪ್ಪ ಗೋರಂಟ್ಲಿ ಅವರು ತೀರಾ ಹತ್ತಿರದವರು ಮತ್ತು ಖಾಸಾ ಹಿರಿಯ ಗೆಳೆಯರೂ ಆಗಿದ್ದರು. ಇರಲಿ. ಮುಂದೆ ನೋಡೋಣ ಸದರೀ ಇಂತಹ ವಿಠ್ಠಪ್ಪ ಗೋರಂಟ್ಲಿ ಅವರ ಬದುಕು ಮತ್ತು ಬರಹದ ವಿಚಾರವನ್ನು.
# ಹಿರಿಯ ಸಂತ ಸಾಹಿತಿ, ಹೋರಾಟಗಾರ ಮತ್ತು ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ– ಕೊಪ್ಪಳ ಜಿಲ್ಲೆಯ ಹಿರಿಯ ಹೋರಾಟಗಾರ, ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಠ್ಠಪ್ಪ ಗೋರಂಟ್ಲಿ ಅವರು ಭಾಗ್ಯನಗರದ ಅವರ ನಿವಾಸದಲ್ಲಿ ಹೃದಯಾಘತದಿಂದ ಮೃತಪಟ್ಟರು.
ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು, ಹಲವು ವಿಚಾರಗಳ ಕುರಿತು ನೇರ ಹಾಗೂ ನಿಷ್ಠೂರತೆಯಿಂದ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲಾ ಹೋರಾಟದ ವಿಚಾರ, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು.
ಸುದೀರ್ಘ ಹೋರಾಟದ ಜೀವನವೇ ಅವರದ್ದಾಗಿತ್ತು. ವಿವಿಧ ಪತ್ರಿಕೆಗಳಲ್ಲಿಯೂ ಪತ್ರಕರ್ತ, ಅಂಕಣಕಾರರಾಗಿ ಲೇಖನಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ರಾಜ್ಯ ಮಟ್ಟದಲ್ಲಿ ಇವರ ದೊಡ್ಡ ಸ್ನೇಹ ಬಳಗವನ್ನು ಹೊಂದಿದವರಾಗಿದ್ದರು.
ಬಡತನದಲ್ಲಿಯೇ ಜೀವನ ಸವೆಸಿದ್ದ ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರು ನೇಕಾರಿಕೆಯನ್ನು ಮಾಡಿದ್ದರು. ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿಯೂ ಧ್ವನಿ ಎತ್ತಿ ಸರ್ಕಾರ ಇತ್ತ ತಿರುಗಿ ನೋಡುವಂತೆ ಮಾಡಿದ್ದರು. ಇವರು 4 ನೇ ತರಗತಿ ಶಿಕ್ಷಣ ಪಡೆದರೂ 20 ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದರು. ಹಲವು ಕವನ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಹೆಸರು ಮಾಡಿದ್ದರು. ಇವರ ಸಮಗ್ರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ — ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದ್ದವು.
ಇಂತಹ ವಿಠ್ಠಪ್ಪ ಗೋರಂಟ್ಲಿ ಅವರು ಈಗ ಇಲ್ಲವಾಗಿದ್ದಾರೆ. ಅವರು ಬಿಟ್ಟು ಹೋದ ನೆನಪುಗಳೂ ಇನ್ನೂ ಹಚ್ಚಹಸಿರಾಗಿವೆ. ಇಂತಹ ವಿಠ್ಠಪ್ಪ ಗೋರಂಟ್ಲಿ 78 ರ ಇಳಿ ವಯಸ್ಸಿನಲ್ಲೂ ಯುವ ಉತ್ಸಾಹಿಗಳಂತೆಯೇ ನಗು ನಗುತ್ತಲೇ ಎಲ್ಲರೊಂದಿಗೆ ಬೆರೆತು ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದರು. ಸತ್ಸಂಗ, ಆಧ್ಯಾತ್ಮ, ವೈಚಾರಿಕತೆ ಎವರಲ್ಲೂ ಹಾಸು ಹೊಕ್ಕಾಗಿತ್ತು.
ಇವರು ರಾಜಕೀಯ ರಂಗದಲ್ಲೂ ತಮ್ಮದೇ ಚಾಪು ಮೂಡಿಸಿದ್ದರು. ಈ ಹಿಂದೆಯೇ ತಾಲ್ಲೂಕು ಪಂಚಾಯತಿ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಸೇವೆ ಮಾಡಿದ್ದರು. ಇಂತಹ ವಿಠ್ಠಪ್ಪ ಗೋರಂಟ್ಲಿ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರಾಗಿ ಮೃತಪಟ್ಟಿದ್ದಾರೆ. ಇವರ ಅಗಲಿಕೆಯು ಇಡೀ ಸಾಹಿತ್ಯ ವಲಯಕ್ಕೆ, ಮಾಧ್ಯಮ ವಲಯಕ್ಕೆ, ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆಯೆಂದೇ ಹೇಳಬೆಕು. ವಿಠ್ಠಪ್ಪ ಗೋರಂಟ್ಲಿ ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಕೊಪ್ಪಳ ಮೀಡಿಯಾ ಕ್ಲಬ್ ಸೇರಿದಂತೆ ಸಾಹಿತ್ಯ ಬಳಗವು ಕಂಬನಿ ಮಿಡಿದಿದ್ದಾರೆ.
ಮೃತ ವಿಠ್ಠಪ್ಪ ಗೋರಂಟ್ಲಿ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅದು ತೀರಾ ಖೇದಕರವಾದ ವಿಷಯವಾಗಿದೆ..! ಹೋಗಿ ಬನ್ನಿ ಗೆಳೆಯ ವಿಠ್ಠಪ್ಪ ಗೋರಂಟ್ಲಿ..!!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…