ಬಿಸಿ ಬಿಸಿ ಸುದ್ದಿ

ಕುಲಪತಿ ಬಟ್ಟು ಸತ್ಯನಾರಾಯಣ್‌ರಿಗೆ ಲಿಂಗಾಯತ ಮಹಾಸಭಾ ಸನ್ಮಾನ

ಕಲಬುರ್ಗಿ: ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ್ ಎಸ್. ಮಹಾಗಾಂವಕರ್ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭೇಟಿ ನೀಡಿ, ನೂತನ ಕುಲಪತಿ ಬಟ್ಟು ಸತ್ಯನಾರಾಯಣ್ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಬಸವಣ್ಣನವರ ಭಾವಚಿತ್ರದ ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ಮಾತನಾಡಿ, ಬಸವಣ್ಣನವರ ಕಾರ್ಯಕ್ಷೇತ್ರ ಕಲ್ಯಾಣ ಕರ್ನಾಟಕದ ಬಸವಕಲ್ಯಾಣವಾಗಿದೆ. ೧೨ನೇ ಶತಮಾನದಲ್ಲಿಯೇ ವಿಶ್ವದಲ್ಲಿಯೇ ಮೊದಲ ಸಂಸತ್ತನ್ನು ಅನುಭವ ಮಂಟಪ ನಿರ್ಮಾಣ ಮಾಡುವ ಮೂಲಕ ಸ್ಥಾಪಿಸಿದರು. ಇಡೀ ದೇಶ ಹಾಗೂ ವಿದೇಶದಿಂದಲೂ ವಚನಕಾರರು ಕಲ್ಯಾಣಕ್ಕೆ ಆಗಮಿಸಿದ್ದರು. ಬಸವಾದಿ ಶರಣರ ವಚನಗಳು ಹಸ್ತಪ್ರತಿಯಲ್ಲಿದ್ದು, ಅವುಗಳನ್ನು ಉಳಿಸುವ ಕಾರ್ಯ ಆಗಬೇಕು ಎಂದರು.

ಈಗಾಗಲೇ ರಾಜ್ಯ ಸರ್ಕಾರವು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ೬೦೦ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಹೀಗಾಗಿ ವಚನಗಳನ್ನು ದಾಖಲೀಕರಣ ಮಾಡುವುದು ಅಗತ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಒತ್ತು ಕೊಡಬೇಕು ಎಂದು ಅವರು ಮನವಿ ಮಾಡಿದರು.

ಈಗಾಗಲೇ ಬಸವಾದಿ ಶರಣರ ವಚನಗಳನ್ನು ಫ.ಗು. ಹಳಕಟ್ಟಿಯವರು ಸಂಗ್ರಹಿಸಿ ವಚನ ಸಂಪುಟಗಳನ್ನು ಹೊರತರುವ ಮೂಲಕ ವಚನ ಪಿತಾಮಹ ಎಂದು ಗುರುತಿಸಿಕೊಂಡಿದ್ದಾರೆ. ಅದೂ ಅಲ್ಲದೇ ಬೆಂಗಳೂರಿನ ಅಶೋಕ್ ದೊಮ್ಮಲೂರು ಅವರು ಸುಮಾರು ನಾಲ್ಕು ಲಕ್ಷ ವಚನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ್ ಡೋಣೂರ್ ಅವರ ಮುಂದೆ ಪ್ರದರ್ಶನ ಮಾಡಿದ್ದಾರೆ. ಡಿಜಟಲೀಕರಣವನ್ನೂ ಸಹ ಅವರು ಕೈಗೊಂಡಿದ್ದಾರೆ. ಕುಲಸಚಿವರೂ ಸಹ ಹಸ್ತಪ್ರತಿ ಸಂಗ್ರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಕ್ಷಣವೇ ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಂಶೋಧನೆಯನ್ನು ಕೈಗೊಳ್ಳಲು ವಿಶ್ವವಿದ್ಯಾಲಯದ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಬಿ. ಪೂಜಾರಿಯವರಿಗೆ ನಿರ್ದೇಶನ ನೀಡಿದ್ದು ನಮಗೆಲ್ಲ ಸಂತೋಷವಾಗಿದೆ ಎಂದು ಅವರು ಹೇಳಿದರು.

ಬಸವಣ್ಣನವರ ಐಕ್ಯಸ್ಥಳವು ಕೂಡಲಸಂಗಮವಾಗಿದ್ದು, ಅಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಸವಾದಿ ಶರಣರ ವಚನಗಳ ಕುರಿತು ಹೆಚ್ಚು ವಿಮರ್ಶೆ ಹಾಗೂ ಸಂಶೋಧನೆ ಮತ್ತು ಪ್ರಸಾರ ಆಗಬೇಕು. ಆ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಬಸವಣ್ಣನವರ ಕುರಿತು ಹಾಗೂ ಅನುಭವ ಮಂಟಪ ಮತ್ತು ವಚನಕಾರರ ಕುರಿತು ಸಮಗ್ರ ಮಾಹಿತಿಯನ್ನು ಪಡೆದ ಕುಲಪತಿ ಬಟ್ಟು ಸತ್ಯನಾರಾಯಣ್ ಅವರು ಮಾತನಾಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಮಾಜ ಸುಧಾರಕ ಬಸವಣ್ಣನವರ ಕುರಿತು ಅಧ್ಯಯನ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಕೊಡುತ್ತಿದೆ. ಆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿಯೇ ಬಸವಪೀಠವನ್ನು ಸ್ಥಾಪಿಸಲಾಗಿದೆ. ಅದರ ನಿರ್ದೇಶಕರಾಗಿ ಗಣಪತಿ ಸಿನ್ನೂರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಸವೇಶ್ವರರ ಭಾವಚಿತ್ರವನ್ನೂ ಸಹ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಹಾಕಲಾಗಿದೆ ಎಂದು ತಿಳಿಸಿದರು.\

ತಿರುವಳ್ಳವರ್, ವೇಮನ್ ಮುಂತಾದವರ ಕೊಡುಗೆಯನ್ನು ಸ್ಮರಿಸಿದ ಕುಲಪತಿಗಳು, ಅದೇ ರೀತಿ ಬಸವಣ್ಣನವರು ಸಹ ಅಪ್ರತಿಮ ಸಮಾಜ ಸುಧಾರಕರಾಗಿದ್ದಾರೆ. ಈಗಾಗಲೇ ಅರವಿಂದ್ ಜತ್ತಿ ಅವರ ನೇತೃತ್ವದ ಬಸವ ಸಮಿತಿಯೊಂದಿಗೆ ವಿಶ್ವವಿದ್ಯಾಲಯವು ಜಂಟಿಯಾಗಿ ವಚನಗಳ ಕುರಿತು ವಿಚಾರ ಸಂಕಿರಣ, ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತಿದೆ. ಇಂತಹ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಶ್ವವಿದ್ಯಾಲಯದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಸವಪೀಠದ ನಿರ್ದೇಶಕ ಗಣಪತಿ ಸಿನ್ನೂರ್ ಅವರು ಬಸವಪೀಠದ ಕಾರ್ಯಯೋಜನೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಆರ್.ಜಿ. ಶೆಟಗಾರ್, ಅಶೋಕ್ ಘೂಳಿ, ಹಣಮಂತರಾವ್ ಪಾಟೀಲ್ ಕುಸನೂರು, ಬಸವರಾಜ್ ಮೊರಬದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಕುಪೇಂದ್ರ ಪಾಟೀಲ್, ಧನರಾಜ್ ತಾಂಬೋಳೆ, ರಾಜಶೇಖರ್ ಯಂಕಂಚಿ, ಶಶಿಕಾಂತ್ ಪಸಾರ್, ಸಿದ್ರಾಮಪ್ಪ ಲದ್ದೆ, ಸಿದ್ರಾಮ್ ಯಳವಂತಗಿ, ಮಲ್ಲಿಕಾರ್ಜುನ್ ಗೋಳಾ, ಕಮಲಾಕರ್ ಯಂಕಂಚಿ, ಮಲ್ಲಿಕಾರ್ಜುನ್ ಗೋಳಾ, ವಿಶ್ವನಾಥ್ ಜೋಳದ್, ಮುರುಗೇಂದ್ರ ಚಿಂಚೋಳಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಇಷ್ಟಲಿಂಗ್ ಮಹಾಗಾಂವಕರ್, ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

56 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

59 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago