ಇಂದಿನ ಬಹುತೇಕ ಯುವಕರು ವಾಟ್ಸಪ್ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ನಿತ್ಯ ಕ್ಷಣ ಕ್ಷಣವೂ ಹರಿದು ಬರುವ ವಾಟ್ಸಪ್ ಸಂದೇಶಗಳಿಗೆ ಅವರು ಮಾರು ಹೋಗಿದ್ದಾರೆ. ಸುಳ್ಳು ಸತ್ಯದ ತಲೆಯ ಮೇಲೆ ಹೊಡೆದಂತೆ ವರ್ತಿಸುತ್ತಿದೆ. ಬಹುಶಃ ಸುಳ್ಳಿನ ಸರಮಾಲೆಯನ್ನು ಯುವ ಜನತೆಯ ತಲೆಗೆ ತಿಕ್ಕಿ ತಮ್ಮ ಗುಪ್ತ ಅಜೆಂಡಾವನ್ನು ಜಾರಿಗೆ ತರುವ ಜರೂರಿ ಕೆಲವು ಪಟ್ಟಭದ್ರಹಿತಾಸಕ್ತಿಗಳಿಗೆ ಇದೆ.
ಯಾರು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರೋ ಅವರು ಈ ವಿಶ್ವವಿದ್ಯಾಲಯದ ಪಠ್ಯದಲ್ಲಿ ಇಲ್ಲವೇ ಇಲ್ಲ. ಯಾವ ಯಾವ ವ್ಯಕ್ತಿಗಳು ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ಇದ್ದರೋ, ಯಾರು ಅವರ ಸಾಮ್ರಾಜ್ಯ ವಿಸ್ತರಣೆಗೆ, ಭದ್ರತೆಗೆ ಐಡಿಯಾಗಳನ್ನು ಕೊಡುತ್ತಿದ್ದರೋ ಅವರೆಲ್ಲ ಇಂದಿನ ಯುವ ಜನತೆಯ ಕಣ್ಣಲ್ಲಿ ಸ್ವಾತಂತ್ರ್ಯ ಹೋರಾಟಗಾರರು.
ಕಾಲಾಪಾನಿ ಸಜಾಕ್ಕೆ ಒಳಗಾಗಿ ಅಂಡಮಾನ ನಿಕೋಬಾರ ದ್ವೀಪದಲ್ಲಿ ಬಂಧಿಯಾಗಿದ್ದವರು “ನಾನು ನಿಮ್ಮ ವಿರುದ್ಧ ಹೋರಾಡಲೇ ಇಲ್ಲ. ಮುಂದೆಯೂ ಹೋರಾಡುವುದಿಲ್ಲ. ನನ್ನ ಗುರಿ ಗಮ್ಯವೇ ಬೇರೆ ಇದೆ. ತಾವು ಬಯಸಿದರೆ ತಮ್ಮ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡುವ ವ್ಯಕ್ತಿ ,ಸಂಘಟನೆಗಳ ವಿವರವನ್ನು ಒದಗಿಸುವೆ. ದಯವಿಟ್ಟು ನನ್ನನ್ನು ಈ ಜೇಲಿನಿಂದ ಬಿಡುಗಡೆಗೊಳಿಸಿ” ಎಂದು ಅವಲತ್ತುಕೊಂಡ ವ್ಯಕ್ತಿ ನಮ್ಮ ಯುವಕರ ಕಣ್ಣಲ್ಲಿ ರಾಷ್ಟ್ರಭಕ್ತ !
ಮತಾಂಧನಲ್ಲದ ಜನ ಸಾಮಾನ್ಯರ ಹಿತವೇ ನನ್ನ ಹಿತ ಎಂದು ತಿಳಿದುಕೊಂಡು ಆಳ್ವಿಕೆ ನಡೆಸಿದ ವ್ಯಕ್ತಿ ಇಂದು ರಾಷ್ಟ್ರದ್ರೋಹಿ. ಧರ್ಮ ಸಹಿಷ್ಣುವಾಗಿದ್ದ , ಸಮಗ್ರ ಜನತೆಯ ಏಳಿಗೆಯೇ ತನ್ನ ಪ್ರಭುತ್ವದ ಅಭ್ಯುದಯ ಎಂದು ಅರಿತಿದ್ದ ರಾಜನಿಗೆ ಧರ್ಮಾಂಧ ? ಇತಿಹಾಸದ ಪುಟಗಳನ್ನು ತಿರುಚಿ, ತಮಗೆ ಹೇಗೆ ಬೇಕೋ ಹಾಗೆ ಬರೆದುಕೊಳ್ಳುತ್ತಿರುವುದು ದುರಂತದ ಪರಮಾವಧಿ.
ಯಾರದೋ ಮುಖಕ್ಕೆ ಮತ್ಯಾದರೋ ಫೋಟೋ ಅಂಟಿಸಿ ಫೋಟೋ ಶಾಪನಲ್ಲಿ ಎಡಿಟ್ ಆದ ಚಿತ್ರಗಳು ಬಹುತೇಕ ಯುವಕರ ತಲೆ ಕೆಡಿಸಿವೆ. ಈ ಫೋಟೋ ವಾಸ್ತವೋ, ಅಸಲಿಯೋ ? ಎಂದು ಪರಾಂಭರಿಸಿ ನೋಡುವ ತಾಳ್ಮೆಯೂ ಯುವ ಜನತೆಗೆ ಇಲ್ಲವಾಗಿದೆ. ಕಂಡದ್ದೇಲ್ಲ, ಬರೆದದ್ದೆಲ್ಲ ವೇದ ವಾಕ್ಯ ಎಂಬ ದಡ್ಡತನ ಎಲ್ಲರಲ್ಲಿ ಬೆಳೆಯುತ್ತಿದೆ.
ಹೇಳಿ ಕೇಳಿ ಭಾರತದ ಜನತೆ ಭಾವನೆಗಳಿಗೆ ಹೆಚ್ಚು ಬೆಲೆ ನೀಡುವವರು. ವಾಸ್ತವಿಕ ಸತ್ಯಗಳು ಇವರಿಗೆ ಬೇಕಿಲ್ಲ.ಭ್ರಾಮಕ ಸತ್ಯಗಳು ಇವರನ್ನು ಆಳುತ್ತವೆ. ಏಕೆಂದರೆ ವಾಸ್ತವ ತುಂಬಾ ಭೀಕರ. ಅದನ್ನು ಎದುರಿಸುವ ಮಾನಸಿಕ ಗಟ್ಟಿತನ ಇವರಲ್ಲಿ ಇಲ್ಲ. ಹೀಗಾಗಿ ಇವರ ಮನಸ್ಸು ಸದಾ ಡೋಲಾಯಮಾನ. ಅರಸುವ ಬಳ್ಳಿಗೆ ಆಸರೆ ಆದರು ಎಂಬಂತೆ ಬರುವ ದೇವಮಾನವರು ಅಪ್ಯಾಯಮಾನರಾಗಿ ಕಾಣುತ್ತಾರೆ.
ಭಾರತದ ತುಂಬೆಲ್ಲ ಹುಸಿ ದೈವಶಕ್ತಿ ಹೊಂದಿದ ಬುರುಡೆ ಬಾಬಾಗಳು, ಖೊಟ್ಟಿ ಕಾವಿಧಾರಿಗಳು,ಗುರ್ಮಿತ ರಾಮ ರಹೀಮ ಸಿಂಗ್, ನಿತ್ಯಾನಂದ, ಸಂತರಾಮಪಾಲ, ಸಾರಥಿ ಬಾಬಾ, ಸ್ವಾಮಿ ಸದಾಚಾರಿ,ಆಸಾರಾಂ ಬಾಪು, ಕೌಬಾಯಿ ಕಳ್ಳ, ಅಪ್ಪಿಕೋ ಅಮ್ಮಾ ಮುಂತಾದವರಲ್ಲದೆ ಅಸ್ಲಂಬಾಬಾ, ಬೆನಿಹಿನ್ ಎಂಬ ಹಲಾಲು ಖೋರರ ಗುಂಪು ಮಿಂಚುತ್ತಿದೆ.
“ಸೋಗಿನ ಮುಖವಾಡಗಳನ್ನು ಧರಿಸಿರುವ ಧರ್ಮ ತನ್ನ ಅನುಯಾಯಿಗಳನ್ನು ದಿಕ್ಕುತಪ್ಪಿಸುತ್ತದೆ” ಎಂಬ ಕಾರ್ಲಮಾರ್ಕ್ಸ್ ಮಾತು ಅಕ್ಷರಶಃ ಸತ್ಯ. “ಸೋಗಿನ ಮುಖವಾಡ ಹಾಕಿಕೊಂಡ ಧರ್ಮ ತನ್ನ ಅನುಯಾಯಿಗಳನ್ನು ದಿಕ್ಕುತಪ್ಪಿಸುತ್ತದೆ” ಎಂಬ ಅವರದೆ ಮಾತು ಇಂದು ಸತ್ಯವಾಗಿದೆ. ಮುಖವಾಡಗಳಿಗೆ ಇಂದು ಎಲ್ಲಿಲ್ಲದ ಬೆಲೆ. ಸತ್ಯಕ್ಕೆ ಇಂದು ಜೊತೆ ಯಾರೂ ಇಲ್ಲ ಎಂಬ ಅನಾಥಭಾವ.
ವಂದೇಮಾತರಂ , ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗಿದಾಕ್ಷಣ ಆತ ದೇಶಭಕ್ತ. ಕೂಗದೆ ಇರುವವನು ದೇಶದ್ರೋಹಿ ಪಟ್ಟ ಸಲೀಸಾಗಿ ಸಿಗುತ್ತಿದೆ. (ಹಾಗಂತ ಭಾರತ್ ಮಾತೆಗೆ ಜಯವಾಗಲಿ ಎಂಬ ಘೋಷಣೆ ಕೂಗಬಾರದು ಎಂಬುದು ನನ್ನ ಅಭಿಮತವಲ್ಲ.) ಒಳ ತುಡಿತ, ಪ್ರೇಮ, ಅಭಿಮಾನಕ್ಕಿಂತ ನಕಲಿ ದೇಶ ಭಕ್ತರ ಸಂಖ್ಯೆಯೇ ಹೆಚ್ಚಾಗುತ್ತಿದೆ. ‘ಚೋರ ಗುರು ಚಾಂಡಾಲ ಶಿಷ್ಯ’ ಎಂಬ ಮಾತಿಗೆ ನಮ್ಮ ಭಾರತದ ಬಹಳಷ್ಟು ಜನತೆ ಈಡಾಗುತ್ತಿರುವುದು ನೋವಿನ ವಿಷಯ. ಯಾರಿಗೂ ಧರ್ಮದ ಮೂಲ ತತ್ವ ಗೊತ್ತಿಲ್ಲ. ‘ಬಳ್ಳಿಗುರುಡರೆಲ್ಲ ಕೂಡಿ ಹಳ್ಳಕ್ಕೆ ಬಿದ್ದರು” ಎಂಬ ಸ್ಥಿತಿಗೆ ನಾವೆಲ್ಲ ತಲುಪಿದ್ದೇವೆ. ಅಧಾರ್ಮಿಕರೆ ಧರ್ಮದ ಗುತ್ತೆ ಹಿಡಿದುಕುಂತಾಗ ಧರ್ಮ ಒಂದು ಅಫೀಮಾಗದೆ ಇನ್ನೇನು ಆಗಲು ಸಾಧ್ಯ ? ಎಲ್ಲಾ ಧರ್ಮದ ಮೂಲ ತಳಹದಿಯೇ ದಯೆ, ದಯವೇ ಇಲ್ಲದ ಧರ್ಮವನ್ನು ತೆಗೆದುಕೊಂಡು ಏನು ಮಾಡುವುದು ?
ಆದರೆ ಇವೆಲ್ಲವುಗಳ ಕುರಿತು ವಿಚಾರ ಮಾಡುವ ಮನಸ್ಥಿತಿಯಲ್ಲಿ ಯುವ ಜನತೆ ಇಲ್ಲ. ಹುಸಿ ದೇಶ ಭಕ್ತರ, ಹುಸಿ ಧಾರ್ಮಿಕ ಮುಖಂಡರ, ಹುಸಿ ಸಾಮಾಜಿಕ ಕಾರ್ಯಕರ್ತರ ನಯವಾದ ಮಾತುಗಳಿಗೆ ಇವರೆಲ್ಲ ಪಿಗ್ಗಿ ಬಿದ್ದಿದ್ದಾರೆ. ಮಾತು ಮನೆಯನ್ನಷ್ಟೆ ಕೆಡಿಸಿಲ್ಲ, ಯುವ ಜನತೆಯ ಮನಸ್ಸನ್ನು ರಮರಾಡಿ ಮಾಡಿಬಿಟ್ಟಿದೆ. ವಿಷಬೀಜವನ್ನು ನಿತ್ಯವೂ ವಾಟ್ಸಪ್ ವಿಶ್ವವಿದ್ಯಾಲಯದ ಮೂಲಕ ಬಿತ್ತುತ್ತಲೇ ಇದ್ದಾರೆ.
ಯುವಕರು ಭ್ರಾಮಕ, ನಯವಾದ ಮಾತುಗಳಿಗೆ ಬಲಿ ಹೋಗಬಾರದು. ಇತಿಹಾಸವನ್ನು, ಇತಿಹಾಸದ ವ್ಯಕ್ತಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಓದುತ್ತ ಓದುತ್ತ ಜಾಣರಾಗೋದಕ್ಕಿಂತ ಪ್ರಜ್ಞಾವಂತರಾಗಬೇಕು. ನಾನಷ್ಟೇ ಬದುಕಿದರೆ ಸಾಲದು, ನನ್ನೊಂದಿಗೆ ಎಲ್ಲರೂ ಎಂಬ ಮಾತು ಮನನ ಮಾಡಿಕೊಳ್ಳಬೇಕು. ಯಾರ ಮಾತಿಗೂ ಬೆಲೆಕೊಡಬೇಡಿ. ಯಾರ ಬರಹಕ್ಕೂ ಬೆಲೆ ಕೊಡಬೇಡಿ. “ನಿಮ್ಮೆದೆಯ ಧ್ವನಿಯೆ ನಿಮಗೆ ಋಷಿ” ಎಂಬ ಕುವೆಂಪು ವಾಣಿಯನ್ನು ಮರೆಯಬಾರದು.
‘ನಿನಗೇ ನೀನೇ ಬೆಳಕು’ ಎಂಬ ಮಹಾತ್ಮ ಬುದ್ಧನ ದಾರಿ,ಬಸವಣ್ಣನವರ ವಚನದ ಕಡೆಗೀಲು, ಅಂಬೇಡ್ಕರ್, ಪುಲೆ,ಶಾಹು ಮಹಾರಾಜ, ಪೆರಿಯಾರ, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಭಗತ್ ಸಿಂಗ್ ರ ಜೀವನದ ಘಟನೆ, ವಿವೇಕಯುತ ಮಾತು ನಮಗೆ ಮಾರ್ಗವಾಗಬೇಕು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…