ಅಲ್ಲಮಪ್ರಭುಗಳು ಈ ವಚನದಲ್ಲಿ ಗುರುವಿನ ಮಹಿಮೆ ತಿಳಿಸುತ್ತಾರೆ. ಲಿಂಗಾಯತ ಧರ್ಮದಲ್ಲಿ ಗುರುವಿಗೆ ಬಹುದೊಡ್ಡ ಸ್ಥಾನವಿದೆ. ಮನುಷ್ಯನ ಸ್ವಭಾವ ಕಾಣುವ ವಸ್ತುವಿನ ಕಡೆ ಗಮನವಿರುವುದಿಲ್ಲ. ಕಾಣದ ವಸ್ತುವಿಗೆ ಹುಡುಕಾಟ ಪ್ರಾರಂಭವಾಗುತ್ತದೆ. ಕಾಣದ ವಸ್ತುವಿಗೆ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಪರಶಿವನು ನಿರಾಕಾರ, ನಿರ್ಗುಣ, ನಿರಂಜನ ಅವನಿಗೆ ಇಂದ್ರಿಯಗಳಿಂದ ನೋಡಲು ಸಾಧ್ಯವಿಲ್ಲ. ಪಂಚೇಂದ್ರಿಯಗಳಿಗೆ ನಿಲುಕಲಾರ. ಅವನು ಅನುಭವೇಂದ್ರಿಯದಿಂದ ಅನುಭವಿಸಬೇಕು. ಹುಡುಕಾಟ ಪ್ರಾರಂಭ ಮಾಡಿದ್ದಾನೆ. ಕಾಶಿ, ರಾಮೇಶ್ವರ, ಕೇದಾರ, ಯಜ್ಞಯಾಗ, ಹೋಮಹವನ ಆ ಪೂಜೆ, ಈ ಪೂಜೆ ಏನು ಮಾಡಿದರೂ ಸಿಗುವುದಿಲ್ಲ. ಸುತ್ತಿ ಸುತ್ತಿ ಬಳಲುತ್ತಿದ್ದಾನೆ. ಇದೆಲ್ಲ ಮಾಡಿ ಮಾಡಿ ಬಳಲಿಕೆಯಾಗುತ್ತಿದೆ.
ಪ್ರಭುದೇವರ ಸ್ಪಷ್ಟ ಅಭಿಪ್ರಾಯವೆಂದರೆ ಕಾಣುವ ಗುರುಪಾದ ಹಿಡಿದರೆ ಕಾಣದ ವಸ್ತು ನಮಗೆ ದೊರೆಯುತ್ತದೆ. ನೀನು ಮೊದಲು ಗುರುವನ್ನು ದೃಢವಾಗಿ ನಂಬು. ಗುರು ನಿನಗೆ ಕಾಣಲಾರದ ಪರಮಾತ್ಮನನ್ನು ಅನುಭವಿಸುವ ಮಾರ್ಗ ಹೇಳಿಕೊಡುತ್ತಾನೆ. ಇಷ್ಟಲಿಂಗ ದೀಕ್ಷೆ ನೀಡಿ ಸಾಧನೆಯ ಪಥ ಹೇಳಿಕೊಡುತ್ತಾನೆ. ಲಿಂಗಾಂಗ ಪಥದಿಂದ ಸಾಗಿದಾಗ ದೇಹಭಾವ ಹೋಗಿ ಶಿವಭಾವ ದೃಷ್ಟಿ ಬರುತ್ತದೆ. ಎಲ್ಲಿ ನೋಡಿದರೂ ಪರಮಾತ್ಮನ ಅನುಭವವಾಗುತ್ತದೆ. ವನವೆಲ್ಲ ನೀವೆ ವನದೊಳಗಣ ತರುವೆಲ್ಲ ನೀವೆ ತರುವಿನೊಳಗಣ ಖಗಮೃಗವೆಲ್ಲಾ ನೀವೆ ಸರ್ವಭರಿತವಾಗಿ ಕಾಣುವ ದೃಷ್ಟಿಬರುತ್ತದೆ. ಮೊದಲು ಗುರುಪಾದ ಗಟ್ಟಿಯಾಗಿ ಹಿಡಿಯಬೇಕು. ಶಿವಪಥವನರಿವಡೆ ಗುರುಪಥವೇ ಮೊದಲು ಬಸವವಾಣಿ ಅದನ್ನೇ ಹೇಳುತ್ತದೆ.
ಬಸವಗುರುವಿನ ಪಾದ ಗಟ್ಟಿಯಾಗಿ ಹಿಡಿದಿರುವುದರಿಂದ ತುರುಗಾಹಿ ರಾಮಣ್ಣ, ಲಕ್ಕಮ್ಮ, ಮಾರಯ್ಯ, ಚೆನ್ನಯ್ಯ, ಕಕ್ಕಯ್ಯ, ಧೂಳಯ್ಯ ಮುಂತಾದ ಏಳುನೂರಾ ಎಪ್ಪತ್ತು ಅಮರಗಣಂಗಳು ಕಾಣುವ ಬಸವಪಾದ ಹಿಡಿದು ಕಾಣುದುದ ಅನುಭವಿಸಿದವರು. ಒಬ್ಬ ವ್ಯಕ್ತಿ ಸುಗಂಧ ಬೇಕು ಎಂದು ಹುಡುಕಾಟ ಮಾಡುತ್ತಿದ್ದ. ಅನುಭವಿಗಳು ಹೇಳಿದರು ಹೂ ತೆಗೆದುಕೋ ಸುಗಂಧ ಸಿಗುತ್ತದೆ. ಹೂ ಬೇಡ ಸುಗಂಧ ಮಾತ್ರ ಬೇಕು ಎಂದನಂತೆ. ಹೂ ಹಿಡಿದರೆ ಮಾತ್ರ ಸುಗಂಧ ಸಿಗುತ್ತದೆ. ವಿನಃ ಹೂ ಹಿಡಿಯಲಾರದೆ ಸುಗಂಧ ಸಿಕ್ಕುವುದಿಲ್ಲ. ಅದೇ ರೀತಿಯಾಗಿ ಗುರುಪಾದ ಹಿಡಿದು ಕಾಣದ ವಸ್ತು ನಮಗೆ ಅನುಭವವಾಗುತ್ತದೆ. ಗುರು ಕಾಣುವ ಪರಮಾತ್ಮ. ಸದ್ಗುರು ಪಾದದಲ್ಲಿ ಪರಮಾತ್ಮ ಕಂಡರೆ ಸದ್ಗುರು ನಿಮಗೆ ಸತ್ಯವಸ್ತುವಿನ ದರ್ಶನ ಮಾಡಿಸಬಲ್ಲವನಾಗಿರುತ್ತಾನೆ.
ಒಂದು ಸಣ್ಣ ಉದಾಹರಣೆ. ಒಬ್ಬ ಶ್ರೀಮಂತ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಅಲ್ಲಿ ಒಂದು ಹಣ್ಣಿನ ಗಿಡ ನೋಡಿದ. ಅಮೃತ ಫಲ. ಸಿಹಿಯಾದ ಹಣ್ಣು. ಸಾವಿರಾರು ರೂಪಾಯಿಗೆ ಒಂದು ಹಣ್ಣು. ಅದರ ಬೀಜಗಳು ತಂದ. ಅವನ ಇಬ್ಬರು ಮಕ್ಕಳು ಬೇರೆಯಾಗುವ ಸಮಯ ಬಂತು. ಎರಡು ಪಾಲು ಮಾಡಿದ. ಎಲ್ಲಾ ಸಂಪತ್ತು ಆಸ್ತಿ ಒಂದು ಕಡೆ. ಹಣ್ಣಿನ ಬೀಜ ಒಂದು ಕಡೆ. ತಮ್ಮನಿಗೆ ಆಯ್ಕೆಯ ಅವಕಾಶ ಸಿಕ್ಕಿತ್ತು. ತಮ್ಮ ಹಣ್ಣಿನ ಬೀಜ ಆಯ್ಕೆ ಮಾಡಿಕೊಂಡ. ಅಣ್ಣನಿಗೆ ಸಂತಸ.
ನಮ್ಮ ತಮ್ಮ ಹುಚ್ಚನಿದ್ದಾನೆಂದು ತಿಳಿದ. ಅಣ್ಣ ಎಲ್ಲ ಸಂಪತ್ತು ತೆಗೆದುಕೊಂಡು ದೊಡ್ಡ ಪಟ್ಟಣಕ್ಕೆ ಹೋದ. ಚಟ ಕಲಿತ. ಸಂಪತ್ತು ಕರಗಿತು. ತಮ್ಮ ಹೊಲದಲ್ಲಿ ಬೀಜ ಹಾಕಿದ ಅಮೃತ ಫಲ ಬಂದವು. ತಮ್ಮ ಕಾಣುವ ಬೀಜದಲ್ಲಿಯೇ ಕಾಣದ ಸಂಪತ್ತು ಇದೆ ಎಂದು ತಿಳಿದು ಲಕ್ಷ ಲಕ್ಷ ಸಂಪಾದಿಸಿದ ಅದೇ ರೀತಿಯಾಗಿ ಕಾಣುವ ಗುರುವಿನಲ್ಲಿ ನಾವು ಶಿವನನ್ನು ಕಾಣಬೇಕು. ಗುರುವೇ ಶಿವನು ಎಂಬ ಭಾವ ಬಂದಾಗ ಕಾಣದ ದೇವರ ದರ್ಶನವಾಗುತ್ತದೆ.
ಮರುಳಶಂಕರದೇವರು ಹನ್ನೆರಡು ವರ್ಷ ದಾಸೋಹ ಸೇವೆಯಲ್ಲಿ ಇದ್ದರೂ ಯಾರಿಗೂ ಕಾಣಲಿಲ್ಲ. ಅವರ ಎತ್ತರದ ನಿಲವು ಯಾರಿಗೂ ತಿಳಿಯಲಿಲ್ಲ. ಅಲ್ಲಮಪ್ರಭುಗಳಿಗೆ ಕಂಡಿತ್ತು. ಎತ್ತರದ ನಿಲವು ಶರಣರಿಗೆ ದರ್ಶನ ಮಾಡಿಸಿದರು. ಕಾಣುವ ವಸ್ತುವಿನ ಕಡೆ ಗಮನವಿಡಬೇಕು. ಸಿಹಿಬೇಕು ಹಣ್ಣು ಬೇಡ ಎಂದರೆ ಆಗುವುದಿಲ್ಲ. ಮೊದಲು ಹಣ್ಣು ತೆಗೆದುಕೊಂಡಾಗ ಸಿಹಿ ಅನುಭವವಾಗುತ್ತದೆ. ಅದೇ ರೀತಿಯಾಗಿ ಗುರುವಿನ ಮೂಲಕವೇ ಪರಮಾತ್ಮನನ್ನು ಕಾಣಬೇಕು.
ಮೇದಾರ ಕೇತಯ್ಯ ಬಿದಿರಿನ ಕಾಯಕ ಮಾಡುತ್ತಿದ್ದ. ಬಿದಿರು ಕಡಿದು ಸಣ್ಣ ಸಣ್ಣ ತುಂಡು ಮಾಡಲು ಕುಳಿತ್ತಿದ್ದ. ಶ್ರೀಮಂತನೊಬ್ಬ ಇದೇನು ಕೆಲಸಕ್ಕೆ ಬಾರದ ತುಂಡು ಎಂದು ಜರಿದ. ತುರುಗಾಹಿ ರಾಮಣ್ಣ ಹೇಳಿದ ಇದರ ಮೂಲಕ ಅದ್ಭುತ ಕಾರ್ಯವಾಗುತ್ತದೆ. ಬಿದಿರಿನ ತುಂಡು ತೆಗೆದುಕೊಂಡು ಅದಕ್ಕೆ ರಂಧ್ರಹಾಕಿ ಊದಲು ಪ್ರಾರಂಭ ಮಾಡಿದ. ಸಾವಿರಾರು ಆಕಳು ಬಂದು ಅವನ ಸುತ್ತ ನೆರೆದವು. ಬಿದಿರಿನ ಸಣ್ಣ ಕೋಲಿನಲ್ಲಿ ಅದ್ಭುತ ವಸ್ತು ಕಂಡಿದ್ದ.
ಗುರು ಎಂದರೆ ನಮ್ಮಂತೆ ಮನುಷ್ಯರು. ನಮ್ಮಂತೆ ಇರುತ್ತಾರೆ ಎಂದು ಅನ್ನಬಾರದು. ಗುರು ಕಾಣುವ ಪರಮಾತ್ಮ ಎಂದು ಭಾವಿಸಬೇಕು. ‘ಹರನೆಂದು ಕಂಡು ನರನೆಂದು ಭಾವಿಸಿದರೆ ನರಕ ತಪ್ಪದು’ ಎಂದು ಶರಣರು ಹೇಳುತ್ತಾರೆ. ಸಂತ ಕಬೀರ ಮತ್ತು ಮಹಾರಾಷ್ಟ್ರದ ಸಂತ ಮನ್ಮಥ ಸ್ವಾಮಿಯವರು ಹೇಳುತ್ತಾರೆ ಗುರು ಮತ್ತು ದೇವರು ಇಬ್ಬರು ಏಕಕಾಲದಲ್ಲಿ ಮುಂದೆ ನಿಂತಾಗ ಮೊದಲು ನಮಸ್ಕಾರ ಯಾರಿಗೆ ಮಾಡಬೇಕು? ದೇವರಿಗೆ ತೋರಿಸಿಕೊಟ್ಟವರೆ ಗುರುಗಳು ಗುರುವಿನ ಮೂಲಕವೇ ನನಗೆ ದೇವರು ಕಂಡಿದ್ದಾನೆ. ಅದಕ್ಕೆ ಮೊದಲಿಗೆ ಗುರುವಿನ ಪಾದಕ್ಕೆ ಶರಣು ಸಲ್ಲಿಸುವೆ.
ಆದ್ದರಿಂದ ಅಲ್ಲಮಪ್ರಭುಗಳು ಸ್ಪಷ್ಟ ಸಂದೇಶ ನೀಡುತ್ತಾರೆ. ಕಾಣದ ಪರಮಾತ್ಮನನ್ನು ಸುತ್ತಿ ಸುತ್ತಿ ಲಕ್ಷ ಗಂಗೆಯಲ್ಲಿ ಮಿಂದರೂ ಉಪಯೋಗವಿಲ್ಲ. ಆಯಾಸ ಬಳಲಿಕೆಯಾಗುತ್ತದೆ. ಕಾಣುವ ಗುರುವಿಗೆ ಮೊದಲು ಶಿವನೆಂದು ಮೊರೆ ಹೋಗಬೇಕು. ನಾವು ಗುರುವಿನ ಮಾರ್ಗದರ್ಶನದಲ್ಲಿ ಲಿಂಗಪಥದ ಸಾಧನೆ ಮಾಡೋಣ. ನಿತ್ಯಾನಂದ ನಿತ್ಯತೃಪ್ತಿ ಪಡೆಯೋಣ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…