ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಜೀವನ ಸಾಹಿತ್ಯ. ಸತ್ಯದ ಅನ್ವೇಷಕರಾದ ಶರಣರು ಶಿವಪಥದ ಆರಾಧಕರು. ಸಕಲರಿಗೆ ಲೇಸ ಬಯಸಿದ ಶರಣರ ಹೃದಯಾಂತರಾಳ ದಿಂದ ಹೊರಹೊಮ್ಮಿದ ವಿಶಿಷ್ಠ ಸಾಹಿತ್ಯ. ಜಗತ್ತಿನ ಶ್ರೇಷ್ಠ ಅನುಭಾವ ಸಾಹಿತ್ಯ. ವಚನ ಸಾಹಿತ್ಯ ಕಾಮದೇನುಗಳ ಹಿಂಡು, ಸಂಜೀವಿನಿಯ ಬಣವೆ, ಕಲ್ಪವೃಕ್ಷದ ಕಾಡು.
ವಚನಗಳು ಒಲವಿನ ಒರತೆ, ಹಣತೆ. ವಚನಗಳನ್ನು ಓದುತ್ತ ಹೋದರೆ ಮನಸ್ಸು ಪ್ರಾಂಜಲಗೊಳ್ಳುತ್ತದೆ. ಕನ್ನಡಿಯಲ್ಲಿ ನಮ್ಮ ಮುಖ ಕಾಣಬೇಕಾದರೆ ಮೊದಲು ಕನ್ನಡಿಯ ಮೇಲಿನ ದೂಳು ಒರೆಸಬೇಕು, ಕನ್ನಡಿಯ ಹಿಂದೆ ಪಾದರಸ ಒರೆಸಿರಬೇಕು, ಕಣ್ಣು ತೆರೆಯಬೇಕು ಅಂದಾಗ ಮಾತ್ರ ಕನ್ನಡಿಯಲ್ಲಿ ನಮ್ಮ ಮುಖ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಯೇ ಕಣ್ಣಿಗೆ ಅಂಟಿಕೊಂಡಿರುವ ನಾನಾ ರೀತಿಯ ಪೊರೆ ಒರೆಸಿಕೊಂಡು ಶರಣರು, ಅನುಭಾವಿಗಳೆಂಬ ವೈದ್ಯರಿಗೆ ತೋರಿಸಿದರೆ, ನಮ್ಮ ಉಡಾಳ ಕಣ್ಣುಗಳು ಢಾಳ, ಢಾಳವಾಗಿ ಕಾಣಬಲ್ಲುವವೋ ಹಾಗೆಯೇ ವಚನಶಾಸ್ತ್ರದ ಓದಿನಿಂದ ಮಾತು ಮಂತ್ರವಾಗಬಲ್ಲುದು. ನಮ್ಮ ನಡೆ ಇತಿಹಾಸವಾಗಬಲ್ಲುದು. ತಿನ್ನುವ ಆಹಾರ ಪ್ರಸಾದವೆನಿಸಬಲ್ಲುದು.
ವಚನಗಳು ಜ್ಞಾನದ ಕಿಡಿಗಳು. ಅನುಭಾವದ ನುಡಿಗಳು. ಶ್ರೀಸಾಮಾನ್ಯರು ಬದುಕಲೆಂದೇ “ಸುಲಿದ ಬಾಳೆಯ ಹಣ್ಣಿನಂದದಿ” ರಚಿಸಿದ ಸಾಹಿತ್ಯ ವಚನ ಸಾಹಿತ್ಯ. ಇದನ್ನು ಓದಿದ ಶಿವಯೋಗಿಗಳು ಅದ್ಭುತವನ್ನು ಸಾಧಿಸಿದ್ದಾರೆ. ಇದನ್ನು ತಿಳಿದ ಹರ್ಡೆಕರ್ ಮಂಜಪ್ಪ, ಫ.ಗು. ಹಳಕಟ್ಟಿ, ಡೆಪ್ಯೂಟಿ ಚನ್ನಬಸಪ್ಪ, ಅರಟರಾಳ ರುದ್ರಪ್ಪ, ಶಿರಸಂಗಿ ಲಿಂಗರಾಜರು, ಬಿ.ಡಿ. ಜತ್ತಿ ಕೂಡ ಪ್ರಾಥಸ್ಮರಣೀಯರೆನಿಸಿದರು.
ಬಸವಣ್ಣನವರ ಹಿರಿಯ ಸಮಕಾಲೀನರಲ್ಲಿ ಸೊಡ್ಡಳದ ಬಾಚರಸ ಕೂಡ ಒಬ್ಬರು. ಇವರೂ ಸೌರಾಷ್ಟ್ರದಿಂದ ಬಂದವರು ಎಂದು ಶೋಧಕರು ಹೇಳುತ್ತಾರೆ. ಇವರು ಬಿಜ್ಜಳನ ಅರಮನೆಯಲ್ಲಿ ಧಾನ್ಯ ಅಳೆದುಕೊಡುವುದರ ಲೆಕ್ಕ ಬರೆಯುವ ಕರಣಿಕ ವೃತ್ತಿಯ ಕಾಯಕಜೀವಿಯಾಗಿರುತ್ತಾರೆ. “ಸೊಡ್ಡಳ” ಅಂಕಿತದಲ್ಲಿ ಇವರು ಬರೆದ ೧೦೪ ವಚನಗಳು ಲಭ್ಯವಿದ್ದು, ಅಲ್ಲಮ, ಸಿದ್ಧರಾಮ, ಮುಕ್ತಾಯಕ್ಕ, ಅಕ್ಕಮಹಾದೇವಿ, ಮರುಳಶಂಕರದೇವ ತಮ್ಮ ವಚನಗಳಲ್ಲಿ ಬಾಚರಸರ ಗುಣಗಾನ ಮಾಡಿದ್ದಾರೆ. ಭೀಮಕವಿಯ ಬಸವ ಪುರಾಣ, ಚನ್ನಬಸವ ಪುರಾಣದಲ್ಲಿ ಇವರ ಪವಾಡ ಸದೃಶ ಕಾರ್ಯಗಳನ್ನು ಮಾಡಿದ್ದಾನೆ ಎಂದು ಬರೆಯುತ್ತಾರೆ.
ಬಸವಣ್ಣನವರು ತಮ್ಮ ಮಹಾಮನೆಯಲ್ಲಿ ಪೂಜೆಗೆ ಕುಳಿತಿರುವಾಗ ಹೊರಗೆ ಅಲ್ಲಮ, ಸಿದ್ಧರಾಮರನ್ನು ಕಾಯಿಸಿರುವುದಕ್ಕೆ ಜಂಗಮರೇ ಬಂದು ನಿಂತಾಗ ನಾನು ಪೂಜೆಗೆ ಕುಳಿತಿರುವುದೇ? ಎಂದು ನೊಂದಿದ್ದರು. ಆ ವೇಳೆಯಲ್ಲಿ ಬಸವಣ್ಣನವರಿಗೆ ಸಾಂತ್ವನ ಹೇಳಿದ, ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣ, ಮಡಿವಾಳ ಮಾಚಿದೇವರೊಡಗೂಡಿ ಉಳಿದ ಶರಣರನ್ನು ಉಳವಿಯವರೆಗೆ ಮುಟ್ಟಿಸಿದ ಕೀರ್ತಿ, ಅಲ್ಲಮ ಮತ್ತೆ ಕಲ್ಯಾಣಕ್ಕೆ ಬರುವ ಮುನ್ಸೂಚನೆ ನೀಡಿದ ಮಹಾಂತರಿವರು.
ಆಕಾರವಿಲ್ಲದ ನಿರಾಕಾರದ ಮಂಟಪಕೆ
ನಿರಾಳವೆಂಬ ಗಂಡ ಬಂದು ಕುಳ್ಳಿರಲು
ಮೂವರು ಹೆಮ್ಮಕ್ಕಳು ಸೇವೆಯ ಮಾಡುವರು
ಇಬ್ಬರು ಸಂಗವ ಮಾಡುತ್ತಿಪ್ಪರು
ಒಬ್ಬಾಕೆ ಪುರುಷನ ನುಂಗಿಕೊಂಡಿಪ್ಪಳು
ಇವರರುವರ ಕೂಡೆ ಹೊಯಿಕೈಯಾಗಿಪ್ಪನ ಕಂಡು
ಆನು ಪ್ರಭುದೇವರೆಂದರಿದು, ಆತನ ನಿಜಪಾದಕ್ಕೆರಗಿ
ಎನ್ನ ಭವವ ಹರಿದೆನು
ಮಹಾದಾನಿ ಸೊಡ್ಡಳನ ಕಂಡ
ಕಡು ಸುಖವನುಪಮಿಸಬಾರದು
ಈ ವಚನದಲ್ಲಿ ಅಲ್ಲಮನ ಶೂನ್ಯ ಪೀಠಾರೋಹಣದ ಜೊತೆಗೆ ಅವರ ಘನ ಮಹಿಮೆಯನ್ನು, ಅಲ್ಲಿ ನಡೆದ ಚರ್ಚೆಯನ್ನು ಕೊಂಡಾಡುವ ಸೊಡ್ಡಳದ ಬಾಚರಸರು, ಅಲ್ಲಮನಿಂದ ಭವದ ಅಜ್ಞಾನ ಕಳೆದುಕೊಂಡು ಇಹದಲ್ಲೇ ಸುಜ್ಞಾನ ಪಡೆದೆ. ಅಲ್ಲಮನ ಕಂಡ ಆ ಪರಮಸುಖವನು ಇನ್ನೊಂದರೊಂದಿಗೆ ಹೋಲಿಸಿ ಹೇಳಲು ಬಾರದು ಎಂದು ತಮ್ಮ ಆತ್ಮತೃಪ್ತಿಯನ್ನು ಹೊರಗೆಡುವುತ್ತಾರೆ.
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ
ಕೊಲ್ಲದಿರ್ಪುದೆ ಧರ್ಮ
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ
ಅಳುಪಿಲ್ಲದಿರ್ಪುದೆ ವ್ರತ
ಇದೆ ಸತ್ಪಥ, ಉಳಿದುದೆಲ್ಲ ಮಿಥ್ಯೆವೆಂದೆ
ಕಾಣಾ ದೇವರಾಯ ಸೊಡ್ಡಳ
ಕೊಲ್ಲದಿರುವುದೆ ಧರ್ಮ, ಅಧರ್ಮದಿಂದ ಬಂದುದನ್ನು ಒಲ್ಲೆ ಎಂದು ಹೇಳುವುದು ನೇಮ, ಆಸೆಯಿಲ್ಲದಿರುವುದೇ ನೇಮ, ಇದುವೇ ಸತ್ಯದ ಪಥ. ಉಳಿದೆಲ್ಲವೂ ಸುಳ್ಳು. ಈ ಸತ್ಪಥದಲ್ಲಿ ಸಾಗುವವರು ಮಾತ್ರ ಶ್ರೇಷ್ಠ ಶಿವಭಕ್ತರು. ಇಷ್ಟಲಿಂಗವೇ ನಮ್ಮ ಆರಾಧ್ಯ ದೈವ ಎಂದೆನ್ನುತ್ತಾರೆ.
ಬೇಗ ಬೇಗನೆ ದೇವ ಕಾರ್ಯ ಮಾಡು
ಆವ ಕಾರ್ಯ ಮಾಡಿದರೂ ಸಾವ ಕಾರ್ಯ ಬಿಡದು
ಬೇಗ ಬೇಗ ಪೂಜಿಸು ಸೊಡ್ಡಳ
“ಸಾವು” ನಮ್ಮನ್ನು ಸದಾ ಹಿಂಬಲಿಸಿರುವಾಗ ಜೀವಿತಾವಧಿಯಲ್ಲಿ ಆದಷ್ಟು ಉತ್ತಮ, ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಶರಣರು ತೋರಿದ ಸತ್ಪಥಲ್ಲಿ ನಡೆಯಬೇಕು. ಅದುವೇ ಮುಕ್ತಿಯ ತಾಣ. ಹೀಗಾಗಿ ತಡ ಮಾಡದೆ “ದೇವನೆಡೆಗೆ ನಮ್ಮ ನಡಿಗೆ” ಇರಲಿ ಎಂದು ಹೇಳುತ್ತಾರೆ. ಶರಣರು ಅಗ್ನಿಯನ್ನು ಸುಟ್ಟವರು, ನೀರನ್ನು ತೊಳೆದವರು. ಅವರ ಹಾದಿ ನಮಗೆ ಆದರ್ಶದ ಪಥವಾಗಬೇಕು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…