ಪುನೀತ್ ರಾಜಕುಮಾರ್ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ. ಬದಲಾಗಿ, ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಸಡನ್ ಡೆತ್ ಎಂದು ಕರೆಯಲಾಗುವ ಹೃದಯ ಸ್ತಂಭನದಿಂದ (Cardiac Arrest). ಸಡನ್ ಡೆತ್ ಘಟಿಸಿದಾಗ ಜೀವ ಉಳಿಸುವುದು ಕಷ್ಟವಾಗುತ್ತದೆ. ಆಸ್ಪತ್ರೆಗೆ ಶೀಘ್ರವಾಗಿ ಕರೆದುಕೊಂಡು ಬಂದಿದ್ದರೆ, ಉಳಿಸಬಹುದಿತ್ತು ಎಂಬುದೆಲ್ಲಾ ನಿಜವಲ್ಲ. ಏಕೆಂದರೆ, ಆಸ್ಪತ್ರೆಯ (Hospital) ಐಸಿಯುನಲ್ಲಿ ಇದ್ದಾಗಲೇ ಹೃದಯ ಸ್ತಂಭನವಾದರೆ ಉಳಿಸುವುದು ಕಷ್ಟವಾಗುತ್ತದೆ. ಪುನೀತ್ ರಾಜಕುಮಾರ್ ಗೆ ಅಂತಹ ಸಡನ್ ಡೆತ್ ಸಂಭವಿಸಿದೆ..!
ಪುನೀತ್ ರಾಜ್‍ಕುಮಾರ್ ಹಠಾತ್ ನಿರ್ಗಮನಕ್ಕೆ ನಿಜ ಕಾರಣವನ್ನು ಹೀಗೆಯೇ ಅರುಹುತ್ತಾರೆ ಡಾ. ರಾಜಕುಮಾರ್ ಅವರ ಕುಟುಂಬದ ವೈದ್ಯ ಹಾಗೂ ದುರಂತದ ದಿನ ಪುನೀತ್ ರಾಜಕುಮಾರ್ ಗೆ ಮೊದಲು ಚಿಕಿತ್ಸೆ ನೀಡಿದ ತಜ್ಞ ವೈದ್ಯ ಡಾ. ರಮಣರಾವ್ ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ಅನಾರೋಗ್ಯದ (Illness) ಹಿನ್ನೆಲೆ ಇರಲಿಲ್ಲ. ಆದರೂ ಮೊನ್ನೆ ಶುಕ್ರವಾರ ಬೆಳಗ್ಗೆ 11.30ಕ್ಕೆ ನಮ್ಮ ಕ್ಲಿನಿಕ್‌ಗೆ (Clinic) ಸುಸ್ತು ಎಂದು ಬಂದಾಗಲೂ ಹೃದಯ ಬಡಿತ (Heartbeat), ರಕ್ತದೊತ್ತಡ (Blood Pressure), ಉಸಿರಾಟ, ಶ್ವಾಸಕೋಶದ ಆರೋಗ್ಯ ಎಲ್ಲವೂ ಸಾಮಾನ್ಯವಾಗಿತ್ತು. ಇಸಿಜಿ(ECG) ಪರೀಕ್ಷೆಯಲ್ಲೂ ಹೃದಯಾಘಾತ ಉಂಟಾಗಿರುವುದು ಕಂಡು ಬಂದಿರಲಿಲ್ಲ. ಆದರೆ, ಹೃದಯಕ್ಕೆ ಆಯಾಸ ಆಗಿರುವುದು ಪತ್ತೆಯಾಗಿತ್ತು.
ಇದು ಮುನ್ನೆಚ್ಚರಿಕೆಯಾಗಿದ್ದರಿಂದ ಸಾರ್ಬಿಟ್ರೇಟ್ (ರಕ್ತನಾಳ ಬ್ಲಾಕ್ ಆಗದಂತೆ) ಮಾತ್ರೆ ನೀಡಿ ತುರ್ತಾಗಿ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದೆ. ಕ್ಲಿನಿಕ್‌ನಿಂದ 7 ನಿಮಿಷಗಳ ಪ್ರಯಾಣದ ಅಂತರದಲ್ಲಿರುವ ಆಸ್ಪತ್ರೆಗೆ ಹೋಗುವ ಮಧ್ಯೆಯೇ ಹೃದಯ ಸ್ತಂಭನವಾಗಿದೆ. ಇದನ್ನು ವೈದ್ಯ ಭಾಷೆಯಲ್ಲಿ ‘ಸಡನ್ ಡೆತ್’ ಎನ್ನುತ್ತಾರೆ. ಹೃದಯ ಸ್ತಂಭನವಾಗಿ ಹೃದಯ ಬಡಿತ ನಿಂತ ಬಳಿಕ ಉಳಿಸುವುದು ಕಷ್ಟ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಅವರ ವೈದ್ಯರು.
‘ಹೃದಯಾಘಾತ (ಹಾರ್ಟ್ ಆಟ್ಯಾಕ್) ಆದರೆ ಹೃದಯದಲ್ಲಿ ನೋವಿರುತ್ತದೆ. ಕೆಲವು ಲಕ್ಷಣಗಳು ಗೋಚರಿಸುತ್ತವೆ. ಉಳಿಸಲು ಸಮಯಾವಕಾಶ ಇರುತ್ತದೆ. ಆದರೆ, ಇದು ಕಾರ್ಡಿಯಕ್ ಅರೆಸ್ಟ್ (ಹೃದಯ ಸ್ತಂಭನ-ಬಡಿತವೇ ನಿಲ್ಲುವುದು). ಈ ಸಮಸ್ಯೆ ಎದುರಾದರೆ ಬದುಕಿಸುವುದು ತುಂಬಾ ಕಷ್ಟ’ ಎಂದೂ ಅವರು ಹೇಳುತ್ತಾರು.
ಐದಾರು ನಿಮಿಷದಲ್ಲಿ ಗತಿಸಿ ಹೋಯಿತು —
ಮೊನ್ನೆ ಶುಕ್ರವಾರ ಬೆಳಗ್ಗೆ 11.30 ಗಂಟೆ ಸುಮಾರಿಗೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ (Ashwini Puneeth Rajkumar) ಇಬ್ಬರೂ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಏನಾಯ್ತು ಅಪ್ಪು ಎಂದು ಕೇಳಿದ್ದಾರೆ ಅವರು. ಆಗ ಸ್ವಲ್ಪ ಸುಸ್ತಾಗುತ್ತಿದೆ ಅಪ್ಪಾಜಿ ಎಂದಿದ್ದಾರೆ ಪುನೀತ್ ರಾಜಕುಮಾರ್. ಬೆವರಿದ್ದ ಅವರನ್ನು ಕಂಡು ಬೆವರು ಏಕೆ ಎಂದು ಕೇಳಿದಾಗ ಆಗ ತಾನೇ ಜಿಮ್, ಬಾಕ್ಸಿಂಗ್ ಮುಗಿಸಿ ಸ್ಟೀಮ್ ಕೂಡ ತೆಗೆದುಕೊಂಡು ಬಂದಿದ್ದೇನೆ. ಹೀಗಾಗಿ ಬೆವರಿದೆ ಎಂದಿದ್ದಾರೆ.
‘ಪರೀಕ್ಷೆ ನಡೆಸಿದಾಗ ರಕ್ತದೊತ್ತಡ (150/92) ಸಾಮಾನ್ಯವಾಗಿತ್ತು. ಇಸಿಜಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರಿಂದ ವಿಕ್ರಂ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿ ಹಿಂಬಾಲಿಸಿದ್ದಾರೆ ಕುಟುಂಬದ ಸದಸ್ಯರು. ಮಾರ್ಗ ಮಧ್ಯೆದಲ್ಲೇ ಹೃದಯ ಸ್ತಂಭನ ಆಗಿತ್ತು. ಬಳಿಕ ಎಷ್ಟೇ ಪ್ರಯತ್ನ ಮಾಡಿದರೂ ಉಳಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ಐದಾರು ನಿಮಿಷಗಳಲ್ಲಿ ಘಟಿಸಿತ್ತು’ ಎಂದು ಬೇಸರ ತೋಡಿಕೊಂಡರು ಅವರು.
‘ಡಾ. ರಾಜ್‌ಕುಮಾರ್ (Dr Rajkumar) ಅವರಿಗೂ ಇದೇ ರೀತಿ ಏಕಾಏಕಿ ಹೃದಯ ಸ್ತಂಭನ ಆಗಿತ್ತು. ಎಲ್ಲರೊಂದಿಗೂ ಆರಾಮವಾಗಿ ಮಾತನಾಡುತ್ತಾ ಸೋಫಾದಲ್ಲಿ ಕುಳಿತವರೇ ಹೃದಯ ಸ್ತಂಭನಕ್ಕೆ ಒಳಗಾದರು. ನನ್ನ ಕೈಗಳಲ್ಲೇ ಕೊನೆಯುಸಿರು ಎಳೆದಿದ್ದರು. ಇದೀಗ ಅಪ್ಪು ರಾಜಕುಮಾರ್ ಗೂ ಅದೇ ರೀತಿ ಆಗಿದೆ’ ಎಂದು ಬೇಸರದಿಂದ ಹೇಳಿದರು ಅವರು.
ಪುನೀತ್ ರಾಜಕುಮಾರ್ ಫಿಟ್ ಅಂಡ್ ಫೈನ್ ಇದ್ದರು–
‘ಪುನೀತ್ ರಾಜಕುಮಾರ್ ರ ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಚೆನ್ನಾಗಿತ್ತು. ಯಾವುದೇ ಅನಾರೋಗ್ಯದ ಹಿಸ್ಟರಿ ಇರಲಿಲ್ಲ. ಬೆರಳು ತೋರುವ ಯಾವ ಚಟವೂ ಇರಲಿಲ್ಲ. ತುಂಬಾ ಪಾಸಿಟಿವ್ ಯೋಚನೆ ಹೊಂದಿದ್ದ ವ್ಯಕ್ತಿ ಅವರು. ಅವರಿಗೇ ಈ ರೀತಿ ಆಗುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೇಹ ದಂಡನೆ, ವ್ಯಾಯಾಮ, ಆರೋಗ್ಯ ಕಾಳಜಿ ಜಾಸ್ತಿಯೇ ಇತ್ತು. ಆರೋಗ್ಯದ ವಿಚಾರದಲ್ಲಿ ಎಂದೂ ನಿರ್ಲಕ್ಷ್ಯ ಮಾಡಿದವರಲ್ಲ. ಇದು ‘ಸಡೆನ್ ಡೆತ್. ಇದಕ್ಕೆ ಕಾರಣ ಹುಡುಕಲಾಗದು’ ಎಂದರು ಅವರ ವೈದ್ಯರು.ಅನಗತ್ಯ ಬಾಡಿ ಬಿಲ್ಡ್ ಬೇಡ ಅಂದಿದ್ದರು ಡಾ. ರಮಣರಾವ್ —
ಮಿತಿ ಮೀರಿದ ವ್ಯಾಯಾಮ ಹಾಗೂ ಬಾಡಿ ಬಿಲ್ಡ್‌ನಿಂದ ಹೃದಯದ ಆರ್ಟರಿ ರಪ್ಚರ್ ಆಗಬಹುದು. ಇದರಿಂದ ರಕ್ತ ಕ್ಲಾಟ್ ಆಗಿ ಗಂಟೆಯಲ್ಲಿ ಪೂರ್ತಿ ಬ್ಲಾಕ್ ಆಗಬಹುದು. ದೇಹಕ್ಕೆ ವ್ಯಾಯಾಮ ಅಗತ್ಯ. ಆದರೆ, ಅನಗತ್ಯ ಬಾಡಿ ಬಿಲ್ಡ್ ಮಾಡುವುದು ಬೇಡ. ವಯಸ್ಸಿನಲ್ಲಿದಾಗ ಇದು ಚೆನ್ನಾಗಿಯೇ ಕಾಣುತ್ತದೆ. ಆದರೆ 40 ವರ್ಷ ದಾಟಿದ ಬಳಿಕ ಹೃದಯಕ್ಕೆ ಅನಗತ್ಯ ಭಾರವಾಗುತ್ತದೆ. ಮಾಂಸ ಖಂಡಗಳಿಗೆ ರಕ್ತ ಪೂರೈಸಬೇಕಿರುವುದು ಹೃದಯ. ಅನಗತ್ಯ ಮಾಂಸಖಂಡಗಳಿಂದ ಹೃದಯಕ್ಕೆ ಒತ್ತಡ ಹೆಚ್ಚಾಗುತ್ತದೆ ಎಂದೂ ಡಾ.ರಮಣರಾವ್ ಸಲಹೆ ನೀಡಿದ್ದರು.
ಒಟ್ಟಾರೆ ಹೀಗೆಯೇ ಸಾವನ್ನು ಆವ್ಹಾನಿಸಿಕೊಂಡರು ಪುನೀತ್ ರಾಜಕುಮಾರ್. ಆಯಿತು ಒಂದು ತೀರಾ ದುಃಖಕರ ಘಟನೆ ನಡೆಯಿತು. ಇರಲಿ. ಆದರೆ…
ಹೋಗಲಿ ಸಾವಿಲ್ಲದ ಮನೆಯ ಸಾಸವಿಕಾಳು ತನ್ನಿ ಅಂದಿದ್ದ ಗೌತಮ್ ಬುದ್ದ —
ಸಾವಿಲ್ಲದ ಮನೆಯ ಸಾಸಿವೆಯ ತನ್ನಿರಿ ಅಂದಿದ್ದ ಬುದ್ಧನೂ…!
ಸಾವು-ನೋವಿನ ಸಹಜ ದುಃಖದ ಹೊತ್ತನ್ನೂ ವಂಚಿಸುವ ಸಂಚಿನ ಕರ್ಮ ಸಿದ್ಧಾಂತದ ಬೇರನ್ನು ಅಲುಗಾಡಿಸಿದವರು ವಚನಕಾರರು.
ಆವ ಕಾಯಕವಾದರೂ ಸ್ವಕಾಯಕವ ಮಾಡಿಕೊಂಡಿರಬೇಕು
ಬೇನೆ ಬಂದಡೆ ಒರಲು ಸಾವು ಬಂದಡೆ ಸಾಯಿ.ಇದಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮೇಶ್ವರ.
ದೊಡ್ಡ ದಾವಖಾನೆ. ನಾನು ಕುಳಿತ ಹೊಳೆವ ಬೆಂಚಿನಿಂದ ಸ್ವಲ್ಪ ದೂರದಲ್ಲಿ ಆಧುನಿಕ ರೀತಿಯ ಕಸಗುಡಿಸುವ ಯಂತ್ರವೊಂದು ನೆಲದ ಕಸವನ್ನೆಲ್ಲ ನುಂಗುತ್ತ ಎಷ್ಟೊಂದು ದು:ಖಿಗಳ ಟಪಗುಟ್ಟಿದ ಕಣ್ಣೀರ ಹನಿಗಳನ್ನು ಒರೆಸಿ ಇಲ್ಲವಾಗಿಸುತ್ತಿತ್ತು. ಸಾವಿನ ದವಡೆಯಿಂದ ಉಳಿಸಲೆಂದು ಬಂದವರು ಹೈರಾಣಾಗಿ ಹನಿಸಿದ ಕಣ್ಣೀರು. ಸಾವಿಲ್ಲದ ಮನೆಯ ಸಾಸಿವೆ ತಂದಂತೆ ಬೀಗುತ್ತಿರುವ ಕಾರ್ಪೋರೆಟ್ ಆಸ್ಪತ್ರೆಯು ರೋಗಿಗಳನ್ನು ಒಳಸೆಳೆದುಕೊಳ್ಳುತ್ತಿತ್ತು.
ಆದರೇನು, ಅಂಥ ಸಾಸಿವೆ ಸಿಗಲು ಸಾಧ್ಯವೇ ಇಲ್ಲವೆಂದ ಬುದ್ಧನ ಮಾತೇ ಸತ್ಯವಾಗಿ, ಜೀವ ಕಳಕೊಂಡವರ ಬಂಧು-ಬಳಗದವರು ಕಣ್ಣೀರ ಕಡಲಾಗಿಯೇ ಹೊರ ಹೋಗುತ್ತಿದ್ದರು. ಆಸ್ಪತ್ರೆಯ ಅಂಗಳದ ತುಂಬ ನಾನಾ ನಮೂನೆಯ ಜನಸಂದಣಿ. ರೋಗ ಗುಣವಾದರೆ ವೈದ್ಯರನ್ನೂ ದೇವರನ್ನೂ ನಮಿಸುವವರು. ಪುಣ್ಯ ಮಾಡಿದ್ದಕ್ಕೆ ಉಳಿದರೆಂದು ನಂಬಿ ಆಸ್ಪತ್ರೆಯ ಅಂಗಳದಲ್ಲಿಯೇ ಇರುವ..!
ದೇವರ ಮೂರ್ತಿಗೆ ಕೈ ಮುಗಿಯುವವರು. ಜೀವ ಉಳಿಯದೇ ಇದ್ದಾಗ ಅವರ ದು:ಖಕ್ಕೆ ಪಾರವೇ ಇಲ್ಲ. ಹೇಗೆ ಸಂತೈಸುವುದು? ಅಕಟಕಟಾ ಶಬ್ದದ ಲಜ್ಜೆ ನೋಡಾ…
ಸಂತೈಸಲು ಅಕ್ಷರವೂ ಶಬ್ದಗಳೂ ಸಿಗುತ್ತಿಲ್ಲವೇ?..! — ”
“ಸಾಕಾಗುತ್ತಿಲ್ಲವೇ? ಭಾವುಕತೆಯ ಮೇರು ಹಂತದಲ್ಲಿ ತಂತಾನೇ ನುಗ್ಗಿ ಬರುವ ಮಾತುಗಳು, ಏನ್ ಮಾಡಾದು ಆಯುಷ್ಯ ಇಷ್ಟೇ ಇತ್ತು, ಹಣಿಬಾರ ಇದ್ದಂಗ ಆಗತದ, ಸುಮ್ನಿರು, ದೇವ್ರ ಮನಸಿಗಿ ಬರಲಿಲ್ಲ, ಹಿಂದಿನ ಕರ್ಮ ಇತ್ತೇನೋ, ಡಾಕ್ಟರರೇ ಏನ್ ಮಾಡತಾರ? ನಮದೇ ದೈವ ಖೊಟ್ಟಿ ಇದ್ದರ…”
ಬಡವರು ಶ್ರೀಮಂತರು ಎಂಬ ಭೇದ-ಭಾವವನ್ನೂ ಮೀರಿ ಈ ಸಮಾಧಾನದ ಮಾತುಗಳು ಹರಿದಾಡುತ್ತಿದ್ದವು. ಬದಲಾಗುತ್ತಿರುವ ಆರ್ಥಿಕ ಸಂಬಂಧಗಳು, ಕೌಟುಂಬಿಕ ಪರಿಸ್ಥಿತಿ, ಜವಾಬ್ದಾರಿಗಳು, ಭಾವನಾತ್ಮಕ ಒಡನಾಟದ ಮೇಲೆ ನಿರ್ಭರವಾದ ಅವರ ದು:ಖವು ಕಡೆಯಲ್ಲಿ ಮುಗಿಲಿಗೆ ಕೈಚಾಚಿ ದೇವರ ಮೇಲೆ ಭಾರ ಹಾಕುವಲ್ಲಿ ವ್ಯಸ್ಥವಾಗುತ್ತಿತ್ತು. ಅರೆ, ಎಷ್ಟು ಸರಳವಾಗಿ ದೈವ-ದೇವರು-ಪುನರ್ಜನ್ಮ, ಹೀಗೆಯೇ ಕರ್ಮಸಿದ್ದಾಂತವು ನಮ್ಮ ಭಾವುಕತೆಯ ಎಳೆ ಹಿಡಿದು ಬಂದೇ ಬಿಡುವುದು? ಗೆಳೆಯ ಹೇಳುತ್ತಿದ್ದ, ‘ನೋಡು, ದು:ಖಿಗಳಿಗೆ ಸಂತೈಸಲು ನಮ್ಮಲ್ಲಿ ಪರ್ಯಾಯವೇ ಇಲ್ಲ…’
‘ಮುಗ್ದರು ದೇವರ ಮೇಲೆ ಭಾರ ಹಾಕಿ ದು:ಖ ಮರೆಯುವರು. ನಮಗೆ ಅದೂ ಸಾಧ್ಯವಿಲ್ಲ..’ ಎಂದು. ಮನಸು ಒಪ್ಪಲಿಲ್ಲ.
ಎಲ್ಲವನ್ನೂ ಪರದೈವಕ್ಕೆ ಆರೋಪಿಸುವ ಮೂಲಕ ವಾಸ್ತವದ ವೈಜ್ಞಾನಿಕ ಆಲೋಚನಾ ಕ್ರಮಗಳಿಗೆ ನಿಷೇಧವೆನ್ನುವಂಥ ವಾತಾವರಣ ಸಷಿಯಾಗುವುದೇನೋ ಹೌದು. ಆದರೆ ಪರ್ಯಾಯದ ಸಂತೈಸುವಿಕೆಗಳು ಬಹಳಷ್ಟು ಇವೆ. ಅವೆಲ್ಲವೂ ಉದ್ದೇಶಪೂರ್ವಕವಾಗಿಯೇ ನೇಪಥ್ಯಕ್ಕೆ ತಳ್ಳುವಂಥ ಸಾಂಸ್ಕೃತಿಕ ರಾಜಕಾರಣವೊಂದು ತಣ್ಣಗೆ ನಡೆಯುತ್ತಲೇ ಇರುವುದೂ ಹೌದು.
ಸಾವು, ನೋವು, ರೋಗಗಳಂಥ ಸಂದರ್ಭದಲ್ಲಿಯಂತೂ ಕರ್ಮಸಿದ್ಧಾಂತವು ಭಾವುಕ ನೆಲೆಯೊಳಗೆ ಹಾಸು-ಹೊಕ್ಕಾಗಿ ಬೆರೆತು ಜನತೆಯನ್ನು ದಿಕ್ಕು ತಪ್ಪಿಸುತ್ತಿರುತ್ತದೆ. ಆದರೆ ಭಾವುಕ ವಿಚಾರಧಾರೆಯೊಂದಿಗೆ ಭೌತವಾದಿ ಚಿಂತನಾ ವಿಧಾನಗಳೂ ನಿರಂತರ ಸಂಘರ್ಷ ನಡೆಸಿವೆ. ಹಲವು ತತ್ವಜ್ಞಾನಗಳು ಪರ್ಯಾಯ ವಿಚಾರಗಳನ್ನು ದಾಖಲಿಸುತ್ತ ಬಂದಿವೆ.
ವಿಭಿನ್ನ ನೆಲೆಯ ತಾರ್ಕಿಕ ವಿಚಾರಧಾರೆಗಳು ಹರಿದು ಬಂದಿವೆ. ಅವುಗಳು ಜನತೆಯ ಬದುಕಿನ ನಡೆಯ ಸಾಂಸ್ಕೃತಿಕ ಪಲಕುಗಳಾವೆ. ಅವೆಲ್ಲವೂ ಶ್ರಮಸಂಸ್ಕೃತಿಯ ನಂಬಿಕೆಗಳಾಗಿವೆ. ಏಕೆಂದರೆ ಶ್ರಮಿಕರು ತಮ್ಮ ಉತ್ಪಾದನಾ ಸಾಧನಗಳು ಮತ್ತು ಸಂಬಂಧಗಳೊಂದಿಗೆ ಸಾಂಸ್ಕೃತಿಕ ರೀತಿರಿವಾಜುಗಳನ್ನು ರೂಪಿಸಿ-ರೂಢಿಸಿಕೊಂಡಿರುವವರು.
ಆದ್ದರಿಂದಲೇ ವೈದಿಕ-ಸನಾತನ ಮೌಢ್ಯಕ್ಕೆ ಪರ್ಯಾಯವಾದ ನಂಬಿಕೆಗಳು ಆಚರಣೆಗಳು ಇದ್ದೇ ಇವೆ. ಯಾರಿಗಾದರೂ ಬೇನೆ ಬಂದರೆ ‘ಇರಲಿ ಬಿಡು, ರೋಗ ಮನುಷ್ಯರಿಗೆ ಬಾರದೇ ಮರಕ್ಕೆ ಬರುವುದೇ?’ ಎಂದು ಸಂತೈಸುವರು. ಮರಕ್ಕೂ ಬರಬಹುದು. ಆದರೆ ಮನುಷ್ಯರಿಗೆ ಬಂದ ರೋಗವನ್ನು ಎದುರಿಸಲು ಧೈರ್ಯ ತುಂಬುವ ಸಂತೈಸುವ ರೀತಿ ಮೌಢ್ಯವನ್ನು ಧಿಕ್ಕರಿಸುವ ನೆಲೆಯದ್ದು ಎಂಬುದು ಪ್ರಮುಖವಾದದ್ದು. ಹೀಗೆಯೇ ಅನೇಕಾನೇಕ ಪರ್ಯಾಯ ನಂಬಿಕೆಗಳು ಸಿಕ್ಕೇ ಸಿಗುವವು.
ವಚನಕಾರರು, ಸೂಫಿಗಳು, ತತ್ವಪದಕಾರರು ಕರ್ಮಸಿದ್ಧಾಂತದ ತಾತ್ವಿಕ ನಿಲುವುನ್ನು ಅಮೂಲಾಗ್ರವಾಗಿ ಖಂಡಿಸಿದವರು. ಮಾತ್ರವಲ್ಲ. ಇದೇ ಹೊತ್ತಿನಲ್ಲಿ ಪರ್ಯಾಯವನ್ನು ಕಟ್ಟಿಕೊಟ್ಟವರು. ಮನುಷ್ಯರು ಜೀವನದಲ್ಲಿ ಹೆದರುವುದು ಮುಪ್ಪು ರೋಗ ಮತ್ತು ಬೇನೆಗೆ. ಇಷ್ಟಕ್ಕೂ ಮೀರಿ ಸಾವಿಗೆ. ಸಾವೆಂಬುದು ಬದುಕಿನ ಸತ್ಯವೇ ಆದರೂ ಅದನ್ನು ಸ್ವೀಕರಿಸುವ ಮನಸ್ಥಿತಿ ಕಷ್ಟ ಸಾಧ್ಯವಾಗಿದೆ. ನೋವಿನ ಚುಂಗು ಹಿಡಿದು ಇದ್ದಕ್ಕಿದ್ದಂತೆ ಕಳ್ಳನಂತೆ ಕ್ರೌರ್ಯವಾಗಿ ಎರಗುವ ಕೆಲವು ಸಾವುಗಳು ಮನುಷ್ಯರನ್ನು ಧೃತಿಗೆಡಿಸುತ್ತವೆ.
ಆಪ್ತರ ಸಾವು-ನೋವು ಯಾರಿಗೆ ಕಂಗೆಡಿಸುವುದಿಲ್ಲ ಹೇಳಿ? ಅಪಾರ ದು:ಖವನ್ನು ತಂದುಕೊಡುವ ಸಾವು ಭಯವನ್ನು ಹುಟ್ಟು ಹಾಕುತ್ತದೆ. ಭಯದಿಂದ ಬಿಡುಗಡೆ ಪಡೆಯಲು ಅಸಹಾಯಕತೆಯಿಂದ ಕಾಣದ ದೈವಕ್ಕೆ ಮೊರೆ ಹೋಗುವರು. ಅಂಥ ಹೊತ್ತಿನಲ್ಲಿ ಕಡಕೋಳ ಮಡಿವಾಳಪ್ಪನಂಥ ತತ್ವಪದಕಾರರು ‘ಮರಣ ಬಂದರೇನೂ ಸಿಟ್ಟಿಲ್ಲ, ಮಹಾ ತಿಳಿದ ಮಹಾತ್ಮರಿಗೆ ಬಿಟ್ಟಿಲ್ಲ’ ಎಂದು ಹೇಳಿ ಮರಣದ ಬಗ್ಗೆ ಇರುವ ಭಯವನ್ನು ತಳ್ಳಿ ಹಾಕುವರು.
ವಚನಕಾರರೂ ಮರಣವನ್ನು ಮಹಾನವಮಿಯೆಂದು ಆಹ್ವಾನಿಸುತ್ತಾರೆ. ಸಾವು ಮತ್ತು ಬೇನೆಯ ಹೊತ್ತಿನಲ್ಲಿ ಇನ್ನಷ್ಟು ಭಾವುಕಗೊಳಿಸಿ ಸನಾತನ ನಂಬಿಕೆಗೆ ಶರಣಾಗಿಸುವಂತೆ ಮಾಡುವ ಪ್ರಕ್ರಿಯೆಗಳನ್ನು ಅತ್ಯಂತ ನಿಜದ ನೆಲೆಯಲ್ಲಿ ನಿಷ್ಠುರವಾಗಿಯೇ ಒಡೆಯುವ ವಚನಕಾರ ಲದ್ದೆಯ ಸೋಮಣ್ಣ ಸಾವು-ಬೇನೆ ಬಂದರೆ ಅದಕ್ಕೆ ಅಷ್ಟೆ ಸಹಜವಾಗಿ ಪ್ರತಿಕ್ರಿಯಿಸು ಅದಕ್ಕೆ ದೇವರ ಹಂಗೇಕೆ ಎಂದು ಪ್ರಶ್ನಿಸುತ್ತಾರೆ.
ಮನುಷ್ಯರನ್ನು ತಲ್ಲಣಕ್ಕೆ ಒಡ್ಡುವ, ಇಚ್ಛಾಶಕ್ತಿ ಕುಗ್ಗಿಸುವ, ಭಯದಿಂದ ತತ್ತರಿಸುವಂತೆ ಮಾಡುವ ಸಾವು ಮತ್ತು ಬೇನೆಯನ್ನು ಎದುರಿಸಲಿಕ್ಕಾಗಿ ವಚನಕಾರರು ವೈಚಾರಿಕ ತಿಳುವಳಿಕೆಯ ಜರೂರಿಯನ್ನು ಮನದಟ್ಟು ಮಾಡುವರು. ದೇವರು-ದೈವದ ಹಂಗನ್ನೇ ಧಿಕ್ಕರಿಸಿ ನಿಸರ್ಗ ಸಹಜವಾಗಿ ಬದುಕುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಗಟ್ಟಿಯಾದ ಭೌತಿಕ ನೆಲೆಯನ್ನು ಒದಗಿಸುವರು.
‘ಆವ ಭಯವು ಇನ್ನೇನವಗ ಮರಣವೇ ಮಹಾನವಮಿ ಆದವಗ’ ಎನ್ನುವ ತತ್ವಪದಕಾರರು ಬದುಕನ್ನು ಮೌಢ್ಯದ ಗುಲಾಮಗಿರಿಯಿಂದ ಬಿಡಿಸಿ ಸ್ವಾಭಿಮಾನಿ ಜೀವನದ ಮಹತಿಯನ್ನು ಎತ್ತಿ ಹಿಡಿಯುವರು. ಇದೇ ಹೊತ್ತಿನಲ್ಲಿ ಬಸವಣ್ಣನ ವಚನವು ನಮ್ಮನ್ನು ತೀವ್ರ ವಿಚಾರವಾದದತ್ತ ಸೆಳೆದು ಪ್ರಖರ ಮಾನವೀಯ ಮಿಡಿತದ ಭಾವಸಹಿತ ಭೌತವಾದಿಗಳನ್ನಾಗಿ ರೂಪಿಸುವುದು. ಬರುವ ಸಮಸ್ಯೆಗಳನ್ನು ಎದುರಿಸಲು ಮನಸನ್ನು ಸಜ್ಜುಗೊಳಿಸುವುದು.
‘ಸುಖ ಬಂದಡೆ ಪುಣ್ಯದ ಫಲವೆನ್ನೆನು
ದು:ಖ ಬಂದಡೆ ಪಾಪದ ಫಲವೆನ್ನೆನು
ನೀ ಮಾಡಿದಡಾಯಿತೆಂದೆನ್ನೆನು. ಕರ್ಮಕ್ಕೆ ಕರ್ತವೇ ಕಡೆಯೆಂದೆನ್ನೆನು
ಉದಾಸೀನವಿಡಿದು ಶರಣೆನ್ನೆನು ಕೂಡಲ ಸಂಗಮದೇವ
ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ ಸಂಸಾರ ಸವೆಯೇ ಬಳಸುವೆನು’.
ಸಾವು-ನೋವನ್ನು ನಿಗೂಢೀಕರಿಸಿ ಮನುಷ್ಯರ ಸಹಜ ದು:ಖದ ಹೊತ್ತನ್ನೂ ವಂಚಿಸುವ ಸಂಚು ಹೊಂದಿದ ಕರ್ಮಸಿದ್ಧಾಂತದ ಬೇರನ್ನು ಅಲುಗಾಡಿಸಿದವರು ವಚನಕಾರರು. ಹಾಗೆಯೇ ನೋಡಿದರೆ ಗೌತಮಿಗೆ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ದ ಸಹ ಧೀರ ಬದುಕಿಗೆ ಬೆಳಕಾಗಿದ್ದ.
ವೈಜ್ಞಾನಿಕ ಚಿಂತನೆಯ ಅರಿವೆಂಬ ಉಪದೇಶ ಪಡೆದವರು ಸುಖ ದು:ಖದ ಮೂಲ ಚೂಲವನ್ನು ಬಗೆದು ಕಾರಣಗಳನ್ನು ಗುರುತಿಸಿ ಮುನ್ನಡೆದಲ್ಲಿ ಸಾವನ್ನೂ ನೋವನ್ನೂ ಜೈಸಲು ಮನಸು ಸಿದ್ದವಾಗುವುದು-ಸಾಧ್ಯವಾಗುವುದು. ಸಾವಿನ ತಲೆ ಸವರುತ್ತಲೇ ನಿಸರ್ಗದ ಕುತೂಹಲವನ್ನು ಬಗೆಯುವ ಮಾನವರ ಪ್ರಜ್ಞೆಯು ನಿರಂತರ ಅನ್ವೇಷಣೆಯ ಗುಣ ಹೊಂದಿದೆ. ಸಾಹಸಮಯ ಮಾನವ ಪ್ರವತ್ತಿಯನ್ನು ಹಿಮ್ಮೆಟ್ಟಿಸುವ ಕರ್ಮಸಿದ್ಧಾಂತವು ಬದುಕಿನ ಎಲ್ಲ ಹಂತದಲ್ಲಿಯೂ ನಿಷೇಧಕ್ಕೆ ಅರ್ಹವಾದದ್ದಾಗಿದೆ.
ಹೀಗಾಗಿಯೇ ಈ ಹಿನ್ನೆಲೆಯಲ್ಲಿಯೇ ಪುನೀತ್ ರಾಜಕುಮಾರ್ ನ ಸಾವನ್ನೂ ನಾವು ನೋಡಬೇಕು ಅಂತ ಹೇಳುತ್ತಾ ಈ ಲೇಖನವನ್ನು ಮುಗಿಸುತ್ತೇನೆ..!
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…