ಕಲಬುರಗಿ: ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಅಂಗವಾಗಿ ಶನಿವಾರ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಮಾ ಪ್ರಕರಣ, ರಸ್ತೆ ಅಪಘಾತ, ಕೌಟುಂಬಿಕ, ಸಿವಿಲ್ ಸೇರಿದಂತೆ ಇನ್ನಿತರ ಪ್ರಕರಣಗಳ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಲಯವು ರಾಜಿ ಸಂಧಾನದ ಮೂಲಕ 327 ಪ್ರಕರಣಗಳನ್ನು ಇತ್ಯರ್ಥಪಡಿಸಿ 6.41 ಕೋಟಿ ರೂ. ಗಳ ಪರಿಹಾರ ಮೊತ್ತ ಪಾವತಿಸುವಂತೆ ಆದೇಶ ನೀಡಿದೆ.
ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್ ಹಾಗೂ ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ಅವರುಗಳ ಏಕ ಸದಸ್ಯ ಪೀಠವು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿತು.
ರಾಷ್ಟ್ರೀಯ ಲೋಕ ಅದಾಲತ್ ನಿಮಿತ್ಯ ಕಳೆದ ಜುಲೈ ೧ ರಿಂದ ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಇಂದು ಅಂತಿಮವಾಗಿ ಆದೇಶ ಪ್ರಕಟಿಸಿದ್ದರು. ಲೋಕ ಅದಾಲತ್‌ನಲ್ಲಿ ದಾಖಲಾದ ಒಟ್ಟಾರೆ ೪೫೨ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ೩೨೭ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಇದರಲ್ಲಿ ವಾಹನ ಅಫಘಾತದ ೩೨೧ ಪ್ರಕರಣಗಳಲ್ಲಿ ೬,೪೧,೫೧,೬೧೦ ರೂ. ಪರಿಹಾರ ಮೊತ್ತ ಪಾವತಿಸುವಂತೆ ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಆದೇಶ ಮಾಡಿದೆ. ೩ ಸಿವಿಲ್ ಪ್ರಕರಣಗಳು, ೧ ರಿಟ್ ಪಿಟಿಷನ್ ಸೇರಿದಂತೆ ೨ ವಿಚ್ಚೇದನ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿ ಸತಿ-ಪತಿಗಳನ್ನು ನ್ಯಾಯಲಯವು ಒಂದು ಮಾಡಿದೆ.
ದಾಖಲೆ ಪ್ರಮಾಣದಲ್ಲಿ ಪ್ರಕರಣಗಳ ಇತ್ಯರ್ಥ:- ಅದಾಲತ್‌ನಲ್ಲಿ ದಾಖಲಾದ ಪ್ರಕರಣಗಳ ಕುರಿತು ತೀರ್ಪು ನೀಡುವ ಮುನ್ನ ವಕೀಲರು ಮತ್ತು ಕಕ್ಷಿದಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಲೋಕ ಅದಾಲತ್ ಅಂಗವಾಗಿ ಕಲಬುರಗಿ ಪೀಠದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಪಟ್ಟು ಹೆಚ್ಚಿನ ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದರು.
ರಾಜಿ ಸಂಧಾನ ಮೂಲಕ ಶೀಘ್ರವಾಗಿ ನ್ಯಾಯ ಒದಗಿಸುವುದೇ ಮೆಗಾ ಅದಾಲತ್ ಮುಖ್ಯ ಉದ್ದೇಶವಾಗಿದೆ. ತಾವು ಕಳೆದ ಆರೂವರೆ ವರ್ಷದಿಂದ ಈ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿ ರಾಜಿ ಸಂಧಾನದ ಇತ್ಯರ್ಥಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳು ಮೆಗಾ ಅದಾಲತ್‌ಗೆ ಸಹಕಾರ ನೀಡಿದ ನ್ಯಾಯವಾದಿಗಳಿಗೆ ಮತ್ತು ಕಕ್ಷಿದಾರರಿಗೆ ಅಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ವಿ.ಅಸೋಡೆ, ನ್ಯಾಯಿಕ ರಿಜಿಸ್ಟ್ರಾರ್ ಶ್ರೀನಿವಾಸ ಸುವರ್ಣಾ, ಕಲಬುರಗಿ ಹೈಕೋರ್ಟ್ ಪೀಠದ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಗೋಮತಿ ರಾಘವೇಂದ್ರ, ಹೈಕೋರ್ಟ್ ಘಟಕದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣ್ಣಿ, ಉಪಾಧ್ಯಕ್ಷ ಸುಧೀರ ಸಿಂಗ್ ವಿಜಯಪುರ, ಕಾರ್ಯದರ್ಶಿ ಬಿ.ಸಿ.ಜಾಕಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ನ್ಯೂ ಇಂಡಿಯಾ ಇನ್ಶುರೆನ್ಸ್, ಓರಿಯಂಟಲ್ ಇನ್ಸೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್, ಎನ್.ಇ.ಕೆ.ಆರ್.ಟಿ.ಸಿ. ಅಧಿಕಾರಿಗಳು, ಹೈಕೋರ್ಟ್ ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ಅಂಗವಾಗಿ ಕಳೆದ ಜುಲೈ ೧ ರಿಂದ ರಾಜಿ ಸಂಧಾನದ ಮೂಲಕ ವಿವಿಧ ಬಗೆಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ ಶನಿವಾರ ಸತಿ-ಪತಿಗಳ ವಿಚ್ಚೇದನದ ಎರಡು ಪ್ರಕರಣಗಳಲ್ಲಿ ಗುರುರಾಜ ಮತ್ತು ಅಶ್ವಿನಿ @ ಅಂಬಿಕಾ ಹಾಗೂ ಶಂಕರ ಮತ್ತು ದ್ರೌಪತಿ ದಂಪತಿಗಳು ಒಂದಾದರು. ಅಪರೂಪದ ಪ್ರಕರಣಕ್ಕೆ ನ್ಯಾಯ ದೇಗುಲ ಸಾಕ್ಷಿಯಾಯಿತು.
ಕಲಬುರಗಿ ಮೂಲದ ಗುರುರಾಜ ಮಲ್ಲೇಶಪ್ಪ ಧುಮಲೆ ಅವರು ತಮ್ಮ ಪತ್ನಿ ಅಶ್ವಿನಿ @ ಅಂಬಿಕಾದಿಂದ ವಿಚ್ಛೇದನ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ಭೂಪಾಲ ತೆಗನೂರ ನಿವಾಸಿ ದ್ರೌಪತಿ ಗಂಡ ಶಂಕರ ಅಂತರಗಂಗಿ ಅವರು ಕುಟುಂಬ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಎರಡು ಪ್ರಕರಣಗಳನ್ನು ಅದಾಲತ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ನೇತೃತ್ವದ ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್, ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ಒಳಗೊಂಡ ಪೀಠವು ಸತಿ-ಪತಿಗಳಿಗೆ ಬುದ್ದಿ ಮಾತು ಹೇಳಿ ಒಂದಾಗಿ ಸಂಸಾರ ನಡೆಸುಂತೆ ಬುದ್ದಿವಾದ ಹೇಳಿದರು. ನ್ಯಾಯಾಧೀಶರುಗಳ ಬುದ್ದಿ ಮಾತಿಗೆ ಸಹಮತ ವ್ಯಕ್ತಪಡಿಸಿದ ಜೋಡಿಗಳು ಸಂತೋಷದಿಂದಲೆ ನ್ಯಾಯಾಧೀಶರ ಸಮಕ್ಷಮ ಪರಸ್ಪರ ಹೂಮಾಲೆ ಬದಲಾಯಿಸಿಕೊಂಡು ಸಿಹಿ ಹಂಚಿಕೊಂಡರು. ಈ ಮೂಲಕ ಪ್ರಕರಣವು ಸುಖಾಂತ್ಯ ಕಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಕುಟುಂಬ ನ್ಯಾಯಾಲಯದಲ್ಲಿ ಹಲವು ಜೋಡಿಗಳು ಬೇರೆಯಾಗುವದನ್ನು ನಾವು ಕಂಡಿದ್ದೇವೆ. ಅದಕ್ಕೆ ತದ್ವಿರುದ್ಧವಾಗಿ ಇಂದು ಎರಡು ಜೋಡಿಗಳು ನ್ಯಾಯಾಲಯದಲ್ಲಿ ಸಂತೋಷದಿಂದ ಒಂದಾಗಿವೆ. ಪರಸ್ಪರ ಸಂಸಾರ ಮಾಡಿಕೊಂಡು ಹೋಗುವುದಾಗಿ ಒಪ್ಪಿದ್ದರಿಂದ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕು ಬೇರೆಯಾಗುವ ವಿಚಾರಗಳು ನಿಮ್ಮಲ್ಲಿ ಮೂಡಬಾರದು. ಯಾವುದೇ ಸಮಸ್ಯೆಗಳಿದ್ದರು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ನಿಮ್ಮಗಲ್ಲವಾದರು ನಿಮ್ಮ ಮಕ್ಕಳಿಗೋಸ್ಕರ ಬದುಕು ಸಾಗಿಸಿ ಹಾಗೂ ಸುಂದರ ನಿಮ್ಮದಾಗಲಿ ಎಂದು ಶುಭಹಾರೈಸಿ ಜೋಡಿಗಳಿಗೆ ಸಿಹಿಯನ್ನು ನೀಡಿದರು.
ತಂದೆ-ತಾಯಿಯನ್ನು ಸಿಹಿ ತಿನ್ನಿಸಿದ ಮಗ:- ಕೂಲಿ ಕೆಲಸ ಮಾಡುವ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶಂಕರ ರಾಯಪ್ಪ ಅಂತರಗಂಗಿ ಅವರು ಭೂಪಾಲ ತೆಗನೂರ ಗ್ರಾಮದ ದ್ರೌಪತಿ ಅವರೊಂದಿಗೆ ವಿವಾಹ ಮಾಡಿಕೊಂಡು ೧೧ ವರ್ಷದ ನಂತರ ಕೌಟುಂಬಿಕ ಕಾರಣವೊಡ್ಡಿ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕುಟುಂಬ ನ್ಯಾಯಲಯವು ಇವರಂತೆ ತೀರ್ಪು ನೀಡಿತು. ಸ್ಥಳೀಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿ ದ್ರೌಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ೯ ವರ್ಷದ ವೈವಾಹಿಕ ಜೀವನಕ್ಕೆ ಇಬ್ಬರು ಮಕ್ಕಳಿದ್ದಾರೆ. ಇಂದಿನ ಮೆಗಾ ಅದಾಲತ್‌ನಲ್ಲಿ ತಂದೆ-ತಾಯಿ ಒಂದಾಗಿದ್ದಕ್ಕೆ ಮಗ ಶರಣು ಹೆತ್ತವರನ್ನು ಸಿಹಿ ತಿನ್ನಿಸುತ್ತಿದ್ದಂತೆ ನ್ಯಾಯಾಲಯದಲ್ಲಿ ಚಪ್ಪಾಳೆಯ ಸುರಿಮಳೆ ಕಂಡುಬಂತು.
ಇನ್ನೊಂದು ಪ್ರಕರಣದಲ್ಲಿ ಖಾಸಗಿ ಉದ್ಯೋಗ ಮಾಡಿಕೊಂಡಿರುವ ಕಲಬುರಗಿ ಮೂಲದ ಗುರುರಾಜ ಮಲ್ಲೇಶಪ್ಪ ಧುಮಲೆ ಅವರು ಸಹ ಕೌಟುಂಬಿಕ ಕಾರಣ ನೀಡಿ ಸ್ಥಳೀಯ ನಿವಾಸಿ ಅಶ್ವಿನಿ @ ಅಂಬಿಕಾ ಅವರಿಂದ ವಿಚ್ಛೇದನ ಕೋರಿ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ವಿ.ಅಸೋಡೆ, ನ್ಯಾಯಿಕ ರಿಜಿಸ್ಟ್ರಾರ್ ಶ್ರೀನಿವಾಸ ಸುವರ್ಣಾ, ಕಲಬುರಗಿ ಹೈಕೋರ್ಟ್ ಪೀಠದ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಗೋಮತಿ ರಾಘವೇಂದ್ರ, ಹೈಕೋರ್ಟ್ ಘಟಕದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣ್ಣಿ, ಉಪಾಧ್ಯಕ್ಷ ಸುಧೀರ ಸಿಂಗ್ ವಿಜಯಪುರ, ಕಾರ್ಯದರ್ಶಿ ಬಿ.ಸಿ.ಜಾಕಾ ಸೇರಿದಂತೆ ವಾದಿ-ಪ್ರತಿವಾದಗಳ ವಕೀಲರು, ಹೈಕೋರ್ಟ್ ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…