ಬಿಸಿ ಬಿಸಿ ಸುದ್ದಿ

ಪ್ರಕೃತಿ ಚಿಕಿತ್ಸೆ: ಪರ್ಯಾಯ ಜೀವನ ಶೈಲಿಯೂ!

  • # ಕೆ.ಶಿವು.ಲಕ್ಕಣ್ಣವರ

‘ಡೀಸ್ಕೂಲಿಂಗ್ ಸೊಸೈಟಿ’ ಖ್ಯಾತಿಯ ಆಸ್ಟ್ರಿಯನ್ ತತ್ವಜ್ಞಾನಿ ಹಾಗೂ ರೋಮನ್ ಕೆಥೊಲಿಕ್ ಪಾದ್ರಿ ಇವಾನ್ ಇಲೀಚ್ ಸುಮಾರು ಅರ್ಧ ಶತಮಾನದಷ್ಟು ಹಿಂದೆಯೇ, ತನ್ನ ‘ಮೆಡಿಕಲ್ ನೆಮೆಸಿಸ್’ ಎಂಬ ಕೃತಿಯಲ್ಲಿ ”ಆಧುನಿಕ ವೈದ್ಯಕೀಯ (ಅಲೋಪತಿ) ವ್ಯವಸ್ಥೆ ಆರೋಗ್ಯಕ್ಕೆ ಒಂದು ದೊಡ್ಡ ಬೆದರಿಕೆಯಾಗಿದೆ” ಎಂದು ಹೇಳಿ ಜಾಗತಿಕ ವೈದ್ಯಕೀಯ ಸಮುದಾಯವನ್ನು ಚಕಿತಗೊಳಿಸಿದ್ದ.

”ಔಷಧಗಳ ಮೇಲೆ ವೃತ್ತಿಪರ ನಿಯಂತ್ರಣ ಒಂದು ಸಾಂಕ್ರಾಮಿಕ ಕಾಯಿಲೆಯ ಹಂತ ತಲುಪಿದೆ” ಎಂಬ ಅವನ ವಾದ ತಂತ್ರಜ್ಞಾನಾಧಾರಿತ ಆಧುನಿಕ ವೈದ್ಯಕೀಯ ವಿಜ್ಞಾನದ ಬಗ್ಗೆ ಜಗತ್ತು ಮರು ಚಿಂತನೆ ನಡೆಸುವಂತೆ ಮಾಡಿತ್ತು. ಶುದ್ಧ ಗಾಳಿ, ಸ್ವಚ್ಛ ಪರಿಸರ, ಆರೋಗ್ಯಕರವಾದ ಆಹಾರ ಕ್ರಮದಲ್ಲಿ ನಮ್ಮ ಆರೋಗ್ಯ ಇದೆಯೇ ಹೊರತು ಉಗ್ರಾಣಗಳಲ್ಲಿ ದಾಸ್ತಾನಿರುವ ಔಷಧಿಗಳಲ್ಲ ಎಂಬುದು ಇಲೀಚ್‌ನ ಅಭಿಪ್ರಾಯವಾಗಿತ್ತು.

ಇಲೀಚ್ ಅಂದು ಮಂಡಿಸಿದ ವಾದದ ಸತ್ಯಾಸತ್ಯತೆ ಕಳೆದ ನಾಲ್ಕು-ಐದು ದಶಕಗಳಲ್ಲಿ ನಮ್ಮ ಕಣ್ಮುಂದೆ ಬಿಚ್ಚಿಕೊಂಡಿದೆ. ಆಧುನಿಕ ಅಲೋಪತಿಯ ಅತಿರೇಕಗಳಿಗೆ ರೋಸಿ ಹೋದ ಜನ ಪರ್ಯಾಯ ವೈದ್ಯಕೀಯ ವ್ಯವಸ್ಥೆಗಳಾದ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸೆ (ನ್ಯಾಚುರೋಪತಿ) ಹಾಗೂ ಯೋಗದ ಕಡೆಗೆ ನಡೆಯತೊಡಗಿದರು.

ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಮನಸ್ಸು, ಭಾವನೆಗಳು ಹಾಗೂ ದೇಹವನ್ನು ನಾವೇ ನಿಯಂತ್ರಿಸಿ, ಮಾನಸಿಕ ಒತ್ತಡದಿಂದ ಪಾರಾಗಿ, ಹೇಗೆ ಆರೋಗ್ಯಪೂರ್ಣವಾದ, ನೆಮ್ಮದಿಯ ಶಾಂತ ಜೀವನವನ್ನು ನಡೆಸಬಹುದು? ಎಂದು ನಮಗೆ ತಿಳಿಸಿಕೊಡುವ ಒಂದು ಜೀವನ ಕ್ರಮವೇ ಪ್ರಕೃತಿಚಿಕಿತ್ಸೆ. ಇದು ಈಗ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಹಲವು ರೀತಿಗಳಲ್ಲಿ ಹದಗೆಟ್ಟಿರುವ ನಮ್ಮ ಪ್ರಕೃತಿ, ಪರಿಸರವೇ ಕಾರಣವೆಂದು ಸರಳವಾಗಿ ಹೇಳಿಬಿಡಬಹುದು. ಆದರೆ ಸಮಸ್ಯೆಯ ಮೂಲ ನಾವು ತಿಳಿದಷ್ಟು ಸರಳವಾಗಿಲ್ಲ.

ಯಾಕೆಂದರೆ ಇಂದು ನಮ್ಮ ಮನಸ್ಸು ಹಾಗೂ ಭಾವನೆಗಳನ್ನು ಮತ್ತು ಇವೆರಡರ ಮೂಲಕ ನಮ್ಮ ದೇಹಾರೋಗ್ಯ ಹಾಗೂ ಜೀವನ ಶೈಲಿಯನ್ನು ನಿಯಂತ್ರಿಸುವ ಶಕ್ತಿಗಳು ನಮ್ಮ ನಿಯಂತ್ರಣದಲ್ಲಿಲ್ಲ. ನಾವು ತಿನ್ನುವ ಆಹಾರವೂ ಸೇರಿದಂತೆ, ನಾವು ಬಳಸುವ ಎಲ್ಲ ದೈನಂದಿನ ವಸ್ತುಗಳು, ನಾವು ತೊಡುವ ಬಟ್ಟೆ, ಕೇಳುವ ಸಂಗೀತ, ಕುಡಿಯುವ ಪಾನೀಯ, ನೋಡುವ ದೃಶ್ಯ ಚಿತ್ರಗಳು- ಎಲ್ಲವನ್ನೂ ಜಾಗತಿಕ ಮಾರುಕಟ್ಟೆ ಶಕ್ತಿಗಳು, ಮೀಡಿಯಾ, ಇಂಟರ್‌ನೆಟ್, ಟಿವಿ, ಮೊಬೈಲ್ ಫೋನ್, ಫೇಸ್‌ಬುಕ್, ವಾಟ್ಸ್ ಆಯಪ್, ಟ್ವಿಟರ್, ಈ-ಮೇಲ್ ಇತ್ಯಾದಿ ಇತ್ಯಾದಿಗಳು ನಮ್ಮ ಊಹೆಗೂ ಮೀರಿ ನಿಯಂತ್ರಿಸುತ್ತಿವೆ. ನಮ್ಮ ಜೀವನಶೈಲಿ ಇವುಗಳಿಗೆ ಶರಣಾಗಿದೆ.

ಈ ಶರಣಾಗತಿ ವಾಸ್ತವಿಕವಾಗಿ ಮಾನಸಿಕ ಶರಣಾಗತಿ. ನಮ್ಮ ಭಾವನಾತ್ಮಕ ಬದುಕನ್ನು, ದೈಹಿಕ ಇಷ್ಟಾನಿಷ್ಟಗಳನ್ನು, ನಮ್ಮ ಪಂಚೇಂದ್ರಿಯಗಳ ಪ್ರಪಂಚವನ್ನು ನಿಯಂತ್ರಿಸಬೇಕಾದ ನಮ್ಮ ಮನಸ್ಸನ್ನೇ ಇವತ್ತು ಮಾಧ್ಯಮ, ಅಂತರ್ಜಾಲ ನಿಯಂತ್ರಿಸುತ್ತಿವೆ.

ವಾಸ್ತವಿಕವಾಗಿ, ನಮ್ಮ ಎಲ್ಲಾ ನಿರ್ಧಾರಗಳೂ ನಮ್ಮ ಮನಸ್ಸು ತೆಗೆದುಕೊಳ್ಳುವ ನಿರ್ಧಾರಗಳೇ ಆಗಿರುತ್ತವೆ. ಆದ್ದರಿಂದಲೇ ನಮ್ಮ ಪಾರಂಪಾರಿಕ ಅಭಿಜಾತ ಪಠ್ಯಗಳು, ಧರ್ಮಗಳು, ದರ್ಶನಗಳು ಕೂಡ ಅಂತಿಮವಾಗಿ, ಮನುಷ್ಯನ ಮನೋನಿಯಂತ್ರಣದ ಮಹತ್ವವನ್ನು ಸಾರಿ ಹೇಳುತ್ತವೆ: ಗೀತೆಯು ಸುಖದುಃಖಗಳಲ್ಲಿ ವಿಚಲಿತವಾಗದೆ ಆಸೆ ಭಯ ಸಿಟ್ಟನ್ನು ನಿಯಂತ್ರಿಸಿ ಸಮಚಿತ್ತನಾಗಿರುವವನೇ ‘ಸ್ಥಿತ ಧೀ’ (ಸ್ಥಿತಪ್ರಜ್ಞ) ಎಂದರೆ, ಇನ್ನೊಂದು ಪ್ರಾಚೀನ ಸ್ಮತಿ ತನ್ನ ಮಾತು ದೇಹ ಮತ್ತು ಮನಸ್ಸು-ಮೂರನ್ನು ನಿಯಂತ್ರಿಸಿಕೊಳ್ಳಬಲ್ಲವನನ್ನು ‘ತ್ರಿದಂಡಿ’ ಎಂದು ಕೊಂಡಾಡುತ್ತದೆ.

ಇವನನ್ನೇ ಪತಂಜಲಿ ಯೋಗಶಾಸ್ತ್ರ ”ಚಿತ್ತವೃತ್ತಿನಿರೋಧ” ಉಳ್ಳವನೆಂದು ಶ್ಲಾಘಿಸುತ್ತದೆ. ನಾವು ಏನಾಗಿದ್ದೇವೋ ಅವೆೆಲ್ಲವೂ ನಾವು ಏನು ಯೋಚಿಸುತ್ತಿದ್ದೆವೋ ಅದರ ಫಲ. ಮನಸ್ಸೇ ಸರ್ವಸ್ವ. ನಾವು ಏನನ್ನು ಯೋಚಿಸುತ್ತೇವೋ ಅದೇ ಆಗುತ್ತೇವೆ” ಎನ್ನುತ್ತಾನೆ ಗೌತಮ ಬುದ್ಧ. ಜೈನ ದರ್ಶನ ಅಪರಿಗ್ರಹ ಮತ್ತು ಸ್ವ-ನಿಯಂತ್ರಣವನ್ನು ಬೋಧಿಸುತ್ತದೆ.

ಆದರೆ ಈ ಯಾವ ಅಮರವಾಣಿಗಳೂ ನಮ್ಮ ನಿತ್ಯದ ಬದುಕಿನಲ್ಲಿ ನಿಜವಾಗದಂತೆ, ಕಾರ್ಯ ಸಾಧ್ಯವಾಗದಂತೆ ಮಾಧ್ಯಮ-ಮಾರುಕಟ್ಟೆ ಶಕ್ತಿಗಳು ನೋಡಿಕೊಳ್ಳುತ್ತಿವೆ. ದಿನಬೆಳಗಾದರೆ ಟಿವಿ ಮುಂದೆಯೋ, ಮೊಬೈಲ್ ಹಿಡಿದುಕೊಂಡೋ ಕುಳಿತುಕೊಳ್ಳುವ ಜನ, ಜಾಹೀರಾತುಗಳ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ”ಒಂದು ಕೊಂಡರೆ ಒಂದು ಉಚಿತ”, ”ಒಂದು ಕೊಂಡರೆ ಎರಡು/ಮೂರು/ನಾಲ್ಕು….ಉಚಿತ” ಎಂಬ ಮಾರುಕಟ್ಟೆ ಮಂತ್ರಕ್ಕೆ ಮರುಳಾಗಿ ಗ್ರಾಹಕರು ಜಂಕ್‌ಫುಡ್, ಜಂಕ್ ಬೆಡ್, ಜಂಕ್ ಬಟ್ಟೆ, ಜಂಕ್ ಅಡುಗೆ ಸಾಮಾನುಗಳನ್ನು ಕೊಂಡುಕೊಂಡು ಜಂಕ್ ಹೆಡ್‌ಗಳಾಗಿ ತಮ್ಮ ಮನೆಗಳನ್ನು ಗೋದಾಮುಗಳಾಗಿ ಗುಜರಿ ಮಾಲ್ ಮಹಲ್‌ಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಈ ಪ್ರಕ್ರಿಯೆಯಲ್ಲಿ ”ಈ ಆಫರ್ ಇನ್ನ್ನು ಮೂರು ಗಂಟೆ ಮಾತ್ರ/ ಇನ್ನು ಎರಡು,ಒಂದು,ಅರ್ಧ ಗಂಟೆ ಮಾತ್ರ” ಎಂಬ ಎಮರ್ಜೆನ್ಸಿ ಸಂದೇಶಗಳಂತೂ ಗ್ರಾಹಕರನ್ನು ಹುಚ್ಚುಗಟ್ಟಿಸಿ ಅವರ ಮನೆಮಂದಿ ”ಅಯ್ಯೋ ಮೂಲ ಬೆಲೆ 2,999 ರೂ.; ಈಗ ಕೇವಲ ರೂ. 999ಕ್ಕೆ; ಕೂಡಲೇ ಕಾಲ್ ಮಾಡಿ” ಎಂದು ಒತ್ತಾಯಿಸುವಂತೆ ಮಾಡಿ ಒತ್ತಡ ಹೇರುತ್ತಿವೆ. ಶಾಪಿಂಗ್ ಒಂದು ‘ಮ್ಯಾನಿಯಾ’ ಆಗಿದೆ.

ಈ ಒತ್ತಡ ಮಾನಸಿಕ ಒತ್ತಡವಾಗಿ ಡಿಪ್ರೆಶನ್‌ನ ಹಾದಿ ಹಿಡಿಯಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ನಾವು ತಿನ್ನಬಯಸುವ ಆಹಾರ, ನಾವು ಬದುಕಲು ಇಚ್ಛಿಸುವ ಜೀವನಶೈಲಿ ನಮ್ಮದಾಗದಂತೆ ನೋಡಿಕೊಳ್ಳುವ ಇಂತಹ ಮಾರುಕಟ್ಟೆ ಶಕ್ತಿಗಳನ್ನು ಮೀರಿ ನಿಂತು ಸಮಚಿತ್ತವನ್ನು ಕಾಯ್ದುಕೊಳ್ಳುವಲ್ಲಿ ಪ್ರಕೃತಿಚಿಕಿತ್ಸೆ ನಿಯಮಿತ ವ್ಯಾಯಾಮ, ಯೋಗ ತುಂಬಾ ನೆರವಾಗಬಲ್ಲದು. ಆದ್ದರಿಂದಲೇ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ನಡೆಯುತ್ತಿರುವ ಉಜಿರೆ, ಪರೀಕದ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ದೂರದ ಅಸ್ಸಾಂ ಕಾಶ್ಮೀರದಿಂದಲೂ ಒತ್ತಡಮುಕ್ತ ಜೀವನ ಶೈಲಿ ಹಾಗೂ ಪರಿಸರ ಚಿಕಿತ್ಸಾ ಆಕಾಂಕ್ಷಿಗಳು ಬರುತ್ತಿದ್ದಾರೆ. ಅಲ್ಲಿರುವ 350 ಹಾಸಿಗೆಗಳ ಸೌಲಭ್ಯ ಗಳನ್ನು ಇನ್ನಷ್ಟು ಹೆಚ್ಚಿಸಬೇಕಾದ ಅವಶ್ಯಕತೆ ಕಾಣಿಸುತ್ತಿದೆ.

ಅಂತರ್ಜಾಲವೆಂಬ ಮಾರಿಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವ ನಮ್ಮ ಜಾಹೀರಾತು-ಕೇಂದ್ರಿತ ಬದುಕು ಅತ್ಯ್‌ಷಧೀಕೃತ (over medicatised) ಆದಂತೆಯೇ ಜಾಹೀರಾತುಗಳನ್ನು ಓದಿ ನಾವು ಸ್ವ-ವೈದ್ಯರಾಗುತ್ತಿದ್ದೇವೆ. ಸೆಲ್ಪ್-ಮೆಡಿಕೇಶನ್‌ನಿಂದಾಗಿ ಕಾಲು ನೋವು, ಕೀಲು ನೋವು, ತಲೆ ಶೂಲೆ, ಕಾಮಾಲೆ, ವಾತ, ಪಕ್ಷವಾತ, ಹೃದಯಾಘಾತ, ಗರ್ಭಪಾತ ಎಲ್ಲವುದಕ್ಕೂ ಜನ ಟಿವಿ ನೋಡಿ ಟ್ಯಾಬ್ಲೆಟ್, ಕ್ಯಾಪ್ಸೂಲ್ ನುಂಗುತ್ತಾ ಯಾವ್ಯಾವುದೋ ಅಡ್ಡಪರಿಣಾಮಗಳಿಗೆ ಗುರಿಯಾಗುತ್ತಿದ್ದಾರೆ.

ಆರೋಗ್ಯಕ್ಕೆ ಚೂರಿ ಹಾಕುವ ಮಂಚೂರಿ ಮುಕ್ಕುವ ಅಸ್ವಸ್ಥ ಮೊಮ್ಮಕ್ಕಳು ಇನ್‌ಸ್ಟ್ಟಂಟ್ ಪಿಜ್ಜಾ ತಿನ್ನದ ಅಜ್ಜನ ಆರೋಗ್ಯ ನೋಡಿ ಅಚ್ಚರಿ ಪಡುವ ದಿನಗಳು ಬಂದಿವೆ. ಒಬೆಸಿಟಿ, ಡಯಾಬಿಟಿಸ್ ದಯೆ ತೋರದೆ ಮಕ್ಕಳು ಕೂಡ ನರಳುವಂತಾಗಿದೆ. ಗ್ಲಾಸ್ಗೋದಲ್ಲಿ ನಡೆದ ವಿಶ್ವ ಪರಿಸರ ಸಮ್ಮೇಳನವು ಸರಕಾರಗಳು ಜಾಗತಿಕ ತಾಪಮಾನವನ್ನು ಇಳಿಸಲು ತುರ್ತಾಗಿ ಕಾರ್ಯಪ್ರವೃತ್ತವಾಗದಿದ್ದಲ್ಲಿ ಜಗತ್ತಿಗೆ ಭಾರೀ ವಿನಾಶ ಕಾದಿದೆ ಎಂದು ಗಂಭೀರ ಎಚ್ಚರಿಕೆ ನೀಡಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನ, ಮುಂದಿನ ತಲೆಮಾರುಗಳು ಪರಿಸರ ಉಳಿಸುವತ್ತ ಪ್ರಕೃತಿ ಚಿಕಿತ್ಸೆ ಪಡೆಯುತ್ತ ಪರ್ಯಾಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸಾಧ್ಯವಾದೀತು? ಎಂಬುದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸುಮಾರು ಐವತ್ತು ವರ್ಷಗಳ ಹಿಂದೆ ಇಲೀಚ್ ಉಲ್ಲೇಖಿಸಿದ್ದ ದೊಡ್ಡ ಬೆದರಿಕೆ ಇನ್ನಷ್ಟು ದೊಡ್ಡದಾಗಿ ಬಾಂಬ್ ಬೆದರಿಕೆಯಾಗುವ ಮೊದಲೇ ವೈದ್ಯಕೀಯ ಜಗತ್ತು ಎಚ್ಚೆತ್ತುಕೊಳ್ಳಬೇಕಾಗಿದೆ..!

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

12 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago