ಬಿಸಿ ಬಿಸಿ ಸುದ್ದಿ

ಬೆಳಗಾವಿ: ಪ್ರತಿಮೆಗಳ ರಕ್ಷಣೆಗೆ ಹೆಚ್ಚಬೇಕಿದೆ ರಕ್ಷಣೆ

ಬೆಳಗಾವಿ: ನಗರವೂ ಸೇರಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾನ್‌ ನಾಯಕರ ಪ್ರತಿಮೆಗಳಿಗೆ ಜಯಂತಿ ದಿನಗಳಂದು ಸಾವಿರಾರು ಜನರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸುತ್ತಾರೆ. ಆದರೆ, ವರ್ಷದ ಇತರ ದಿನಗಳಲ್ಲಿ ಆಡಳಿತ ಯಂತ್ರ ಅವುಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ.

ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿ ಈಚೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದರು. ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಬಸವಣ್ಣನ ಚಿತ್ರಕ್ಕೆ ಸೆಗಣಿ ಎರಚಿ ಅಪಮಾನಿಸಿದ್ದರು. ಈ ಕೃತ್ಯ ಎಸಗಿದವರನ್ನು ಬಂಧಿಸಲಾಗಿದ್ದು, ಕನಕದಾಸ ಕಾಲೊನಿಯಲ್ಲೇ ರಾಯಣ್ಣನ ಪ್ರತಿಮೆ ಮರುಪ್ರತಿಷ್ಠಾಪಿಸಲಾಗಿದೆ. ಆದರೆ, ಈ ಘಟನೆಗಳು ನಡೆದ ನಂತರವೂ ಆಡಳಿತ ಯಂತ್ರ ಎಚ್ಚೆತ್ತುಕೊಂಡಿಲ್ಲ. ಪ್ರತಿಮೆಗಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರು ಹಾಗೂ ಪ್ರಜ್ಞಾವಂತರದಾಗಿದೆ.

ಗಮನ ಹರಿಸುವುದಿಲ್ಲ: ನಗರದ ಹೃದಯಭಾಗದಲ್ಲೇ ವೀರರಾಣಿ ಕಿತ್ತೂರು ಚನ್ನಮ್ಮನ ಪ್ರತಿಮೆಯಿದೆ. ಮುಖ್ಯಮಂತ್ರಿಗಳು, ಸಚಿವರು ಅಥವಾ ಯಾವುದೇ ಕ್ಷೇತ್ರದ ಗಣ್ಯರು ಕುಂದಾನಗರಿಗೆ ಭೇಟಿ ನೀಡಿದರೆ, ಮೊದಲು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ. ಅಲ್ಲದೆ, ನಗರದಲ್ಲಿರುವ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ, ಧರ್ಮವೀರ ಸಂಭಾಜಿ ಮತ್ತಿತರ ನಾಯಕರ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡುತ್ತಾರೆ.

ರಾಷ್ಟ್ರೀಯ ಹಬ್ಬಗಳು ಹಾಗೂ ಆಯಾ ನಾಯಕರ ಜಯಂತಿಗಳಂದು ಪ್ರತಿಮೆಗಳಿರುವ ಸ್ಥಳ ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ. ಆದರೆ, ಕಾರ್ಯಕ್ರಮ ಮುಗಿದ ನಂತರ ಅವುಗಳತ್ತ ಗಮನಹರಿಸುವುದಿಲ್ಲ. ಕೆಲ ಪ್ರತಿಮೆಗಳಿಗೆ ಹಾಕಿದ್ದ ಮಾಲೆಗಳು ಒಣಗಿದ್ದರೂ ತೆಗೆಯುವವರಿಲ್ಲದ ಪರಿಸ್ಥಿತಿ ಇದೆ. ಕೆಲವೆಡೆ ಪ್ರತಿಮೆಗಳಿರುವ ಜಾಗದ ಸುತ್ತಲೂ ಕಸ ಬೆಳೆದಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮುಖ್ಯ ವೃತ್ತಗಳಲ್ಲಿರುವ ಕೆಲ ಪ್ರತಿಮೆಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ.

‘ಪ್ರತಿಮೆಗಳನ್ನಷ್ಟೇ ಪ್ರತಿಷ್ಠಾಪಿಸಿದರೆ ಸಾಲದು. ನಿಯಮಿತವಾಗಿ ಅವುಗಳನ್ನು ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಮಹಾತ್ಮರಿಗೆ ಅಪಮಾನ ಮಾಡಿದಂತಾಗುತ್ತದೆ. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪ್ರತಿಮೆ ಸುತ್ತಲಿನ ಜಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು’ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

‘ಮನುಕುಲದ ಏಳಿಗೆಗಾಗಿ ದುಡಿದ ಮಹನೀಯರು ನಮಗೆಲ್ಲ ಆದರ್ಶ. ಆದರೆ, ಈಚೆಗೆ ಅವರ ಪ್ರತಿಮೆಗಳನ್ನು ಭಗ್ನಗೊಳಿಸುವ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಇದರಿಂದ ಸಮಾಜದ ಸಾಮರಸ್ಯ ಕದಡುತ್ತದೆ. ಹಾಗಾಗಿ ಪ್ರತಿಮೆಗಳ ಪ್ರತಿಷ್ಠಾಪನೆಗಿಂತ, ಆ ವೃತ್ತಗಳಿಗೆ ಮಹಾತ್ಮರ ಹೆಸರಿಡುವುದು ಸೂಕ್ತ. ಸರ್ಕಾರದಿಂದ ಪ್ರತಿಮೆಗಳಿಗೆ ರಕ್ಷಣೆ ಒದಗಿಸುವುದು ಕಷ್ಟ ಸಾಧ್ಯ’ ಎನ್ನುತ್ತಾರೆ ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಕಿರಣ ಯಲಿಗಾರ.

  • ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿದೆ
    ಚನ್ನಮ್ಮನ ಕಿತ್ತೂರು:

ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ರಾಣಿ ಚನ್ನಮ್ಮ, ಎಡ ಮತ್ತು ಬಲಕ್ಕೆ ಕ್ರಮವಾಗಿ ವೀರಕೇಸರಿ ಅಮಟೂರು ಬಾಳಪ್ಪ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ.

ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ. ನಿತ್ಯ ಪಟ್ಟಣ ಪಂಚಾಯ್ತಿ ಸಿಬ್ಬಂದಿಯೊಬ್ಬರು, ಪ್ರತಿಮೆ ಸುತ್ತಲೂ ನಿರ್ಮಿಸಲಾಗಿರುವ ಲಾನ್ ಮತ್ತು ಪ್ರದೇಶದ ಸ್ವಚ್ಛತೆ ನೋಡಿಕೊಳ್ಳುತ್ತಾರೆ. ಆದರೆ, ಈ ಭಾಗ್ಯ ಸೋಮವಾರ ಪೇಟೆಯ ಹೃದಯಭಾಗದಲ್ಲಿ ಅನಾವರಣ ಮಾಡಲಾಗಿರುವ ಪ್ರತಿಮೆಗಿಲ್ಲ. ರಾಷ್ಟ್ರೀಯ ಹಬ್ಬಗಳಂದು ಹಾಗೂ ಕಿತ್ತೂರು ಉತ್ಸವದಂದು ಇಲ್ಲಿನ ಪುತ್ಥಳಿ ಸ್ವಚ್ಛಗೊಳಿಸಲಾಗುತ್ತದೆ. ನೂತನ ಸಚಿವರು ಬಂದಾಗ ನೆನಪು ಮಾಡಿಕೊಂಡು ಮಾಲೆ ಹಾಕಲಾಗುತ್ತದೆ. ಬಿಸಿಲಿಗೆ ಒಣಗಿ ಹೋಗಿರುವ ಮಾಲೆಯನ್ನು ಅನೇಕ ಬಾರಿ ತೆಗೆಯುವವರು ಇಲ್ಲವಾಗಿರುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಪಟ್ಟಣ ಪಂಚಾಯ್ತಿಯಿಂದ ನಿರ್ವಹಣೆ ಖಾನಾಪುರ: ಪಟ್ಟಣದಲ್ಲಿ ಶಿವಾಜಿ, ಬಸವಣ್ಣ, ಅಂಬೇಡ್ಕರ್ ಮತ್ತು ವಾಲ್ಮೀಕಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳ ನಿರ್ವಹಣೆಯನ್ನು ಪಟ್ಟಣ ಪಂಚಾಯ್ತಿ ವಹಿಸಿಕೊಂಡಿದೆ. ಅಲ್ಲಿನ ಸಿಬ್ಬಂದಿ ನಿತ್ಯವೂ ಪ್ರತಿಮೆ ಹಾಗೂ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸುತ್ತಿದ್ದಾರೆ.

ತಾಲ್ಲೂಕು ಆಡಳಿತ ಮಾಹಿತಿ ಪ್ರಕಾರ, ಖಾನಾಪುರದ ವಿವಿಧ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಶಿವಾಜಿ ಮಹಾರಾಜರ 180, ಅಂಬೇಡ್ಕರರ 40, ಬಸವಣ್ಣನವರ 15 ಹಾಗೂ ರಾಯಣ್ಣನ 10 ಪ್ರತಿಮೆಗಳಿವೆ. ಆಯಾ ಗ್ರಾಮಗಳ ಮುಖಂಡರೇ ನಿರ್ವಹಣೆ ಹೊಣೆ ವಹಿಸಿಕೊಂಡಿದ್ದಾರೆ. ವಿಶೇಷ ಸಂದರ್ಭ ಆಯಾ ಪ್ರತಿಮೆಗಳಿಗೆ ಹಾರ ಹಾಕಿ ಅಲಂಕಾರ ಮಾಡುತ್ತಾರೆ. ಇನ್ನೂಳಿದ ದಿನಗಳಲ್ಲಿ ಪ್ರತಿಮೆಗಳ ಸ್ಚಚ್ಛತೆ ಕೈಗೊಳ್ಳಲಾಗುತ್ತಿದೆ. ಕೆಲವೆಡೆ ಮಾತ್ರ ಪ್ರತಿಮೆಗಳನ್ನಿಟ್ಟಿರುವ ಸ್ಥಳ ಹಾಗೂ ವೃತ್ತದಲ್ಲಿ ಸುರಕ್ಷತಾ ಕ್ರಮ ಅನುಸರಿಸಲಾಗಿದೆ.

ಸ್ವಚ್ಛತೆ ಕೊರತೆ ಸವದತ್ತಿ: ಪಟ್ಟಣದಲ್ಲಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿರುವ ಕೆಲ ಸ್ಥಳಗಳಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಕೆಲವಡೆ ಪುರಸಭೆ ವತಿಯಿಂದ ಸ್ವಚ್ಛತಾ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಇನ್ನೂ ಕೆಲವೆಡೆ ಆಯಾ ಸಮುದಾಯದವರೇ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಬಸವೇಶ್ವರ ಪ್ರತಿಮೆಗೆ ಉದ್ಯಾನ ಹಾಗೂ ಕಾಂಪೌಂಡ್‌ ಅಗತ್ಯವಿದೆ. ಇಲ್ಲಿಯೂ ಸ್ವಚ್ಛತೆ ಮಾಯವಾಗಿದ್ದು, ಪಕ್ಕದ ಜಾಗದಲ್ಲೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ.

ಅಂಬೇಡ್ಕರ್‌ ಪ್ರತಿಮೆ ಸುತ್ತ ಸ್ವಚ್ಛತೆಯಿದೆ. ಆದರೆ, ಉದ್ಯಾನವಿಲ್ಲ. ಇಲ್ಲಿ ಆಸನ, ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಬೇಡಿಕೆಯಿಟ್ಟಿದ್ದಾರೆ. ಶಾಸಕ ಆನಂದ ಮಾಮನಿ ಅವರೂ ಈ ಸ್ಥಳದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ‍‍ಸವದತ್ತಿ ಯಲ್ಲಮ್ಮ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಆದರೆ, ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಗಮನಹರಿಸಿ: ಯುವಪೀಳಿಗೆಗೆ ಪ್ರೇರಣೆ ಆಗಲೆಂದು ದೇಶಕ್ಕಾಗಿ ದುಡಿದ ಶೂರರು-ಧೀರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಅವುಗಳನ್ನು ಭಗ್ನಗೊಳಿಸುವ ಘಟನೆ ಹೆಚ್ಚುತ್ತಿರುವುದು ಖಂಡನೀಯ. ಇದು ಮಹಾತ್ಮರಿಗೆ ಮಾಡುವ ಅಪಮಾನ ಕೂಡ. ಇದಕ್ಕೆ ಕಡಿವಾಣ ಹಾಕಲು ಆಡಳಿತ ಯಂತ್ರ ಕೈಗೊಳ್ಳಬೇಕು. ಪ್ರತಿಮೆಗಳ ರಕ್ಷಣೆ ಹಾಗೂ ನಿರ್ವಹಣೆ ವಿಚಾರವಾಗಿಯೂ ಗಮನ ಹರಿಸಬೇಕು’ ಎಂದು ಸಾಹಿತಿ ಯ.ರು. ಪಾಟೀಲ ಒತ್ತಾಯಿಸಿದರು.

‘ಬಣ್ಣ ಬಳಿಸಲಾಗುವುದು’: ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಮೆಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಅವುಗಳನ್ನು ಪ್ರತಿಷ್ಠಾಪಿಸಿದ ಜಾಗವನ್ನೂ ಸ್ವಚ್ಛಗೊಳಿಸುವ ಜೊತೆಗೆ ಎಲ್ಲ ಪ್ರತಿಮೆಗಳಿಗೆ ಬಣ್ಣ ಬಳಿಸಲಾಗುವುದು’ ಎಂದು ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶೀಘ್ರವೇ ಕಾಮಗಾರಿ: ಸವದತ್ತಿಯಲ್ಲಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ ಜಾಗದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿದೆ. ಜಯಂತಿಯಂದು ಶುಚಿಗೊಳಿಸಲಾಗುತ್ತಿದೆ. ಬಸವೇಶ್ವರ ವೃತ್ತದಲ್ಲಿ ಕಾಪೌಂಡ್‌ ಹಾಗೂ ಉದ್ಯಾನ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. -ಪಿ.ಎಂ. ಚನ್ನಪ್ಪನವರ, ಮುಖ್ಯಾಧಿಕಾರಿ, ಸವದತ್ತಿ ಯಲ್ಲಮ್ಮ ಪುರಸಭೆ.
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago