ದಾವಣಗೆರೆ: ಇಲ್ಲಿನ ಹಳೇ ಕುಂದವಾಡದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು (ಧೂಡಾ) 53 ಎಕರೆಯಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದ ಯೋಜನೆಗೆ ಒಂದು ಎಕರೆಗೆ ₹ 1.18 ಕೋಟಿ ದರದಲ್ಲಿ ಜಮೀನು ನೀಡಲು ರೈತರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.
ಡಿಸೆಂಬರ್ 17ರಂದು ನಡೆದ ಸಭೆಯಲ್ಲಿ ಹಲವು ರೈತರು ಭೂಮಿ ನೀಡಲು ಹಿಂದೇಟು ಹಾಕಿದ್ದರು. ಆದರೆ, ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚಿನ ದರ ಕೊಡಿಸುವ ಭರವಸೆ ಸಿಕ್ಕಿದ್ದರಿಂದ ರೈತರು ಜಮೀನು ನೀಡಲು ಸಹಮತಿ ನೀಡಿದ್ದಾರೆ. ಇದರೊಂದಿಗೆ ನಿವೇಶನ ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗಿದರಿವೆ.
ಹಳೇ ಕುಂದವಾಡ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 53 ಎಕರೆ 19.8 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಲು ‘ಧೂಡಾ’ ನಿರ್ಧರಿಸಿತ್ತು. ಬೇಡಿಕೆ ಸಮೀಕ್ಷೆ ನಡೆಸಿದಾಗ 20 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಇದೀಗ ರೈತರು ಜಮೀನು ನೀಡಲು ಒಪ್ಪಿಗೆ ನೀಡಿರುವುದರಿಂದ ಯೋಜನೆ ಅನುಷ್ಠಾನದ ಮುಖ್ಯ ಘಟ್ಟವೊಂದು ನಿರ್ವಿಘ್ನವಾಗಿ ನೆರವೇರಿದಂತಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ‘ಒಂದು ಎಕರೆಗೆ ₹ 1.25 ಕೋಟಿ ದರ ನಿಗದಿಗೊಳಿಸಬೇಕು. ಭೂಮಿ ನೀಡುವ ರೈತರಿಗೆ ಒಂದು ನಿವೇಶನವನ್ನು ಧೂಡಾ ನಿಗದಿಗೊಳಿಸುವ ದರದಲ್ಲಿ ನೀಡಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ಸಮಾಲೋಚನೆ ನಡೆಸಿ, ಅಂತಿಮವಾಗಿ ಒಂದು ಎಕರೆಗೆ ₹ 1.18 ಕೋಟಿ ದರ ನಿಗದಿಗೊಳಿಸಲು ಮುಂದಿಟ್ಟ ಪ್ರಸ್ತಾವಕ್ಕೆ ರೈತರು ಸಹಮತ ವ್ಯಕ್ತಪಡಿಸಿದರು.
ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ಗಿರೀಶ್, ಉಪನೋಂದಣಾಧಿಕಾರಿ ಹಾಗೂ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಚ್. ಶ್ರೀಕರ್, ಪ್ರಾಧಿಕಾರದ ಸದಸ್ಯರಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್, ರೈತ ಮುಖಂಡರಾದ ಜಿ.ಸಿ. ದೇವರಾಜ್, ಎಂ.ಹನುಮಂತಪ್ಪ, ಷಣ್ಮುಖಪ್ಪ, ನರಸಪ್ಪರ ಶಿವಣ್ಣ ಸಭೆಯಲ್ಲಿ ಹಾಜರಿದ್ದರು.
‘ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ’: ‘ಈ ಭಾಗದ ಜಮೀನಿಗೆ ಒಂದು ಎಕರೆಗೆ ₹ 50 ಲಕ್ಷ ದರವನ್ನು ಉಪನೋಂದಣಿ ಕಚೇರಿ ನಿಗದಿಗೊಳಿಸಿದೆ. ಇದರ ಎರಡು ಪಟ್ಟು ದರ ನಿಗದಿಗೊಳಿಸಲು ಅವಕಾಶವಿತ್ತು. ಆದರೆ, ಉದ್ದೇಶಿತ ಯೋಜನೆಯ ಜಮೀನು ನಗರಕ್ಕೆ ಹೊಂದಿಕೊಂಡಿರುವುದರಿಂದ ಹೆಚ್ಚಿನ ಬೆಲೆ ನೀಡಬೇಕು ಎಂದು ರೈತರು ಪ್ರತಿಪಾದಿಸಿದ್ದರು. ಹೀಗಾಗಿ ಎಕರೆಗೆ ₹ 1.18 ಕೋಟಿ ದರವನ್ನು ಜಿಲ್ಲಾಧಿಕಾರಿ ನಿಗದಿಪಡಿಸಿದ್ದಾರೆ. ಹೆಚ್ಚುವರಿ ₹ 18 ಲಕ್ಷಕ್ಕೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಧೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ‘ಇ-ಮೀಡಿಯಾಲೈನ್’ಗೆ ಪ್ರತಿಕ್ರಿಯಿಸಿದರು.
‘ಭೂಮಿ ನೀಡುವ ರೈತರಿಗೆ ಒಂದು ನಿವೇಶನ ನೀಡಬೇಕು ಎಂಬ ಬೇಡಿಕೆಯ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು. ರೈತರ ಜಮೀನು ಖರೀದಿಸಲು ಅಗತ್ಯವಿರುವ ಹಣ ನಮ್ಮ ಬಳಿ ಲಭ್ಯವಿದೆ’ ಎಂದು ಅವರು ಮಾಹಿತಿ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…