ರಾಜ್ಯ

ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ರಾಮನಗರ: ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು  ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಈ ಹೋರಾಟ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ, ಜನರಿಗೆ ಕುಡಿಯುವ ನೀರು ನೀಡುವ ಬದ್ಧತೆಯನ್ನು ಪಕ್ಷ ಕಾಯ್ದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದೇ ರಾಮನಗರದಿಂದ ಪಾದಯಾತ್ರೆ ಮುಂದುವರಿಸಲಾಗುತ್ತದೆ.

ನಿನ್ನೆ ರಾತ್ರಿ ಅಧಿಕಾರಿಗಳು ಬಂದು ಜಿಲ್ಲಾಧಿಕಾರಿಗಳ ಪತ್ರ ಎಂದು ಕೊಡಲು ಬಂದರು. ಜಿಲ್ಲಾಧಿಕಾರಿಗೆ ಕೊವಿಡ್ ಬಂದಿದೆಯಲ್ಲ, ಈಗ ಯಾಕೆ ಬಂದಿದ್ದೀರಿ ಎಂದು ಹೇಳಿ ಕಳುಹಿಸಿದೆ.

ನಮ್ಮ ಮಾಜಿ ಮೇಯರ್ ಪಿ.ಆರ್ ರಮೇಶ್ ಅವರು ಬೆಳಗ್ಗೆ ಕರೆ ಮಾಡಿ ಬಸವನಗುಡಿಯ ಮೈದಾನದಲ್ಲಿ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿದೆ ಎಂದರು.

ನಂತರ ಸರ್ಕಾರದ ನೊಟೀಸ್ ನೋಡಿದೆ. ಅದರಲ್ಲಿ ಪಾದಯಾತ್ರೆ ರದ್ದು ಮಾಡಬೇಕು ಎಂದು ಹೇಳಿದೆ. ಇನ್ನು ನಮ್ಮ ಜಿಲ್ಲಾಧ್ಯಕ್ಷರಿಗೆ ನೀಡಿದ ಅನುಮತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಲಾಗಿತ್ತು. ಪೊಲೀಸರಿಗೆ ಬರೆದ ಪತ್ರದಲ್ಲಿ ವ್ಯವಸ್ಥಿತವಾಗಿ ಅವಕಾಶ ಮಾಡಿಕೊಡಿ ಎಂದೂ ಹೇಳಿತ್ತು. ಆ ಮೂಲಕ ಈ ಪಾದಯಾತ್ರೆ ನಡೆಯಲಿ ಎಂಬ ಆಸೆ ಸರ್ಕಾರಕ್ಕೂ ಇದೆ. ಆದರೂ ನಿಮ್ಮ ಮುಂದೆ ಬೇರೆಯದೇ ಹೇಳುತ್ತಿದ್ದಾರೆ. ಈಗ ಆ ವಿಚಾರ ಬಿಡಿ.

ಈಗ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಮುಖಂಡರ ಒಟ್ಟಾರೆ ಅಭಿಪ್ರಾಯ, ಜನರ ಭಾವನೆ ಕುರಿತು ನಮ್ಮ ಶಾಸಕರ ಜತೆ ಚರ್ಚೆ ಮಾಡಿದೆವು. ನ್ಯಾಯಾಲಯ ನಮಗೆ ಪಾದಯಾತ್ರೆ ಮಾಡಬೇಡಿ ಎಂದು ಹೇಳದಿದ್ದರೂ ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವದಿಂದ ಮನ್ನಣೆ ನೀಡಿ, ನಮ್ಮ ದೇವರುಗಳಾದ ಜನರ ಭಾವನೆ ನೋಡಿ ಈ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ.

ಹೆಚ್ಚಿನ ಜನ ಭಾಗವಹಿಸಲು ಅವಕಾಶವಾಗದಿದ್ದರೂ ನಾವಿಬ್ಬರೇ ನಡೆಯಬೇಕು ಎಂದು ಮೊದಲು ಅಂದುಕೊಂಡಿದ್ದೆವು. ನಾವು ಹೋಗುವಾಗ ಜನ ಸೇರುತ್ತಿದ್ದಾರೆ. ಇದರಿಂದ ಮತ್ತೆ ಗುಂಪು ಸೃಷ್ಟಿಯಾಗುತ್ತದೆ.

ಕಾಂಗ್ರೆಸ್ ಗೆ ಹೋರಾಟದ ಬದ್ಧತೆ ಇದೆ. ಈ ನೋಟೀಸ್, ಕೇಸ್, ಜೈಲಿಗೆ ನಾವು ಹೆದರುವುದಿಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಬಿಜೆಪಿಯವರು ತಮ್ಮ ತಪ್ಪನ್ನು ನಮ್ಮ ಮೇಲೆ ಹಾಕಲು ಪಿತೂರಿ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ನಾವು ನಿಲ್ಲಿಸುತ್ತಿಲ್ಲ, ಕೇವಲ ಮುಂದೂಡುತ್ತಿದ್ದೇವೆ. ಮುಂದೆ ಇದೇ ರಾಮನಗರದಿಂದಲೇ ಆರಂಭಿಸುತ್ತೇವೆ. ಇದು ತಾತ್ಕಾಲಿಕ ವಿರಾಮ ಅಷ್ಟೇ.

ಸರ್ಕಾರಕ್ಕೆ ನ್ಯಾಯ, ಕಾನೂನು ಎಲ್ಲರಿಗೂ ಒಂದೇ ಎಂಬ ಬದ್ಧತೆ ಇದ್ದರೆ, ಕೋವಿಡ್ ಆರಂಭವಾದಾಗಿನಿಂದ ನಿಮ್ಮ ಶಾಸಕರು, ಸಚಿವರು, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಧಾರ್ಮಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಕಾನೂನು, ನ್ಯಾಯ ಅನ್ವಯ ಆಗುತ್ತದೆಯೇ?.

ಈಗಲಾದರೂ ಕಾನೂನು ಉಲ್ಲಂಘನೆ ಮಾಡಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಿ, ನಿಮ್ಮ ಧೈರ್ಯ ಪ್ರದರ್ಶಿಸಿ.

ಕೋವಿಡ್ ಗಂಭೀರ ಸ್ಥಿತಿ ತಲುಪಿದಾಗ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸರ್ಕಾರಕ್ಕೆ ಸಹಕರಿಸಿದೆ. ಅವರಿಗಿಂತ ಹೆಚ್ಚಾಗಿ ಜನರ ಸೇವೆ ಮಾಡಿದೆ. ತರಕಾರಿ ಖರೀದಿ ಮಾಡಿ, ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದೇವೆ. ಔಷಧಿ, ಹಣ್ಣು, ಆಹಾರ, ದಿನಸಿ, ಆಕ್ಸಿಜನ್ ಕೊಟ್ಟಿದ್ದೇವೆ.

ಅಲ್ಪಸಂಖ್ಯಾತರು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎಲ್ಲ ಧರ್ಮಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ನಮ್ಮ ಧ್ಯೇಯ.

ಈ ಹೋರಾಟದಲ್ಲಿ ಮಹಿಳೆಯರು, ಮಕ್ಕಳು, ಎಲ್ಲ ವರ್ಗದ ಜನ ಕೊಟ್ಟಿರುವ ಪ್ರೀತಿ ಬೆಂಬಲ ಅಪಾರ. ಅವರಿಗೆ ಶುದ್ಧ ಕುಡಿಯುವ ನೀರು ನೀಡುವುದೇ ನಮ್ಮ ಗುರಿ.

ಈ ಹಿಂದೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ವಿರುದ್ಧ ಹೋರಾಡುತ್ತಿದ್ದೆವು. ಆದರೆ ಈಗ ನಮ್ಮದೇ ರಾಜ್ಯದ ಎರಡು ಪಕ್ಷಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಅವರಿಂದ ಜನರ ರಕ್ಷಣೆ ಮಾಡಬೇಕಾಗಿದೆ.

ಜನರಿಗೆ ಕಾವೇರಿ ಕುಡಿಯುವ ನೀರು ನೀಡುವುದು ನಮ್ಮ ಗುರಿ. ಅದಕ್ಕೆ ನಮ್ಮ ಹೋರಾಟ ಮುಂದುವರಿಯಲಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಪಾದಯಾತ್ರೆಗೆ ಜನಸಾಮಾನ್ಯರು ಬಹಳ ಉತ್ಸಾಹದಿಂದ ಭಾಗವಹಿಸಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ. ಈ ಪಾದಯಾತ್ರೆ ಹೋರಾಟ ಮಾಡಬೇಕು ಎಂದು ಬಹಳ ಹಿಂದೆಯೇ ತೀರ್ಮಾನ ಮಾಡಿದ್ದೆವು. ಈ ಬಗ್ಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲೂ ಮಾಹಿತಿ ನೀಡಿದೆವು. ಅದರಂತೆ ಜ. 9 ರಂದು ಸಂಗಮದಿಂದ ಪಾದಯಾತ್ರೆ ಆರಂಭಿಸಿ ರಾಮನಗರದವರೆಗೂ ನಾಯಕರು, ಕಾರ್ಯಕರ್ತರು ಯಶಸ್ವಿಯಾಗಿ ಪಾದಯಾತ್ರೆ ಮಾಡಿದ್ದೇವೆ. ಇಂದು 5ನೇ ದಿನ ರಾಮನಗರದಿಂದ ಆರಂಭವಾಗಬೇಕಿತ್ತು ಎಂದರು.

ಆದರೆ ಕೋವಿಡ್ 3ನೇ ಅಲೆ ವೇಗವಾಗಿ ಹರಡುತ್ತಿದೆ. ನಿನ್ನೆ 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಜವಾಬ್ದಾರಿಯುತ ಪಕ್ಷವಾಗಿ ನಾವು ಇದಕ್ಕೆ ಸ್ಪಂದಿಸಬೇಕಾಗಿದೆ.

ಸೋಂಕು ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ, ಬಿಜೆಪಿಯವರೆ ಕಾರಣ. 3ನೇ ಅಲೆ ಪ್ರಾರಂಭವಾದ ನಂತರ ಸಿಎಂ ಸಭೆ ಮಾಡುವುದನ್ನು ನಿಲ್ಲಿಸಲಿಲ್ಲ.

ಜ.6ರಂದು ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 5-6 ಸಾವಿರ ಜನರನ್ನು ಸೇರಿಸಿ, ಮುಖ್ಯಮಂತ್ರಿ ಸೇರಿದಂತೆ ಅನೇಕ ಮಂತ್ರಿಗಳು ಭಾಗವಹಿಸಿದ್ದರು.

ನಂತರ ಬಿಜೆಪಿ ಶಾಸಕ ಸುಭಾಷ್ ಗುತ್ತೆದಾರ್ ಪ್ರತಿಭಟನೆ ಮಾಡಿದರು, ರೇಣುಕಾಚಾರ್ಯ ಅವರು ಜಾತ್ರೆ ಮಾಡಿದರು, ಕೇಂದ್ರ ಸಚಿವರು 2ನೇ ಅಲೆ ಸಮಯದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಜನಾಶೀರ್ವಾದ ಯಾತ್ರೆ ಮಾಡಿದರು. ಈಗ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಜಾತ್ರೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ ಇವರ ಮೇಲೆ ಮಾತ್ರ ಕೇಸ್ ಹಾಕಿಲ್ಲ.

ನಮ್ಮ ಮೇಲೆ ಸುಳ್ಳು ಕೇಸ್ ಹಾಕಿ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಸರ್ಕಾರ ಪಕ್ಷಪಾತ ಮಾಡುತ್ತಿದೆ. ರೋಗ ನಿಯಂತ್ರಿಸಲು ನಿಷ್ಪಕ್ಷಪಾತ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಇವರ ಉದ್ದೇಶ ಒಳ್ಳೆಯದಿಲ್ಲ. ಅವರ ಉದ್ದೇಶ ಪಾದಯಾತ್ರೆ ನಿಲ್ಲಿಸುವುದು. ಅದಕ್ಕಾಗಿ ಅಧಿಕಾರಿಗಳ ಮೂಲಕ ನಿತ್ಯ ಒಂದಲ್ಲ ಒಂದು ಆದೇಶ ಹೊರಡಿಸಿದರು.

ನಾವು ಇದಕ್ಕೆಲ್ಲ ಹೆದರುವುದಿಲ್ಲ.  ಸೋಂಕು ಹೆಚ್ಚಾದರೆ ಅದು ಪಾದಯಾತ್ರೆಯಿಂದಲ್ಲ. ದೇಶದೆಲ್ಲೆಡೆ ಸ್ವಾಭಾವಿಕವಾಗಿ 3ನೆ ಅಲೆ ಹಬ್ಬುತ್ತಿದೆ. ರಾಜ್ಯದ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ನಮ್ಮ ಪಾದಯಾತ್ರೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಚರ್ಚೆ ಮಾಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ.

ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ನಮ್ಮ ಯಾತ್ರೆ ಬೆಂಗಳೂರು ಪ್ರವೇಶಿಸಿ, 19 ರಂದು ನಡೆಯಬೇಕಿದ್ದ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ಸಾಧ್ಯತೆಯಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ.

ಕೋವಿಡ್ ಅಲೆ ಕಡಿಮೆಯಾಗಿ, ನಿಯಮ ಸಡಿಲಗೊಂಡ ನಂತರ ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ.

ನಮ್ಮ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುವುದು ಬೇಡ. ರಾಮನಗರದಿಂದ ಮತ್ತೆ ಆರಂಭವಾಗಿ ಎಲ್ಲಿ ಮುಗಿಯಬೇಕು ಎಂದು ತೀರ್ಮಾನ ಮಾಡಿದ್ದೆವೋ ಅಲ್ಲೇ ಮುಕ್ತಾಯವಾಗಲಿದೆ. ಕಾಂಗ್ರೆಸ್ ಜನರ ಒಳಿತು ಬಯಸುವ ಪಕ್ಷ. ಜನರ ಒಳಿತೇ ಕಾಂಗ್ರೆಸ್ ಧ್ಯೇಯ.

ಈ ಭಾಗದ ಸಂಸದರಾಗಿ ಡಿ.ಕೆ. ಸುರೇಶ್ ಅವರು ಪಾದಯಾತ್ರೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ.

emedialine Desk

Recent Posts

ದೌರ್ಜನ್ಯ ಪ್ರಕರಣದಲ್ಲಿ ವಿಳಂಬವಿಲ್ಲದೆ ಪರಿಹಾರ ನೀಡಬೇಕು; ಎಸ್‌.ಸಿ-ಎಸ್.ಟಿ ದೌರ್ಜನ್ಯ ಮೇಲುಸ್ತುವಾರಿ ಸಮಿತಿ ಸಭೆ

ಕಲಬುರಗಿ; ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣದಲ್ಲಿ ಕುಟುಂಬದ ಅವಲಂಭಿತ ಸದಸ್ಯರಿಗೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು…

1 hour ago

ನಮೋಶಿಗೆ ವಿಪಕ್ಷ ನಾಯಕ ಮಾಡಲು ಹರ್ಷಾನಂದ ಗುತ್ತೇದಾರ ಮನವಿ

ಆಳಂದ; ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತನ ಸದಸ್ಯ ಶಶೀಲ ನಮೋಶಿ ಅವರಿಗೆ ವಿಧಾನ ಪರಿಷತ ವಿರೋಧ…

1 hour ago

ಸಂಗೀತದ ರಾಗಗಳಿಂದ ರೋಗ ನಿವಾರಣೆ

ಕಲಬುರಗಿ : ಸಂಗೀತವು ಇಂದಿನ ದಿನ ಮಾನದಲ್ಲಿ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತಿದೆ. ಸಂಗೀತದ ರಾಗಗಳಿಂದ ರೋಗ ನಿವಾರಣೆ…

1 hour ago

ಬದಲಾಗುವ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆ ಬಹು ಮುಖ್ಯ

ಕಲಬುರಗಿ; ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ “ಆಧುನಿಕ ಕನ್ನಡ ಕಾವ್ಯ ಧಾರೆಗಳು” ಎಂಬ…

1 hour ago

ಮೋಹನ್ ಕುಮಾರ್ ದಾನಪ್ಪಗೆ ಸನ್ಮಾನ

ಬೆಂಗಳೂರು: 28 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ವಿ.ಗೌಡರವರ ನಿಯೋಗವು ಇತ್ತೀಚೆಗೆ…

1 hour ago

ಮಾದಕವಸ್ತಗಳು ಭವಿಷ್ಯಕ್ಕೆ ಮಾರಕ; ಗಂಜಗಿರಿ

ಚಿಂಚೋಳಿ: ವಿದ್ಯಾರ್ಥಿಗಳ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳವ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ಮಾದಕವಸ್ತು ಮತ್ತು ಮದ್ಯಸೇವನೆ ಯಂತಹ ಚಟಗಳಿಗೆ…

5 hours ago