ಮೇಧಾ ಪಾಟ್ಕರ್ ಬಗ್ಗೆ ನಮಗೆ ಗೌರವವಿದೆ: ಡಿ.ಕೆ ಶಿವಕುಮಾರ್

ಬೆಂಗಳೂರು: ‘ಮೇಧಾ ಪಾಟ್ಕರ್‍ ಬಗ್ಗೆ ನಮಗೆ ಗೌರವವಿದೆ. ಅವರು ತಮ್ಮದೇ ಆದ ಚಿಂತನೆಗಳ ಮೇಲೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನಮ್ಮ ಹೋರಾಟ ವ್ಯಕ್ತಿಗತ ಚಿಂತನೆಯಲ್ಲ, ಜನರ ಚಿಂತನೆ. ನಮ್ಮದು ಜನರ ಬಯಕೆ, ಬದುಕಿನ ಹೋರಾಟ. ನೀರು ನಮಗೆ ಜೀವ, ಜೀವ ಇದ್ದರಷ್ಟೇ ಜೀವನ. ಅವರ ಅಭಿಪ್ರಾಯ ಅವರದ್ದು. ಸರ್ಕಾರ ಇಂತಹ ಯೋಜನೆಗೆ ಪರಿಸರ ಇಲಾಖೆ ಅನುಮತಿಯಂತಹ ಕಾನೂನು ಮಾಡಿರುವುದು ಇವರಿಗಾಗಿಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ ಹೇಳಿದರು.

ಮೇಕೆದಾಟು ಯೋಜನೆಗೆ ಮೇಧಾ ಪಾಟ್ಕರ್ ಹಾಗೂ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ಒಂದು ಎಕರೆ ಮುಳುಗಡೆಯಾದರೆ ಎರಡು ಎಕರೆ ನೀಡಬೇಕು ಎಂದು ಹೇಳುತ್ತಾರೆ. ರಸ್ತೆ ಅಗಲ ಮಾಡಿದರೆ ಆಸ್ತಿ ಹೋಗುತ್ತದೆ ಎಂದು ಸುಮ್ಮನಿದ್ದರೆ ರಸ್ತೆ ಆಗುವುದಿಲ್ಲ. ರಾಜೀವ್ ಗಾಂಧಿ ಅವರು ಯೋಜನೆಗಳಿಗೆ ಆಸ್ತಿ ಸ್ವಾಧೀನ ಕಾನೂನು ತಂದು ಜನರಿಗೆ ಉತ್ತಮ ಪರಿಹಾರ ಸಿಗುವಂತೆ ಮಾಡಿದರು. ಕೆಲವರು ಸರ್ಕಾರಿ ಅಧಿಕಾರಿಗಳನ್ನು ಜೊತೆ ಮಾಡಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ಹಣ ಪರಿಹಾರಕ್ಕೆ ಆಗ್ರಹಿಸುತ್ತಾರೆ ಎಂದು ಹೇಳಿದರು.

ಈ ಯೋಜನೆ ಎಲ್ಲರಿಗೂ ಅನುಕೂಲವಾಗಲಿದ್ದು, ನಮ್ಮ ಸರ್ಕಾರ ಇದ್ದಾಗ ಕಾವೇರಿ ನ್ಯಾಯಾಧಿಕರಣ ತೀರ್ಪು ಹೊರ ಬಂದಿತ್ತು. ಹೀಗಾಗಿ ಈ ಯೋಜನೆಗೆ ಜೀವ ಬಂದಿತು. ತೀರ್ಪು ಬಂದ ನಂತರ ಡಿಪಿಆರ್ ಮಾಡಿದ್ದೆವು. ನಮ್ಮ ಸರ್ಕಾರ ಇನ್ನೂ ಕೆಲ ತಿಂಗಳುಗಳ ಕಾಲ ಇದಿದ್ದರೆ ಈ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು. ಬಿಜೆಪಿ ಸರ್ಕಾರ ಈ ಯೋಜನೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಭಾವಿಸಿದ್ದೆ.

ಅಲ್ಲಿದ್ದ ಮಂತ್ರಿಗಳು, ಇಲ್ಲಿದ್ದ ಮುಖ್ಯಮಂತ್ರಿಗಳು ಅವರವರ ಕೆಲಸದಲ್ಲೇ ಮುಳುಗಿದ್ದರು. ಹೊಸ ಮುಖ್ಯಮಂತ್ರಿ ಬಂದಿದ್ದಾರೆ, ಅವರಿಗೆ ನೀರಾವರಿ ಇಲಾಖೆ ನಿರ್ವಹಿಸಿ, ಅದರ ವ್ಯವಸ್ಥೆ ಗೊತ್ತಿದೆ. ನಾವು ಸ್ವಲ್ಪ ದಿನ ಕಾದು ನಂತರ ಹೋರಾಟ ಆರಂಭಿಸಿದ್ದೇವೆ.

ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ಹೇಳಿಕೊಳ್ಳಲಿ. ಅವರಿಗೆ ಉತ್ತರ ಕೊಡಲು ಸರ್ಕಾರ ಇದೆ, ನಾವ್ಯಾಕೆ ಉತ್ತರಿಸೋಣ? ನಾನು ಸರ್ಕಾರವಲ್ಲ. ನಾವು ಮೇಧಾ ಪಾಟ್ಕರ್ ಅವರ ಭಾವನೆ ಗೌರವಿಸುತ್ತೇವೆ. ಯೋಜನೆಗೆ ನನ್ನದೂ ಸೇರಿದಂತೆ ನಮ್ಮ ಕ್ಷೇತ್ರದ ಜನರ ಆಸ್ತಿಗಳು ಯೋಜನೆಗೆ ಹೋಗುತ್ತಿದ್ದು, ವಿರೋಧ ಮಾಡುವುದಾದರೆ ನಾವುಗಳು ಮಾಡಬೇಕು. ಈ ಯೋಜನೆಯಿಂದ ನಮ್ಮ ತಾಲೂಕಿಗೆ ಬಹಳ ನಷ್ಟ ಉಂಟಾಗಲಿದೆ. ಬೆಂಗಳೂರಿಗೆ ನೀರು ತರಬೇಕಾದರೆ ನಮ್ಮ ಜಮೀನು ಹೋಗುತ್ತವೆ. ರೈತರ ಜಮೀನಿಗೆ ಉತ್ತಮ ಬೆಲೆ ನೀಡುವಂತೆ ಹೋರಾಟ ಮಾಡುತ್ತೇವೆ. ಮಳವಳ್ಳಿ ಮೂಲಕವಾಗಿ ಬೆಂಗಳೂರಿಗೆ ನೀರು ತಂದಿದ್ದಾರಲ್ಲಾ, ಅಲ್ಲೆಲ್ಲಾ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ ಗೊತ್ತಾ? ಎಕರೆಗೆ ಕೇವಲ 30 ಸಾವಿರ,  50 ಸಾವಿರ, 1 ಲಕ್ಷದಂತೆ ಪರಿಹಾರ ಕೊಟ್ಟಿದ್ದಾರೆ. ಅವರು ಹಿರಿಯ ಮಹಿಳೆ, ಅವರಿಗೆ ಉತ್ತರ ನೀಡಲು ಬೊಮ್ಮಾಯಿ ಅವರು ಸೂಕ್ತ ವ್ಯಕ್ತಿ’ ಎಂದು ಉತ್ತರಿಸಿದರು.

ಬೆಂಗಳೂರಿನ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಮಾಡಿದರೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಬಹುದು ಎಂಬ ಹೇಳಿಕೆಗೆ, ‘ಸರ್ಕಾರ ಈ ವಿಚಾರವಾಗಿ ಸಮಿತಿ ಮಾಡಲಿ. ಎಲ್ಲಿ ಕಟ್ಟುನಿಟ್ಟಿನ ಪಾಲನೆ ಆಗುತ್ತಿದೆ. ಎಲ್ಲರೂ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಎಲ್ಲರೂ ಅದನ್ನು ಎಲ್ಲಿ ಮಾಡುತ್ತಿದ್ದಾರೆ?’ ಎಂದರು.

ಪಾದಯಾತ್ರೆ ಮತ್ತೆ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ, ‘ಪರಿಸ್ಥಿತಿ ಸುಧಾರಿಸಲಿ, ಸರ್ಕಾರ 10 ಜನರನ್ನು ಬಿಟ್ಟರೆ 10 ಜನ, ನೂರು ಜನರನ್ನು ಬಿಟ್ಟರೆ ನೂರು ಜನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಮಾಡುವ ಸಂಕಲ್ಪ ಯಾವಾಗಲೋ ಆಗಿದೆ’ ಎಂದರು.

ಪಾದಯಾತ್ರೆ ಯಶಸ್ಸಿಗಾಗಿ ನೀವು ಬಿಜೆಪಿಯ ಟಾರ್ಗೆಟ್ ಆಗುತ್ತೀರಾ ಎಂಬ ಪ್ರಶ್ನೆಗೆ, ‘ಮೇಕೆದಾಟು ಮಾಡಲಿ ಬಿಡಲಿ, ನನ್ನ ಮೇಲೆ ಅವರು ಏನೆಲ್ಲ ಪ್ರಯೋಗ ಮಾಡಬಹುದೋ ಅದನ್ನು ಮಾಡುತ್ತಿದ್ದಾರೆ. ಈಗ ನನ್ನ ಮಗಳು ಹೇಳುತ್ತಿದ್ದಾಳೆ, ನಮ್ಮ ಶಾಲೆಗೂ ನೋಟೀಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು. ಇದಕ್ಕೆ ಕೊನೆ ಇಲ್ಲ, ನಾವು ಇದರ ಜತೆಯೇ ಬದುಕಿ, ಸಾಯಲು ಸಿದ್ಧರಿದ್ದೇವೆ. ಇದನ್ನು ಎದುರಿಸದೆ ಬೇರೆ ಏನೂ ಮಾಡಲು ಆಗುವುದಿಲ್ಲ. ಕೇಸ್ ಹಾಕುವುದಾದರೆ ಒಟ್ಟಿಗೆ ಹಾಕಬಹುದು. ದಿನಾ ಒಂದೊಂದು ಕೇಸ್ ಯಾಕೆ ಹಾಕುತ್ತಾರೆ? ಎಲ್ಲರ ಮೇಲೂ ಕೇಸ್ ಹಾಕಬಹುದಲ್ಲಾ? ಯಾಕೆ ಬಿಜೆಪಿ ನಾಯಕರ ಮೇಲೆ ಕೇಸ್ ಇಲ್ಲ? ಬಿಜೆಪಿ ಕಾರ್ಯಕ್ರಮಗಳಲ್ಲಿ ಕೇವಲ 30 ಜನ ಮಾತ್ರ ಇದ್ದರಾ? ಅವರು ನನ್ನನ್ನು ಜೈಲಿಗೆ ಹಾಕಿ ಖುಷಿ ಪಡಬಹುದು, ಪಡಲಿ ಬಿಡಿ.

ಮುಖ್ಯಮಂತ್ರಿಗಳು ರಾಮನಗರ ಕಾರ್ಯಕ್ರಮಕ್ಕೆ ಬಂದ ದಿನವೇ ಆದೇಶ ಬಂದಿದ್ದು, ಅದರ ಮೇಲೆ ಕೇಸ್ ದಾಖಲಾಗಬೇಕು ಅಲ್ಲವೇ?ವಿಧಾನಸೌಧ ಕಾರ್ಯಕ್ರಮದ ವಿರುದ್ಧ ಕೇಸ್ ಹಾಕಲಿ. ಪೊಲೀಸ್ ಕಮಿಷನರ್ ಅವರು ತಮ್ಮ ವೃತ್ತಿ, ಸ್ಥಾನ ಹಾಗೂ ಸಮವಸ್ತ್ರಕ್ಕೆ ಗೌರವ ನೀಡುವುದಾದರೆ ಅಲ್ಲಿಗೆ ಬಂದಿದ್ದ ಎಲ್ಲರ ಮೇಲೂ ಕೇಸ್ ದಾಖಲಿಸಲಿ. ರಾಮನಗರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಇತ್ತಾ? ಜನಾಶೀರ್ವಾದ ಯಾತ್ರೆ ವಿಚಾರದಲ್ಲಿ ಮಂತ್ರಿಗಳ ವಿರುದ್ಧ ಯಾಕೆ ಕ್ರಮ ಇಲ್ಲ?’ ಎಂದು ಮರುಪ್ರಶ್ನಿಸಿದರು.

ನೀವು ಕಾನೂನು ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ನಾವು ಎಲ್ಲ ಮನವಿ ಸಲ್ಲಿಸಿದ್ದೇವೆ, ನ್ಯಾಯಾಲಯದ ಮೊರೆ ಹೋಗುತ್ತೇವೆ, ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಮಗೂ ಒಂದು ಕಾಲ ಬರುತ್ತದೆ. ಈಗ ಅದರ ಬಗ್ಗೆ ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದರು.

ಪಾದಯಾತ್ರೆ ಬಾವುಟ ಕಟ್ಟಲು ತಮಿಳುನಾಡಿನ ಕಾರ್ಮಿಕರು ಬಂದಿದ್ದಾರೆ ಎಂಬ ಕುಮಾರಸ್ವಾಮಿಯವರ ಟೀಕೆಗೆ, ‘ತಮಿಳುನಾಡಿನ ಜನ ನಮ್ಮ ಸಹೋದರರು, ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ. ಬೆಂಗಳೂರಿನ ಅನೇಕ ಜನ ಹೊಸೂರಿನಲ್ಲಿ ಕೆಲಸ ಮಾಡಿ ಬರುತ್ತಿದ್ದಾರೆ. ತಮಿಳುನಾಡು ಜನರಿಗೆ ನಾವು ಶಿಕ್ಷಣ ನೀಡುತ್ತಿದ್ದೇವೆ. ಗಡಿಯಲ್ಲಿ ನಾವು ಕಿತ್ತಾಡಬೇಕಾ? ನಮ್ಮ ಜಮೀನು ಅವರ ಜಮೀನು ಅಕ್ಕಪಕ್ಕ ಇದೆ. ಅವರು ಬಂದು ಇಲ್ಲಿ ಕೆಲಸ ಮಾಡಬಾರದೆ? ಇವರು ಹೊರ ರಾಜ್ಯದವರನ್ನು ಕೆಲಸಕ್ಕೆ ಇಟ್ಟುಕೊಂಡಿಲ್ಲವೇ? ಒಂದೊಂದು ರಾಜ್ಯದಲ್ಲೂ ಒಂದೊಂದು ಕೌಶಲ್ಯದ ಕಾರ್ಮಿಕರಿದ್ದಾರೆ. ಬಿಹಾರದಿಂದ ಉತ್ತಮ ಬಡಗಿ ಬರುತ್ತಾರೆ. ಮೈಸೂರು ಭಾಗದಲ್ಲಿ ಇನ್ನು ಕಾರ್ಮಿಕರಿದ್ದಾರೆ. ಮುಂಚೆ ತಮಿಳುನಾಡಿನಿಂದ ಕಾರ್ಮಿಕರು ಬರುತ್ತಿದ್ದರು, ಈಗ ಉತ್ತರ ಭಾರತದ ರಾಜ್ಯಗಳಿಂದ ಬರುತ್ತಿದ್ದಾರೆ. ಮುಂಚೆ ತಮಿಳುನಾಡು, ಆಂಧ್ರಪ್ರದೇಶಗಳಿಂದ ಭಟ್ಟರು ಬರುತ್ತಿದ್ದರು. ಈಗ ಅವರು ಎಲ್ಲಿದ್ದಾರೆ? ಅವರು ಸುಮ್ಮನೆ ತಮ್ಮ ಚಪಲಕ್ಕೆ ಮಾತನಾಡುತ್ತಾರೆ, ಮಾತನಾಡಲಿ ಬಿಡಿ’ ಎಂದರು.

ರೇಣುಕಾಚಾರ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂಬ ಪ್ರಶ್ನೆಗೆ, ‘ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಸರ್ಕಾರದ ಜತೆಗೆ ಅಧಿಕಾರಿಗಳ ವಿರುದ್ಧವೂ ಹೋರಾಡಬೇಕಾಗುತ್ತದೆ’ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಕುಮಾರ್ ಅವರನ್ನು ಐಟಿ, ಇಡಿ ಮೂಲಕ ನಿಯಂತ್ರಣ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗ ಆ ವಿಚಾರ ಬೇಡ. ಸಮಯ ಬಂದಾಗ ದಾಖಲೆಗಳ ಸಮೇತ ಮಾತನಾಡುತ್ತೇನೆ. ಜನರಿಗೆ ಈ ವಿಚಾರ ತಿಳಿಸುವ ಸಂದರ್ಭ ಬರುತ್ತಿದೆ. ಆ ಬಗ್ಗೆ ಆಗ ಮಾತನಾಡುತ್ತೇನೆ’ ಎಂದರು.

ಶಿವಕುಮಾರ್ ಅವರು ಬೇಲ್ ಮೂಲಕ ಆಚೆ ಇದ್ದಾರೆ ಎಂಬ ಸಿ.ಟಿ ರವಿ ಅವರ ಹೇಳಿಕೆಗೆ, ‘ಯಡಿಯೂರಪ್ಪ ಅವರು ಹೇಗೆ ಇದ್ದರಂತೆ?’ ಎಂದು ಕೇಳಿದರು.

ಕೋವಿಡ್ ಪರೀಕ್ಷೆ ಮಾಡಿಸಲಿ ಎಂದು ಬಿಜೆಪಿ ಸವಾಲೆಸೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಯಿಲೆ ಇರುವವರು ಆಸ್ಪತ್ರೆಗೆ ಹೋಗಬೇಕು. ಅವರಿಗೆ ಇದ್ದರೆ ಅವರು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲಿ’ ಎಂದರು.

ಬಿಜೆಪಿ ಅವರು ನಿಮ್ಮನ್ನೇ ಯಾಕೆ ಗುರಿಯಾಗಿಸಿ ಟೀಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ, ‘ಅವರಿಗೆ ನನ್ನ ಹೆಸರು ನೆನೆಸಿಕೊಂಡರಷ್ಟೇ ಶಕ್ತಿ ಬರುತ್ತದೆ. ನಾನೇ ಅವರಿಗೆ ಸ್ಫೂರ್ತಿ, ಜೀವ’ ಎಂದರು.

ಪಾದಯಾತ್ರೆಗೆ ರಕ್ಷಣೆ ನೀಡಿದ್ದ ಪೊಲೀಸರಲ್ಲಿ ಸೋಂಕು ಹೆಚ್ಚಾಗಿದೆ ಎಂಬ ಪ್ರಶ್ನೆಗೆ, ‘ಬಸವ ಕಲ್ಯಾಣದಲ್ಲಿ ನಡೆದ ಉಪಚುನಾವಣೆ ಸಮಯದಲ್ಲಿ ಶಿಕ್ಷಕರಿಗೆ ಸೋಂಕು ಹರಡಿದ್ದು, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅದಕ್ಕೆ ನಾವು ಕಾರಣವೇ?’ ಎಂದು ಪ್ರಶ್ನಿಸಿದರು.

ಸರ್ಕಾರದ ಅನೇಕ ಕಿರುಕುಳ ಮಧ್ಯೆ ನಾವು ಪಾದಯಾತ್ರೆ ನಡೆಸಿದೆವು. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು, ಜನರ ಭಾವನೆ ಪರಿಗಣಿಸಿ ಈ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಈ ಹೋರಾಟ ಆರಂಭಿಸುತ್ತೇವೆ. ಈ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ  ರಾಜ್ಯದ ಜನ ಎದುರಿಸುತ್ತಿರುವ ಸಂಕಷ್ಟ ನಿರ್ಮೂಲನೆಯಾಗಲಿ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ ಎಂದರು.

emedialine Desk

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago