ಈ ಸರಣೆಯ ನನ್ನ ಕೊನೆಯ ಬರಹ ಇದು. ಚರ್ಚೆಗಾಸ್ಪದ ನೀಡಲು ಕದನವಿರಾಮವೀಗ.ಜನಶಕ್ತಿಯ ಕೆಲವರು ನನ್ನ ಮೇಲೆ ಸ್ಯಾಡಿಸ್ಟೂ..! ಕೆಟ್ಟವ, ಇವನ್ನ ನಂಬಬೇಡಿ ಎಂದೆಲ್ಲ ತಮ್ಮ ಕ್ರಾಂತಿಯ ಕಚೇರಿಯಲ್ಲಿ ಕುಳಿತು ವೆಬ್ ಡಿಸೈನ್ ಪಾಂಪ್ಲೆಟ್ಸ್ ಮಾಡಿಸಿ ಪ್ರಚಾರ ಮಾಡುತ್ತಿದ್ದಾರೆ. ಮತ್ತು ಹಾಗೆ ಮಾಡಿರುವರು.
ಅದು ಬೇರೇನಲ್ಲ,ನಿಲಯದ ಕಲಾವಿದರಿಂದ ತಮ್ಮ ಹಿಂಬಾಲಕರಿಗಾಗಿ ನಡೆಸಿರುವ ವಾದ್ಯಗೋಷ್ಟಿ , ಅಲ್ಲಿ ಮುಖ್ಯ ಗಾಯಕರಿಲ್ಲ, ಕೋರಸ್ ರೋಧನೆಯೇ ಅಮಲು ಪದಾರ್ಥ. ಹಾಗೆ ಮಾಡದೇ ಹೋದರೆ ಕೇಡರ್ ಗಳು ಜೊತೆಗುಳಿಯಲಾರರು.
ಜನಶಕ್ತಿಯು ಇದುವರೆಗೆ ಕೊಟ್ಟಿರುವ ಪ್ರತಿಕ್ರಿಯೆಗಳು ಕರ್ನಾಟಕದ ಪ್ರಗತಿಪರರ ವಿವೇಕ ಮತ್ತು ಅಭಿರುಚಿಗಿಂತಾ ಕೆಳಗಿವೆ..!
ಜನಶಕ್ತಿಗೆ ತಾತ್ವಿಕ ಚರ್ಚೆಯೆಂದರೆ ಓಮೀಕ್ರಾನ್ ನಿಶ್ಯಕ್ತಿ..!ಬೈಯ್ಗುಳಗಳ ಬಡಿದಾಟವೆಂದರೆ ಜೀವನ್ ಟೋನ್ ತಿಂದಂತೆ ಹುಮ್ಮಸ್ಸು.ನಾನಿಲ್ಲಿ ಚರ್ಚಿಸುವ ಸಂಗತಿಗಳು ಹೀಗಿವೆ. —
1) ಗೌರಿ ಲಂಕೇಶ್ ಪತ್ರಿಕೆ ವಿದ್ಯಮಾನ ಮತ್ತು ನನ್ನ ಹಿಂದ್ಸರಿಕೆ.
2) ಹೋರಾಟ , ಪಬ್ಲಿಸಿಟಿ ಮತ್ತು ಪರಿಣಾಮಗಳು.
3) 2 ದಶಕಗಳ ಆಗುಹೋಗುಗಳತ್ತ ಕಣ್ಣೋಟ.
…………..
ಇದರ ನಡುವೆ ಗೈಡ್ ಪ್ರಕಾಶನ, ಜಾಬ್ ನ್ಯೂಸ್, ಲಂಕೇಶ್ ಪ್ರಕಾಶನದ ಸಂಗತಿಗಳಿದ್ದರೂ ಈಗ ಬದಿಗಿಡೋಣ.
ನಾನು ಪತ್ರಿಕಾ ತಂಡದಿಂದ ಹಿಂದೆಗೆಯುವ ತೀರ್ಮಾನ ಮಾಡುವಷ್ಟರಲ್ಲಿ ಭಿನ್ನ ನಿಲುವುಗಳು, ಚರ್ಚೆಗಳು, ಅಸಮಧಾನ-ಆಕ್ಷೇಪಗಳೂ ಸಹಜವಾಗಿ ಇದ್ದವು. ಆದರೆ ನಮ್ಮ ತಂಡ ಒಡೆದಿರಲಿಲ್ಲ. ನಾನೂ ಮತ್ತು ಗೌರಿ ಹೆಚ್ಚೂ ಕಡಿಮೆ ಇಸವಿ 2000 ದಿಂದ 2013 ರ ತನಕ ಟೀಮಿನ ಜೊತೆಯಾಗಿ ಸಾಗಿ ಬಂದೆವು.
ಜನಶಕ್ತಿಯವರ, ಈಶನ ಕಿರುಕುಳ ಕಣ್ಣೀರಿನ ಅಬ್ಬಾಯಿ ನಾಯ್ಡು ಸಿನಿಮಾ ಕತೆ ಒಂದು ಒಡೆದ ವಾದ್ಯ.
ಏಕೆಂದರೆ 15 ವರ್ಷಗಳ ಸ್ನೇಹ- ಒಡನಾಟಕ್ಕೆ ಕಿರುಕುಳವೆಂಬುದು ನೀರು ಗೊಬ್ಬರವಾಗದು.
ಕನ್ನಡ ಪತ್ರಿಕೋದ್ಯಮದಲ್ಲಿ ಜನಪರ ಮೀಡಿಯಾ ಸಂಸ್ಥೆ ಕಟ್ಟಿ ನಿರ್ವಹಿಸಿದ ಯಶೋಗಾಥೆಯನ್ನು ಪರಸ್ಪರರ ನಡುವಿನ ನಂಬಿಕೆ, ವಿಶ್ವಾಸದ ಮೂಲಕ ಸಾಧಿಸಲಾಯಿತೇ ಹೊರತು ಕಿರುಕುಳಗಳ ಮೂಲಕ ಅಲ್ಲವೇ ಅಲ್ಲ.
ಒಂದು ನಿರ್ಧಿಷ್ಟ ಹಂತದಲ್ಲಿ ನಮ್ಮ ತಂಡವು (ಗೌರಿ, ನಾನು, ರಾಜು, ರಾ.ಸೋಮನಾಥ್, ಸತ್ಯಂಪೇಟೆ, ಚಂದ್ರೇಗೌಡರು, ಅರುಣ್, ಸತೀಶ್, ಶಿವಸುಂದರ್, ಕಿಶೋರ್, ನಾಗಪ್ರಸಾದ್, ಜಗಾಪುರ್, ವಿನಯ್ ಹುನಗುಂದ್, ಆಲ್ ಬಾಳ್, ವಿವೇಕಾನಂದ , ರೀನಿ, ಸದಾಶಿವ ಶೆಣೈ, ಪ್ರೂಫ್ ದ್ವಾರಕಾನಾಥ್ ಹೀಗೆ )ಅನೇಕರ ಪರಿಶ್ರಮ, ಕನಸುಗಳು ಸೇರಿ ಆರೆಂಟು ಉಪ ಮಾಧ್ಯಮ ಉದ್ಯಮ ಚಟುವಟಿಕೆಯಾಗಿ ಹರಡಿಕೊಂಡಿದ್ದೆವು. ಕೇವಲ ಪುಸ್ತಕ ಮಾರಾಟದ ವಿಭಾಗದಲ್ಲಿ ನಮ್ಮ ತಂಡವು ಸುಮಾರು 180 ಪುಸ್ತಕ ಪ್ರಕಟಿಸಿ, ಪುನರ್ ಮುದ್ರಣವೂ ಸೇರಿದಂತೆ ಸುಮಾರು 3.ಲಕ್ಷ ಪ್ರತಿಗಳನ್ನು ಮಾರಾಟ ಮಾಡಿ 3 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಸಿತ್ತು.
ನಮ್ಮ ಪತ್ರಿಕಾ ಪ್ರಕಟಣೆಗಳಾದ ಗೌರಿ ಲಂಕೇಶ್, ಗೈಡ್, ಜಾಬ್ ನ್ಯೂಸ್, ಗೈಡ್ ಪ್ರಕಾಶನಗಳು ಕಳಪೆ ಮಾರಾಟದ್ದವಾಗಿರಲಿಲ್ಲ. ನಾವು ಕೈ ಹಾಕಿದ್ದ ಯಾವುದರಲ್ಲೂ ಸೋಲು ಕಂಡಿರಲಿಲ್ಲ. ನಾವು ಒಂದು ಕಾರ್ಮಿಕ ಪತ್ರಕರ್ತರ ತಂಡದಂತೆ ದಣಿವರಿಯದೆ ಕೆಲಸ ಮಾಡುತ್ತಿದ್ದೆವು.
– ಒಮ್ಮೆ ಜನಶಕ್ತಿಯವರು ಕಾಣಿಸಿಕೊಂಡು ಆವರಿಸಿಕೊಂಡ ನಂತರ ಪತ್ರಿಕೆಯ ನರೆಟೀವ್ ಮತ್ತು ವ್ಯಾಕರಣವೇ ಬದಲಾಗಲು ಶುರುವಾಯಿತು. ನಾವು ಅವರಂತೆ ಸರ್ಕಾರವನ್ನು ಪ್ರಭುತ್ವ (state) ಎಂತಲೂ, ಪೋಲೀಸರನ್ನು ಶತ್ರು (Enemy) ವೆಂಬ ಗ್ರಹಿಕೆಯ ಭಾಷೆಯಲ್ಲಿ ದಿನಬೆಳಗಾದರೆ ಸರ್ಕಾರವನ್ನು ಬೈಯುತ್ತಾ ಬರೆಯಬಾರದೆಂಬ ನಿಲುವು ನನ್ನದಾಗಿತ್ತು. ಅದು ಸಣ್ಣ ತಂಡವೊಂದು ಭರಿಸಲಾಗದ (political extremism) ಗ್ರಹಿಕೆ, ನಮ್ಮದೂ ಬೇರೆಯವರ ಅದೇ ನಿಲುವು ಆಗಿಬಿಡಬೇಕಾದ ಅಗತ್ಯವಿರಲಿಲ್ಲ.
2) ಮತ್ತೊಂದೆಡೆ ವೈಚಾರಿಕತೆ ಎಂದರೆ ಒರಟು ತರ್ಕವಲ್ಲ ಎಂಬುದು ನನ್ನ ನಿಲುವು. ಆದರೆ ಪತ್ರಿಕೆಗೆ (ಗೌರಿಗೆ). ಯೋಗೇಶ್ ಮಾಸ್ಟರ ‘ಪುರಾಣದ ಹೂರಣ’ ತರದ ಅಂಕಣ ಇರಲೆನಿಸಿತ್ತು. ವೈಚಾರಿಕತೆಯನ್ನು ಒಂದು ಒರಟು ನಿರೂಪಣೆಯಾಗಿ ಬರೆಯುವುಧು ಅಪಾಯಕಾರಿ. ಮಾರ್ಕ್ಸಿಸ್ಟ್ ಪರಿಭಾಷೆಯಲ್ಲಿ ಅದನ್ನು vulgar materialism ಎಂದು ವರ್ಗೀಕರಿಸುತ್ತಾರೆ. ಗೆಳೆಯ ಯೋಗೇಶ್ ಮಾಸ್ಟರ್ ಈ ಮಾತಿನಿಂದ ನೊಂದುಕೊಳ್ಳಬಾರದು, ಹೆಚ್ಚು ವಿವರಿಸಲು ಇಲ್ಲಿ ಅವಕಾಶವಿಲ್ಲ. ಆದರೆ ಇಂತಹ ಹಲವು/ಹಲವರ ಒರಟಾಟವು ಗೌರಿಯವರನ್ನು ಕೋಮುವಾದಿಗಳ ಕೆಂಗಣ್ಣಿಗೆ ಈಡು ಮಾಡುವತ್ತ ದೂಡಿತು.
– ಕೋಮು ಸೌಹಾರ್ದ ವೇದಿಕೆಯ ಬಹುತೇಕ ಎಲ್ಲಾ ಕಾರ್ಯಕ್ರಮ ಪ್ರತಿಭಟನೆಗಳಲ್ಲಿ ಗೌರಿಯವರು ಭಾಗಿಯಾಗುವ ಬಗ್ಗೆ ನಾನೊಮ್ಮೆ ಆಕ್ಷೇಪಿಸಿದ್ದೆ.
‘ಹತ್ತರಲ್ಲಿ ಎರಡು ಮೂರರಲ್ಲಿ ನೀವು ಭಾಗಿಯಾಗಿ, ಉಳಿದುದರಲ್ಲಿ ನಾಡಿನ ಇತರರು ಭಾಗವಹಿಸಿ ಭಾಷಣ ಮಾಡಲಿ’ ಎಂದೊಮ್ಮೆ ಸಲಹೆ ನೀಡಿದ್ದೆ. ಗೌರಿಯವರು ಒಂಟಿ ದನಿ (single out) ಆಗಬಾರದೆಂಬ ಕಾಳಜಿ ನನಗಿತ್ತು, ಜನಶಕ್ತಿಯವರು ನನ್ನ ಸಲಹೆ ಹೊಟ್ಟೇಕಿಚ್ಚಿನದೆಂದು ತಿಳಿದರು.ಈಗಲೂ ಅದೇ ಥಿಯರಿ ಹೇಳುವರು. ಮತ್ತು ಈಗಲೂ ಹೇಳುತ್ತಿದ್ದಾರೆ.
ಆಗಿನ ನನ್ನ ಕಾಳಜಿ, ಗ್ರಹಿಕೆಗಳು, ಮುಂದಿನ ಪರಿಣಾಮಗಳ ಬಗೆಗಿನ ಆತಂಕವು ಬದಿಗೆ ಸರಿಸಲ್ಷಟ್ಟಿತು.
ಪತ್ರಿಕೆಯನ್ನು ಭೂಗತರ ಕರಪತ್ರದಂತೆ ಎಲ್ಲೋ ಎಸೆದು ಪರಾರಿಯಾಗುವಂತೆ ಮಾಡಲಾಗದು, ನಾವೀ ಸಮಾಜದಲ್ಲೇ ಬರೆದು ಬದುಕಬೇಕು, ಬರೆದುದಕ್ಕೆಲ್ಲ ಅಕೌಂಟಬಿಲಿಟಿ ಇರುತ್ತದೆ, ಅದು basic line of our social life, ಸಂಡೇ ಮಂಡೇ ನಂತರ ಮುಂದಕ್ಕೆ ಯೋಚಿಸಲಾಗದವರು ವರ್ಷದ ಪ್ಲಾನ್ ಮಾಡಲು ಶಕ್ತರೇನು..?
– ಇದಲ್ಲದೇ ಗೌರಿಯವರಲ್ಲಿ ಪಬ್ಲಿಸಿಟಿಯ ಆಕಾಂಕ್ಷೆಯೊಂದನ್ನು ಜನಶಕ್ತಿಯವರು ಪೋಷಿಸುತ್ತಾ ಬಂದರು. ಅದರ ನೆರಳಲ್ಲಿ ತಮ್ಮ ಸಂಘಟನೆಗೆ ಜನಬೆಂಬಲ ಹಿಡಿದಿಟ್ಟುಕೊಳ್ಳುವುದು ಅವರಿಗೆ ಲಾಭದಾಯಕವೆನಿಸಿತ್ತೇನೊ..!? ಆ ವಿದ್ಯಮಾನಗಳಲ್ಲೂ ಗೌರಿ ಕೋಮುವಾದಿಗಳ ಕಣ್ಣಲ್ಲಿ ತಮಗೆದುರಾಗಿ ಗೌರಿ ಒಬ್ಬಳೇ ಶತ್ರುವೆಂಬ ಆಕ್ರೋಶ ಮಡುಗಟ್ಟುವಂತಾಯಿತೇನೋ..?
ನಾನೊಮ್ಮೆ ಗೌರಿಗೆ ಇದರ ಬಗ್ಗೆ ಎಚ್ಚರಿಸಿದಾಗ ನಿರುಮ್ಮಳವಾಗಿ’ weather good or bad, we need publicity’ ಎಂದರು.
ಇದೆಲ್ಲ ರಂಪಾಟ, ಕ್ಷೋಭೆಗಳ ನಡುವೆ ಬಹುಷ 2012-13 ರಲ್ಲೇ ಒಮ್ಮೆ ಕೇಂದ್ರ ಸರ್ಕಾರದ ಗೂಢಚರ್ಯೆ ಇಲಾಖೆ ಐಬಿಯ (intelligence bureau ) ಮಹಿಳಾ ಆಫೀಸರ್ ಒಬ್ಬರು ಗೌರಿಯ ಭೇಟಿ ಬಯಸಿ ಕರೆಸಿ ಮಾತನಾಡಿದರು. ಅವತ್ತು ಗೌರಿ ಒಬ್ಬರೇ ಹೋಗಲು ಹಿಂಜರಿದು ಆ ಅಧಿಕಾರಿಗೆ ತಿಳಿಸಿಯೇ ನನ್ನನ್ನೂ ಜೊತೆಗೆ ಕರೆದುಕೊಂಡು ಹೋದರು. ಸಂಜೆ ‘ವೆಸ್ಟ್ ಎಂಡ್’ ಹೋಟಲಿನಲ್ಲಿ ಎರಡು ತಾಸಿನ ಭೇಟಿ-ಮಾತೂಕತೆಯದು. ನಿರ್ಧಿಷ್ಟ ನೇರ ತನಿಖೆಯಂತಹ ವಿಷಯವೇನೂ ಇರದಿದ್ದರೂ ಆ ಆಫೀಸರ್ ಗೌರಿಗೆ ಕೆಲವು ಸಂಯಮದ ವರ್ತನೆಯ ಹಾಗೂ ಯಾರ ಯಾರ ಜೊತೆ ಒಡನಾಡುತ್ತಿರುವಿರೆಂಬ ಬಗ್ಗೆ ಗಮನಿಸಿಕೊಳ್ಳುವಂತೆ ಸಲಹೆ, ಸೂಚನೆಗಳನ್ನು ನೀಡಿದರು.
ಈ ಬರಹ ದೀರ್ಘವಾಗಬಾರದೆಂದು ಸಂಕ್ಷಿಪ್ತಗೊಳಿಸಿ ಹೇಳಿರುವೆ.
ನಂತರ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲೂ ಗೌರಿಯವರ ಅತೀ ಉತ್ಸಾಹವು ಅಪಾಯವನ್ನು ಮೈಮೇಲೆಳೆದುಕೊಂಡಂತಾಯಿತು.
ಈಗ್ಗೆ ನೂರು ವರ್ಷಗಳಿಂದಲೂ ಲಿಂಗಾಯತದ ಜುಟ್ಟು ಹಿಡಿದು ನಿಯಂತ್ರಿಸುತ್ತಿರುವ ವೀರಶೈವವು ಹಿಂದುತ್ವವಾದದೊಂದಿಗೆ ಸೇರಿ ಈಗ ವ್ಯಗ್ರಾವತಾರ ತಾಳಿದೆ.
ಪವರ್ ಸೆಂಟರ್ ನೊಂದಿಗಿರುವುದು ಲಾಭದಾಯಕವೆಂಬುದೀಗ ಬರೀ ವೀರಶೈವಕ್ಕೆ ಮಾತ್ರವಲ್ಲ, ಲಿಂಗಾಯತ ಮೇಲ್ ಸ್ತರಕ್ಕೂ ಗೊತ್ತಿದೆ.
ಹಾಗಾಗಿಯೇ ಲಿಂಗಾಯತ ಸ್ವತಂತ್ರ ಧರ್ಮ ಪ್ರತಿಪಾದನೆಗೆ ಬೇಕಾದ ತಾತ್ವಿಕ, ದಾರ್ಶನಿಕ ಸಾಮಾಜಿಕ ವಿಚಾರಗಳನ್ನು ಶೋಧಿಸಿ ಒದಗಿಸುತ್ತಿದ್ದ ಎಂ.ಎಂ.ಕಲ್ಬುರ್ಗಿಯವರನ್ನು ಕೊಲೆ ಮಾಡಲಾಯಿತು. ಗೌರಿ ಪತ್ರಿಕೆಯು ಆ ಆಶಯದ ಸಂಭವನೀಯ ಪ್ಲಾಟ್ ಫಾರಂ ಆಗಕೊಡದೆಂಬುದೂ ಅವರ ಹತ್ಯೆಯ ಕಾರಣಗಳಲ್ಲಿ ಒಂದೆಂಬುದು ಈಗ ಸ್ಪಷ್ಟ. ನಾಡಿನ ಲಿಂಗಾಯತರು ಇವರಿಬ್ಬರ ಸಾವನ್ನು ಸಮಾಜಕ್ಕಾದ ಹಾನಿಯೆಂದು ಭಾವಿಸದೆ ಬಿಟ್ಟು ಕೊಟ್ಟಿದ್ದು ಕಾಣುತ್ತಿದೆ.
ಗೌರಿಗೆ ಇದೆಲ್ಲದರ ಗಂಭೀರತೆ ಅರಿವಾಗಲಿಲ್ಲ.ಇದೆಲ್ಲದರ ಪರಿಣಾಮದಲ್ಲಿ ನಾನು ತಂಡದಿಂದ ಹಿಂದೆ ಸರಿಯುವಾಗ 2013ರ ನವೆಂಬರ್‌ನಲ್ಲಿ ಗೌರಿಗೆ ಬರೆದಿದ್ದ ಪತ್ರವನ್ನು ಇಲ್ಲಿ ನೀಡಿರುವೆ. ಆ ಪತ್ರವನ್ನು ಗೌರಿ ಪಡೆದು ಸಹಿಯೂ ಮಾಡಿದ್ದಾರೆ. ಆ ಪತ್ರದ ಸಾರಾಂಶದಲ್ಲಿ ಪತ್ರಿಕಾ ತಂಡದಲ್ಲಿ ವೃತ್ತಿಪರತೆ ಇರದಿರುವುದು,
ಗೌರಿಯವರ ಕೆಲ ದುಡುಕಿನ ನಡೆಗಳು,ಜನಶಕ್ತಿಯ ಒಳನುಸುಳುವಿಕೆಯ ಬಗ್ಗೆ ಪರೋಕ್ಷ ಪ್ರಸ್ತಾಪ ಮುಂತಾದ ಸಂಗತಿಗಳಿವೆ.
ಮತ್ತೊಂದು ಕೈಬರಹದ ಪತ್ರವು ನೂರ್ ಶ್ರೀಧರ್ ರವರದ್ದು.ಪಾರ್ವತೀಶ್ ನಿಲುವು ಸರಿ ಎಂಬರ್ಥದ ಮಾತನ್ನು ನೂರ್ ಶ್ರೀಧರ್ ಪತ್ರ ದ್ವನಿಸುತ್ತಿದೆ. ಮತ್ತು ಗೌರಿಯವರ ಕೆಲವು ತಪ್ಪು ನಡೆಗಳ ಬಗ್ಗೆ ನೇರವಾಗಿ ತಿಳಿಸಿರುವುದಾಗಿಯೂ ನೂರ್ ಶ್ರೀಧರ್ ಬರೆದಿರುವುದು ಇಲ್ಲಿದೆ. ಅವರು ಆದೇತಾನೆ ಮುಖ್ಯವಾಹಿನಿಗೆ ಬಂದ ಹಿಂದು ಮುಂದಿನ ಸಮಯವಿರಬೇಕದು.
‘ಪಾರ್ವತೀಶ್ ಪತ್ರಿಕೆಗೆ ವಾಪಸ್ ಬರಲಿ ಎಂದು ಗೌರಿಯವರು ಬಯಸುತ್ತಿದ್ದಾರೆಂದು’ ಸ್ವತ ನೂರ್ ಶ್ರೀಧರ್ ಆ ಪತ್ರದಲ್ಲಿ ಪ್ರಾಮಾಣಿಕವಾಗಿ ಹೇಳಿರುವುದನ್ನು ನನ್ನ ಹೆಗ್ಗಳಿಕೆ ಎಂದು ಹೇಳಿಕೊಳ್ಳಲಾರೆ, ಆದರೆ ನಾನು ಗೌರಿಗೆ ತೊಂದರೆ ಕೊಟ್ಟೆ ಎಂಬ ಜನಶಕ್ತಿಯವರ ವಿಕೃತಿಯ ಪ್ರಚಾರ ನಿಜವಲ್ಲ ಎಂಬುದನ್ನು ಸಾಬೀತು ಮಾಡಲು ಇಷ್ಟು ಸಾಕು. ನಾನು ಕಿರುಕುಳ ಕೊಟ್ಟವನಾಗಿದ್ದರೆ ನನ್ನ ವಾಪಸ್ ಬರುವಿಕೆಗಾಗಿ ಗೌರಿಯೇಕೆ ಹಂಬಲಿಸಬೇಕಿತ್ತು?
ಆಗೊಮ್ಮೆ ಗೌರಿ ನನ್ನ ಭೇಟಿಯಾಗಿ ‘ವಾಪಸ್ ಬಾ’ ಎಂದರು. ಜನಶಕ್ತಿಯವರು ಇದ್ದರೆ ಬರಲಾರೆ, ಅವರಿರಬೇಕಾದ್ದು ಜನರ ಬಳಿ, ಪತ್ರಿಕಾ ಕಚೇರಿಯೊಳಗಲ್ಲ’ ಎಂದು ಸುಮ್ಮನಾದೆ.
ಇಷ್ಟಾದ ಮೇಲೂ ಗೌರಿ ಮತ್ತು ನಾನು ಬಹಿರಂಗವಾಗಿ ಎಂದೂ ಪರಸ್ಪರ ಜಗಳವಾಡಲಿಲ್ಲ, ಸಂಸ್ದೆಯ ಮ್ಯಾನೇಜರ್ ರಾಜುರವರ ದುಡುಕಿನ ದೌರ್ಜನ್ಯದ ವರ್ತನೆಗಳು ಆಗ ನನ್ನನ್ನು ಸಿಟ್ಟಿಗೆಬ್ಬಿಸಿ ಆತನೊಂದಿಗೆ ಜಗಳಕ್ಕೆ ಕಾರಣವಾಗಿತ್ತು. ಈಗಲೂ ನನಗನಿಸುವುದು ರಾಜು ಒಳ್ಳೆಯ ಮನುಷ್ಯ, ಆದರೆ ಆತನದ್ದು ದುಡುಕಿನ ಸ್ವಭಾವವೆಂದು.
ಇದೆಲ್ಲದರ ನಡುವೆ ಗೌರಿಯವರು ತಾನು ಹತ್ಯೆಯಾಗುವ ಮುನ್ನ ತನ್ನ ಹೆಸರಿನಲ್ಲಿದ್ದ ‘ಗೌರಿ ಲಂಕೇಶ್ ವಾರ ಪತ್ರಿಕೆ’ಯ ಟೈಟಲ್ ಮಾಲೀಕತ್ವವನ್ನು (2015ರಲ್ಲಿ, ಅಂದರೆ ನಾನು ಪಾಲುದಾರನಾಗಿದ್ದರೂ ತಂಡದಿಂದ ಹಿಂದೆ ಸರಿದು 2 ವರ್ಷಗಳಾದ ನಂತರವೂ) ನಾನು ಪಾಲುದಾರನಾಗಿದ್ದ ಲಂಕೇಶ್ ಮೀಡಿಯಾ ಹೆಸರಿಗೆ ತಮ್ಮ ಕೈ ಬರಹದಲ್ಲೇ ವರ್ಗಾಯಿಸಿದ್ದರು.
ಅದರ ಆರ್ ಎನ್ ಐ ದಾಖಲೆಯನ್ನು ಇಲ್ಲಿ ನೀಡಿರುವೆ..!ಕಿರುಕುಳ ಇತ್ಯಾದಿ ನಿಜವಾಗಿದ್ದರೆ ಗೌರಿ ಆ ತೀರ್ಮಾನ ಮಾಡಲು ಹೇಗೆ ಸಾಧ್ಯವೇ? ಅದು ನನ್ನ ವ್ಯಕ್ತಿತ್ವ, ಅನುಭವ, ಸಾಮರ್ಥ್ಯದ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ತೋರುತ್ತಿದೆ.ಈಗ ಜನಶಕ್ತಿಯಲ್ಲಿರುವ ಕೆಲವರು ಭೂಗತ ಜೀವನ ನಡೆಸುತ್ತಿದ್ದಾಗ ಅವರು ಮುಖ್ಯವಾಹಿನಿಗೆ ಬರುವಲ್ಲಿ ನನ್ನ ಪ್ರಯತ್ನವೂ ಇತ್ತು.
ಈಗ ನೋಡಿದರೆ ಗೌರಿ ನನ್ನ ಬಗ್ಗೆ ಇಟ್ಟಿದ್ದ ವಿಶ್ವಾಸವು ಕಿರುಕುಳವೆಂಬಂತೆಯೂ, ಭೂಗತರನ್ನು ಕರೆತಂದು ಸಹಜ ಜೀವನ ಕಲ್ಪಿಸಿದ್ದು ಹಿಡಿದು ಕೊಟ್ಟ ಪಿತೂರಿಯೆಂಬಂತೆಯೂ ಬಿಂಬಿಸಲಾಗುತ್ತಿದೆ.
ಇದು ಅಸಂಗತ ನಾಟಕವೊಂದಕ್ಕೆ ಅದ್ಭುತ ಪ್ಲಾಟ್ ಆಗಬಲ್ಲದಿದು.ಗೌರಿ ಸಾವಿನ ನಂತರ ಈ ಐದು ವರ್ಷದಲ್ಲಿ ಆಗ ನಾವೆಲ್ಲ ಕಟ್ಟಿದ್ದರಲ್ಲಿ ಏನೇನು ಉಳಿದಿದೆಯೆಂದು ಒಮ್ಮೆ ನೋಡುವುದೊಳಿತು. ಅಲ್ಲಿ ಕಾಣುವುದೀಗ ಗೌರಿ ಹೆಸರಿನ ಆಲಾಪನೆಯೊಂದೇ..!
ಕರ್ನಾಟಕದ ಜನಪರ ಚಳವಳಿಗಳಿಗಿದ್ದ ಪುಟಿದೇಳುವ ಅಪೂರ್ವ ಅವಕಾಶವೊಂದನ್ನು ಆಗ ಮುಂಚೂಣಿಯಲ್ಲಿ ನಿಂತ ಜನಶಕ್ತಿಯು ವ್ಯರ್ಥಗೊಳಿಸಿತು. ಗೌರಿಯವರ ಮರಣವನ್ನು ತನ್ನ ಸಂಘದ ಅನುಕೂಲಕ್ಕಾಗಿ ಹೆಚ್ಚು ಬಳಸಿತು. ಎಲ್ಲರನ್ನೂ ಒಟ್ಟಿಗೆ ಬೆಸೆಯಬಲ್ಲದ್ದಾಗಿದ್ದ ಸಂದರ್ಭವನ್ನು ಅದು ಮನಗಾಣಲಿಲ್ಲ.
ಇದೆಲ್ಲಾ ಒಂದು ರುದ್ರ ನಾಟಕದ ದೃಶ್ಯಗಳಂತೆ ಭಾಸವಾಗುತ್ತದೆ..!
3) ಕಳೆದ ಎರಡು ದಶಕಗಳ ಕರ್ನಾಟಕದ ಜನಪರ ಚಳವಳಿಗಳು, ಹೋರಾಟ, ಹಾರಾಟ, ಪತ್ರಿಕೋದ್ಯಮ, ಓದು ಬರಹಗಳಲ್ಲಿ ನಾನೂ ಅಲ್ಲೊಂದಿಲ್ಲೊಂದು ಪಾರ್ಟು ಮಾಡಿದ್ದೇನೆ. ಅತಂತ್ರ ಬದುಕು, ಏರಿಳಿತಗಳ ನಡುವೆಯೂ
ಈಗಲೂ ಮನಸು ಅತ್ತಲೇ ಎಳೆಯುವುದು.
ಈ ಪ್ರಕ್ರಿಯೆಯಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಸಿದ್ಧಾಂತ, ನಕ್ಸಲ್ ವಾದದ ನೆರಳು, ಪೆರಿಯಾರ್ ವಾದ, ಕನ್ನಡ ಅಸ್ಮಿತೆಯ ಆಕಾಂಕ್ಷೆ, ರೈತ -ದಲಿತ, ಮಹಿಳಾ, ಕಾರ್ಮಿಕರ, ವಿದ್ಯಾರ್ಥಿ ಯುವಜನ, ಕಲಾವಿದರ ದನಿಯೂ
ವಿಚಾರ ಮಂಥನ, ಬೆಸುಗೆ, ಒಡಕು, ಜಗಳಗಳೂ
ಭೀತಿಯ ನೆರಳಲ್ಲೇ ಕನಸ್ಸೂ, ಕನವರಿಕೆ, ಮುನ್ನಡೆಯ ಪ್ರಯತ್ನಗಳೂ ಕಾಣುತ್ತಿವೆ.ಇದೆಲ್ಲಾ ಸರಿ,ನಾವು ಏನನ್ನೇ ಆಗಲಿ ಮಾಡಲು ಹೊರಡುವ ಮುನ್ನ,ಕೈಗೆತ್ತಿಕೊಳ್ಳುವ ಮುನ್ನ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಹಂಬಲಿಸುವವರ ಬೆನ್ನು ತಟ್ಟುವ ಮುನ್ನ ಅದರ ಪರಿಣಾಮಗಳತ್ತಲೂ ನಿಗಾ ನಮಗಿರಬೇಕು.
ತೀರಾ ದೀರ್ಘವಾಯಿತೇನೋ, ಚರ್ಚಿಸಲು ಬೇಕಾದಷ್ಟಿದೆ, ಒಮ್ಮೆ ಸಿಕ್ಕು ಮಾತನಾಡೋಣವೆ ನೂರ್ ಶ್ರೀಧರ್. ಜೊತೆಗೆ ನಾವು ಬಲ್ಲ ಕೆಲವು ಗೆಳೆಯರೂ ಇರಲಡ್ಡಿಯಿಲ್ಲ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…