ಅಂಕಣ ಬರಹ

ಜ್ಞಾನ, ಪ್ರಜ್ಞೆಯ ಪ್ರತೀಕ ಉರಿಲಿಂಗದೇವ, ಉರಿಲಿಂಗಪೆದ್ದಿ, ಕಾಳವ್ವೆ

ಬಸವಣ್ಣನವರು ಸಮಾಜೋದ್ಧಾರ್ಮಿಕ ಕ್ರಾಂತಿ ಮಾಡಿದರು. ಅಲ್ಲಿ ಯಾವುದು ಸ್ವಂತ ಪ್ರತಿಷ್ಠೆಗಾಗಿ ಇರಲಿಲ್ಲ. ಸಮಷ್ಠಿಪ್ರಜ್ಞೆಗಾಗಿ ಬಸವಾದಿ ಶರಣರು ದುಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಅವರು ಪ್ರೀತಿಸಿದರು. ಜಗತ್ತಿನಲ್ಲಿ ಪ್ರೀತಿ ಬಹಳ ಮುಖ್ಯ. ಮಾನವೀಯ ಮೌಲ್ಯಗಳು ಕಿಲುಬುಗೆಟ್ಟು ಅಶಾಂತಿ ತಾಂಡವಾಡುತ್ತಿರುವ ಇಂದಿನ ದುರ್ಬರ ದಿನಗಳಲ್ಲಿ ಪ್ರೀತಿಯ ಒರತೆ ಎಂದೂ ಬತ್ತಬಾರದು. ಅದು ನಿರಂತರವಾಗಿ ತುಂಬಿ ಚೈತ್ರದ ಚಿಲುಮೆಯಾಗಿ ಚಿಮ್ಮುತ್ತಿರಬೇಕು. ಅಂತಹ ಚೈತ್ರದ ಚಿಲುಮೆ ಬಸವಣ್ಣನವರು.

ಯಾವುದೇ ಸಂಪರ್ಕಸಾಧನವಿಲ್ಲದ ಆ ಕಾಲದಲ್ಲಿ ದೂರದ ಊರುಗಳಿಂದ ಬಂದ ಅನೇಕ ಶರಣರು ಕಲ್ಯಾಣದ ಅಂಗಳದ ಸದಸ್ಯತ್ವ ಪಡೆದು ಬಸವಾದಿ ಶರಣರ ತತ್ವವನ್ನು ತಲೆಯ ಮೇಲೆ ಹೊತ್ತುಕೊಂಡರು. ಅಂಥವರನ್ನು ಅಣ್ಣಯ್ಯ, ಅಕ್ಕಯ್ಯ ಎಂಬ ಗೌರವದ ಪದಗಳಿಂದ ಕರೆದವರು ಬಸವಣ್ಣನವರು. ದೀನ, ದಲಿತ, ಅನಾಥ, ನಿರಾಶ್ರಿತ, ವಿಧವೆಯರು ಸೇರಿದಂತೆ ೧೨ ಸಾವಿರ ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಹೀನವೃತ್ತಿಯಲ್ಲಿ ತೊಡಗಿದ ಸೂಳೆ ಸಂಕವ್ವೆ ಮುಂತಾದವರನ್ನು ಸಮಾಜದ ಮುಖ್ಯವಾಹಿನಿಗೆ ತಂದವರು ಬಸವಣ್ಣನವರು. ಹೀಗಾಗಿ ಕನ್ನದ ಮಾರಿತಂದೆ, ಬಿಕಾರಿ ಭೀಮಣ್ಣ, ಹೆಂಡದ ಮಾರಯ್ಯ, ಕುರುಬ ಗೊಲ್ಲಾಳ, ಕೊಟ್ಟಣದ ಸೋಮವ್ವೆ, ಕಸಗುಡಿಸುವ ಸತ್ಯಕ್ಕ, ಕಿನ್ನರಿ ಬೊಮ್ಮಯ್ಯ ನೂರಾರು ಕಾಯಕ ಜೀವಿಗಳು ಕಲ್ಯಾಣಕ್ಕೆ ಬಂದು ಬಸವಸಮುದ್ರ ಸೇರಿಕೊಂಡರು.

ಮಹಾರಾಷ್ಟ್ರದ ನಾಂದೇಡ ಬಳಿಯಿರುವ ಕಂದಹಾರದಲ್ಲಿ ಒಬ್ಬ ಗುರುವಿದ್ದ. ಅವರ ಹೆಸರು ಉರಿಲಿಂಗದೇವ. ಈ ಉರಿಲಿಂಗದೇವನ ಗುರು ಶಿವಲೆಂಕ ಮಂಚಣ್ಣ, ಇವರು ಕಾಶಿಯಿಂದ ಬಂದಿದ್ದರು. ಉರಿಲಿಂಗದೇವರ ಶಿಷ್ಯ ಉರಿಲಿಂಗಪೆದ್ದಿ, ಈತನ ಹೆಂಡತಿ ಕಾಳವ್ವೆ ಎಂಬ ದಲಿತ ಪರಂಪರೆಯ ಶರಣರಿದ್ದರು. ಗುರು ಉರಿಲಿಂಗದೇವ ಅಂಕಿತದಲ್ಲಿ ೪೮ ವಚನಗಳನ್ನು ಬರೆದರೆ, ಶಿಷ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಅಂಕಿತದಲ್ಲಿ ೩೩೬ ವಚನಗಳನ್ನು ಬರೆದರು. ಆತನ ಪತ್ನಿ ಕಾಳವ್ವೆ ಉರಿಲಿಂಗಪೆದ್ದಿಗಳರಸ ಅಂಕಿತದಲ್ಲಿ ೧೨ ವಚನಗಳನ್ನು ಬರೆದಿದ್ದಾಳೆ.

ಕನ್ನಹಾಕುವ ವೃತ್ತಿ ಮಾಡುತ್ತಿದ್ದ ಉರಿಲಿಂಗಪೆದ್ದಿ, ಒಮ್ಮೆ ಕಳ್ಳತನಕ್ಕೆಂದು ಒಂದು ಮನೆಗೆ ಹೋಗಿ ಬೆಳಕಿಂಡಿಯಲ್ಲಿ ನೋಡಿದಾಗ, ಗುರುಗಳು ಆ ಮನೆಯ ಯಜಮಾನನಿಗೆ ಲಿಂಗದೀಕ್ಷೆ ಮಾಡುತ್ತಿರುತ್ತಾರೆ. ಬೆಳಕಿನ ಆ ಅನುಭವ ಪಡೆದ ಉರಿಲಿಂಗ ಇವತ್ತಿನಿಂದ ನಾನು ಕಳ್ಳತನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಒಂದು ತಿಂಗಳು ಮಠದ ಅಂಗಳದ ತುಂಬ ಕಟ್ಟಿಗೆ ಕಡಿದು ಹಾಕಿದ. ನನಗೂ ದೀಕ್ಷೆ ಕೊಡಿ ಎಂದು ಗುರುಗಳನ್ನು ಕೇಳುತ್ತಾನೆ. ಅಸ್ಪೃಶ್ಯಕುಲದಲ್ಲಿ ಹುಟ್ಟಿದ ನಿನಗೆ ಲಿಂಗದೀಕ್ಷೆ ಕೊಡಲು ಬರುವುದಿಲ್ಲ ಎಂದು ನಿರಾಕರಿಸಿ ಕಲ್ಲೊಂದನ್ನು ಎಸೆಯುತ್ತಾರೆ. ಅದೇ ಕಲ್ಲನ್ನು ಲಿಂಗವೆಂದು ನಂಬಿ ಪೂಜಿಸುತ್ತಾನೆ. “ಬಳ್ಳ, ಕುರಿ ಹಿಕ್ಕಿ ಲಿಂಗವೆ?” ಎಂದು ಪ್ರಶ್ನಿಸಿಕೊಳ್ಳುತ್ತಾ, “ಸಜ್ಜನ, ಸದ್ಭಾವದಿಂದರ್ಚಿಸಲು ಲಿಂಗ” ಎಂಬ ಉತ್ತರವನ್ನು ಕಂಡುಕೊಳ್ಳುತ್ತಾನೆ.

ಹೀಗೆ ಕೆಲ ಕಾಲ ಕಳೆಯುತ್ತಿರಲು ಆ ಪ್ರದೇಶದಲ್ಲಿ ಮಳೆ ಬಾರದೆ ಜನ ಕಂಗಾಲಾದರು. ಅಲ್ಲಿನ ಅರಸನಾದ ನಂದರಾಜನು ಪ್ರಜೆಗಳ ಕಷ್ಟ ನಿವಾರಣೆಗಾಗಿ ಕೆರೆ ಬಾವಿ ತೋಡಿಸಿದ. ಆದರೆ ಅವುಗಳಲ್ಲಿ ನೀರು ಚಿಮ್ಮಲಿಲ್ಲ. ಆಗ ಅರಸ ಉರಿಲಿಂಗದೇವರ ಹತ್ತಿರ ಬಂದು ಕಷ್ಟ ತೋಡಿಕೊಂಡನು. ಗುರುಗಳು ತನ್ನ ಶಿಷ್ಯನಾದ ಪೆದ್ದಣ್ಣನನ್ನು ಕರೆಸಿ ಈ ವಿಷಯ ತಿಳಿಸಿದರು. ಆಗ ಪೆದ್ದಣ್ಣ ತನ್ನ ಹೃದಯದಲ್ಲಿ ನೆಲೆನಿಲ್ಲಿಸಿಕೊಂಡಿದ್ದ ಗುರುಗಳು ಕರುಣಿಸಿದ ಇಷ್ಟಲಿಂಗವನ್ನು ಕೆರೆಯ ಮಧ್ಯೆ “ಘೇ ದಗಡಿ ಜಾ” ಎಂದು ಎಸೆದನು. ಅದು ಕೆರೆಯ ಮಧ್ಯದಲ್ಲಿರುವ ಹೆಬ್ಬಂಡೆ ಸೀಳಿ ಅದರ ಬುಡದಲ್ಲಿ ನೀರು ಉಕ್ಕಿ ಹರಿಯತೊಡಗಿತು. ಶಿಷ್ಯನ ಈ ಮಹತಿಯನ್ನು ಕಂಡ ಗುರುಗಳು, ಉರಿಲಿಂಗಪೆದ್ದಿಯನ್ನು ತಮ್ಮ ಪರಂಪರೆಯ ಪೀಠಕ್ಕೆ ನೀವೇ ಪೀಠಾಧಿಕಾರಿ ಎಂದು ಘೋಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಅದರಂತೆ ಕರ್ನಾಟಕದ ಮೈಸೂರು ಮತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಮುಂತಾದ ಕಡೆ ಇಂದಿಗೂ ಉರಿಲಿಂಗಪೆದ್ದಿ ಮಠಗಳಿರುವುದನ್ನು ಕಾಣಬಹುದು. ಇಳಕಲ್ ಚಿತ್ತರಗಿ ಸಂಸ್ಥಾನದ ೧೯ನೇ ಪೀಠಾಧಿಪತಿಯಾಗಿದ್ದ ಮಹಾಂತ ಜೋಳಿಗೆ ಖ್ಯಾತಿಯ ಲಿಂ. ಮಹಾಂತ ಶಿವಯೋಗಿಗಳೂ ಸಹ ತಮ್ಮ ಶಾಖಾಮಠಗಳಾದ ಸಿದ್ದಯ್ಯನಕೋಟೆ ಮತ್ತು ಲಿಂಗಸೂಗೂರು ಪೀಠಗಳಿಗೆ ದಲಿತ ಸ್ವಾಮೀಜಿಯನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಒಂದೇ ವಸ್ತು ತನ್ನ ಲೀಲೆಯಿಂದ
ಪರಮಾತ್ಮ ಜೀವಾತ್ಮನಾಯಿತ್ತು
ಆ ಪರಮಾತ್ಮನೆ ಲಿಂಗ, ಜೀವಾತ್ಮನೆ ಅಂಗ, ಸಂಗವೆ
ಏಕಾತ್ಮ
ತತ್ಪದವೆ ಪರಮಾತ್ಮವಯ್ಯ

ಅಂಗ-ಲಿಂಗ ಸಮರಸವಾಗುವುದನ್ನು ಹೇಳುವ ಪೆದ್ಣಣ್ಣನವರು ಶರಣರ ಸಂಗದಿಂದಲೇ ಏಕಾತ್ಮವಾಗಬಹುದು. ಅದರಿಂದಲೇ ಪರಮಾತ್ಮನ ಕಾಣಬಹುದು ಎಂದು ಹೇಳುತ್ತಾರೆ. ಒಂದು ಎರಡಾಗದೆ ಒಂದಾಗಬೇಕು ಎಂಬುದು ಈ ವಚನದ ತಾತ್ಪರ್ಯ. ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ, ದೇವ ನೀನಿಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ. ಎನೆಗೆ ನೀನೆ ಗತಿ. ನಿನಗೆ ನಾನೆ ಗತಿ ಇನ್ನೇಕೆ ಜವನಿಕೆ ಎಂದು ದೇವರನ್ನೇ ಪ್ರಶ್ನಿಸುವ ಉರಿಲಿಂಗಪೆದ್ದಿಗಳ ಈ ವಚನ ಸಮಸ್ಥಿತಿಯನ್ನು ಕುರಿತು ಹೇಳುತ್ತದೆ.

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ,
ಸತ್ಯಶುದ್ಧವಿಲ್ಲದದು ಕಾಯಕವಲ್ಲ

ನಿಷ್ಕಾಮನಿಷ್ಠೆಯಿಂದ ದುಡಿಯುವ ರೈತನಿಗಿಂತ ಮಿಗಿಲಾದ ಭಕ್ತರಿಲ್ಲ. ಸತ್ಯ-ಶುದ್ಧವಾಗಿರುವುದು ಮಾತ್ರ ಕಾಯಕವೆನಿಸುವಂತೆ ಉರಿಲಿಂಗಪೆದ್ದಿಗಳರನಲ್ಲಿ ಸದರವಲ್ಲ ಕಾಣುವುದು ಎಂಬ ಆಹಾರ ನೀತಿಯನ್ನು ಕುರಿತು ಸಂಸಾರದಿಂದ ಮಿಮುಖಳಾಗಿ ವಚನ ಬರೆಯಲು ಆರಂಭಿಸಿದ ಉರಿಲಿಂಗಪೆದ್ದಿಯ ಹೆಂಡತಿ ಕಾಳವ್ವೆಯ ವಚನ ವೈಶಿಷ್ಟ್ಯವಿದು.

ಲೋಕದಂತೆ ಬಾರರು, ಲೋಕದಂತೆ ಇರರು
ಲೋಕದಂತೆ ಹೋಹರು, ಪುಣ್ಯದಂತೆ ಬಪ್ಪರು
ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು ನೋಡಾ
ನಿಮ್ಮ ಶರಣರು ಉಪಮಾತೀತರು, ಉಪಮಿಸಬಾರರು

ಎಂದು ಉರಿಲಿಂಗದೇವರು ತಮ್ಮೊಂದು ವಚನದಲ್ಲಿ ಹೇಳಿದ್ದಾರೆ. ಇಂತಹ ಮೌಲಿಕವಾದ, ಶಾಸ್ತ್ರಬದ್ಧವಾದ ವಚನ ಸಿದ್ಧಾಂತ, ವಚನಶಾಸ್ತ್ರ ಕೊಟ್ಟ ಈ ಮೂವರು ನಮಗೆ ಆದರಣೀಯರು. ಅನುಕರಣೀಯರೂ ಆಗಿದ್ದಾರೆ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago