ಅಂಕಣ ಬರಹ

ನೇಯ್ಗೆಯಲ್ಲೇ ಲಿಂಗ ನಿರೀಕ್ಷಿಸಿದ ಅಮುಗೆ ದೇವಯ್ಯ-ರಾಯಮ್ಮ ದಂಪತಿ

ಭವ್ಯ ಭಾರತದ ಇತಿಹಾಸದಲ್ಲಿ ಕರ್ನಾಟಕದ ಈ ಪಾವನ ನೆಲದಲ್ಲಿ ಸುವರ್ಣಮಯ ಅಧ್ಯಾಯವನ್ನು ನಿರ್ಮಿಸಿದ ಕಾಲವದು ೧೨ನೇ ಶತಮಾನ. ಓದಲು-ಬರೆಯಲು ಬಾರದ ಶರಣರು, ಎಲ್ಲ ಸಮುದಾಯದವರು, ತಳಮಟ್ಟದವರು ಬಸವಣ್ಣನವರ ದಯೆಯಿಂದ ಎದ್ದು ಕುಳಿತರು. ಮೂಗರು ಮಾತನಾಡಿದರು, ಕುಂಟರೂ ಓಡಾಡಿದರು. ಉಂಡರು, ಉಣಬಡಿಸಿದರು, ಮನತಣಿಸಿದರು. ಅವರ ಜೀವನೆವೇ ಒಂದು ಸಿದ್ಧಾಂತ. ಧರ್ಮ ಸಾಧಕರಿಗೆ ಮಾರ್ಗದರ್ಶಕವಾದ, ದೀನ ದಲಿತರ ಹಿತ ಚಿಂತಕನಾದವರು ಬಸವಣ್ಣನವರು.

ಆ ಬಸವ ಮಾಮರದ ತುಂಬ ದೂರ ದೂರದ ಜನ ಕೋಗಿಲೆಗಳಾಗಿ ಆಗಮಿಸಿ ವಚನಾಮೃತದ ಅನುಭಾವ ಸವಿದರು. ತಾವು ಕೂಡ ವಚನಗಳನ್ನೇ ಕೊಟ್ಟರು. ಮಾವಿನ ಬೀಜದಿಂದ ಮಾವಿನ ಫಲ ಬರುವಂತೆ ಅನುಭಾವದ ಅಡಿಗೆ ಮಾಡಿಕೊಟ್ಟರು. ಅವರವರು ಕೈಗೊಂಡಿದ್ದ ಕಾಯಕದಿಂದ, ಆ ವಸ್ತುಗಳನ್ನೇ ಬಳಸಿ ಅಧ್ಯಾತ್ಮದ ಬಗ್ಗೆ ಮಾತನಾಡಿದರು. ಅಂತಹ ಕಾಯಕ ಶರಣ ಜೀವಿಗಳು. ನೇಕಾರ ದಂಪತಿ. ದಾಸಿಮಯ್ಯ-ದುಗ್ಗಳೆ ಹೇಗೋ ಸೊನ್ನಲಗಿಯ ಸಿದ್ಧರಾಮನಿಗೆ ಬುದ್ಧಿ ಹೇಳಿದ ಅಮುಗೆ ದೇವಯ್ಯ, ಅಮುಗೆಯ ರಾಯಮ್ಮ. ಸದ್ಗುರು ಸೋಮನಾಥಲಿಂಗ ವಚನಾಂಕಿತದಲ್ಲಿ ದೇವಯ್ಯ ೩೦ ವಚನಗಳು, ಅಮುಗೇಶ್ವರಲಿಂಗ ವಚನಾಂಕಿತದಲ್ಲಿ ರಾಯಮ್ಮಳ ೧೧೬ ವಚನಗಳು ದೊರಕಿವೆ.

ಮಹಾರಾಷ್ಟ್ರದ ಸೊನ್ನಲಗಿಯಲ್ಲಿ ನೇಯ್ಗೆ ಕಾಯಕ ಮಾಡಿಕೊಂಡಿದ್ದ ಈ ದಂಪತಿ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಲಿಂಗ ನಿರೀಕ್ಷಣೆ ಮಾಡುತ್ತ ಜೀವಿಸುತ್ತಿದ್ದರು. ಆಗ ಅಲ್ಲಿ ಸಿದ್ದರಾಮನೆಂಬ ವ್ಯಕ್ತಿ ಇದ್ದ. ಜನೋಪಯೋಗಿ ಕಾರ್ಯ ಮಾಡುವುದಕ್ಕಾಗಿ ಕೆರೆ,ಕಟ್ಟೆ, ಬಾವಿಗಳನ್ನು ನಿರ್ಮಿಸಿದ್ದ. ಪ್ರಾಣಿ-ಪಶು, ಪಕ್ಷಿಗಳಿಗಾಗಿ ಅರವಟಿಗೆಗಳನ್ನು ಆರಂಭಿಸಿದ್ದ. ಸಾಮೂಹಿಕ, ಸರಳ ವಿವಾಹಕ್ಕೆ ಮುನ್ನುಡಿ ಬರೆದ ಸಿದ್ಧರಾಮ ಮಲ್ಲಿಕಾರ್ಜುನನ ಪರ್ವ ಕಾರ್ಯ ಆರಂಭಿಸಿದ.

ಭತ್ತ, ಜೋಳ, ಗೋಧಿ ಕುಟ್ಟಿ ಕೊಡಲು ಈ ಶರಣ ದಂಪತಿ ಮನೆಗೆ ಹೇಳಿ ಕಳಿಸಿದ. ನಿಮ್ಮ ಸಿದ್ಧರಾಮನ ಕೊರಳಲ್ಲಿ ಲಿಂಗವಿದೆಯಾ? ಎಂದು ಪ್ರಶ್ನಿಸಿದರು. ಇಲ್ಲ ಎಂದರು. ಲಿಂಗವಿರಲಾರದವರು ನಮಗೆ ಭವಿಗಳು. ಸಿದ್ಧರಾಮ ಕೊಟ್ಟ ಕಾಯಕ ಮಾಡುವುದಿಲ್ಲ. ಅಣ್ಣ, ತಮ್ಮ ಆವ ಗೋತ್ರವಾದರೇನು? ಲಿಂಗ ಸಾಹಿತ್ಯವಿಲ್ಲದಿದ್ದೊಡೆ ಎಂದು ಗಟ್ಟಿಯಾಗಿ ಹೇಳುತ್ತಾರೆ. ಊರು ಬಿಟ್ಟು ಹೋಗಲು ಆದೇಶ ನೀಡಿದ. ತತ್ವಕ್ಕೆ ಬೇಡವಾಗಿ ಭ್ರಷ್ಟನಾಗಿ ಇರುವುದಕ್ಕಿಂತ ಊರು ಬಿಡುವುದೇ ಲೇಸು, ದಾಸರು ಹೇಳುವಂತೆ ಪಾಪಿಗಳಿರುವಲ್ಲಿ ರೂಪುಳ್ಳ ವಸ್ತುವ ತೋರಬಾರದು, ಪುಂಢರಿದ್ದಲ್ಲಿ ಅನುಭಾವಗೋಷ್ಠಿ ಮಾಡಬಾರದು, ಬಡತನ ಬಂದಾಗ ನೆಂಟರ ಮನಿ ಸೇರಬಾರದು ಎಂದು ಅವರು ಊರು ಬಿಟ್ಟು ಹೊರಟರು.

ನೇಯ್ಗೆ, ಪಾತ್ರೆ-ಪಗಡೆ ಹಾಗೂ ತಾವುಟ್ಟ ವಸ್ತ್ರದ ಗಂಟು ಕಟ್ಟಿಕೊಂಡು ಭಾರವಿದ್ದ ಗಂಟನ್ನು ಅಲ್ಲಿಯೇ ಬಿಟ್ಟು ಶಿವಪುರದತ್ತ ನಡೆದರು. ಇತ್ತ ಹಬ್ಬ ಮಾಡಲು ಶುರುವಿಟ್ಟುಕೊಂಡ ಸಿದ್ಧರಾಮ, ಲಿಂಗದ ಮಹಾಮಜ್ಜನ ಮಾಡುತ್ತಿರಬೇಕಾದರೆ ಲಿಂಗ ಮಾತಾಡಿದಂತೆ ಭಾಸವಾಯಿತು. ಯಾಕೆ ಹೀಗೆ ಮಾಡಿದವರು ಯಾರು? ಎಂದು ಕೇಳಿದ. ಆಗ ಲಿಂಗವು ನಿನ್ನೆ ನೀನು ಗಡಿಪಾರು ಮಾಡಿದ ಆ ಶರಣ ದಂಪತಿ ಗಂಟು ಎಂದು ಹೇಳಿತು. ಆಗ ಸಿದ್ಧರಾಮ ಆ ದಂಪತಿಯನ್ನು ಕರೆಸಿ ಲಿಂಗದೀಕ್ಷೆ ಪಡೆಯುತ್ತಾನೆ ಎಂದು ಇವರಿಗೆ ಸಂಬಂಧಿಸಿದಂತೆ ಕಥೆಯೊಂದು ಇದೆ.

ಆತ ಇನ್ನೂ ಶಿವಯೋಗಿ ಆಗಿರಲಿಲ್ಲ. ಸಿದ್ಧರಾಮ ಎಂಬ ಪುಟ್ಟ ದೇವರನ್ನು ಕಾಣಲು ಮಲ್ಲಯ್ಯನ ಬೆಟ್ಟಕ್ಕೆ ಹೋಗಿದ್ದ. ಬಸವಾದಿ ಶರಣರ, ಪ್ರಭುದೇವರ ಸಾಮೀಪ್ಯ ಬಂದ ನಂತರ “ಅದೊಂದು ಹಾಳು ಬೆಟ್ಟ, ಶಿವನೊಬ್ಬ ಹೆಡ್ಡ, ಅಲ್ಲಿರುವವರು ಜೀವಗಳ್ಳರು” ಎಂದು ಹೇಳಿದ. ಇದನ್ನೇ ಕವಿ ಕುವೆಂಪು ಅವರು “ಬೆಟ್ಟವಿದ್ದಲ್ಲಿ ಪುಟ್ಟ ಹೋಗುವುದು ದೊಡ್ಡ ಮಾತಲ್ಲ, ಪುಟ್ಟನಿದ್ದಲ್ಲಿ ಬೆಟ್ಟ ಬರುವುದು ಬಹು ದೊಡ್ಡ ಮಾತು” ಎಂದು ಕರೆದಿದ್ದಾರೆ.

ಹೀಗೆ ಸಿದ್ಧರಾಮನ ಬದುಕಿನಲ್ಲಿ ಬದಲಾವಣೆ ತಂದುಕೊಟ್ಟ ಈ ದಂಪತಿ ಗುರುವನ್ನು, ದೇವರನ್ನು ಪತಿ, ನಲ್ಲನ ರೂಪದಲ್ಲಿ ಕಂಡರು. ಶರಣಸತಿ ಲಿಂಗಪತಿಯಾಗಿ ಸಾವಿಲ್ಲದ, ರೂಹಿಲ್ಲದ ಚೆಲುವನಿಗೆ ಒಲಿದು, ದೇವರ ನಿಜಸ್ವರೂಪ (ಓರಿಜಿನಲ್) ಕಂಡವರು. ಶರಣರು ಬಯಲ ಬಣ್ಣವನ್ನು ಕಂಡವರು. ಅಂತೆಯೇ “ಎನ್ನಲ್ಲಿನ ಬಯಲ ಬಣ್ಣ ಕಂಡು ಬೆರಗಾದೆನವ್ವ” ಎಂದು ಅಮುಗೆ ದೇವಯ್ಯ ಹೇಳುತ್ತಾರೆ.

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರೂ ಕಾಣೆ
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ
ಎನ್ನ ಮನದಲ್ಲಿದ್ದ ಮಾಯಾ ಪ್ರಪಂಚವ ಕೆಡಿಸುವವರನಾರನೂ ಕಾಣೆನಯ್ಯ
ಆದ್ಯರ ವೇದ್ಯರ ವಚನಗಳಿಂದ ಅರಿದೆವೆಂಬರು ಅರಿಯಲಾರರು ನೋಡಾ
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರಲಿಂಗವ ನಾನೆ ಅರುಯಬೇಕು

ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಎಡರುತೊಡರುಗಳನ್ನು ತಾನೆ ಎದುರಿಸಿ, ತನ್ನನ್ನು ಕಾಡುವ, ನೋವು-ಸಂಕಟ, ಆಪತ್ತು ನಿವಾರಿಸಿಕೊಂಡು, ತನ್ನ ಮೈ ಮನಗಳಲ್ಲಿ ತುಡಿಯುವ ಒಳಮಿಡಿತಗಳನ್ನು ತಾನೇ ಹತೋಟಿಯಲ್ಲಿಟ್ಟುಕೊಂಡು ತನ್ನ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವ ಹೊಣೆಗಾರಿಕೆಯನ್ನು ತಾನೇ ಹೊರಬೇಕೆಂಬುದನ್ನು ರಾಯಮ್ಮ ಈ ವಚನದಲ್ಲಿ ಮನಗಾಣಿಸಿದ್ದಾರೆ.
ಹಿಡಿದ ಛಲ ಬಿಡಬೇಡ, ಹಿಮ್ಮೆಟ್ಟದಿರು, ಹೆದರದಿರು ಎಂದು ಬದುಕಿನ ರೀತಿ-ನೀತಿಯನ್ನು ಹೇಳುತ್ತಾಳೆ.

ಶಿವ ನೆನೆದರೆ ಭವ ಹಿಂಗುವುದೆಂಬ
ವಿವರಗೇಡಿಗಳ ಮಾತು ಕೇಳಲಾಗದು
ಮೃಷ್ಠಾನ್ನವ ನೆನೆದರೆ ಹೊಟ್ಟೆ ತುಂಬುವುದೇ?
ಜ್ಯೋತಿಯ ನೆನೆದರೆ ಕತ್ತಲೆ ಹರಿವುದೇ?
ರಂಭೆಯ ನೆನೆದರೆ ಕಾಯಕದ ಕಳವಳ ಹಿಂಗವುದೆ?
ನೆನದರಾಗದು ನಿಜದಲ್ಲಿ ನಿಂದು ನಿರ್ಧರಿಸಿದನ್ನಕ್ಕ
ಸಿದ್ಧ ಸೋಮನಾಥ ಲಿಂಗವ ಅರಿಯಲಾಗದು

ಎಂದು ನಿಜಲಿಂಗ ದರ್ಶನದ ಬಗ್ಗೆ ಅಮುಗೆ ದೇವಯ್ಯ ಹೇಳುತ್ತಾನೆ. ಹೀಗೆ ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ ಈ ದಂಪತಿ ಸಮಾಜದಲ್ಲಿ ವಿರಕ್ತಿಭಾವವನ್ನು ತುಂಬಿದರು. ಇವರ ಆದರ್ಶದ ಬದುಕು ನಮ್ಮೆಲ್ಲರದಾಗಬೇಕು.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago