ನನ್ನ ಮತ್ತು ಲಿಂಗಣ್ಣ ಸತ್ಯಂಪೇಟೆ ಪರಿಚಯವಾದ ವರುಷ ವಾರ, ತಿಥಿ, ದಿನ, ತಾರೀಖ, ಪಂಚಾಂಗಗಳ ನೆನಪಿಲ್ಲ. ನನ್ನವ್ವ ನಿಂಗಮ್ಮವ್ವ ಲಿಂಗಣ್ಣನವರನ್ನು ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ಅಂತ ಕರೀತಿದ್ದುದು ನೆನಪಿತ್ತು. ಆಕೆಯ ಅಣ್ಣ ಜಾಲಿಬೆಂಚಿಯ ಜಂಪಣ್ಣಗೌಡ, ಅಮ್ಮಾಪುರದ ಗುರ್ಬಸಯ್ಯ ಇಬ್ರು ಜಿಗ್ರಿ ದೋಸ್ತರು. ಇವರ ಜತೆಗೆ ನಿಂಗಣ್ಣ ಮಾಸ್ತರ ಬರ್ತಿದ್ದ ಅಂಬೋ ಸುಳುಹಿನ ಮಾತು ಹೊರ್ತು ಪಡಿಸಿದರೆ, ನಾನು ಅವರ ಹೆಸರನ್ನು ನೋಡಿದ್ದು ಪಾಪು ಪ್ರಪಂಚದಲ್ಲಿ. ಪ್ರಪಂಚದಲ್ಲಿ ” ಲಿಂಸ ” ಬರೀತಿದ್ದ ವೈಚಾರಿಕ ಲೇಖನಗಳು ಸಹಜವಾಗಿ ನನ್ನನ್ನು ಆಕರ್ಷಿಸಿದವು.
ಅದಾದ ಕೆಲವು ವರ್ಷಗಳ ತರುವಾಯ ನಮ್ಮ ಕಡಕೋಳ ಮಡಿವಾಳಪ್ಪನವರ ಕುರಿತು ಪುಟ್ಟ ಪುಸ್ತಕ ಬರೆದರು. ಆ ಪುಸ್ತಕವನ್ನು ಕರ್ನಾಟಕ ವಿಶ್ವ ವಿದ್ಯಾಲಯ ಪ್ರಕಟಿಸಿತ್ತು. ನಾನಾಗ ಮೆಟ್ರಿಕ್ ಕಲಿಕೆಯಲ್ಲಿದ್ದ ನೆನಪು. ಆಗ ನಮಗೆ ಕನ್ನಡ ಭಾಷೆಯ ಪಾಠ ಮಾಡುತ್ತಿದ್ದ ವಾಮದೇವಪ್ಪ ಮಾಸ್ತರರು ಲಿಂಗಣ್ಣ ಮಾಸ್ತರರ ಆ ಪುಸ್ತಕ ತಂದಿದ್ದರು. ನಾನು
ಕಾಡಿ ಬೇಡಿ ಒಂದೇ ಒಂದು ದಿನದ ಮಟ್ಟಿಗೆ ಆ ಪುಸ್ತಕ ಓದಲು ಪಡೆದು ರಾತ್ರಿಯೆಲ್ಲ ಚಿಮಣಿ ಬುಡ್ಡಿ ಬೆಳಕಲ್ಲಿ ಅವಡುಗಚ್ಚಿ ಕುಂತು ಓದಿ ಮುಗಿಸಿದ್ದೆ. ಅಂದಿನ ಆ ಓದಿನಿಂದ ಲಿಂಗಣ್ಣನವರ ಕುರಿತು ಹುಟ್ಟಿಕೊಂಡ ಪ್ರೀತಿ ಅಭಿಮಾನ ನನ್ನಲ್ಲಿನ್ನೂ ಮುಕ್ಕಾಗದೇ ಹಾಗೇ ಜತನವಾಗಿದೆ. ಅಷ್ಟು ಮಾತ್ರವಲ್ಲ., ಅದು
ನನ್ನೊಳಗೆ ಯಥೇಚ್ಛವಾಗಿ ಬೆಳೆದು ನಿಂತಿದೆ. ಅವರು ಗತಿಸಿ ಹೋದಮೇಲೂ ಅದು ಎಳ್ಳರ್ಧ ಕಾಳಿನಷ್ಟೂ ಕಮ್ಮೀ ಆಗಿಲ್ಲ.
ಹೌದು ಅಣ್ಣ ಲಿಂಗಣ್ಣ ಹಂಗಿದ್ರು. ಅವರ ಸಮಾಜವಾದಿ ಚಿಂತನಶೀಲ ಮೂಸೆ ಮತ್ತು ಸಾಂಸ್ಕೃತಿಕ ಒಡನಾಟಕ್ಕೆ ಬಂದಮೇಲೆ ಅಲ್ಲಿಂದ ಬಿಡಿಸಿಕೊಳ್ಳುವುದು ದುರ್ಲಭ. ನಾನು ಚಿತ್ರದುರ್ಗ ಜಿಲ್ಲೆಯ ಯರಬಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ( ಆರೋಗ್ಯ ಇಲಾಖೆ) ಸರ್ಕಾರಿ ನೌಕರಿಗೆ ಸೇರಿಕೊಂಡೆ. ದೂರದ ಊರಾದರೂ ಪತ್ರ ಮುಖೇನ ಪರಸ್ಪರ ವಿಚಾರ ವಿನಿಮಯದ ಮೂಲಕ ನಮ್ಮಿಬ್ಬರ ಸ್ನೇಹ ವಿಶ್ವಾಸ ಸಮೃದ್ಧಗೊಂಡವು. ತಿಂಗಳಿಗೆರಡಾದರೂ ಅಂತರ್ದೇಸಿ ಟಪಾಲುಗಳ ವಿನಿಮಯ. ಹೀಗೆ ಬಲಾಡ್ಯವಾಗಿ ಬೆಳೆದ ವಿಶ್ವಾಸ ಸ್ನೇಹದ ಎಲ್ಲೆ ದಾಟಿ ಬಂಧುತ್ವದಂತೆ ಬಂಧುರಗೊಂಡಿತು. ಅದು ಅವರ ಮನೆ, ಊರಿನವರೆಗೂ, ನನ್ನ ಊರಿನವರೆಗೂ ಪರಸ್ಪರ ಎಳೆದು ತಂದಿತು. ಅವರ ಪತ್ನಿ ಶಾಂತಕ್ಕನವರು ಬಡಿಸುತ್ತಿದ್ದ ಜೋಳದ ರೊಟ್ಟಿ ಊಟ ನಾನು ಮರೆಯಲಾಗದು. ನಾನಾಗ ಏನೇ ತಪ್ಪಿಸಿದರೂ ಗುರಪ್ಪಜ್ಜನ ಪುಣ್ಯಸ್ಮರಣೆ ಹಾಗೂ ನಮ್ಮೂರ ಮಡಿವಾಳಪ್ಪನ ಜಾತ್ರೆ ಮಾತ್ರ ತಪ್ಪಿಸುತ್ತಿರಲಿಲ್ಲ.
ಅವು ಎಂಬತ್ತರ ದಶಕದ ಆರಂಭದ ದಿನಮಾನಗಳು. ಅದೇ ಆಗ ಪಿ. ಲಂಕೇಶ್ ಮೇಷ್ಟ್ರು ಲಂಕೇಶ್ ಪತ್ರಿಕೆ ಹೆಸರಿನ ಟ್ಯಾಬ್ಲಾಯ್ಡ್ ಆರಂಭಿಸಿದ್ದರು. ಅಣ್ಣ ಲಿಂಗಣ್ಣ ಪತ್ರಿಕೆಗೆ ಪುಟ್ಟದೊಂದು ಪತ್ರ ಬರೆಯುವ ಮೂಲಕ ಲಂಕೇಶರ ಚಿತ್ತಸೆಳೆದು, ಪತ್ರಿಕೆಗೆ ವರದಿ ಬರೆಯುವ ಪಂಥಾಮಂತ್ರಣ ಸ್ವೀಕರಿಸಿದರು. ಮೂಲತಃ ಸರಕಾರಿ ಕನ್ನಡ ಸಾಲಿ ಮಾಸ್ತರರಾಗಿದ್ದ ಅವರು, ಲಂಕೇಶ್ ಪತ್ರಿಕೆಗೆ ಬರೆಯಲು ಆರಂಭಿಸಿದ ಮೇಲೆ ಲಿಂಗಣ್ಣನವರ ಕಾರ್ಯ ಬಾಹುಳ್ಯ ವಿಸ್ತಾರಗೊಂಡಿತು. ಸಹಜವಾಗಿ ಸರ್ಕಾರದ ಮತ್ತು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಯ್ತು. ಹೊಟ್ಟೆಪಾಡಿನ ನೌಕರಿಗೂ ಸಂಚಕಾರ. ಒಂದೆಡೆ ವಾರವಾರವೂ ಪತ್ರಿಕೆಗೆ ವಸ್ತುನಿಷ್ಠವಾಗಿ ವರದಿ ಬರೆಯುವುದು, ಮತ್ತೊಂದೆಡೆ ನಮ್ಮ ಹೈದರಾಬಾದ ಕರ್ನಾಟಕ ಪ್ರಾಂತ್ಯದ ರೈತ ಚಳವಳಿಯ ನೇಪಥ್ಯದ ಶಕ್ತಿಯಾಗಿ ಯಶಸ್ವಿ ಹೋರಾಟ ರೂಪಿಸುವಲ್ಲಿ ದಿವಿನಾದ ಹೆಜ್ಜೆ ಇಟ್ಟರು. ಅಂತೆಯೇ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಲಿಂಗಣ್ಣ ನವರ ಮೇಲೆ ಅಪಾರ ನಂಬುಗೆ ಇಟ್ಟು ನಮ್ಮ ಹೈ.ಕ. ಭಾಗದಲ್ಲಿ ರೈತ ಆಂದೋಲನ ಕಟ್ಟುವಲ್ಲಿ ಗೆಲುವು ಸಾಧಿಸಿದರು.
ಲಿಂಗಣ್ಣನವರ ವರದಿಗಳು ದ್ರಾಬೆ ಪತ್ರಕರ್ತರ ಸವಕಲು ಭಾಷೆಯ ವಣಕಲು ವರದಿ ಆಗಿರ್ತಿರಲಿಲ್ಲ. ಜೀವ ಸಂವೇದನೆ ತುಂಬಿಕೊಂಡ ನೊಂದವರ, ದಮನಿತರ, ಶೋಷಿತರೆಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಔಷಧಿಗಳಾಗಿರುತ್ತಿದ್ದವು. ಭ್ರಷ್ಟ ಅಧಿಕಾರಿಗಳ ಪಾಲಿಗೆ ಪತ್ರಿಕೆ ಸಿಂಹಸ್ವಪ್ನ ಆಗಿತ್ತು. ದುಷ್ಟ ರಾಜಕಾರಣಿಗಳ ಕಿಬ್ಬದಿಯ ಕೀಲು ಮುರಿಯುವ ಅಸ್ತ್ರವಾಗಿತ್ತು. ದೂರದ ಬೆಂಗಳೂರಲ್ಲಿರುವವರನ್ನು ಶಹಾಪೂರದಲ್ಲಿ ಕುಂತು ಕಿತ್ತು ಜಾಡಿಸಿ ಬರೆದು ದಕ್ಕಿಸಿಕೋಬಹುದು. ಆದರೆ ಶಹಾಪುರದಲ್ಲಿ ಕುಂತು ಅಲ್ಲಿನ ರಾಜಕಾರಣದ ಕೊಳಕನ್ನು ಕುರಿತು ಬರೆದು ಅಲ್ಲಿ ಬದುಕುವುದು ದುಸ್ತರ. ಅಂದಿನ ಅಲ್ಲಿನ ರಾಜಕಾರಣಿ ಸಾವೂರು ಶಿವಣ್ಣನನ್ನು “ಸಾವೂರು ಶವಣ್ಣ” ಎಂದು ಬರೆದು ಶಿವಣ್ಣನಿಗೆ ಚುನಾವಣೆಯಲ್ಲಿ ಸೋಲುಂಟು ಮಾಡುವಲ್ಲಿ ಪತ್ರಿಕೆಯ ಪಾತ್ರ ಮಹತ್ತರವಾದುದು.
ಸದಾ ಹೊಸತನದ ಹಾಗೂ ಪ್ರಾದೇಶಿಕ ಸೊಗಡಿನ ಭಾಷಾಬಳಕೆ ಲಿಂಗಣ್ಣನವರ ವೈಶಿಷ್ಟ್ಯವಾಗಿತ್ತು. ಅವರು ಬಳಸುತ್ತಿದ್ದ ದೇಸಿಯ ಪದಗಳದ್ದೇ ಹೀಗೆ ಪಟ್ಟಿ ಮಾಡಬಹುದು : ಬುಬ್ಬಣಾಚಾರ, ಹೊಲಬುಗೇಡಿ, ಹೆಡಮುರಗಿ, ಇಭ್ರತಿ, ನಗೆಮಾರಿ, ತಿರ್ಬೋಕಿ, ಹೆಡಿಗಿ, ಹೆಂಡಿಕಸ, ಆಕಳ ಮಣಕ, ಕೋಳಿ ಪಡ್ಡಿ, ಸುಮಾರ ಚಾಳಿ… ಹೀಗೆ ಇಂತಹ ನೂರಾರು ಜವಾರಿ ಶಬುದಗಳ ರೂಪಕ ಸಾಮ್ರಾಜ್ಯವನ್ನೇ ಕಟ್ಟಿ ಕೊಟ್ಟವರು ಅವರು. ಪಾಪು “ಪ್ರಪಂಚ” ದಲ್ಲಿ ಬರೆಯುವಾಗಲೂ ಇದೇ ಬಗೆಯ ಅವರ ಬರವಣಿಗೆಯ ದಟ್ಟ ಪರಿಚಯ ನನಗಾಗಿತ್ತು.
ಅಣ್ಣ ಲಿಂಗಣ್ಣ ನಮ್ಮಿಂದ ಕಣ್ಮರೆಯಾಗಿ ಏಳು ವರುಷಗಳೇ ಕಳೆದಿವೆ. ಅವರು ತೋರಿಸಿ ಕೊಟ್ಟ ‘ಬಸವಮಾರ್ಗ’ದಲ್ಲಿ ಸಾಗುತ್ತಿರುವ ನಮಗೆ ನೂರೆಂಟು ಸಮಸ್ಯೆಗಳು ಎದುರಾಗುತ್ತಿವೆ. ಹೌದು ಲಿಂಗಣ್ಣನವರ ಕಾಲದ ಎಲ್ಲ ಸಮಸ್ಯೆ ಗಳು ಈಗ ಯಥೇಚ್ಛವಾಗಿವೆ. ಆದರೆ ದಾರಿ ತೋರಿಸುವ ಧೀರ, ಧೀಮಂತ, ಅಂತಃಕರಣದ ಅಣ್ಣ ಲಿಂಗಣ್ಣನೇ ಇಲ್ಲ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
View Comments
Very good introduced Dr. Linganna satympetsir, realey he is KARNATADKANMSNIGALU