ಚಿತ್ತಾಪುರ: ನೈತಿಕತೆ ಉಳಿಸಿಕೊಂಡ ಪೆನ್ನಿಗೆ ಮಾತ್ರ ಪ್ರಭುತ್ವ ಹೆದರುತ್ತದೆ. ವಿಮರ್ಶಾತ್ಮಕವಾಗಿರಬೇಕಿದ್ದ ಮಾಧ್ಯಮ ಇಂದು ಮದಿಸಿದ ಆನೆಯಂತಾಗಿದೆ ಎಂದು ವಿಚಾರವಾದಿ, ಸಾಹಿತಿ ಡಾ.ರಹಮತ್ ತರೀಕೆರೆ ವಿಷಾಧಿಸಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುತ್ತ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಶಿಕ್ಷಕರು, ವೈದ್ಯರು, ವಕೀಲರು ಹಾಗೂ ಪತ್ರಕರ್ತರು ಕೆಡಬಾರದು. ಒಂದು ವೇಳೆ ಈ ನಾಲ್ವರು ಕೆಟ್ಟುಹೋದರೆ ಸಮಾಜ ಪತನವಾದಂತೆ. ವ್ಯವಸ್ಥೆಯನ್ನು ತಿದ್ದಬೇಕಾದ ಮಾಧ್ಯಮವೇ ಸಮಾಜಕ್ಕೆ ವಿಷ ಉಣಬಡಿಸುತ್ತದೆಂದರೆ ಪತನ ಶುರುವಾಗಿದೆ ಎಂತಲೇ ಅರ್ಥ. ನಾವೆಲ್ಲರೂ ಆತ್ಮವಿಮರ್ಶೆಗೊಳಪಡದ ಹೊರೆತು ಪರಿವರ್ತನೆ ಅಸಾಧ್ಯ ಎಂದರು.
ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಬಹುತೇಕರು ಬೈಗುಳವನ್ನೇ ಅಶ್ಲೀಲ ಎಂದು ತಿಳಿದಿದ್ದಾರೆ. ಬೈಗುಳ ಅಶ್ಲೀಲವಲ್ಲ, ಸುಳ್ಳು ಹೇಳುವುದು ಅಶ್ಲೀಲವಾಗುತ್ತದೆ. ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಪೈಪೋಟಿಗಿಳಿದಿರುವ ಪತ್ರಿಕೆಗಳು, ಸುಳ್ಳನ್ನೇ ಬಣ್ಣ ಲೇಪಿಸಿ ಪ್ರಕಟಿಸುವ ಮೂಲಕ ಸತ್ಯದಿಂದ ಕೂಡಿದ ಸುದ್ದಿ ಓದುವ ಅಭಿರುಚಿಯನ್ನೇ ಕೆಡಿಸಿವೆ. ಕೋಮು ದ್ವೇಷದ ಸುದ್ದಿ ಪ್ರಚಾರದಿಂದ ಮನುಷ್ಯ ಸಂಬಂದ ಹದಗೆಟ್ಟಿದೆ. ಸಂಶೋದಕ ಎಂ.ಎಂ.ಕಲಬುರಗಿ ಮತ್ತು ಗೌರಿ ಲಂಕೇಶರ ಹತ್ಯೆಯನ್ನು ದಾರುಣ ಕೊಲೆ ಎಂದು ಬಿತ್ತರಿಸಿದ್ದು ಮಾಧ್ಯಮಗಳ ದುರಂತ ಎಂದು ಬೇಸರ ವ್ಯಕ್ತಪಡಿಸಿದ ತರೀಕೆರೆ, ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಪತ್ರಕರ್ತರು ಮುಚ್ಚಿಟ್ಟ ಸುದ್ದಿಯನ್ನು ಜನರೇ ಬಿತ್ತರಿಸುತ್ತಿದ್ದಾರೆ ಎಂದು ವಿವರಿಸಿದರು.
ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಕ್ರೀಯ ವಿರೋಧ ಪಕ್ಷ ಮತ್ತು ಸ್ವತಂತ್ರ ಮಾಧ್ಯಮದಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿದೆ. ಆಡಳಿತ ವ್ಯವಸ್ಥೆಗೆ ಪತ್ರಕರ್ತರು ಸವಾಲು ಹಾಕದಿದ್ದರೆ ಸರ್ವಾಧಿಕಾರ ಸ್ಥಾಪನೆಯಾಗುತ್ತದೆ. ಪ್ರಶ್ನೆ ಕೇಳುವ ನೈತಿಕತೆ ಮತ್ತು ಸಂವಿಧಾನಿಕ ಹಕ್ಕು ಪತ್ರಕರ್ತರು ಉಳಿಸಿಕೊಳ್ಳಬೇಕು. ಜನಪ್ರತಿನಿಧಿಗಳನ್ನು ಇಂದ್ರ-ಚಂದ್ರ ಎಂದು ಹೊಗಳುವ ಮೂಲಕ ವ್ಯಕ್ತಿಯಾರಾಧನೆ ಮಾಡಿದರೆ ಸೊಕ್ಕು ಅಹಾಂಕರ ಬೆಳೆಯುತ್ತದೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ನನ್ನ ಕರ್ತವ್ಯವಾಗಿರುತ್ತದೆ. ಜತೆಗೆ ಕ್ಷೇತ್ರದ ಜನರನ್ನು ವೈಚಾರಿಕವಾಗಿ ಸಾಂಸ್ಕೃತಿಕವಾಗಿ ಮೇಲೆತ್ತುವುದೂ ಕೂಡ ನನ್ನದೇ ಜವಾಬ್ದಾರಿಯಾಗಿದೆ. ಪ್ರಬುದ್ಧ ಸಮಾಜ ಸಮೃದ್ಧ ಸಮಾಜ ನಿರ್ಮಾಣ ಪ್ರತಿಯೊಬ್ಬರ ಗುರಿಯಾಗಬೇಕು. ಪ್ರಜಾಪ್ರಭುತ್ವದ ಕೊನೆಯ ಆಶಯವೇ ಪತ್ರಿಕಾರಂಗ. ಮಾಧ್ಯಮ ದಾರಿ ತಪ್ಪಿದರೆ ಕಟ್ಟಕಡೆಯ ವ್ಯಕ್ತಿ ಸಾಯುತ್ತಾನೆ ಎಂದು ಪ್ರಿಯಾಂಕ್ ಆತಂಕ ವ್ಯಕ್ತಪಡಿಸಿದರು.
ದ್ವಿದಳ ದಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಸಂಘದ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಡುಬೂಳಕರ, ಶಿಕ್ಷಣ ಪ್ರೇಮಿ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಜ ಮಲಕಂಡಿ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ನೃಪತುಂಗ ಪತ್ರಿಕೆಯ ಸಂಪಾದಕ ಶಿವರಾಯ ದೊಡ್ಡಮನಿ, ಕ್ಷೇತ್ರಶಿಕ್ಷಣಾಧಿಕಾರಿ, ಸಿದ್ಧವೀರಯ್ಯ ರುದ್ನೂರ, ತಾಪಂ ಇಒ ನೀಲಗಂಗಾ ಬಬಲಾದ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ಸಾಲಿಮಠ, ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ವಾಡಿ ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಚಿತ್ತಾಪುರ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಶಿಕ್ಷಕರು, ಯುವ ಬರಹಗಾರರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪತ್ರಕರ್ತ ಮಡಿವಾಳಪ್ಪ ಹೇರೂರ ಸ್ವಾಗತಿಸಿದರು. ಕಾಶೀನಾಥ ಗುತ್ತೇದಾರ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು. ಸಾಧಕ ಪತ್ರಕರ್ತರಾದ ವೀರೇಂದ್ರ ಕೊಲ್ಲೂರ ಹಾಗೂ ಸಾಯಬಣ್ಣ ಗುಡುಬಾ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಮತ್ತು ಅರಣ್ಯ ಇಲಾಖೆಯಿಂದ ಉಚಿತ ಸಸಿ ವಿತರಣೆ ನಡೆಯಿತು. ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪ್ರಗತಿಪರ ಸಾಹಿತ್ಯ ಮಾರಾಟ ಮಳಿಗೆ ಸ್ಥಾಪಿಸಿದ್ದ ವಿಶೇಷವಾಗಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…