ಬಿಸಿ ಬಿಸಿ ಸುದ್ದಿ

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಡಾ.ಮುರುಗೇಶ ನಿರಾಣಿ

ಕಲಬುರಗಿ: ಜಿಲ್ಲೆಯಲ್ಲಿ ಕೈಗಾರಿಕೆಗಳು ಒಂದೇ ಕಡೆ ಇರುವಂತೆ ಕೈಗಾರಿಕೆ ಹಬ್ ಮಾಡಲು ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ರವಿವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಮಾಡಿ, ಪರೇಡ್ ಕಮಾಂಡರ ಡಿ.ಎ.ಆರ್ ಮೀಸಲು ಪಡೆಯ ಆರ್.ಪಿ.ಐ ಹಣಮಂತ ನಾಯಕ ಮತ್ತು ಸಹಾಯಕ ಪರೇಡ್ ಕಮಾಂಡರ ಆರ್.ಎಸ್.ಐ. ದುರ್ಗಾಸಿಂಹ ನೇತೃತ್ವದ ವಿವಿಧ 11 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕಾಗಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ದೇಶದಲ್ಲಿನ ಒಟ್ಟು ಪಾಲಿನಲ್ಲಿ ಶೇ.42 ರಷ್ಟು ಕರ್ನಾಟಕಕ್ಕೆ ಲಭಿಸಿದೆ ಎಂದರು.

ದಾವೋಸ್ ಆರ್ಥಿಕ ಶೃಂಗ ಫಲಪ್ರದವಾಗಿದ್ದು, ಮುಂದಿನ 3-4 ತಿಂಗಳಿನಲ್ಲಿ 1 ಲಕ್ಷ ಕೋಟಿ ರೂ. ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಇದಲ್ಲದೆ ಬರುವ ನವೆಂಬರ್ 2 ರಿಂದ 4ರ ವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಶ್ವ ಬಂಡವಾಳದಾರರ ಸಮಾವೇಶ ಆಯೋಜಿಸಿದ್ದು, 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ ಹೊಂದಿದ್ದೇವೆ. ಇದಕ್ಕಾಗಿ ಜಪಾನ್, ದಕ್ಷಿಣ ಕೋರಿಯಾ ದೇಶದಲ್ಲಿ ಈಗಾಗಲೇ ರೋಡ್ ಶೋ ಮಾಡಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಕೈಗಾರಿಕೆ ಸ್ನೇಹಿ ವಾತಾವರಣದ ಬಗ್ಗೆ ಪ್ರತಿಷ್ಟಿತ ಕಂಪನಿಗಳಿಗೆ ಮನವರಿಕೆ ಮಾಡಿ ಆಹ್ವಾನ ನೀಡಿದ್ದೇವೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನ ನೀಡಿದ ಮಹಾನ್ ಪುರುಷರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಸಚಿವರು ದೇಶಭಕ್ತಿ ಹೆಚ್ಚಿಸಲು ಕರೆ ನೀಡಿದ “ಹರ್ ಘರ್ ತಿರಂಗಾ” ಅಭಿಯಾನದಡಿ ಕಳೆದ ಮೂರು ದಿನಗಳಿಂದ ಜಿಲ್ಲೆಯ ಪ್ರತಿ ಮನೆ-ಮನೆಗಳ ಮೇಲೆ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಪಂಚಾಯತಿ, ಅಂಗನವಾಡಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಜಿಲ್ಲೆಯ ಜನತೆ ಅತೀ ಉತ್ಸಾಹದಿಂದ ಈ ಅಭಿಯಾನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುವೆ ಎಂದರು.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಡಿ.ಬಿ.ಗೆ ದಾಖಲೆ ಪ್ರಮಾಣದಲ್ಲಿ 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಇಡೀ ದೇಶ ಸ್ವಾತಂತ್ರ್ಯ ಪಡೆದರು, ಕಲ್ಯಾಣ ಕರ್ನಾಟಕ ಮಾತ್ರ ಒಂದು ವರ್ಷ ಒಂದು ತಿಂಗಳ ತಡವಾಗಿ ಸ್ವಾತಂತ್ರ್ಯದ ರುಚಿ ಕಂಡಿದೆ. ಹೀಗಾಗಿ ಇದೇ ಸೆಪ್ಟೆಂಬರ್ 17 ರಂದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿಜೃಂಭಣೆಯಿಂದ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ” ನಡೆಸಲು ಉದ್ದೇಶಿಸಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಠಿಯಿಂದ 1860ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಈ ಪೈಕಿ 1400ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ 10 ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗಿದೆ. ಮಳೆಯಿಂದ ಜೀವ ಕಳೆದುಕೊಂಡ 6 ಮೃತರ ಅವಲಂಭಿತರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬೆಳೆ ಹಾನಿ ಅಂದಾಜಿಸಿದ್ದು, ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ನೆರೆ ಹಾವಳಿ ಪರಿಹಾರಕ್ಕೆ ಡಿ.ಸಿ. ಖಾತೆಯಲ್ಲಿ 41 ಕೋಟಿ ರೂ. ಹಣ ಇದೆ. ಹೀಗಾಗಿ ನೆರೆ ಹಾವಳಿ ಪರಿಹಾರಕ್ಕೆ ಅನುದಾನದ ಕೊರತೆಯಿಲ್ಲ.

ಸ್ಪಂದನ ಕಲಬುರಗಿಗೆ ಮೆಚ್ಚುಗೆ:

ಸಾರ್ವಜನಿಕರ ಕುಂದುಕೊರತೆಗಳನ್ನು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಆಲಿಸುವ, ವಿವಿಧ ಸೌಲಭ್ಯಗಳನ್ನು ವಿತರಿಸುವ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ “ಸ್ಪಂದನ ಕಲಬುರಗಿ” ಎಂಬ ವಿನೂತನ ಕಾರ್ಯಕ್ರಮ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಜಿಲ್ಲೆಯಲ್ಲಿ ಪ್ರಾರಂಭಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಇದನ್ನು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೂ ವಿಸ್ತರಣೆಗೆ ಸಲಹೆ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಜಿ.ಐ. ಟ್ಯಾಗ್ ಹೊಂದಿರುವ ತೊಗರಿ ಬೆಳೆಯನ್ನು “ಭೀಮಾ ಪಲ್ಸ್” ಬ್ರ್ಯಾಂಡ್ ನೀಡಿ ಮಾರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ಮೆಗಾ ಟೆಕ್‍ಟೈಲ್ಸ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾಗುವ ಸಂಪೂರ್ಣ ಆಶಾಭಾವನೆ ಹೊಂದಿದ್ದೇವೆ. ನಬಾರ್ಡ್ ಸಹಾಯದೊಂದಿಗೆ 15 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಜಾಫರಾಬಾದ ಬಳಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ 4 ಎಕರೆ ಜಮೀನು ರೇಷ್ಮೆ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ. ರೇಷ್ಮೆ ಮಾರುಕಟ್ಟೆ ಇಲ್ಲಿ ಸ್ಥಾಪನೆಯಿಂದ ರೈತರು ದೂರದ ರಾಮನಗರಕ್ಕೆ ಹೋಗಿ ರೇಷ್ಮೆ ಮಾರಾಟ ಮಾಡುವುದು ತಪ್ಪಲಿದೆ ಎಂದು ಸಚಿವರು ಹೇಳಿದರು.

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಜಾರಿಗೊಳಿಸಿದ ವಿದ್ಯಾನಿಧಿ ಯೋಜನೆಯನ್ನು ಇತ್ತೀಚೆಗೆ ನೇಕಾರ, ಟ್ಯಾಕ್ಸಿ ಚಾಲಕರು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಿಸಿದೆ. ಈ ಯೋಜನೆಯಡಿ 2021-22ನೇ ಸಾಲಿನಿಂದ ಇಲ್ಲಿಯ ವರೆಗೆ 37,998 ವಿದ್ಯಾರ್ಥಿಗಳಿಗೆ 13.73 ಕೋಟಿ ರೂ. ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆಳಂದ ತಾಲೂಕಿನ ಅಮರ್ಜಾ ಡ್ಯಾಂ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಈಗಾಗಲೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ 75 ಅಮೃತ ಸರೋವರ ಕೆರೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೆ 15 ಕೆರೆಗಳನ್ನು ಪೂರ್ಣಗೊಳಿಸಿದೆ. ಉಳಿದ 60 ಕೆರೆಗಳನ್ನು ಪ್ರಗತಿಯಲ್ಲಿವೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.

ಸಾಧಕರಿಗೆ ಸನ್ಮಾನ:

2022ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕಕ್ಕೆ ಪಾತ್ರರಾದ ಕಲಬುರಗಿ ಸಿ.ಐ.ಡಿ. ಡಿ.ವೈ.ಎಸ್ಪಿ. ಶಂಕರಗೌಡ ವಿ. ಪಾಟೀಲ, 2021ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪ್ರಶಸ್ತಿ ಪುರಸ್ಕೃತ ಕಲಬುರಗಿ ನಗರದ ಎ.ಸಿ.ಪಿ. ಗಂಗಾಧರ ಬಿ.ಎಂ ಹಾಗೂ ಸರ್ವಶ್ರೇಷ್ಠ ರಾಷ್ಟ್ರಪತಿ ಪದಕ ಪುರಸ್ಕೃತ ಜಿಲ್ಲಾ ಪೊಲೀಸ್ ಡಿ.ಸಿ.ಆರ್ ವಿಭಾಗದ ಡಿ.ವೈ.ಎಸ್ಪಿ ಜೆ.ಹೆಚ್ ಇನಾಂದಾರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಸೇರಿದಂತೆ ಗಣ್ಯರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ 11 ಪ್ರಗತಿಪರ ರೈತರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ 6 ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಅಮೃತ ಮಹೋತ್ಸವ ಅಂಗವಾಗಿ ಶಾಲಾ ಮಕ್ಕಳಿಂದ ಜರುಗಿದ ದೇಶಭಕ್ತಿ ಗೀತೆಗಳಿಗೆ ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು.

ವಿಕಲಚೇತನರಿಗೆ ತ್ರಿಚಕ್ರ ವಿತರಣೆ:

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾಂಕೇತಿಕವಾಗಿ ಜಿಲ್ಲೆಯ 7 ವಿಕಲಚೇತನರಿಗೆ ಸಚಿವ ಡಾ.ಮುರುಗೇಶ ನಿರಾಣಿ ಅವರು ತ್ರಿಚಕ್ರ ವಾಹನ ವಿತರಿಸಿದರು. ಇದಲ್ಲದೆ ಜಿಲ್ಲಾ ಪಂಚಾಯತಿಯಿಂದ ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ 85 ಸ್ವಚ್ಛತಾ ವಾಹಿನಿಗೂ ಸಚಿವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಸುನೀಲ ವಲ್ಯಾಪೂರೆ, ಶಶೀಲ ನಮೋಶಿ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಐ.ಜಿ.ಪಿ. ಮನೀಷ್ ಖರ್ಮಿಕರ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ.ಇಶಾ ಪಂತ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಡಿ.ಸಿ.ಪಿ.ಯಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ಅಪರ ಆಯುಕ್ತೆ ಗರಿಮಾ ಪನ್ವಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೆವಿದಾಸ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಅಧಿಕಾರಿಗಳು ಇದ್ದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

2 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

13 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

24 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago