ಬಿಸಿ ಬಿಸಿ ಸುದ್ದಿ

ಕೆಕೆಆರ್ಡಿಬಿಗೆ 5000 ಕೋಟಿ ಬಿಡುಗಡೆ ವಿಚಾರ ಮೂಗಿಗೆ ತುಪ್ಪ ಸವರಿದ ಸಿಎಂ: ಶಾಸಕ ಪ್ರಿಯಾಂಕ್ ಖರ್ಗೆ ಟೀಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ರೂ 5000 ಕೋಟಿ ನೀಡುವುದಾಗಿ ನಿನ್ನೆ ಸಿಎಂ ಹೇಳಿ ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ ಈ ಅನುದಾನ ಬಿಡುಗಡೆ ಅಸಾಧ್ಯ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕೆಕೆಆರ್ ಡಿಬಿಗೆ ಘೋಷಿತ ಅನುದಾನ ರೂ 3000 ಕೋಟಿಯಲ್ಲಿ ಕೇವಲ ರೂ 1500 ಕೋಟಿ ಮಾತ್ರ ಬಿಡುಗಡೆ ಮಾಡಿ ಉಳಿದ ರೂ 1500 ಕೋಟಿಯನ್ನು ಎಸ್ ಡಿ ಪಿನಲ್ಲಿ ಬಿಡುಗಡೆ ಮಾಡದೇ ಮಹಾತ್ವಾಕಾಂಕ್ಷೆ ತಾಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆ ಅನುದಾನ ಹೆಡ್ ಆಫ್ ಅಕೌಂಟ್ ಗೆ ಬರುವುದಿಲ್ಲ. ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ ರೂ 5000 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇದನ್ನು ಗಮನಿಸಿದರೆ, ಬೊಮ್ಮಾಯಿ ಅವರು ಮೋದಿಗಿಂತಲೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ದೋಖಾ ಹಾಗೂ ಬೊಮ್ಮಾಯಿಯವರ ಬಂಡಲ್ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆಯಾಗುತ್ತಿದೆ ಎಂದು ಹರಿಹಾಯ್ದರು.

ಸ್ಥಳೀಯ ಮುಖಂಡರ ನಿರಾಸಕ್ತಿಯಿಂದ ಕಲಬುರಗಿಯಲ್ಲಿ ಅಭಿವೃದ್ದಿಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ, ನಿಮ್ಮ ಅವಧಿಯಲ್ಲಿ 5 ಸಿಎಂ ಕೊಟ್ಟಿದ್ದೀರಲ್ಲ ನಿಮ್ಮ ಕೊಡುಗೆ ಏನಿದೆ? ನೀವು ನಿನ್ನೆ ಉದ್ಘಾಟನೆ ಮಾಡಿದ ಕಮೀಷನರ್ ಕಚೇರಿಗೆ ಅಡಿಗಲ್ಲು ಹಾಕಿದ್ದೇ ನಾನು. ನೀವು ಬಂದಿಳಿದ ವಿಮಾನ ನಿಲ್ದಾಣ ನಿರ್ಮಿಸಿದ್ದೇ ನಮ್ಮ ಅವಧಿಯಲ್ಲಿ, ನಿನ್ನೆ ನೀವು ಓಡಾಡಿದ ರಸ್ತೆ ನಿರ್ಮಾಣ ಮಾಡಿದ್ದೆ ನಾವು ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.

ಯುಪಿಎ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ, ನಿಮ್ಝ್, ಜವಳಿ ಪಾರ್ಕ್, ಏಮ್ಸ್, ಮೇಕ್ ಇನ್ ಇಂಡಿಯಾ, ಇಎಸ್ ಐ ಮೇಲ್ದರ್ಜೆಗೆ ಏರಿಸುವ ಯೋಜನೆಗಳೆಲ್ಲ ಏನಾದವು? ಎಂದು ಪ್ರಶ್ನಿಸಿದ ಅವರು ಕಲಬುರಗಿ ಸಂಸದ ಉಮೇಶ್ ಜಾಧವ ಈ ಮೂರು ವರ್ಷದಲ್ಲಿ ಏನು ಮಾಡಿದ್ದಾರೆ ? ಮೋದಿ ಅವರ ಮನ್ ಕಿ ಬಾತ್ ನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿದ್ದು ಹಾಗೂ ಕೇಂದ್ರಿಯ ವಿವಿಯನ್ನು ಆರ್ ಎಸ್ ಎಸ್ ಕೇಂದ್ರವನ್ನಾಗಿ ಪರಿವರ್ತನೆ ಮಾಡುತ್ತಿರುವುದೇ ಇವರ ಸಾಧನೆಯಾಗಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು, ರೇಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರ ಬಳಿ ಹಣ ವಿದ್ದರೆ ಕಾಮಗಾರಿ ಮುಂದುವರೆಸಲಿ ಎರಡು ವರ್ಷದ ನಂತರ ಬಿಲ್ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇನಾ ಅಭಿವೃದ್ದಿ ಎಂದರೆ ಎಂದು ಟೀಕಿಸಿದರು.

ಕಲಬುರಗಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ದಿ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ.ಕೊನೆ ಪಕ್ಷ ಇಲ್ಲಿನ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಭಾಷಣ ತಯಾರು ಮಾಡಿಕೊಳ್ಳಬೇಕಿತ್ತು. ನಿರಾಣಿ ಅವರು ಮಿಷನ್ 20/20 ಎನ್ನುತ್ತಾರೆ. 2019 ರಲ್ಲಿ ಕೊರೆದ ಕೊಳವೆ ಬಾವಿಗಳ ಬಿಲ್ ಪಾವತಿಯಾಗಿಲ್ಲ ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಅಭಿವೃದ್ದಿ ಮಾಡುತ್ತಾರೆ ಎಂದು ಪ್ರಿಯಾಂಕ್ ಪ್ರಶ್ನಿಸಿದರು.

ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜವಳಿ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ನಾನು ಹೇಳಿದರೆ ಪ್ರಿಯಾಂಕ್ ಬರೀ ಆರೋಪ ಮಾಡುತ್ತಾರೆ ಎನ್ನುತ್ತಾರೆ ಹಾಗಾಗಿ ನಾನು ಲಿಖಿತ ಪ್ರಶ್ನೆ ಕೇಳಿದಾಗ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಿ, ಈ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ದೋಷಾರೋಪಣೆ ಪಟ್ಟಿ ತಯಾರಿಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇದರರ್ಥ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದಂತಲ್ಲವೇ? ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ದಿ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಕಾನೂನು ಬಾಹಿರವಾಗಿ ಕೆಕೆಆರ್ ಡಿಬಿ ಯ ಅನುದಾನ ಬಿಡುಗಡೆ ಮಾಡಿರುವುದ ಕುರಿತು ನಾನು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದಾಗ, ಕಾನೂನು ಸಚಿವರು ಹಾಗೆ ಮಾಡಲು ಬರುವುದಿರಲ್ಲ ಒಂದು ವೇಳೆ ಬಿಡುಗಡೆ ಮಾಡಿದ್ದರೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನಂತರ, ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವರಾದ ಮನಿರತ್ನ ಅವರು ಕೆಕೆಆರ್ ಡಿಬಿ ಯಿಂದ ಸಂಘಕ್ಕೆ ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಮಾಡಿರುವ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ಮಾಡಿ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿರುತ್ತಾರೆ. ಆದರೆ, ತನಿಖೆ ಈಗ ನಿಂತಿದೆ. ಯಾರ ಒತ್ತಡದಿಂದಾಗಿ ತನಿಖೆ ನಡೆಯುತ್ತಿಲ್ಲ ಎನ್ನುವುದು ಗೊತ್ತಾಗಬೇಕು. ಇಷ್ಟಾದರೂ ಸಂಘದ ವಿರುದ್ದ ಯಾಕೆ ಕ್ರಮ ಜರುಗಿಸಿಲ್ಲ? ಇದನ್ನು ಗಮನಿಸಿದರೆ ಕಲಬುರಗಿ ಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕೆಕೆಆರ್ಡಿಬಿಯ ಅನುದಾನ ದುರ್ಬಳಕೆಯಾಗುತ್ತಿದೆ ಹಾಗಾಗಿ ಕೆಕೆಆರ್ ಡಿಬಿಯನ್ನು ಸಿಸಿಆರ್ಡಿಬಿ ( Collection and Corruption Regional Development Board ) ಎಂದು ಮರುನಾಮಕರಣ ಮಾಡುವುದು ಉಚಿತ ಎಂದು ಕುಟುಕಿದರು.

ಸಿಎಂ ಇಲ್ಲಿಗೆ ಯಾಕೆ ಬಂದಿದ್ದು ? ರಾಜ್ಯ ಸರ್ಕಾರದ ವ್ಯಾಪಕ ಭ್ರಷ್ಟಾಚಾರವನ್ನು ಕಲಬುರಗಿ ಯ ಜನರಿಗೆ ತಿಳಿಸುವುದಕ್ಕಾ? ಎಂದು ಖಾರವಾಗಿ ಹೇಳಿದ ಶಾಸಕರು ರಾಜ್ಯ ಸರ್ಕಾರ ಖಾಲಿ ಹುದ್ದೆ ಗಳನ್ನು ತುಂಬುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಒಟ್ಟು 2,50,000 ಹುದ್ದೆಗಳು ಖಾಲಿ ಇದ್ದು ಅವುಗಳಲ್ಲಿ 20,000 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಇದಕ್ಕೆ ಉತ್ತರ ಕೊಡಿ ಎಂದರೆ ಮಾತು ಬದಲಿಸಿ ಕಾಂಗ್ರೆಸ್ ಕಾಲದಲ್ಲಿಯೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಾರೆ. ಭ್ರಷ್ಟಚಾರ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕಿಸಿ ಎಂದು ಅವರು ಸಿಎಂ ಗೆ ಸವಾಲಾಕಿದರು.

ಒತ್ತಾಯ: ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಈ ಕೂಡಲೇ ತುಂಬಬೇಕು. ಘೋಷಿತ ಅನುದಾನ ರೂ3000 ಕೋಟಿಯನ್ನು ಸಮರ್ಪಕವಾಗಿ ಹಾಗೂ ಕಾನೂನುಬದ್ಧವಾಗಿ ಕೆಕೆಆರ್ಡಿಬಿಗೆ ಬಿಡುಗಡೆ ಮಾಡಬೇಕು. ಸಂಘದ ಅಡಿಯಲ್ಲಿ ನಡೆದ ಅವ್ಯವಹಾರದ ಅಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಖರ್ಗೆ ಇಷ್ಟನ್ನು ಮಾಡಿದರೆ ಬೊಮ್ಮಾಯಿಯವರಿಗೆ ನಿಜವಾಗಿ ಧಮ್ ಇದೆ ಅರ್ಥವಾಗುತ್ತದೆ ಎಂದರು. ಜೊತೆಗೆ ನೀವೇ ಘೋಷಿಸಿರುವಂತೆ ರೂ 5000 ಕೋಟಿ ಬಿಡುಗಡೆ ಮಾಡಿದರೆ ನಿಮ್ಮ ಫೋಟೋಗಳನ್ನು ನಾವೆ ಹಾಕಿಸುತ್ತೇವೆ ಎಂದು ಸವಾಲಾಕಿದರು.

ಲೋಕಾಯುಕ್ತಕ್ಕೆ ದೂರು: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇವೆ ಎಂದರು.
ಅಪ್ಪುಗೌಡರು ಸಿಎಂ ಆಗಲಿ: ಕಲಬುರಗಿ ಯ ಅಪ್ಪನ ಕೆರೆಯನ್ನು ಒತ್ತುವರಿ ಮಾಡಿ ಮಹನೀಯರ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೆಯ ಪಾಟೀಲ ಅವರು ನನ್ನ ರಾಜಕೀಯ ಏಳಿಗೆ ಸಹಿಸದೆ ಪ್ರಿಯಾಂಕ್ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಪ್ರಿಯಾಂಕ್, ಅಪ್ಪುಗೌಡರು ಈಗ ಶಾಸಕರಿದ್ದಾರೆ,ಮುಂದೆ ಸಚಿವರಾಗಿ ಅಥವಾ ಸಿಎಂ ಆಗಲಿ ಅದು ನನಗೆ ವ್ಯತ್ಯಾಸ ತರದು. ನಾನೇಕೆ ಅವರ ರಾಜಕೀಯ ಏಳಿಗೆ ಸಹಿಸಲ್ಲ.? ನಾನು ಕೆರೆ ಒತ್ತುವರಿ ಆಗಿದೆ ಎಂದಿರುವುದನ್ನ ಅವರೇಕೆ ವೈಯಕ್ತಿಕ ವಾಗಿ ತೆಗೆದುಕೊಳ್ಳಬೇಕು.? ಕೆರೆ ಒತ್ತುವರಿ ಆಗಿಲ್ಲದಿದ್ದರೆ ಜಿಲ್ಲಾಧಿಕಾರಿ ಯಾಕೆ ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಅಪ್ಪುಗೌಡರು ದಾಖಲೆಗಳನ್ನು ಡಿಸಿ ತೋರಿಸಲಿ. ನನಗೆ ಉತ್ತರಿಸುವುದೇ ಬೇಡ ನನ್ನ ಪ್ರಶ್ನೆಗಳು ಜನಸಮಾನ್ಯರ ಪ್ರಶ್ನೆಗಳು ಜನರಿಗೆ ಉತ್ತರ ನೀಡಲಿ ಎಂದರು.
ಡಿಕೆಶಿ ಅಭಿಪ್ರಾಯವೂ ಪ್ರಾಮುಖ್ಯ: ಕೆಲಸ ಮಾಡುವವರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೇಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಹೇಳಿರುವುದಕ್ಕೆ ಕಾಂಗ್ರೆಸ್ ನಲ್ಲೇ ಕೆಲವರು ವಿರೋಧಿಸಿದ್ದು ಟಿಕೇಟ್ ನೀಡುವುದು ವರಿಷ್ಠರು ಎಂದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಅಧ್ಯಕ್ಷರು ಕೂಡಾ ಆಂತರಿಕ ಸಮೀಕ್ಷೆ ನಡೆಸುತ್ತಿದ್ದಾರೆ ಅವರ ಅಭಿಪ್ರಾಯವೂ ಪ್ರಮುಖವಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಶಿವಾನಂದ ಪಾಟೀಲ, ಶಿವು ಹೊನಗುಂಟಿ, ಈರಣ್ಣ ಝಳಕಿ ಹಾಗೂ ಮತ್ತಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago