ಅಂಕಣ ಬರಹ

ಮತ್ತೆ ಕಲ್ಯಾಣದತ್ತ ಕೊಂಕು ಮಾತು ಬೇಡ

ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ‍್ಯ ಸ್ವಾಮೀಜಿಗಳ ಕರ್ಣಧಾರತ್ವದಲ್ಲಿ ನಡೆಯುತ್ತಿರುವ “ಮತ್ತೆ ಕಲ್ಯಾಣ” ಜಿಲ್ಲೆಯಿಂದ ಜಿಲ್ಲೆಗೆ ಪಯಣ ಮಾಡುತ್ತಲೆ ಹಲವಾರು ಸಂಘರ್ಷಗಳನ್ನು ಎದುರಿಸುತ್ತಿದೆ. ಹೊಸ ಮಾತು, ಚಿಂತನೆ ನಡೆಯುವ ಸಂರ‍್ಭದಲ್ಲಿ ಸಹಜವಾಗಿ ಸಂಘರ್ಷಗಳು ಉಂಟಾಗುತ್ತವೆ. ಇದೆಲ್ಲ ಮತ್ತೆ ಕಲ್ಯಾಣದ ಗುಂಪಿಗೆ ಗೊತ್ತಿದೆ. ಜನ ಸಾಮಾನ್ಯರ ನಡುವೆ ಅನುಮಾನದ ಬೀಜಗಳನ್ನು ಬಿತ್ತಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಪಟ್ಟಭದ್ರರು ಹಲವಾರು ತಂತ್ರಗಳನ್ನು ಹೆಣೆದಿರುತ್ತಾರೆ. ಇದನ್ನು ಅರಿಯದ ಜನ ಅವರ ಆಜ್ಞೆಯನ್ನು ಪಾಲಿಸಿಕೊಂಡು ಹೊರಟಿದ್ದಾರೆ.

ಹಿಂದೊಮ್ಮೆ ಅಟೆನ್ ಬರೋ ತಯಾರಿಸಿದ ಗಾಂಧಿ ಸಿನೆಮಾ ನೋಡದಂತೆ ಮಾಡಿದ ಅವರ ತಂತ್ರ ಕೊನೆಗೂ ಫಲಿಸಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಗಾಂಧಿ ಸಿನೆಮಾದಲ್ಲಿ ತೋರಿಸಲಾಗಿಲ್ಲ ಎಂಬ ಸಣ್ಣ ಹುಳುವನ್ನು ಹರಿಯಬಿಟ್ಟರು. ಅದು ಆಗ ಯಶಸ್ವಿಯಾಯಿತು. ಗಾಂಧಿ ಸಿನೆಮಾ ನೋಡಲು ದಲಿತರು ಅಡ್ಡಿ ಉಂಟು ಮಾಡಿದರು. ಅವರು ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಒಡೆದರು. ಒಂದು ಗಾಂಧಿ ಸಿನೆಮಾ ನೋಡಬಾರದು. ಇನ್ನೊಂದು ಆ ಸಿನೆಮಾ ನೋಡಿದರೆ ಅಲ್ಲಿ ಮಹಾತ್ಮಗಾಂಧೀಜಿಯನ್ನು ಹತ್ಯೆ ಮಾಡಿದವರು ಯಾರು ? ಕೊಲೆ ಮಾಡುವುದಕ್ಕಿಂತ ಮುಂಚೆ ಆತ ಯಾವ ಸಂಘಟನೆಯಲ್ಲಿ ಇದ್ದ ? ಎಂಬ ಸಂಗತಿ ಅತ್ಯಂತ ಸ್ಪಷ್ಟವಾಗಿ ತೋರಿಸಲಾಗಿದೆ. ಈ ಸತ್ಯವನ್ನು ಜನ ಅರಿತುಕೊಂಡರೆ ಪಟ್ಟಭದ್ರರ ಬುಡಕ್ಕೆ ನೀರು ಬರುತ್ತದೆ. ಹೀಗಾಗಿ ಅವರು ಛೂಬಿಟ್ಟರು. ನಮ್ಮ ಜನ ಅರಿಯದೆ ಹೋದರು. ಆಗ ಹಿರಿಯ ಬರಹಗಾರ, ನಾಡಿನ ಬಹುದೊಡ್ಡ ಚಿಂತಕ ದೇವನೂರು ಮಹಾದೇವನೂರರ ಮಾತನ್ನೂ ಗಮನಿಸಲಿಲ್ಲ. ಪ್ರಜ್ಞೆ ಮತ್ತು ಪ್ರತಿಭಟನೆಯ ಮನೋಭಾವ ಬೆಳೆಸಿಕೊಳ್ಳುವ ಹಂಬಲ ಇರುವ ಎಲ್ಲರೂ ಗಾಂಧೀ ಸಿನೇಮಾ ನೋಡಿ ಎಂದರು. ಅವರ ಮಾತು ಕಾಲ ಕಸ ಆಯ್ತು. ಆದ್ದರಿಂದಲೇ ಇಂದು ಗೋಡ್ಸೆ ವಾದಿಗಳು ಹೆಚ್ಚಾಗಿದ್ದಾರೆ. ಗಾಂಧೀ ವಾದಿಗಳು ಮೂಲೆಗುಂಪಾಗಿದ್ದಾರೆ.

ಅದರಂತೆ ಮೀಸಲಾತಿಯ ಕುರಿತು, ಹಲವಾರು ತಪ್ಪು ತಿಳುವಳಿಕೆಗಳು ಜನ ಸಾಮಾನ್ಯರಲ್ಲಿ ಇವೆ. ತಳ ಸಮೂಹದ ದಲಿತರಿಗೆ ಮಾತ್ರ ಮೀಸಲಾತಿ ಎಂದು ಇದುವರೆಗೆ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಜನ ಸಾಮಾನ್ಯರು ಸಹ ಅವರ ಮಾತಿಗೆ ತಾಳ ಹಾಕುತ್ತಿದ್ದಾರೆ. ಅವರಿಗೆ ಗೊತ್ತಿಲ್ಲ, ಪ್ರತಿಯೊಂದು ಜನಾಂಗಕ್ಕೂ ಮೀಸಲಾತಿ ಇದ್ದೆ ಇದೆ. ಯಾರಿಗೆ ಇಲ್ಲಿಯವರೆಗೆ ಮೀಸಲಾತಿ ಇದ್ದಿರಲಿಲ್ಲವೋ ಅವರು ಸಹ ಮೋದಿಯವರ ಸರಕಾರದಿಂದ ೧೦ % ಮೀಸಲಾತಿ ಪಡೆಯುತ್ತಿದ್ದಾರೆ. ಎಲ್ಲಿಯವರೆಗೆ ಇಲ್ಲಿನ ತಳ ಸಮೂಹಕ್ಕೆ ಸಾಮಾಜಿಕ ಸ್ಥಾನಮಾನಗಳು ಸಿಕ್ಕುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಮೀಸಲಾತಿ ಇರಬೇಕು. ಜಾತಿಯತೆಯ ಭೂತ ಸಾಯುವವರೆಗೂ ಇದು ಇರುತ್ತದೆ ಕೂಡ. ಇದರಲ್ಲಿ ಎರಡು ಮಾತಿಲ್ಲ. ಈ ಸತ್ಯ ಮತ್ತೆ ಕಲ್ಯಾಣದ ಮುಂಚೂಣಿಯ ಎಲ್ಲರಿಗೂ ಗೊತ್ತಿದೆ.

ಆದರೆ ಯಾರದೋ ಮಾತಿಗೆ, ಚಿತಾವಣೆಗೆ ಒಳಗಾಗಿ ಮತ್ತೆ ಕಲ್ಯಾಣವನ್ನು ಹೇಗಾದರೂ ಹದಗೆಡಿಸಬೇಕು ಎಂಬ ಭ್ರಷ್ಟ- ಕುಟಿಲ ಮಾತಿಗೆ ಬಲಿಯಾಗಿ ಪ್ರತಿಭಟಿಸುವುದು ಸಮಾಜಕ್ಕೆ ಮಾರಕ ಎಂಬುದನ್ನು ನಾವು ಮರೆಯಬಾರದು. ಮತ್ತೆ ಕಲ್ಯಾಣದ ಗುಂಪು ಯಾರನ್ನೂ ಅಸ್ಪೃಶ್ಯರಾಗಿ ನೋಡಿಲ್ಲ. ಯಾರನ್ನೂ ಹೊರಗಿಟ್ಟು ಎಲ್ಲರಿಗೂ ಕಲ್ಯಾಣವಾಗಲಿ ಎಂದು ಬಯಸಿಲ್ಲ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಬಸವಣ್ಣನವರನ್ನೇ ಮೇಟಿಯಾಗಿಟ್ಟುಕೊಂಡ ಗುಂಪಿಗೆ ಯಾರೂ ತಿರಸ್ಕೃತರಲ್ಲ. ಬರೀ ಸಿದ್ದಾಂತಗಳಿಗೆ ಜೋತು ಬಿದ್ದರೆ, ಸಿದ್ದಾಂತಗಳನ್ನು ಅರಿಯದ ಜನರ ಹತ್ತಿರ ಹೋಗುವುದು ಯಾವಾಗ ? ಅವರೆಲ್ಲ ನಮ್ಮವರಲ್ಲವೆ ? ಅವರಿಗೆ ಬಸವಾದಿ ಶರಣರ ವಿಚಾರಗಳನ್ನು ತಲುಪಿಸಬೇಡವೆ ? ಏನೋ ಅರಿಯದೆ, ಯಾರದೋ ಒತ್ತಾಯಕ್ಕೆ, ಅನಿವರ‍್ಯಕ್ಕೆ ಯಾರದೋ ಹಿಂದೆ ಹೋದ ಎಲ್ಲರನ್ನು ತಿರಸ್ಕರಿಸೋಣವೆ ? ಇದರಿಂದ ನಾವೆಲ್ಲ ಏನು ಮಾಡಿದಂತೆ ಆಗುತ್ತಿದೆ ? ಬಹುಜನರನ್ನು ಹೊರಗಿಟ್ಟು ಏನಾದರೂ ಬದಲಾವಣೆ ಬಯಸುವುದು ಸಾಧ್ಯವಾದೀತೆ ? ಈ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತಿಸಬೇಕು.

ಕೇವಲ ಉಡಾಫೆಯ ಮಾತುಗಳನ್ನು ಬರೆಯುವುದರಿಂದ, ಮಾತಾಡುವುದರಿಂದ ನಾವು ಬಹುದೊಡ್ಡ ಚಿಂತಕರಾಗಲು ಸಾಧ್ಯವೆ ? ಬರೀ ಮಾತು ಮನೆ ಕೆಡಿಸುತ್ತದೆ ಎಂಬುದು ನೆನಪಿರಲಿ. ಬರೀ ಪ್ರತಿಭಟನೆಯಿಂದ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಪ್ರತಿಭಟನೆ, ಮಾತಿನ ಹಿಂದೆ ಸಾತ್ವಿಕವಾದ ಕ್ರಿಯೆಯ ಅಗತ್ಯವಿದೆ, ಅಲ್ಲವೆ ?

ನಮ್ಮ ದಲಿತ ಸಮೂಹದಲ್ಲಿಯೆ ಬಹಳಷ್ಟು ಜನ ತಮ್ಮ ಸ್ವಾರ್ಥಕ್ಕಾಗಿ ನಾವೆಲ್ಲ ಇಷ್ಟಪಡದ, ಸಿದ್ಧಾಂತಗಳೆ ಇಲ್ಲದ ಪಕ್ಷದಲ್ಲಿ ಈಗ ಇಲ್ಲವೆ ? ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಗಿರಿ, ಅಕಾಡೆಮಿಯ ಖರ್ಚಿಗಳಿಗೆ ಅಮರಿಗೊಂಡಿಲ್ಲವೆ ? ಅವರೆಲ್ಲರಿಗೂ ಒಂದಾದರೂ ಪ್ರತಿಭಟನೆಯ ಮಾತು ಆಡಿದ್ದೇವಾ ? ಎಲ್ಲಿಯಾದರೂ ಅವರನ್ನು ಕಾರ್ಯಕ್ರಮಗಳಿಂದ ಧಿಕ್ಕರಿಸಿದ್ದೇವಾ ? ನಮ್ಮ ನಮ್ಮಲ್ಲಿ ಯಾಕಿಷ್ಟು ಬೂಟಾಟಿಕೆಯ ಮನಸ್ಸು ಇದೆ ? ನಮ್ಮಲ್ಲಿ ನಾವೇ ಇಳಿದು ನೋಡಬೇಕು. ಸತ್ಯದ ಪಕ್ಷಪಾತಿಯಾಗಬೇಕು.

ಸಿರಿಗೆರೆ ಪೀಠದ ಪಂಡಿತಾರಾಧ್ಯರು ತಮ್ಮ ಮಠವನ್ನು ಬಿಟ್ಟು ಜನ ಸಮ್ಮುಖದತ್ತ ಮುಖಮಾಡಿ ನಡೆದಾಗ ಗೊತ್ತಿಲ್ಲದೆ ಕೆಲವು ಸಂಗತಿಗಳು ಘಟಿಸುತ್ತಿರಬಹುದು. ಅವನ್ನು ಅವರ ಗಮನಕ್ಕೆ ತರೋಣ. ಪಂಡಿತಾರಾಧ್ಯರಿಗೆ ತಿದ್ದಿಕೊಳ್ಳುವ,ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಸುಮ್ಮನೆ ಪ್ರತಿಭಟನೆಗಾಗಿ, ಸುದ್ದಿಗಾಗಿ ತಂಟೆಗೆ ಹೋಗುವುದು ಬೇಡ. ತಂಟೆ ತಗಾದೆ ಮಾಡುವ ನಾವು ಏನೇನು ಕಡಿದು ಕಟ್ಟೆ ಹಾಕಿದ್ದೇವೆ ? ಎಂಬ ಆತ್ಮಾವಲೋಕನವೂ ಇಂದಿನ ಅಗತ್ಯವಾಗಿದೆ.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

27 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

30 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

33 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago