ಬಿಸಿ ಬಿಸಿ ಸುದ್ದಿ

ಬಿಜೆಪಿ ಕೇವಲ ಭಾವನೆಗಳ ವಿಚಾರದ ಮೇಲೆ ರಾಜಕೀಯ ಮಾಡುತ್ತದೆ

ಕಲಬುರಗಿ: ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು 10 ವರ್ಷ ಪೂರ್ಣಗೊಂಡಿದ್ದು, ಇದರಿಂದ ಈ ಭಾಗದ ಜನರಿಗೆ ಆಗಿರುವ ಅನುಕೂಲಗಳ ಬಗ್ಗೆ ಅರಿವು ಮಾಡಿಕೊಡಬೇಕು. ನಮ್ಮ ಪಕ್ಷದ ಆಚಾರ, ವಿಚಾರ ತಿಳಿಸಬೇಕು. ಈ ನಿಟ್ಟಿನಲ್ಲಿ ಇಂದು ಪೂರ್ವಭಾವಿ ಸಭೆ ಮಾಡಲಾಗಿದೆ ಎಂದು ಕಲಬುರ್ಗಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ಇಡೀ ಕಲ್ಯಾಣ ಕರ್ನಾಟಕ ಭಾಗದ ಜನ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಅತ್ಯಂತ ಉತ್ಸಾಹ ಹಾಗೂ ಪ್ರೀತಿ ತೋರಿದ್ದಾರೆ. ಬಳ್ಳಾರಿಯಲ್ಲಿ ಐತಿಹಾಸಿಕ ಪಕ್ಷದ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಭರವಸೆ ಕೇವಲ ಕಾಗದದ ಮೇಲೆ ಉಳಿದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೇ 10 ರಂದು 371 ಜೆ ತಿದ್ದುಪಡಿ ಜಾರಿಗೆ ಪರಿಶ್ರಮ ಹಾಗೂ ಅದು ಜಾರಿಯಾದ ನಂತರ ಜನರ ಬದುಕಿನಲ್ಲಿ ಆಗುವ ಬದಲಾವಣೆ ಬಗ್ಗೆ ತಿಳಿಸಲಾಗುವುದು ಎಂದರು.

ಬಿಜೆಪಿ ಕೇವಲ ಭಾವನೆಗಳ ವಿಚಾರದ ಮೇಲೆ ರಾಜಕೀಯ ಮಾಡುತ್ತದೆ. ನಮ್ಮ ಪಕ್ಷ ಜನರ ಬದುಕಿನ ಬಗ್ಗೆ ಚಿಂತನೆ ನಡೆಸಿದೆ. ಕಲಬುರಗಿ ಕಾರ್ಯಕ್ರಮದಲ್ಲಿ ಯಾರೆಲ್ಲಾ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ ಎಂಬ ಪ್ರಶ್ನೆಗೆ, ‘ ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಹ್ವಾನ ನೀಡುತ್ತೇವೆ ‘ ಎಂದರು.

ಕಾಂಗ್ರೆಸ್ ನಲ್ಲಿ ಬಹಳಷ್ಟು ರೌಡಿಗಳಿದ್ದು, ಲೆಕ್ಕ ಹಾಕಿ ಹೇಳಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆ ಬಗ್ಗೆ ಕೇಳಿದಾಗ, ‘ ಈಗ ಅವರು ಯಾರ ಜತೆ ಪ್ರೀತಿ, ವಿಶ್ವಾಸ ಹೊಂದಿದ್ದಾರೆ, ಅವರ ಸಂಸ್ಕೃತಿ ಏನು ಎಂಬುದು ಎಲ್ಲವೂ ಬಹಿರಂಗವಾಗುತ್ತಿದೆ. ಇದೇನು ಹೊಸತಲ್ಲ. ತಮ್ಮಲ್ಲಿರುವ ಕಲಹ ಬಿಟ್ಟು ಬೇರೆಯವರ ಕಲಹದ ಬಗ್ಗೆ ಮಾತನಾಡುತ್ತಾರೆ ‘ ಎಂದರು.

ಪಕ್ಷಕ್ಕೆ ಬೇರೆ ಪಕ್ಷದ ನಾಯಕರ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಯಾರೆಲ್ಲಾ ಷರತ್ತುರಹಿತವಾಗಿ ಪಕ್ಷ ಸೇರಲು ಬಯಸುತ್ತಾರೋ ಅವರು ಅರ್ಜಿ ಹಾಕಲಿ. ಇದುವರೆಗೂ ನಾವು ಯಾರ ಜತೆ ಸಂಪರ್ಕ ಹೊಂದಿದ್ದೇವೆ ಎಂಬುದರ ಬಗ್ಗೆ ಈಗ ಬಹಿರಂಗಪಡಿಸುವುದಿಲ್ಲ. ಈ ವಿಚಾರವಾಗಿ ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಇದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಸ್ಥಳೀಯ ಮಟ್ಟದ ನಾಯಕರವರೆಗೆ ಎಲ್ಲರ ಜತೆ ಚರ್ಚೆ ಮಾಡಿ, ಪಕ್ಷಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು ‘ ಎಂದು ತಿಳಿಸಿದರು.

ಪಕ್ಷದ ನಾಯಕರಲ್ಲಿ ಅಂತರ ಹೆಚ್ಚಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ‘ ನಮ್ಮಲ್ಲಿ ಯಾವುದೇ ಅಂತರವಿಲ್ಲ. ಇದನ್ನು ಬಿಜೆಪಿ ಹಾಗೂ ಮಾಧ್ಯಮದವರು ಸೃಷ್ಟಿಸುತ್ತಿದ್ದಾರೆ. ರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ. ಪಿಜಿಆರ್ ಸಿಂಧ್ಯಾ ಅವರ ಜತೆ ನಾನು ಚುನಾವಣೆಯಲ್ಲಿ ಹೋರಾಡಿದರೂ, ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲವೇ?. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಅಂತರ ಇದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಪತ್ರ ನೀಡಲಿಲ್ಲವೇ? ಬಿಜೆಪಿಯಲ್ಲಿ ಬಿರುಕಿದ್ದು, ನಮ್ಮಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸನಗೌಡ ಯತ್ನಾಳ್, ಯಡಿೂರಪ್ಪನವರ ಗುಂಪು ಇಲ್ಲವೇ. ಅವರ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಗಳಿವೆ ‘ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಯಾವ ಕ್ಷೇತ್ರಕ್ಕೆ ಟಿಕೆಟ್ ಬೇಕು ಎಂದು ಅರ್ಜಿ ಹಾಕಿದ್ದಾರೆ ಎಂದು ಕೇಳಿದಾಗ, ‘ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಅವರು ಪಕ್ಷದ ಹೈಕಮಾಂಡ್ ಗೆ ಜವಾಬ್ದಾರಿ ಬಿಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಈ ಮಟ್ಟದ ಶಿಸ್ತು ಇದೆ. ಯತೀಂದ್ರ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ‘ ಎಂದರು.

ರೌಡಿ ನಾಗ ಸಚಿವ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರ ಪಕ್ಷದಲ್ಲಿ ಕಾರ್ಯಕರ್ತರು ಇಲ್ಲ. ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದು, ಹೀಗಾಗಿ ಅವರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ‘ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ ಅವರು ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಗಾಬರಿಯಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನೇಮಕಾತಿ, ಗುತ್ತಿಗೆಯಲ್ಲಿ ಲೂಟಿ ಮಾಡಿ ಆಯಿತು. ಕಡೆಗೆ ಈಗ ಮತ ಕದಿಯುತ್ತಿದ್ದಾರೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾರರ ಹೆಸರು ಕೈಬಿಡಲಾಗಿದೆ. ಇದರಿಂದ ರಾಜ್ಯದ ಗೌರವ ನಾಶ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಇದ್ದ ಕೀರ್ತಿಯನ್ನು ಅಳಿಸಿ, ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ನೀಡಿದ್ದಾರೆ ‘ ಎಂದರು.

ಬೆಳಗಾವಿ ಗಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಸರ್ಕಾರ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ನಮ್ಮ ಊರು, ನಮ್ಮ ಹಳ್ಳಿ ನಮ್ಮದು. ಅವರದು ಅವರಿಗೆ. ಇದರಲ್ಲಿ ಬದಲಾವಣೆ ಅಸಾಧ್ಯ. ಜನ ನೆಮ್ಮದಿಯಾಗಿ ಬದುಕಲು ಬಿಡಬೇಕು’ ಎಂದು ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ  ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಲ್ಬುರ್ಗಿಯಲ್ಲಿ ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.

 

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago