ಬಿಸಿ ಬಿಸಿ ಸುದ್ದಿ

ಮಹಾದೇವಿಯಕ್ಕಗಳ ಸಮ್ಮೇಳನದ ಮೂಲಕ ಮಹಿಳೆಯರಿಗೆ ಉತ್ತಮ ಸಂದೇಶ: ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪ ಕರೆ

ಕಲಬುರಗಿ: 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿಯ ಫಲವಾಗಿ ಸಾಹಿತ್ಯಕ, ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕ ಲೋಕದಲ್ಲಿ ಬದಲಾವಣೆಯಾಯಿತು. ಸ್ತ್ರೀಯರಿಗೆ ಜಡತ್ವ, ಮೌಢ್ಯತೆ, ಕ್ಲೀಷ್ಟತೆಯಿಂದ ಹೊರ ಬರಲು ಸಾಧ್ಯವಾಯಿತು. ಬದುಕುವುದಕ್ಕೆ ಬೇಕು ಬದುಕುವ ಈ ಮಾತು ಎನ್ನುವಂತಿರುವ ವಚನಕಾರರ ಬದುಕು ಹಾಗೂ ಬೋಧನೆ ಇಂದಿನ ೨೧ನೇ ಶತಮಾನಕ್ಕೂ ಅಷ್ಟೇ ಪ್ರಸ್ತುತ ಮತ್ತು ಅಗತ್ಯ ಎಂಬುದು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ ಸದಸ್ಯರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ ಅಭಿಪ್ರಾಯಪಟ್ಟರು.

ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಜಯನಗರದ ಅನುಭವ ಮಂಟಪದಲ್ಲಿ ಇಂದು ನಡೆದ ಮಹಾದೇವಿಯಕ್ಕಗಳ ಸಮ್ಮೇಳನ-೧೨ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನೊಬ್ಬ ಅಪ್ಪಟ ಗೃಹಿಣಿ. ಶರಣಬಸವೇಶ್ವರ ಸಂಸ್ಥೆ ಹಾಗೂ ಸಂಸ್ಥಾನದ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಬರೆಯುವುದು ಆಗಿಲ್ಲ. ಆದರೆ ಡಿಗ್ರಿಯಲ್ಲಿ ಓದುವಾಗ ಹಲವು ಕವಿತೆ ಬರೆಯುವ ಹವ್ಯಾಸವಿತ್ತು. ಆಗ ಆಶುಕವಿತೆಯೊಂದನ್ನು ಬರೆದು ಅಲ್ಲಿಯೇ ಓದುವ ಮೂಲಕ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ಹಾಗೂ ಬಹುಮಾನ ಪಡೆದಿರುವೆ. ಆ ಶರಣನ ಇಚ್ಛೆ, ಡಾ. ಅಪ್ಪ ಅವರ ಮಾರ್ಗದರ್ಶನ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಹೇಳಿದರು.

ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆ ವಿನೂತನವಾದುದು. ಜಾತಿ-ಧರ್ಮಗಳಿಲ್ಲದ, ಮತ-ಮೌಢ್ಯಗಳಿಲ್ಲದ, ಮೇಲು-ಕೀಳಿಲ್ಲದ ಸಮ ಸಮಾಜದ ಕನಸು ಕಂಡಿದ್ದ ಶರಣರ ಅನುಭಾವದ ವಚನ ಸಾಹಿತ್ಯ ಇಂದಿನ ನಮ್ಮ ಏನೆಲ್ಲ ಸಮಸ್ಯೆಗಳಿಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ನೀಡಬಲ್ಲವು. ಜೀವಪರ ಮತ್ತು ಜನಪರವಾಗಿರುವ ವಚನ ಸಾಹಿತ್ಯವನ್ನು ಓದುವುದು, ತಿಳಿದುಕೊಳ್ಳುವುದು ಹಾಗೂ ಅದರಂತೆ ನಡೆಯುವುದು ಇಂದಿನ ಅಗತ್ಯವಾಗಿದೆ ಎಂದರು.

ಉಡುತಡಿಯ ಕೂಸಾಗಿ, ಕಲ್ಯಾಣದ ಮಗಳಾಗಿ, ಕದಳಿಯ ಬನದ ಸೊಸೆಯಾದ ಮಹಾದೇವಿ, ಜಗಕ್ಕೆಲ್ಲ ಅಕ್ಕಮಹಾದೇವಿಯಾಗಿ ಬೆಳೆದು ಬೆಳಕಾಗಿರುವುದು ಬಹು ಚೇತೋಹಾರಿ ಸಂಗತಿ. “ಹರ”ನನ್ನೇ “ವರ”ನನ್ನಾಗಿಸಿಕೊಂಡ ಆಕೆಯ ತ್ಯಾಗ-ಯೋಗಮಯ ಜೀವನ ಮಹಿಳಾ ಕುಲಕ್ಕೆ ಬಹು ದೊಡ್ಡ ಸಂದೇಶವಾಗಿದೆ. ಬದುಕಿನ ಏನೆಂಥ ಬಿಕ್ಕಟ್ಟಿನ ಸನ್ನಿವೇಶ, ಸಮಸ್ಯೆ ಹಾಗೂ ಕಷ್ಟದ ಪರಿಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದೆ ಸಮಾಧಾನಿಯಾಗಿರಬೇಕು ಎಂದು ಹೇಳಿದ ಅಕ್ಕನ ವಚನಗಳು ತಲ್ಲಣದ ಇಂದಿನ ಬದುಕಿಗೆ ಜ್ವಲಂತ ಸಾಕ್ಷಿಯಾಗಿವೆ. ಹೀಗಾಗಿ ಅಕ್ಕನ ಹೆಸರಲ್ಲಿ ಸಮ್ಮೇಳನ ನಡೆಸಿರುವುದು ಬಹಳ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಹ”ದಲ್ಲೇ “ಪರ”ವನ್ನು ಕಂಡ ಬಸವಾದಿ ಶರಣರು ಸಾರಿದ ದಯವೇ ಧರ್ಮದ ಮೂಲವಯ್ಯ, ಕಾಯಕವೇ ಕೈಲಾಸ, ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಇವನಾರವ, ಇವನಾರವನೆಂದಿನಿಸದೆ, ಇವನಮ್ಮವ, ಇವನಮ್ಮವ ಎಂದೆನಿಸು ಎಂಬಂತಹ ನುಡಿಮುತ್ತುಗಳಂತಿರುವ ವಚನಕಾರರ ಸಂದೇಶಗಳನ್ನು ಪಾಲಿಸಿದರೆ ಬದುಕು ಸಾರ್ಥಕವಾಗುತ್ತದೆ. ಅಷ್ಟಾವರಣ, ಷಟಸ್ಥಲ, ಪಂಚಾಚಾರ ತತ್ವಗಳ ಪಾಲನೆಯಿಂದ ನಮ್ಮಲ್ಲಿರುವ ಋಣಾತ್ಮಕ ಭಾವ ಕಳೆದು ಧನಾತ್ಮಕ ಭಾವ ಮೂಡುತ್ತದೆ. ಭಕ್ತಿಯೇ ಶಕ್ತಿ. ಭಕ್ತಿಯಿಂದಲೇ ಆತ್ಮೋನ್ನತಿ, ಸದ್ಗತಿ ಕಾಣಬಹುದು ಎಂದು ತಿಳಿಸಿದರು.

ದಾಸೋಹ ಭಂಡಾರಿಯಾದ ಶರಣಬಸವೇಶ್ವರರು ಅರಳಗುಂಡಗಿಯಿಂದ ಕಲ್ಯಾಣದತ್ತ ಪ್ರಯಾಣ ಬೆಳೆಸಿದರು. ಕಲ್ಯಾಣದ ಬಸವಣ್ಣನೆಂದರೆ ಅವರಿಗೆ ಬಲು ಗೌರವ ಮತ್ತು ಭಕ್ತಿ. ಆದರೆ ಕಲ್ಯಾಣಕ್ಕೆ ಹೋಗಲಾರದೆ ಕಲಬುರಗಿಯನ್ನೇ ಕಲ್ಯಾಣ ಮಾಡಿದ ಮಹಾನ್ ಕರುಣಾಮಯಿ. ಕಲ್ಯಾಣದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕಲಬುರಗಿಯಲ್ಲಿ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಇಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಆ ಮೂಲಕ “ಮತ್ತೆ ಕಲ್ಯಾಣ” ಸ್ಥಾಪಿಸುವಂತಾಗಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಶರಣಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮೆರವಣಿಗೆ ನಡೆಯಿತು. ಬೆಳಗ್ಗೆ 8 ಗಂಟೆಗೆ ಅನುಭವ ಮಂಟಪದಲ್ಲಿ ನಡೆದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮತ್ತು ಷಟಸ್ಥಲ ದ್ವಜಾರೋಹಣವನ್ನು ಮಾಜಿ ಶಾಸಕಿ ಅರುಣಾ ಪಾಟೀಲ ನೆರವೇರಿಸಿದರು.

ಬೆಂಗಳೂರಿನ ಮಧುರಾ ಅಶೋಕ ಅವರು ಬೆಳಗಿನ ಅನಾವರಣಗೊಳಿಸಿದರು. ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸಮ್ಮೇಳನ ಸಂಚಾಲಕಿ ಡಾ. ಜಯಶ್ರೀ ದಂಡೆ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago