ಮಂಗಳೂರು: ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ ಎಂದು ಡಾ. ಕನ್ಹಯ್ಯ ಕುಮಾರ್ ಹೇಳಿದರು.
ಬಿವಿ ಕಕ್ಕಿಲ್ಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಅವರು ಅವರ ಆಡಿದ ಮಾತುಗಳನ್ನು ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಅವರು ಅನುವಾದಿಸಿದ್ದಾರೆ.
ಯುವತಿಯ ಪ್ರಶ್ನೆಯ ಸಾರಾಂಶ : ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಒಮ್ಮೆಯಾದರೂ ಜೈ ಹಿಂದ್ ಜೈ ಶ್ರೀರಾಮ್ ಹೇಳಿಬಿಡಿ. ನೀವೇಕೆ ಏಕರಾಷ್ಟ್ರದ ವಿರುದ್ಧ ಇದ್ದೀರಿ, ಅದನ್ನೂ ವಿವರಿಸಿ.
ಕನ್ಹಯ್ಯ ಕುಮಾರ್ ನೀಡಿದ ಉತ್ತರ:
ನೀವು ಏಕದ ಕುರಿತು ಹೇಳುತ್ತಿದ್ದೀರಿ. ಏಕೆ ‘ಏಕೈಕ’ವನ್ನು ಪ್ರಚಾರ ಮಾಡೋದಿಲ್ಲ, ಅದನ್ನೇಕೆ ಒಪ್ಪಿಕೊಳ್ಳೋದಿಲ್ಲ ಅಂತ ಕೇಳ್ತಿದ್ದೀರಿ. ಆದರೆ ನಾನೇನು ಮಾಡಲಿ? ನಾನು ಹುಟ್ಟಿದ್ದು ಇಬ್ಬರ ಸಂಯೋಗದಿಂದ. ನನ್ನ ಅಪ್ಪ ಮತ್ತು ಅಮ್ಮ ಇಬ್ಬರು ಮದುವೆಯಾಗಿದ್ದರಿಂದ ನಾನು ಹುಟ್ಟಿದೆ. ಯಾರೋ ಒಬ್ಬರಿಂದ ನಾನು ಹುಟ್ಟುವುದು ಅಸಾಧ್ಯವಿತ್ತು. ಅಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರಿದ್ದರು.
ನೀವು ಏಕರಾಷ್ಟ್ರದ ಪರಿಕಲ್ಪನೆಯನ್ನು ನಾನೇಕೆ ಬೆಂಬಲಿಸೋದಿಲ್ಲ ಅಂತ ಕೇಳ್ತಿದ್ದೀರಿ. ರಾಷ್ಟ್ರ ಯಾವತ್ತಿಗೂ ಒಂದೇ. ಭಾರತ ಇರುವುದು ಒಂದೇ, ಇದರಲ್ಲಿ ಸಂದೇಹವಿಲ್ಲ. ಆದರೆ, ಈ ಏಕಭಾರತವನ್ನು ಪ್ರತಿನಿಧಿಸುವ ಒಂದು ಸಂವಿಧಾನ ಏನಿದೆ, ಅದರಲ್ಲಿ 300ಕ್ಕಿಂತ ಹೆಚ್ಚು ವಿಧಿಗಳಿವೆ. ಮತ್ತು ನೀವು ಹೇಳುತ್ತಿರುವ ಏಕರಾಷ್ಟ್ರವನ್ನು ಪ್ರತಿನಿಧಿಸಲು ಇರುವ ಒಂದು ಸಂಸತ್ತು ಏನಿದೆ, ಅದರಲ್ಲೂ ಎರಡು ಸದನಗಳಿವೆ- ಲೋಕಸಭೆ ಮತ್ತು ರಾಜ್ಯಸಭೆ. ಮತ್ತು ಅದಕ್ಕೆ ಚುನಾಯಿತರಾಗಿ ಹೋಗುವುದು ಯಾರೋ ಒಬ್ಬರಲ್ಲ, ಪೂರಾ 545 ಸದಸ್ಯರು!.
ಆದ್ದರಿಂದ ನಾವು ಪ್ರತಿಪಾದಿಸುವ ಏಕತೆ ಏನಿದೆ, ಅದು ವಿವಿಧತೆಯನ್ನು ಪ್ರತಿನಿಧಿಸುವಂಥದ್ದು. ಅಲ್ಲಿ ವೈವಿಧ್ಯತೆ ಇದೆ. ನೀವು ಜೈ ಶ್ರೀರಾಮ್ ಘೋಷಣೆ ಕುರಿತು ಹೇಳಿದಿರಿ. ನೀವು ಖಂಡಿತವಾಗಿ ಘೋಷಣೆ ಹಾಕಿ, ಅದು ನಿಮ್ಮ ಸ್ವಾತಂತ್ರ್ಯ. ನೀವು ಜೈ ಶ್ರೀರಾಮ್ ಬೇಕಾದರೂ ಅನ್ನಿ, ಜೈ ಹನುಮಾನ್ ಬೇಕಾದರೂ ಅನ್ನಿ. ನಿಮಗೆ ಬೇಕಾದ ಘೋಷಣೆ ಕೂಗುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ, ನಿಮಗೆ ನಿಮ್ಮ ಘೋಷಣೆ ಕೂಗುವ ಸ್ವಾತಂತ್ರ್ಯ ನೀಡಿರುವ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿಬಿಡಿ.
ಇನ್ನು, ನಾನು ಜೈಶ್ರೀರಾಮ್ ಘೋಷಣೆ ಕೂಗುವ ಬಗ್ಗೆ, ನಾನು ಹುಟ್ಟಿದ್ದೇ ಮಿಥಿಲೆಯಲ್ಲಿ. ನನ್ನ ಊರು ಬೇಗುಸರಾಯ್ ಮಿಥಿಲಾ ಪ್ರಾಂತ್ಯಕ್ಕೆ ಸೇರುತ್ತದೆ. ನಿಮಗೆ ಗೊತ್ತಿರಬಹುದು, ಮಿಥಿಲೆ ಶ್ರೀರಾಮನ ಮಾವನ ಮನೆ. ನಮ್ಮ ಊರಲ್ಲಿ ಪ್ರತಿವರ್ಷ ಸೀತಾ ರಾಮರ ವಿವಾಹ ಮಹೋತ್ಸವ ನಡೆಸುತ್ತಾರೆ.
ಅಯೋಧ್ಯೆಯಿಂದ ತರುಣರು ರಾಮನ ವೇಷದಲ್ಲಿ ನಮ್ಮ ಊರಿಗೆ ಮೆರವಣಿಗೆ ಬರುತ್ತಾರೆ. ನಾವು ಹೆಣ್ಣಿನ ಕಡೆಯವರು. ಅವರು ಗಂಡಿನ ಕಡೆಯವರು. ನಮ್ಮ ಪ್ರಾಂತ್ಯದಲ್ಲಿ ಬೀಗರನ್ನು ಬೈಗುಳದ ಮೂಲಕ ಸ್ವಾಗತಿಸುವ ಪದ್ಧತಿ ಇದೆ. ನಾವು ರಾಮನನ್ನು ನಿಂದಿಸುತ್ತಾ ಸ್ವಾಗತ ಕೋರುತ್ತೇವೆ. ರಾಮನನ್ನು ಹಾಸ್ಯ ಮಾಡುತ್ತೇವೆ. ಇದು ನಮ್ಮಲ್ಲಿ ಪಾರಂಪರಿಕವಾಗಿ ನಡೆದು ಬಂದ ರೂಢಿ. ಇದು ನಮ್ಮ ನೆಲದ ಸಂಸ್ಕೃತಿ.
ಅದೂ ಅಲ್ಲದೆ ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವ ದೇವರನ್ನೂ ಏಕವಾಗಿ ಸ್ಮರಿಸುವುದಿಲ್ಲ. ರಾಮನನ್ನು ಸೀತಾರಾಮ ಎಂದೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಜೋಡಿಯಾಗಿ ಸ್ಮರಿಸುತ್ತಾರೆ, ಪೂಜಿಸುತ್ತಾರೆ. ಇದು ನಾನು ಬೆಳೆದ ನೆಲದ ಪರಂಪರೆ. ನನ್ನ ಪರಿಸರದ ಸಂಸ್ಕೃತಿ.
ನೀವೇನಾದರೂ ಪಿಎಚ್ಡಿ ಮಾಡುವುದಾದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅವುಗಳ ಮೇಲೆ ಸಂಶೋಧನೆ ಮಾಡಿ. ನನಗೆ ತಿಳಿದಿರುವಂತೆ ಈ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ.
ನಾನೊಮ್ಮೆ ಹಿಮಾಚಲಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ.
ಈ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ಧನ ಮೂರ್ತಿ ಇದೆ. ಅದರ ತಲೆಮೇಲೆ ಶಿವನ ಮೂರ್ತಿನ್ನು ಇರಿಸಲಾಗಿದೆ. ಈ ಮಂದಿರಕ್ಕೆ ಮೊದಲು ಹಿಂದೂ ಸಾಧು ಬರುತ್ತಾರೆ. ಪ್ರಾರ್ಥನೆ ನಡೆಸುತ್ತಾರೆ. ಅದಾದ ನಂತರ ಬೌದ್ಧ ಬಿಕ್ಖು ಬರುತ್ತಾರೆ, ಅಲ್ಲಿ ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾರೆ. ಇದು ಈ ದೇಶದ ವೈಶಿಷ್ಟ್ಯ. ಇದು ಹಿಂದೂಸ್ಥಾನದ ವೈಶಿಷ್ಟ್ಯ.
ಲಾಹೋರ್ ಜಿಲ್ಲೆಯಲ್ಲಿ ಒಂದು ರಾಮಾಯಣ ಪ್ರಚಲಿತದಲ್ಲಿದೆ. ಅದು ಲಾಹೋಲಿ ಭಾಷೆಯಲ್ಲಿದೆ. ಆ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವುದಿಲ್ಲ, ಬದಲಿಗೆ, ಸೀತೆ ರಾವಣನ ಮಗಳು! ಮತ್ತು ರಾಮ ಸೀತೆಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಈ ಕಾರಣದಿಂದ ರಾಮ ರಾವಣರ ಯುದ್ಧ ನಡೆಯುತ್ತದೆ. ಇದು ಲಾಹೋಲಿ ರಾಮಾಯಣ ಹೇಳುವ ಕಥೆ. ಇದು ಹಿಂದೂಸ್ಥಾನದ ವೈಶಿಷ್ಟ್ಯ.
ಇಂಥವನ್ನೆಲ್ಲ ಯಾರು, ಯಾಕಾಗಿ ನಿಮ್ಮ ತಲೆಯೊಳಗೆ ತುಂಬಿದ್ದಾರೋ ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಜನಿಸುವುದೇ ಒಂದು ಗೌರವದ ವಿಷಯ. ನೀವು ಹಿಮಾಚಲಕ್ಕೆ ಹೋದರೆ ನಿಮಗೆ ಸ್ವಿಟ್ಜರ್ಲೆಂಡಿಗೆ ಹೋದ ಅನುಭವವಾಗುತ್ತದೆ. ಗೋವಾ ಅಥವಾ ಮಂಗಳೂರು ಸಮುದ್ರ ತೀರಕ್ಕೆ ಬಂದರೆ, ಮಿಯಾಮಿ ಬೀಚ್’ ನಲ್ಲಿ ಮಲಗಿರುವ ಅನುಭವವಾಗುತ್ತದೆ. ಈ ದೇಶದ ಮೈದಾನಗಳಲ್ಲಿ ಅಲೆದಾಡಿದರೆ, ಅವು ಅಮೆರಿಕಾದ ಹಸಿರುಮೈದಾನಗಳಿಗಿಂತ ಎಷ್ಟು ಅಗಾಧವಾಗಿದೆ ಅನ್ನೋದು ತಿಳಿಯುತ್ತದೆ. ಆದರೂ ಒಟ್ಟಾರೆಯಾಗಿ ಇದು ಒಂದು ದೇಶ. ಇದು ನಮ್ಮ ದೇಶ.
ನಿಮ್ಮ ದೇಶ ನಿಮ್ಮದು. ನಿಮ್ಮ ತಾಯಿ ನಿಮ್ಮವಳು. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದು ನಿಮ್ಮ ಖಾಸಗಿ ವಿಷಯ. ಹಾಗಂತ ಯಾರಾದರೂ ಯಾವುದೇ ಬಣ್ಣದ ಬಾವುಟ ಹಿಡಿದು ಬಂದು, ಜೈ ಶ್ರೀ ರಾಮ್ ಎಂದೋ ಇಂಕ್ವಿಲಾಬ್ ಜಿಂದಾಬಾದ್ ಎಂದೋ ಘೋಷಣೆ ಕೂಗುತ್ತಾ ಬಂದು, “ನೀನು ನಿನ್ನ ತಾಯಿಯನ್ನು ಪ್ರೀತಿಸುವುದೇ ನಿಜವಾದರೆ, ಹೇಗೆ ಪ್ರೀತಿಸುತ್ತೀಯ ತೋರಿಸು” ಅಂದರೆ, ಆಗ ನಿಮ್ಮ ಉತ್ತರ ಏನಿರುತ್ತದೆ?
ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…