ಕ್ಷಮಿಸಿ ಬಿಡು
ಅವರಿಗೊಂದೂ ಗೊತ್ತಿಲ್ಲ
ಕ್ಷಮಿಸಿ ಬಿಡೋಣ
ದಾರಿ ತಪ್ಪಿದ ಅರಿಯದ ಕಂದಗಳವು.
ಅವರಜ್ಜ ನಮ್ಮಜ್ಜ ಒಂದೇ ಹುಕ್ಕಾದಲ್ಲಿ
ಎಳೆದ ಝುರಕಿಯ ಹೊಗೆ
ಇನ್ನೂ ಸುಳಿದಾಡುತಿದೆ ಇಲ್ಲೆಲ್ಲ.
ಇದೇ ಜಾತ್ರೆಯಲ್ಲಿ
ಅವರವ್ವನ ಎದೆಯಲಿ ಹುದುಗಿದ
ಚುಕ್ಕಿ ಬಳೆಯಾಸೆಯ ಅರಿತವಳು
ಬಳೆಗಾರತಿ ನನ್ನಮ್ಮಿ ಜಾನ್.
ಅವಳ ಮೃದು ಮುಂಗೈಗೆ
ಇನಿತು ನೋವಾಗದಂತೆ
ಬಳೆಯೊಂದೂ ಚಟ್ಟೆನ್ನದಂತೆ
ಹೂ ಸ್ಪರ್ಷದಂತೆ ಬಳೆ ಮುಡಿಸಿ
ಮುಗುಳ್ನಕ್ಕಿದ್ದಳು ನನ್ನಮ್ಮಿ ಜಾನ್.
ಅವಳೋ ಬಯಸಿದ ಬಣ್ಣದ
ಬಳೆಗಳನ್ನೊಮ್ಮೆ ಸವರಿ ಅಮ್ಮಿಜಾನ್ ಳ ಕಣ್ಣಲ್ಲಿ ಗೆಳೆತನದ ಹೊಳಪು ತರಿಸಿದ್ದು
ಈ ಲಾಠಿ ಹಿಡಿದು ಠಳಾಯಿಸವ ದೇಹಗಳಿಗೇನು ಗೊತ್ತು?
ಕ್ಷಮಿಸಿ ಬಿಡು
ಚರಿತೆ ಅರಿಯದ ದಾರಿ ಬಿಟ್ಟ ಕಂದಗಳು ಅವು.
ನನ್ನ ಮನೆಯ ಚೊಂಗ್ಯಾದ ಘಮಕ್ಕೆ
ಅವರ ಅಂಗಳದ ಕೂಸುಗಳು
ಇತ್ತ ಹೊರಳಿ ಅರಳಿಸಿದ ಅಂಗೈಗೆ
ನನ್ನಮ್ಮಿ ಜಾನ್ ಹೂಮುತ್ತಿನೊಂದಿಗೆ ಗೋಲು ಚಂದಿರನಂಥ ಸಿಹಿ ಸುರಿವ ಚೊಂಗ್ಯಾ ಇಟ್ಟಿದ್ದು ಇವುಗಳಿಗೇನು ಗೊತ್ತು?
ಮತ್ತವರ ಮನೆಯ ಕರಜಿಕಾಯಿ ಕೋಡುಬಳೆಗೆ ಅವರವ್ವ ಹರಿಸಿದ ಒಲವ ಧಾರೆಗೆ ಬೇರೆಂಬ ಭಾವವೆಂದೂ ಬಾರದೆ ಅವಳ ಸೆರಗ ಚುಂಗ್ಹಿಡಿದು ಬಾಲ್ಯ ಕಳೆದಿರುವೆ.
ಜಾತ್ರೆಯಲ್ಲಿ ಬೆಂಡು ಬತ್ತಾಸೆಯ ಸಿಹಿ ಅಂಗಡಿ ತೆರವುಗೊಳಿಸುತ್ತಿರುವ ಇವರಿಗೇನು ಗೊತ್ತು?
ಇವರಪ್ಪ ನನ್ನಪ್ಪ ಇದೇ ಸೂಫಿ-ಸಂತ ಸನ್ನಿಧಾನದಲ್ಲಿ ಲಿಗಿಲಿಗಿ ಧುನಿ ಮುಂದೆ ಚಳ್ಳಾಮು ಝೇಂಕರಿಸಿ ‘ಅಲ್ಲಾ ಶಿವನೇ
ಶಿವನೇ ಅಲ್ಲಾ
ಒಂದೇ ಎಲ್ಲಾ
ನಿನ್ ಬಿಟ್ಟರೆ ಬೇರಿಲ್ಲಾ’
ಕೊರಳೆತ್ತಿ ಹಾಡಿದ ಹಾಡುಗಳ ಪ್ರತಿ ಶಬ್ದಗಳು ಬೆರೆತು ಹೋಗಿವೆ ಗಾಳಿಯಲಿ ಅನವರತ.
ಶಾಲೊಂದು ಹೊದ್ದು ಹೆಗಲಿಗೆ ಬಿಸಿಲ ಬೀದಿ ಸವೆಸುತ ದ್ವೇಷದ ನಶೆಯ ಇವರಿಗೆ
ಬದುಕ ಪ್ರೇಮದ ಹಾಡೆಂಬುದನರಿಯರು.
ಇಷ್ಕ್ ಮೊಹೊಬ್ಬತ್ ಬೆಲೆಯನೇನು ಬಲ್ಲರು? ದಾರಿ ಬಿಟ್ಟ ಮಕ್ಕಳು
ಕ್ಷಮಿಸಿ ಬಿಡು ಇವರನು.
ಅವರು ಹೋಗೆಂದರೆ ನನ್ನನು
ದುಂಡು ಭೂಮಿಯ ಸುತ್ತಿ‌
ಮತ್ತಿಲ್ಲೇ ಬಂದು ನಿಲ್ಲುವೆನು
ಯಾರಪ್ಪನ ಸೊತ್ತೂ ಅಲ್ಲದ
ನೆಲದವ್ವನ ಉಡಿಯಲೇ ಇರುವೆನು.
ಈ ನೆಲದ ಕಣಕಣದಿ ಕರುಳ ಬಳ್ಳಿಯ ಬಂಧವಿದೆ ಸಂಬಂಧವಿದೆ
ನಾನೆಲ್ಲೂ ಹೋಗಲಾರೆ
ಕರುಳ ಕಾವ್ಯದ ಹಾಡು ಕಲಿತವಳು ಕಟ್ಟಿದವಳು.
ಕಣ್ಣಲ್ಲಿ ಆಕ್ರೋಶದ ಕಿಡಿ
ಕೈಯಲ್ಲಿ ಪರಕಿಯರು ಕೊಟ್ಟ ಲಾಠಿ
ಎದೆಯೊಳಗೆ ಸುಳ್ಳು ಶಬ್ದಗಳ ಒಜ್ಜೆ
ದ್ವೇಷದ ಮಾತುಗಳ ಸುರಿಸುವ ನಾಲಗೆ
ಎಲ್ಲ ಎಲ್ಲವು ಅವರದಲ್ಲದವುಗಳೇ.
ದಾರಿ ಬಿಟ್ಟ ಕಂದಗಳು.
ಕ್ಷಮಿಸಿ ಬಿಡು.
ನಾಳೆಗಲ್ಲ
ಇಂದೇ ನಿಜವನರಿವ ದಿನ ಬರುವುದು.
ಕತ್ತಲಂಚಿಗೆ ಹಗಲ ಬೆರಳು ಬೆಳಕ್ಹಿಡಿದು ಬರುವುದು
ಮಗುವಿನ ನಗುವಂತೆ.
ನಾನಿಲ್ಲೇ ಇರುವೆ. ಇದ್ದು ಕಾಯುವೆ
ಬೆಳಕ ಕಂದನ ಮುಗುಳ್ನಗುವಿಗಾಗಿ.

– ಕೆ ನೀಲಾ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago