ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ- ಜನತೆಯ ಹಣ ಜನತೆಯ ಕಿಸೆಗಳಿಗೆ ಮರಳಿದೆ ಅಷ್ಟೇ ಎನ್ನುತ್ತಾರೆ ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ವಾಸ್ತವವಾಗಿ ಜನರ ಹಕ್ಕುಗಳು ಮತ್ತು ಜನರ ಹಣ ಜನರ ಕಿಸೆಗಳಿಗೇ ಮರಳುತ್ತಿದೆ ಎಂದು ರಾಜ್ಯದ ಬಹುಪಾಲು ಜನರು ಭಾವಿಸಿದ್ದಾರೆ ಎಂಬ ಅಂಶ Eedina.com ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಸುಮಾರು 51% ಮಂದಿ, ಬಹುಪಾಲು ಮಾಧ್ಯಮಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ.
ಸಮುದಾಯಗಳು, ಮಾಧ್ಯಮ ಸ್ವಯಂಸೇವಕರು(ಮೀಡಿಯಾ ವಾಲಂಟಿಯರ್ಸ್) ಹಾಗೂ ಸಾರ್ವಜನಿಕರ ಸಹಭಾಗಿತ್ವ- ಸಹಕಾರದಿಂದಲೇ ನಡೆಯುತ್ತಿರುವ Eedina.com ಕನ್ನಡ ಡಿಜಿಟಲ್ ಮಾಧ್ಯಮ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಹೊರಬಿದ್ದಿವೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ‘ಈದಿನ.ಕಾಂ’ ನಡೆಸಿದ ಚುನಾವಣಾ ಪೂರ್ವ ಫಲಿತಾಂಶಗಳಿಗೆ ನೂರಕ್ಕೆ ನೂರರಷ್ಟು ಹತ್ತಿರವಿದ್ದ ಏಕೈಕ ಸಮೀಕ್ಷೆ ಎನಿಸಿಕೊಂಡಿತ್ತು. ಆಂಗ್ಲ ಮಾಧ್ಯಮಗಳಾದ ‘ಫ್ರಂಟ್‌ಲೈನ್’ ಮಾಸಿಕ, ‘ದಿ ಟೆಲಿಗ್ರಾಫ್’ ದೈನಿಕ ಹಾಗೂ ‘ದಿ ವೈರ್’ ಮತ್ತು ‘ದಿ ನ್ಯೂಸ್ ಮಿನಿಟ್’ ನಂತಹ ಸ್ವತಂತ್ರ ಮಾಧ್ಯಮಗಳು ಈ ದಿನ.ಕಾಮ್ ನಡೆಸಿದ ಸಮೀಕ್ಷೆಯ ನಿಖರತೆ ಮತ್ತು ಸಮಗ್ರತೆಯನ್ನು ಶ್ಲಾಘಿಸಿ ಲೇಖನಗಳನ್ನು ಬರೆದಿದ್ದವು. ದೇಶದ ಅನೇಕ ಹಿರಿಯ ಪತ್ರಕರ್ತರು ಈ ಸಮೀಕ್ಷೆಯನ್ನು ಮೆಚ್ಚಿದ್ದರು.
ತನ್ನ ನಿರಂತರ ಚಟುವಟಿಕೆಯ ಭಾಗವಾಗಿ Eedina.com ಪ್ರಮುಖ ಸಾಮಾಜಿಕ-ರಾಜಕೀಯ-ಆರ್ಥಿಕ ವಿಷಯಗಳ ಕುರಿತು ಪ್ರತಿ ತಿಂಗಳು ಸಮೀಕ್ಷೆಗಳನ್ನು ನಡೆಸುತ್ತಿದೆ. 2023ರ ಜುಲೈ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಎಂದು ತಿಳಿಯುವ ಉದ್ದೇಶದಿಂದ ಸಮೀಕ್ಷೆ ನಡೆಸಿತ್ತು.
ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಸುಮಾರು 69% ರಷ್ಟು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈವರೆಗಿನ ಸಾಧನೆಗೆ ತಮ್ಮ ಅನುಮೋದನೆಯ ಮುದ್ರೆಯನ್ನು ಒತ್ತಿದ್ದಾರೆ. ಸುಮಾರು 70% ರಷ್ಟು ಮಹಿಳೆಯರು ಈ ಸರ್ಕಾರದ ಕಾರ್ಯಕ್ಷಮತೆಯಿಂದ ಸಂತೋಷಪಟ್ಟಿದ್ದಾರೆ.
ಪ್ರತಿಕ್ರಿಯಿಸಿದವರಲ್ಲಿ ಸುಮಾರು 61% ರಷ್ಟು ಜನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರವು ಈಡೇರಿಸುತ್ತದೆ ಎಂದು ನಂಬುತ್ತಾರೆ. ಸುಮಾರು 50% ರಷ್ಟು ಜನ ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಈಡೇರಿಕೆಯೇ ರಾಜ್ಯ ಸರ್ಕಾರದ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ.
22% ರಷ್ಟು ಮಂದಿ ಬೆಲೆ ಏರಿಕೆಯನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 53% ಮಹಿಳೆಯರು ಗ್ಯಾರಂಟಿ ಯೋಜನೆಗಳನ್ನು ಆದ್ಯತೆಯ ಮೇಲೆ ಜಾರಿಗೊಳಿಸಬೇಕೆಂದು ಬಯಸಿದ್ದಾರೆ. 68% ಜನ ಸರ್ಕಾರವು ಇಂತಹ ಯೋಜನೆಗಳನ್ನು ಜಾರಿ ಮಾಡುವ ಅಗತ್ಯವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ ಕೃಷಿ/ ಕಾರ್ಮಿಕ ವರ್ಗದಿಂದ ಬಂದ ಸುಮಾರು 79% ಜನ ಇಂತಹ ಯೋಜನೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ವಿಚಾರಕ್ಕೆ ಬಂದಾಗ ಪರ ಮತ್ತು ವಿರೋಧವಾಗಿ ಪ್ರತಿಕ್ರಿಯಿಸಿದವರ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಂದಿಲ್ಲ. ಸುಮಾರು 51% ರಷ್ಟು ಪ್ರತಿಕ್ರಿಯಿಸಿದವರು ಬಹುಪಾಲು ಮಾಧ್ಯಮಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಸಾರ್ವಜನಿಕರನ್ನು “ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿವೆ” ಎಂದು ಹೇಳಿದ್ದಾರೆ.
ಮಹಿಳಾ ಕೇಂದ್ರಿತ ಶಕ್ತಿ, ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳು ಫಲಾನುಭವಿಗಳನ್ನು ಸಬಲೀಕರಣಗೊಳಿಸಲು ಸಹಾಯ ಮಾಡುತ್ತದೆ ಎಂದು 80% ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಮಾರು 73% ರಷ್ಟು ಜನ ಯೋಜನೆಗಳು ನಿಜವಾಗಿ “ಜನರ ಹಕ್ಕುಗಳು” ಮತ್ತು “ಜನರ ಹಣವು ಜನರಿಗೆ ಹಿಂತಿರುಗುತ್ತಿದೆ” ಎಂದು ಭಾವಿಸುತ್ತಾರೆ.
18 ರಿಂದ 25 ವರ್ಷ ವಯಸ್ಸಿನ ಸುಮಾರು 71% ರಷ್ಟು ಜನ ʼಯುವ ನಿಧಿʼ ಯೋಜನೆಯನ್ನು ಸ್ವಾಗತಿಸಿದ್ದಾರೆ. ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ನರೇಂದ್ರ ಮೋದಿ ಸರ್ಕಾರ ನಿರಾಕರಿಸಿರುವುದರ ಬಗ್ಗೆ ಜನರಿಗೆ ಅಸಮಾಧಾನವಿದೆ. ಶೇ.57ರಷ್ಟು ಮಂದಿ ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗಣನೀಯ ಬಹುಮತದ ಗೆಲುವು ಸಾಧಿಸಿ ಎರಡು ತಿಂಗಳು ಕಳೆದಿದೆ. ಈ ಗೆಲುವಿಗೆ ಕಾಂಗ್ರೆಸ್‌ನ 5 ಗ್ಯಾರಂಟಿಗಳ ಆಶ್ವಾಸನೆಯೂ ಕಾರಣ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೀಟುಗಳ ಸಂಖ್ಯೆಗೆ ಸಂಬಂಧಿಸಿದಂತೆ ಹೀನಾಯವಾಗಿ ಸೋತಿರುವ ಬಿಜೆಪಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಜನಪ್ರಿಯತೆ ವೇಗವಾಗಿ ಇಳಿಮುಖವಾಗುತ್ತಿದೆ ಎಂದು ಭಾವಿಸಿದೆ. ಸರ್ಕಾರ ರಚನೆಯಾದ ಒಂದು ತಿಂಗಳೊಳಗೆ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ಆಡಳಿತ ಪಕ್ಷವು ಸಂಪೂರ್ಣ ವಿಫಲವಾಗಿದೆ. ಇದರಿಂದ ಸರ್ಕಾರದ ಜನಪ್ರಿಯತೆ ಕುಗ್ಗಿದೆ ಎಂದು ಬಿಜೆಪಿ ಆರೋಪಿಸಿದೆ.
ಐದು ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ಷಮತೆ ಕುರಿತು ಈದಿನ.ಕಾಂ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದ ಸತ್ಯ ಏನೆಂದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾರ್ಯವೈಖರಿ ಬಗ್ಗೆ ಬಹುಪಾಲು ಜನತೆ ಖುಷಿಯಾಗಿದ್ದಾರೆ. ಸಿದ್ದರಾಮಯ್ಯ ಅಥವಾ ಅವರ ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಮತದಾರರಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅವರು ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸಿದ್ದಾರೆ, ವಿಶೇಷವಾಗಿ ಮೂರು ಮಹಿಳಾ ಕೇಂದ್ರಿತ ಯೋಜನೆಗಳು – ಶಕ್ತಿ, ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ. ಸರ್ಕಾರವು ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮತದಾರರು ಬಯಸಿದ್ದಾರೆ.
ಸಮೀಕ್ಷೆ ಮತ್ತು ವಿಧಾನ; ಸಮೀಕ್ಷೆಯಲ್ಲಿ 39 ವಿಧಾನಸಭಾ ಕ್ಷೇತ್ರದ 152 ಬೂತ್‌ಗಳಲ್ಲಿ 2,455 ಜನರನ್ನು ರ‍್ಯಾಂಡಂ ಆಗಿ ಆಯ್ಕೆ ಮಾಡಿ ಅವರ ಅಭಿಪ್ರಾಯ ಕೇಳಲಾಗಿತ್ತು. ವಿಧಾನಸಭಾ ಕ್ಷೇತ್ರ ಮತ್ತು ಬೂತ್‌ಗಳನ್ನೂ ರ‍್ಯಾಂಡಂ ಆಗಿ ಆಯ್ದುಕೊಳ್ಳಲಾಗಿತ್ತು. ಪ್ರತಿ ಕ್ಷೇತ್ರದಲ್ಲಿ ಸುಮಾರು 60 ಮಂದಿಯನ್ನು ಮಾತನಾಡಿಸಲಾಗಿತ್ತು. ಅದರಲ್ಲಿ 55.2% ಪುರುಷರು, 44.8 % ಮಹಿಳೆಯರು. ಇವುಗಳಲ್ಲಿ 81% ಕ್ಷೇತ್ರಗಳು ಗ್ರಾಮೀಣ ಪ್ರದೇಶದವು, 19% ಕ್ಷೇತ್ರಗಳು ನಗರ ಕೇಂದ್ರಗಳು.
ಪ್ರತಿಕ್ರಿಯಿಸಿದವರಲ್ಲಿ 18% ರಷ್ಟು ಅನಕ್ಷರಸ್ಥರು, ಶಾಲೆಯ ಮೆಟ್ಟಿಲು ಹತ್ತದವರು. 44ರಷ್ಟು ಮಂದಿ 10ನೇ ತರಗತಿವರೆಗೆ ಓದಿದ್ದಾರೆ. ಸುಮಾರು 16% ಪದವೀಧರರು; ಅವರಲ್ಲಿ 19% ಪಿಯು/ಡಿಪ್ಲೊಮಾ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ; 3% ಸ್ನಾತಕೋತ್ತರ ಪದವೀಧರರು ಮತ್ತು ಇವರಲ್ಲಿ ಕೇವಲ 1% ವೃತ್ತಿಪರ ಪದವಿ ಹೊಂದಿರುವವರು.
ಜಾತಿವಾರು : ಪ್ರತಿಕ್ರಿಯಿಸಿದವರಲ್ಲಿ ಸುಮಾರು 22% ಇತರ ಹಿಂದುಳಿದ ವರ್ಗದಿಂದ ಬಂದವರು; ಪರಿಶಿಷ್ಟ ಜಾತಿಯವರು 18%; ಪರಿಶಿಷ್ಟ ಪಂಗಡ ಮತ್ತು ಲಿಂಗಾಯತರು 10%; ಒಕ್ಕಲಿಗರು13%; 11% ಮುಸ್ಲಿಂ ಸಮುದಾಯದವರು. ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಜನಪ್ರಿಯತೆಯ ಬಗ್ಗೆಯೂ ಪ್ರಶ್ನೆ ಕೇಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಬಗ್ಗೆಯೂ ಪ್ರಶ್ನೆ ಇತ್ತು.
ಪ್ರಶ್ನೆಯ ಮಾದರಿ ಹೀಗಿತ್ತು:
1. ಸಿದ್ದರಾಮಯ್ಯ ಸರ್ಕಾರದ ಜನಪ್ರಿಯತೆ
ಪ್ರಶ್ನೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರತಿಕ್ರಿಯೆ: ಒಟ್ಟು ಪ್ರತಿಕ್ರಿಯಿಸಿದವರಲ್ಲಿ ಸುಮಾರು 69% ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತಮ್ಮ ಮೆಚ್ಚುಗೆಯ ಮುದ್ರೆ ಒತ್ತಿದ್ದಾರೆ. 42% ಸಂಪೂರ್ಣ ತೃಪ್ತಿ ಹೊಂದಿದ್ದರೆ, 27% ಜನರು ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ಕಾರ್ಯಕ್ಷಮತೆಯಿಂದ ಸ್ವಲ್ಪಮಟ್ಟಿಗೆ ತೃಪ್ತಿ ಹೊಂದಿದ್ದಾರೆ. ಸುಮಾರು 6% ಮಂದಿ ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟು ಪ್ರತಿಕ್ರಿಯಿಸಿದ ಮಹಿಳೆಯರಲ್ಲಿ ಸುಮಾರು 70% ರಷ್ಟು ಜನರು ಈ ಸರ್ಕಾರದ ಕಾರ್ಯಕ್ಷಮತೆಯಿಂದ ಸಂತೋಷಪಟ್ಟಿದ್ದಾರೆ
2) ಹೊಸ ರ್ಕಾರದ ಮೇಲಿನ ವಿಶ್ವಾಸ
ಪ್ರಶ್ನೆ: ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟಿದ್ದ 5 ಗ್ಯಾರಂಟಿ ಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸುವ ಭರವಸೆ ಇದೆಯೇ?
ಪ್ರತಿಕ್ರಿಯೆ: 61% ಮಂದಿಗೆ ಈ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ವಿಶ್ವಾಸವಿದೆ. 16% ಮಂದಿಗೆ ವಿಶ್ವಾಸ ಇಲ್ಲ, 23% ಮಂದಿ ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರತಿಕ್ರಿಯೆ ನೀಡಿದ 61% ಮಹಿಳೆಯರು ಮತ್ತು 60% ಪುರುಷರು ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ.
3) ಗ್ಯಾರಂಟಿ ಯೋಜನೆಗಳು
ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆದ್ಯತೆ ಏನಾಗಿರಬೇಕು?
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷವು ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ(ಹತ್ತು ಕೇಜಿ ಅಕ್ಕಿ) ಕೊಡುವುದಾಗಿ ಘೋಷಿಸಿತ್ತು.
ಪ್ರತಿಕ್ರಿಯೆ: ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಸುಮಾರು 50% ರಷ್ಟು ಜನರು ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಈಡೇರಿಕೆ ಪ್ರಮುಖ ಆದ್ಯತೆಯಾಗಬೇಕು ಎಂದು ಭಾವಿಸುತ್ತಾರೆ. ಬೆಲೆ ಏರಿಕೆಯನ್ನು ನಿಭಾಯಿಸುವುದು ಆಡಳಿತ ಪಕ್ಷದ ಎರಡನೇ ಆದ್ಯತೆಯಾಗಬೇಕು ಎಂದು ಜನರ ಭಾವನೆ ಇರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. 22% ರಷ್ಟು ಮಂದಿ ಬೆಲೆ ಏರಿಕೆಯನ್ನು ತಕ್ಷಣವೇ ನಿಭಾಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು 10% ರಷ್ಟು ಮಂದಿ ಅಭಿಪ್ರಾಯಪಟ್ಟರೆ, 7% ರಷ್ಟು ಮಂದಿ ಶಾಲಾ-ಕಾಲೇಜು, ಆಸ್ಪತ್ರೆಗಳನ್ನು ಆದ್ಯತೆ ಮೇರೆಗೆ ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕುತೂಹಲಕಾರಿ ಅಂಶ ಏನೆಂದರೆ, ಕೇವಲ 5% ರಷ್ಟು ಮಂದಿ ಉದ್ಯೋಗ ಸೃಷ್ಟಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 4% ಜನರು ಕೋಮು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿರಬೇಕು ಎಂದು ಅಭಿಪ್ರಾಯಪಟ್ಟರೆ, ಅವರಲ್ಲಿ 2% ಜನರು ಅಪರಾಧಗಳನ್ನು ತಡೆಯುವುದು ಮುಖ್ಯ ಆದ್ಯತೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 53% ಮಹಿಳೆಯರು ಗ್ಯಾರಂಟಿ ಯೋಜನೆಗಳನ್ನು ಆದ್ಯತೆಯ ಮೇಲೆ ಜಾರಿಗೊಳಿಸಬೇಕೆಂದು ಬಯಸಿದ್ದಾರೆ.
4) ಗ್ಯಾರಂಟಿಗಳ ಅಗತ್ಯ
ಪ್ರಶ್ನೆ: ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಅಗತ್ಯ ಇತ್ತ್ತೇ?
ಪ್ರತಿಕ್ರಿಯೆ: ಪ್ರತಿಕ್ರಿಯಿಸಿದವರಲ್ಲಿ 68% ಮಂದಿ, ಸರ್ಕಾರವು ಅಂತಹ ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆಯಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 24% ಜನರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರೆ, ಸುಮಾರು 8% ಜನರು ಗೊತ್ತಿಲ್ಲ ಎಂದಿದ್ದಾರೆ.
ಈ ಯೋಜನೆಗಳನ್ನು ರೈತ ಮತ್ತು ಕಾರ್ಮಿಕ ಸಮುದಾಯ, ಸಣ್ಣಪುಟ್ಟ ವ್ಯಾಪಾರಸ್ಥರು ಮತ್ತು 10,000 ರೂ.ಗಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳು ಉತ್ತಮವಾಗಿ ಸ್ವೀಕರಿಸಿದ್ದಾರೆ.
5. ಮಿಶ್ರ ಅಭಿಪ್ರಾಯ
ಪ್ರಶ್ನೆ: ಗ್ಯಾರಂಟಿ ಯೋಜನೆಗಳು ಅಗತ್ಯ ಇದೆ. ಆದರೆ ಸರಿಯಾಗಿ ಕಾರ್ಯರೂಪಕ್ಕೆ ತರುತ್ತಿಲ್ಲ ಎಂಬ ಅಭಿಪ್ರಾಯ ಇದೆ. ನಿಮ್ಮ ಅಭಿಪ್ರಾಯವೇನು?
ಪ್ರತಿಕ್ರಿಯೆ: ಈ ಅಂಶಕ್ಕೆ ಬಂದಾಗ ಪ್ರತಿಕ್ರಿಯಿಸಿದವರುಅಭಿಪ್ರಾಯ ಭಿನ್ನವಾಗಿದೆ. 42.56% ಜನರು ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರೆ, 42.80% ಜನರು ಸರ್ಕಾರವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 14.6% ರಷ್ಟು ಪ್ರತಿಕ್ರಿಯಿಸಿದವರು ಗ್ಯಾರಂಟಿ ಯೋಜನೆಗಳ ಪರಿಕಲ್ಪನೆಯೇ ವಿಕೃತ ಎಂದು ಭಾವಿಸಿದ್ದಾರೆ.
6) ಮಾಧ್ಯಮಗಳ ಪಾತ್ರ
ಪ್ರಶ್ನೆ: ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಗ್ಯಾರಂಟಿ ಯೋಜನೆಗಳ ವಿರುದ್ಧ ಜನರನ್ನು ಪ್ರಚೋದಿಸುತ್ತಿವೆ. ನಿಮ್ಮ ಅಭಿಪ್ರಾಯವೇನು?
ಪ್ರತಿಕ್ರಿಯೆ: ಪ್ರತಿಕ್ರಿಯಿಸಿದವರಲ್ಲಿ ಸುಮಾರು 51% ಜನ, ಮಾಧ್ಯಮಗಳು ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. 24% ಜನ ಮಾಧ್ಯಮಗಳು ಯೋಜನೆಗಳ ಅನುಷ್ಠಾನದಲ್ಲಿನ ನ್ಯೂನತೆಗಳನ್ನು ನಿಖರವಾಗಿ ತೋರಿಸುತ್ತಿವೆ ಎಂದು ಭಾವಿಸಿದರೆ, ಅವರಲ್ಲಿ 25% ಜನರು ಈ ವಿಷಯದ ಬಗ್ಗೆ “ಅರಿವಿಲ್ಲ” ಎಂದು ಹೇಳಿದ್ದಾರೆ.
7) ಮಹಿಳಾ ಕೇಂದ್ರಿತ ಯೋಜನೆಗಳು
ಪ್ರಶ್ನೆ: ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿಗಳು ಮಹಿಳೆಯರನ್ನು ಸಬಲೀಕರಣ ಮಾಡುತ್ತವೆ ಎಂದು ನಂಬುತ್ತೀರಾ?
ಪ್ರತಿಕ್ರಿಯೆ: ಈ ಮೂರು ಮಹಿಳಾ ಕೇಂದ್ರಿತ ಯೋಜನೆಗಳು ಶಕ್ತಿ, ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಫಲಾನುಭವಿಗಳನ್ನು ಸಬಲೀಕರಣಗೊಳಿಸಲು ಸಹಾಯ ಮಾಡುತ್ತದೆ ಎಂದು ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ 80% ರಷ್ಟು ಜನ ಹೇಳಿದ್ದಾರೆ. ಕೇವಲ 16% ಮಾತ್ರ ಈ ಯೋಜನೆಗಳು ಮಹಿಳೆಯರಿಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದರ ಸುತ್ತಲಿನ ಅನೇಕ ವಿವಾದಗಳ ಹೊರತಾಗಿಯೂ, ಶಕ್ತಿ ಯೋಜನೆಯನ್ನು ಜನರು ಮೆಚ್ಚಿದ್ದಾರೆ. ಪ್ರತಿಕ್ರಿಯಿಸಿದವರ ಸುಮಾರು 60% ರಷ್ಟು ಯೋಜನೆಯು “ಒಳ್ಳೆಯದು” ಎಂದು ಅಭಿಪ್ರಾಯಪಟ್ಟರೆ, 24% ರಷ್ಟು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
8) ಬಿಟ್ಟಿ/ ಉಚಿತ ಅಲ್ಲ
ಪ್ರಶ್ನೆ: ಇವು ಉಚಿತ ಅಲ್ಲ, ಆದರೆ ಜನರ ಹಕ್ಕುಗಳು. ಇದು ಯೋಜನೆಗಳ ರೂಪದಲ್ಲಿ ಜನರ ಹಣ ಅವರಿಗೆ ಹಿಂದಿರುಗುತ್ತಿದೆ.
ಪ್ರತಿಕ್ರಿಯೆ: ಬಹುಪಾಲು ಪ್ರತಿಕ್ರಿಯಿಸಿದವರು ಯೋಜನೆಗಳು ವಾಸ್ತವವಾಗಿ ಜನರ ಹಕ್ಕುಗಳು ಮತ್ತು ಜನರ ಹಣವು ಜನರಿಗೆ ಹಿಂತಿರುಗುತ್ತಿದೆ ಎಂದು ಭಾವಿಸುತ್ತಾರೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 73% ರಷ್ಟು ಜನರು ಈ ರೀತಿ ಭಾವಿಸಿದ್ದಾರೆ, ಸುಮಾರು 19% ರಷ್ಟು ಜನರು ಈ ಉಚಿತದಿಂದಾಗಿ ತೆರಿಗೆ ಪಾವತಿದಾರರಿಗೆ ಹೆಚ್ಚು ವೆಚ್ಚವಾಗುತ್ತದೆ ಎಂದು ಭಾವಿಸುತ್ತಾರೆ. ಸುಮಾರು 84% ಕೃಷಿ / ಪ್ರಾಸಂಗಿಕ ಕಾರ್ಮಿಕರು ಇವು ಉಚಿತವಲ್ಲ ಎಂದು ಭಾವಿಸುತ್ತಾರೆ. ಆದರೆ ಸಂಬಳ ಪಡೆಯುವ ವರ್ಗ ಸ್ವಲ್ಪಮಟ್ಟಿಗೆ ಒಪ್ಪುವುದಿಲ್ಲ. 50,000 ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಸರ್ಕಾರಿ/ಖಾಸಗಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 41% ರಷ್ಟು ಜನರು ಯೋಜನೆಗಳು ವಿಪರೀತವಾಗಿವೆ ಎಂದು ಭಾವಿಸುತ್ತಾರೆ.
9) ಯುವಜನಕೇಂದ್ರಿತ ಯೋಜನೆ
ಪ್ರಶ್ನೆ: ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ 1500, 3000 ಭತ್ಯೆ ನೀಡುವುದನ್ನು ನೀವು ಒಪ್ಪುತ್ತೀರಾ?
ಪ್ರತಿಕ್ರಿಯೆ: ಪ್ರತಿಕ್ರಿಯೆ ನೀಡಿದ ಸುಮಾರು 66% ಮಂದಿ ಇದು ನಿರುದ್ಯೋಗಿ ಯುವಕರಿಗೆ ಸಹಾಯಕ ಎಂದು ಹೇಳಿದ್ದಾರೆ.
10)ಅಕ್ಕಿ ನಿರಾಕರಣೆ
ಪ್ರಶ್ನೆ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ಮಾರಾಟ ಮಾಡಲು ನಿರಾಕರಿಸಿದೆ ಆದರೆ ಖಾಸಗಿ ಕಂಪನಿಗಳಿಗೆ ಅಕ್ಕಿ ಮಾರಾಟ ಮಾಡುತ್ತಿದೆ. ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ನೀವು ಒಪ್ಪುತ್ತೀರಾ?.
ಪ್ರತಿಕ್ರಿಯೆ: ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ನರೇಂದ್ರ ಮೋದಿ ಸರ್ಕಾರ ನಿರಾಕರಿಸಿರುವುದು ಸರಿಯಲ್ಲ ಎಂದು ಶೇ.57ರಷ್ಟು ಮಂದಿ ಹೇಳಿದ್ದಾರೆ. ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 23% ಕೇಂದ್ರವು ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರೆ, ಸುಮಾರು 19.07% ಜನರು ಗೊತ್ತಿಲ್ಲ ಎಂದಿದ್ದಾರೆ.
– ಹೆಚ್ಚಿನ ವಿವರಗಳು ಮತ್ತು ಸ್ಪಷ್ಟೀಕರಣಗಳಿಗೆ ಸಂಪರ್ಕಿಸಿ
ಡಾ.ಎಚ್.ವಿ.ವಾಸು- 9945516267
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…