ಕಲಬುರಗಿ; ಬೆಂಗಳೂರಿನಲ್ಲಿ ಕಳೆದ ಫೆಬ್ರವರಿ 26 ಮತ್ತ 27 ರಂದು ನಡೆದ ದೇಶಕ್ಕೆ ಮಾದರಿಯಾದ ಬೃಹತ್ ಉದ್ಯೋಗ ಮೇಳದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡವರ ಪೈಕಿ 43 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು, ಇದರಲ್ಲಿ 9,650 ಜನರಿಗೆ ಸ್ಥಳದಲಿಯೇ ಉದ್ಯೋಗ ದೊರೆತಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಶನಿವಾರ ಕಲಬುರಗಿ ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ ಸುಮಾರು 590 ಕಂಪನಿಗಳು ಭಾಗಿಯಾಗಿದ್ದವು. 15 ಸಾವಿರ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಶಾರ್ಟ್ ಲಿಸ್ಟ್ ಆಗಿದ್ದಾರೆ. ಉಳಿದಂತೆ 15 ಸಾವಿರ ಅಭ್ಯರ್ಥಿಗಳು ಕಂಪನಿಯ ವಿವಿಧ ನೇಮಕಾತಿ ಹಂತದಲ್ಲಿದ್ದಾರೆ ಎಂದು ವಿವರಿಸಿದರು.
ಯುವ ಸಮೃದ್ಧಿ ಸಮ್ಮೇಳನ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಕಲಬುರಗಿ, ಮೈಸೂರು, ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ವಿಭಾಗವಾರು ಉದ್ಯೋಗ ಮೇಳ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಅದು ಸಾಧ್ಯವಾಗಿಲ್ಲ. ರೂಪಾಯಿ ಅಮಾನ್ಯೀಕರಣ, ಜಿ.ಎಸ್.ಟಿ. ಜಾರಿದಂತಹ ಕೇಂದ್ರದ ಕೆಟ್ಟ ನೀತಿಯಿಂದ ಈ ಸಮಸ್ಯೆ ಹೆಚ್ಚು ಉಲ್ಭಣವಾಗಿದೆ. ದೇಶದಲ್ಲಿ ಶೇ.8ರಷ್ಟು ನಿರುದ್ಯೋಗ ಸಮಸ್ಯೆ ಇದ್ದರೆ ಕರ್ನಾಟಕದಲ್ಲಿ ಇದರ ಪಾಲು ಶೇ.2.5 ಇದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯುವ ನಿಧಿ, ಉದ್ಯೋಗಾಧಾರಿತ ಕೌಶಲ್ಯ ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ.
371ಜೆ ಮೀಸಲಾತಿ ಸೌಲಭ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ 15 ಸಾವಿರ ವಿವಿಧ ಹುದ್ದೆಗಳು ನೇಮಕಾತಿಯ ವಿವಿಧ ಹಂತದಲ್ಲಿವೆ. ಮುಂದಿನ 3 ವರ್ಷದಲ್ಲಿ ಉಳಿದ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ. ಯುವ ನಿಧಿ+ ಯೋಜನೆಯಡಿ 25 ಸಾವಿರ ಅಭ್ಯರ್ಥಿಗಳಿಗೆ ಲರ್ನಿಂಗ್ ಸ್ಕಿಲ್ ಮತ್ತು ಉದ್ಯೋಗ ಪಡೆಯುವ ಅರ್ಹತಾ ತರಬೇತಿ ನೀಡಲಾಗುತ್ತದೆ. ಒಟ್ಟಾರೆ ಯುವಕರ ಸಮಗ್ರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಸಚಿವರು, ಯುವ ನಿಧಿ ಯೋಜನೆಯಡಿ 1.40 ಕೋಟಿ ಜನ ನೋಂದಾಯಿಸಿಕೊಂಡಿದ್ದು, ಇದರಲ್ಲಿ 50 ಸಾವಿರ ಜನರಿಗೆ ಮಾಸಿಕ 1500 ಮತ್ತು 3,000 ರೂ. ನೀಡಲಾಗುತ್ತಿದೆ ಎಂದರು.
ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಲಬುರಗಿ, ಕೊಪ್ಪಳದ ತಳಕಲ್ ಮತ್ತು ಮೈಸೂರಿನ ವರುಣಾದಲ್ಲಿ ಒಟ್ಟು 350 ಕೋಟಿ ರೂ. ವೆಚ್ಚದಲ್ಲಿ ಮುಂದಿನ 3 ವರ್ಷದಲ್ಲಿ ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು. ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್.ಸಿ. (ಅomಠಿuಣeಡಿ ಓumeಡಿiಛಿಚಿಟ ಅoಟಿಣಡಿoಟ) ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಶ್ರೇಷ್ಠತಾ ಕೇಂದ್ರವನ್ನು 16 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಘೋಷಣೆ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‍ನಲ್ಲಿ ಕಲಬುರಗಿಯಲ್ಲಿ ಪ್ರತಿಷ್ಠಿತ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಶಾಖೆ ತೆರೆಯಲು ಘೋಷಿಸಿದ್ದು, ಜಿಲ್ಲೆಯ ಸಚಿವನಾಗಿ ನನಗೆ ಸಂತೋಷ ತಂದಿದೆ.
ಮುಂದಿನ ದಿನದಲ್ಲಿ ನಿಮ್ಹಾನ್ಸ್ ಶಾಖೆ ಸಹ ಇಲ್ಲಿ ತರಲು ಪ್ರಯತ್ನಿಸಲಾಗುವುದು. ಪ್ರಸ್ತುತ ಇರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 100 ಹಾಸಿಗೆ ಜೊತೆಗೆ 101 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಶಾಖೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜಿಮ್ಸ್ ಆಸ್ಪತ್ರೆಯಲ್ಲಿ 170 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಮೇ ಅಂತ್ಯದಲ್ಲಿ ಇದನ್ನು ಉದ್ಘಾಟಿಸಲಾಗುತ್ತದೆ. ಲೋಕಸಭಾ ಚುನಾವಣೆ ನಂತರ ಜಯದೇವ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು. ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಇದಲ್ಲದೆ ಜಿಮ್ಸ್ ಆವರಣದಲ್ಲಿಯೇ 50 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್, 15 ಕೋಟಿ ರೂ. ವೆಚ್ಚದಲ್ಲಿ ಸುಟ್ಟು ಗಾಯಗಳ ಆರೈಕೆ ಕೇಂದ್ರ ಸಹ ಸ್ಫಾಪನೆಗೆ ಮುಂದಾಗಿದ್ದೇವೆ ಎಂದರು.
ಜನಪರ ಬಜೆಟ್: ಮುಖ್ಯಮಂತ್ರಿಗಳು ಮಂಡಿಸಿರುವ 2024-25ನೇ ಸಾಲಿನ ಬಜೆಟ್ ಜನಪರ ಮತ್ತು ಸುಸ್ಥಿರ ಅಭಿವೃದ್ಧಿ ದೃಷ್ಠಿಕೋನದ ಬಜೆಟ್ ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಚುನಾವಣೆ ವರ್ಷಕ್ಕೆ ಸೀಮಿತ ಎಂದು ವಿರೋಧ ಪಕ್ಷಗಳು ಗೇಲಿ ಮಾಡುತ್ತಿದ್ದರು, ಈ ವರ್ಷ ಇದಕ್ಕೆ 51 ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಕರ್ನಾಟಕ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಪಾಲಿಸಿ-2002ರಲ್ಲಿ ತಿಳಿಸಿರುವಂತೆ ರಾಜ್ಯದ ಹಣಕಾಸಿನ ಸ್ಥಿರತೆ ಮತ್ತು ಸುಸ್ಥಿರತೆ ಖಚಿತಪಡಿಸಿಕೊಂಡಿಯೇ ಈ ಜನಪರ ಯೋಜನೆಗಳು ಜಾರಿಗೆ ತಂದಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂಬುದು ವಿರೋಧ ಪಕ್ಷಗಳ ಅನಗತ್ಯ ಅಪಪ್ರಚಾರವಾಗಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಂಡವಾಳ ವೆಚ್ಚಕ್ಕೆ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದರೆ, ನಮ್ಮ ಸರ್ಕಾರ 55 ಸಾವಿರ ಕೋಟಿ ರೂ. ಹಣ ಇಟ್ಟಿದೆ. ಗ್ಯಾರಂಟಿ ಯೋಜನೆಗಳು ಜೊತೆಗೆ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೂ ನಮ್ಮ ಆದ್ಯತೆ ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನಗೆ ಕೇಂದ್ರ ನಿರಾಸಕ್ತಿ: ಪ್ರತಿ ರಾಜ್ಯಕ್ಕೆ ಒಂದು ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂದು ನಿಯಮವಿದ್ದು, ಅದರಂತೆ ರಾಜ್ಯದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಖುದ್ದಾಗಿ ಸಚಿವರಿಗೆ ಭೇಟಿ ಮಾಡಿ ಮನವರಿಕೆ ಮಾಡಿದ್ದರು, ಇದೂವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದಂತಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜುಗಳಿಗೆ ಸುತ್ತೋಲೆ: ಕಲಬುರಗಿ ಎಂ.ಆರ್.ಎಂ.ಸಿ. ವೈದ್ಯಕೀಯ ಕಾಲೇಜಿನಲ್ಲಿ ಪಿ.ಜಿ. ವಿದ್ಯಾರ್ಥಿಗಳಿಗೆ ಸ್ಟೇಫಂಡ್ ನೀಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಎನ್.ಎಂ.ಸಿ. ಮಾರ್ಗಸೂಚಿ ಪ್ರಕಾರ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸ್ಟೇಫಂಡ್ ನೀಡಬೇಕು. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಎನ್.ಎಂ.ಸಿ. ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತೊಮ್ಮೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ ಪಾಟೀಲ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ, ಮುಖಂಡ ಜಯದೇವ ಗುತ್ತೇದಾರ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…