ಬಿಸಿ ಬಿಸಿ ಸುದ್ದಿ

ಸಂವಿಧಾನದ ಮೂಲಕ ದೇಶದ ಜನಸಾಮಾನ್ಯರಿಗೆ ಮತದಾನದ ಅಸ್ತ್ರ ನೀಡಿದ ಅಂಬೇಡ್ಕರ್

ಬ್ರಿಟಿಷ್ ಭಾರತದಲ್ಲಿ ಕೇವಲ ಶ್ರೀಮಂತರು, ಭೂಮಾಲೀಕರು ಮತ್ತು ಸರಕಾರಕ್ಕೆ ತೆರಿಗೆ ಪಾವತಿಸುವವರಿಗೆ ಇದ್ದ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ದೇಶದ ಎಲ್ಲರಿಗೂ ನೀಡಿದವರು ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್. 1919ರ ಸೌತ್ ಬಾರೋ ಸಮಿತಿಯ ಮುಂದೆ ಮೊತ್ತಮೊದಲ ಬಾರಿಗೆ ಡಾ. ಅಂಬೇಡ್ಕರ್‌ರವರು ಮತದಾನದ ಹಕ್ಕಿನ ಮಹತ್ವವನ್ನು ಮಂಡಿಸಿದರು. ಮುಂದೆ 23 ಅಕ್ಟೋಬರ್ 1928ರಂದು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ‘ಸೈಮನ್ ಆಯೋಗ’ದ ಮುಂದೆ ಭವಿಷ್ಯದ ಭಾರತದ ಚುನಾವಣೆಗಳಿಗೆ ವಯಸ್ಕ ಮತದಾನ ಪದ್ಧತಿಯನ್ನು ಅಳವಡಿಸಬೇಕೆಂದು ಪಟ್ಟು ಹಿಡಿದರು.

ಭಾರತದ ಆತ್ಮ ಸಂವಿಧಾನದಲ್ಲಿ ಅಡಗಿದೆ. ಸಂವಿಧಾನದ ಆತ್ಮ ಆಡಳಿತದಲ್ಲಿ ಅಡಗಿದೆ. ಆಡಳಿತದ ಆತ್ಮ ಮತದಾನದಲ್ಲಿ ಅಡಗಿದೆ. ಮತದಾನದ ಆತ್ಮ ಈ ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಜ್ಞೆಯಲ್ಲಿ ಅಡಗಿದೆ. “ಮತ”ವೆಂಬ ಅಭೂತಪೂರ್ವ ಹಕ್ಕು ಮತ್ತು ಅವಕಾಶವನ್ನು ಭಾರತೀಯ ಪ್ರಜೆಗಳು ಪಡೆದುಕೊಂಡಿದ್ದೇ ಭಾರತದ ಇತಿಹಾಸದಲ್ಲಿ ಮಹಾ ಹೆಜ್ಜೆ ಗುರುತಾಗಿದೆ.

ನಾವಿಲ್ಲಿ ಪ್ರಪಂಚದ ಇಬ್ಬರು ಬಹುದೊಡ್ಡ ಪ್ರಜಾಪ್ರಭುತ್ವ ವಾದಿಗಳ ಮಾತುಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ‘‘ಮತದಾನ ಎಂಬುದು ಬಂದೂಕಿನ ಗುಂಡಿಗಿಂತ ಬಲಿಷ್ಠ ಮತ್ತು ಪರಿಣಾಮಕಾರಿ’’ ಎಂಬ ಅಮೆರಿಕದ ಅಬ್ರಹಾಂ ಲಿಂಕನ್ ಮಾತು ಮತ್ತು ‘‘ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ, ಒಂದೇ ಮೌಲ್ಯ’’ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತು ಮತದಾನದ ಮಹತ್ವವನ್ನು ಸಾರಿ ಹೇಳುತ್ತದೆ.

 

‘‘ಭಾರತದಲ್ಲಿ ಐದು ಸಾವಿರ ವರ್ಷಗಳಿಂದ ರಾಜಾಡಳಿತವಿತ್ತು. ಪ್ರಜೆಗಳನ್ನು ಆಡಳಿತ ಮಾಡುತ್ತಿದ್ದ ರಾಜ, ರಾಣಿಯ ಹೊಟ್ಟೆಯಿಂದ ಜನಿಸುತ್ತಿದ್ದ. ಆದರೆ ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಬ್ಯಾಲೆಟ್ ಬಾಕ್ಸಿನಲ್ಲಿ ಹುಟ್ಟುತ್ತಾರೆ’’ ಎಂದು ಡಾ. ಅಂಬೇಡ್ಕರ್ ಹೇಳಿದರು. ಭಾರತದಂತಹ ಬಹುತ್ವದ ಬಹುದೊಡ್ಡ ದೇಶದಲ್ಲಿ ಕೋಟ್ಯಂತರ ಮತದಾರರಿದ್ದಾರೆ. ಇಲ್ಲಿ ಸಾವಿರಾರು ಜನ ಪ್ರತಿನಿಧಿಗಳು ಹುಟ್ಟುತ್ತಾರೆ. ರಾಜನ ಆಡಳಿತದಲ್ಲಿ ರಾಜಪ್ರಭುತ್ವ. ಆದರೆ ಪ್ರಜೆಯ ಆಡಳಿತದಲ್ಲಿ, ಪ್ರಜಾಪ್ರಭುತ್ವ. ಅಂದರೆ ಇಲ್ಲಿ ಪ್ರಜೆಯೇ, ಪ್ರಭು.

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಆಹಾರ ಉಡುಪುಗಳ ಬಹು ಭಿನ್ನತೆ ಇದೆ. ಈ ಭಾರತದಂತಹ ಬಹುದೊಡ್ಡ ದೇಶದಲ್ಲಿ ಎಲ್ಲ ಜನಾಂಗೀಯ ಭಿನ್ನತೆಗಳನ್ನು ಮೀರಿ, ಎಲ್ಲವನ್ನು ಒಂದೇ ಸೂರಿ ನಡಿ ತಂದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಕಟ್ಟಿದ ವಿಚಾರದಲ್ಲಿ ಜಗತ್ತಿನ ಇತಿಹಾಸದಲ್ಲಿ ಭಾರತ ಮಹೋನ್ನತ ಸ್ಥಾನವನ್ನು ಪಡೆದಿದೆ.

ಭಾರತ ಕೆಲವು ಕಾಲ ಮೌರ್ಯರ ಭಾರತವಾಗಿತ್ತು, ಕೆಲವು ಕಾಲ ಗುಪ್ತರ ಭಾರತವಾಗಿತ್ತು, ಕೆಲವು ಕಾಲ ಮೊಗಲರ ಮತ್ತು ಕೆಲವು ಕಾಲ ಬ್ರಿಟಿಷರ ಭಾರತವಾಗಿತ್ತು. ಭಾರತ ಸಂವಿಧಾನ ಬಂದ ನಂತರ ಇಡೀ ಭಾರತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದು ಅಖಂಡ ಭಾರತವಾಯಿತು. ಒಂದೇ ರಾಷ್ಟ್ರಧ್ವಜ. ಒಂದು ರಾಷ್ಟ್ರ ಚಿಹ್ನೆ. ಒಂದು ರಾಷ್ಟ್ರಗೀತೆ. ಒಂದೇ ರಾಷ್ಟ್ರೀಯ ಆಡಳಿತಕ್ಕೆ ಒಳಪಟ್ಟಿತು. ಇದು ಸಾಧ್ಯವಾಗಿದ್ದು ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮಾರ್ಪಟ್ಟ ಕಾರಣಕ್ಕಾಗಿ. ಪ್ರತಿಯೊಬ್ಬ ಪ್ರಜೆಯು ದೇಶದ ಆಡಳಿತದಲ್ಲಿ ತನ್ನ ಮತವನ್ನು ಚಲಾಯಿಸಿ ತನಗೆ ಇಷ್ಟವಾದ ಆಡಳಿತವನ್ನು ತಾನೇ ರೂಪಿಸಿಕೊಳ್ಳುವ ಸ್ವಾತಂತ್ರ್ಯದಿಂದಾಗಿ. ದುರಾಡಳಿತವನ್ನು ಕಿತ್ತು ತೆಗೆಯುವ ಆಡಳಿತವನ್ನು ರೂಪಿಸುವ ಅವಕಾಶಕ್ಕಾಗಿ, ಹಾಗಾಗಿಯೇ ಭಾರತದ ಆತ್ಮ ಅಡಗಿರುವುದು ಭಾರತೀಯ ಪ್ರಜೆಯ ಮತದಾನದಲ್ಲಿ ಎಂದು ಹೇಳುವುದು.

ಇಂತಹ ವೈವಿಧ್ಯಮಯ ಭಾರತದಲ್ಲಿ, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆತದ್ದು, ಈ ನೆಲದ ಮಹನೀಯರ ಹೋರಾಟ ಮತ್ತು ತ್ಯಾಗಗಳಿಂದ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಡಾ. ಅಂಬೇಡ್ಕರ್ ಅವರ ಮಾತನ್ನು ನಾವು ಇಲ್ಲಿ ಸ್ಮರಿಸಬೇಕಿದೆ.

ಡಾ. ಅಂಬೇಡ್ಕರ್ ಅವರ ಈ ತೀವ್ರ ಸ್ವರೂಪದ ಹೋರಾಟದ ಹೆಜ್ಜೆ ಗುರುತುಗಳನ್ನು ಅರಿತು, ೧೯೩೧ರಲ್ಲಿ ಕರಾಚಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮ್ಮೇಳನದಲ್ಲಿ ಸ್ವತಂತ್ರ ಭಾರತವನ್ನು ಸಾರ್ವತ್ರಿಕ ಮತದಾನದ ತತ್ವಗಳ ಮೇಲೆ ಸ್ಥಾಪಿಸಲಾಗುವುದೆಂಬ ನಿರ್ಣಯವನ್ನು ಪ್ರಸ್ತಾಪಿಸಲಾಯಿತು.

೧೯೩೦ರ ದಶಕದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಮೂರು ದುಂಡು ಮೇಜಿನ ಸಮ್ಮೇಳನಗಳ ಸಭೆಯಲ್ಲಿ ವಯಸ್ಕ ಮತದಾನ ಪದ್ಧತಿ ಮತ್ತು ಭಾರತೀಯ ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತದಾನದ ಪದ್ಧತಿಯನ್ನು ನೀಡಬೇಕೆ? ಬೇಡವೇ? ಎಂಬುದರ ಬಗ್ಗೆ ಬ್ರಿಟಿಷರ ಸಮ್ಮುಖದಲ್ಲಿ ಬಹಳ ಚರ್ಚೆ ನಡೆಯಿತು. ಭಾರತೀಯರಲ್ಲಿಯೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಡಾ.ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ನಡುವೆ ವಾದ ವಿವಾದಗಳು ಅತಿರೇಕದ ಸ್ವರೂಪವನ್ನು ಪಡೆದುಕೊಂಡವು. ಎರಡನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ ಮಹಾತ್ಮಾ ಗಾಂಧಿಯವರು ವಯಸ್ಕ ಮತದಾನ ಮತ್ತು ನಿಮ್ನ ವರ್ಗಗಳಿಗೆ ಪ್ರತ್ಯೇಕ ಮತದಾನದ ವಿಚಾರದಲ್ಲಿ ಅಂಬೇಡ್ಕರ್‌ರವರೊಂದಿಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿ, ಅವರ ಮನವೊಲಿಸಲು ವಿಫಲರಾದರು ಮತ್ತು ಬ್ರಿಟಿಷರನ್ನು ಕೂಡ ಮನವೊಲಿಸಲಾಗಲಿಲ್ಲ.

ಎಪ್ರಿಲ್ ೧೨, ೧೯೩೨ರಲ್ಲಿ ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಲೂಧಿಯಾನ ಕಮಿಟಿಯ ಮುಖಾಂತರ ಬ್ರಿಟಿಷರು ಸಾರ್ವತ್ರಿಕ ಮತದಾನದ ಹಕ್ಕು ಹಾಗೂ ನಿಮ್ನ ವರ್ಗಗಳಿಗೆ ನೀಡುವ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಅಧ್ಯಯನಕ್ಕಾಗಿ ಭಾರತದಾದ್ಯಂತ ಸಂಚರಿಸಿ ಬ್ರಿಟಿಷ್ ಸರಕಾರಕ್ಕೆ ವರದಿಯನ್ನು ಸಲ್ಲಿಸಿತು. ಈ ವರದಿಯ ಆಧಾರದ ಮೇಲೆ ೧೯೩೫ರ ಕಾಯ್ದೆಯಲ್ಲಿ ಭಾರತಕ್ಕೆ ವಯಸ್ಕರ ಮತದಾನ ಪದ್ಧತಿ ಅಳವಡಿಸಿಕೊಳ್ಳಲಾಯಿತು. ಇದು ಭಾರತದ ಇತಿಹಾಸದಲ್ಲಿಯೇ ಪ್ರಜಾಪ್ರಭುತ್ವ ಕಲ್ಪನೆಯ ಮೊದಲ ಹೆಜ್ಜೆ ಗುರುತು.

ಭಾರತದ ಪ್ರತಿಯೊಬ್ಬ ನಾಗರಿಕನಿಗೂ ವಯಸ್ಕ ಮತದಾನ ಪದ್ಧತಿಯನ್ನು ಜಾರಿಗೆ ತರುವ ವಿಚಾರದಲ್ಲಿ ಅಂಬೇಡ್ಕರ್ ಅವರ ಜೊತೆಗೆ ಭಾರತೀಯ ಮೂಲಭೂತ ವಾದಿಗಳ ವಾಗ್ವಾದಗಳು ಮತ್ತು ಗೊಂದಲಗಳು ಬ್ರಿಟಿಷ್ ಭಾರತಕ್ಕೆ ಸೀಮಿತವಾಗಲಿಲ್ಲ. ಅವು ಸಂವಿಧಾನದ ರಚನಾ ಸಭೆಯಲ್ಲಿಯೂ ಮತ್ತೆ ಹುಟ್ಟಿಕೊಂಡವು.

ಸಾರ್ವತ್ರಿಕ ವಯಸ್ಕರ ಫ್ರಾಂಚೈಸ್ ಅನ್ನು ಸಂವಿಧಾನದಲ್ಲಿ ಪ್ರತಿಷ್ಠಾಪಿಸುವ ನಿರ್ಧಾರಕ್ಕೆ ಎಚ್.ವಿ. ಕಾಮತ್ ಅವರು ಸಂವಿಧಾನ ರಚನಾ ಸಭೆಯಲ್ಲಿ, ‘‘ಇಂತಹ ಹೆಚ್ಚಿನ ಮಟ್ಟದ ಅನಕ್ಷರತೆಯನ್ನು ಹೊಂದಿರುವ ದೇಶದಲ್ಲಿ ಸಾರ್ವತ್ರಿಕ ಮತದಾನವು ಅಪಾಯಕಾರಿ ವಿಷಯವಾಗಿದೆ ಮತ್ತು ಅದನ್ನು ನಿರ್ಬಂಧಿಸಬೇಕಾಗಿದೆ’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಇತರ ಸದಸ್ಯರು ಅವರನ್ನು ಬೆಂಬಲಿಸಿದರು. ಆದರೆ ಕಾಮತ್ ಅವರು ಸದನದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಇದಕ್ಕೆ ಪೂರಕವಾಗಿ ಸಾಂವಿಧಾನಿಕ ಅಸೆಂಬ್ಲಿ ಸದಸ್ಯ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಗಮನಿಸಿದಂತೆ: ‘‘…ಭಾರತೀಯ ಜನತೆಯ ಅಜ್ಞಾನ ಮತ್ತು ಅನಕ್ಷರತೆಯ ಹೊರತಾಗಿಯೂ, ಸಾಮಾನ್ಯ ಜನರಲ್ಲಿ ಹೇರಳವಾದ ನಂಬಿಕೆ ಮತ್ತು ಅಂತಿಮ ಯಶಸ್ಸಿನೊಂದಿಗೆ ಅಸೆಂಬ್ಲಿ ವಯಸ್ಕರ ಫ್ರಾಂಚೈಸ್ ತತ್ವವನ್ನು ಅಳವಡಿಸಿಕೊಂಡಿದೆ. ಪ್ರಜಾಸತ್ತಾತ್ಮಕ ಆಡಳಿತ ಮತ್ತು ವಯಸ್ಕ ಮತದಾನದ ಆಧಾರದ ಮೇಲೆ ಪ್ರಜಾಸತ್ತಾತ್ಮಕ ಸರಕಾರದ ಪರಿಚಯವು ಜ್ಞಾನೋದಯವನ್ನು ತರುತ್ತದೆ ಮತ್ತು ಯೋಗಕ್ಷೇಮ, ಜೀವನ ಮಟ್ಟ, ಸೌಕರ್ಯ ಮತ್ತು ಸಾಮಾನ್ಯ ಮನುಷ್ಯನ ಯೋಗ್ಯ ಜೀವನವನ್ನು ಉತ್ತೇಜಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯಲ್ಲಿ.

ವಯಸ್ಕ ಮತದಾನದ ತತ್ವವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅಸೆಂಬ್ಲಿ ಅಭಿನಂದನೆಗೆ ಅರ್ಹವಾಗಿದೆ ಮತ್ತು ಪ್ರಪಂಚದ ಇತಿಹಾಸದಲ್ಲಿ ಹಿಂದೆಂದೂ ಇಂತಹ ಪ್ರಯೋಗವನ್ನು ಧೈರ್ಯದಿಂದ ಕೈಗೊಂಡಿಲ್ಲ ಎಂದು ಹೇಳಬಹುದು’’ ಎಂದು ಅಂಬೇಡ್ಕರ್ ಅವರ ಮಾತುಗಳಿಗೆ ಬೆಂಬಲ ನೀಡಿದರು.

ಬ್ರಿಟಿಷರನ್ನು ತಮ್ಮ ಅದ್ಭುತವಾದ ಜ್ಞಾನದ ಮೂಲಕ ಮನವೊಲಿಸಿ ಹಾಗೂ ಭಾರತೀಯ ಪ್ರಭುತ್ವ ಮನಸ್ಸುಗಳ ಮನವೊಲಿಸುವುದರ ಮೂಲಕ, ಅವರು ಕೇಳಿದ ನೂರಾರು ಪ್ರಶ್ನೆಗಳಿಗೆ ಐತಿಹಾಸಿಕ ಉತ್ತರಗಳನ್ನು ನೀಡುವುದರ ಮೂಲಕ ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ, ಸ್ವಾತಂತ್ರ್ಯದ ನಂತರ ಭಾರತವು ಸಾರ್ವತ್ರಿಕ ವಯಸ್ಕರ ಫ್ರಾಂಚೈಸ್ ಪಡೆಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.

‘‘ಪೌರತ್ವಕ್ಕೆ ಮತದಾನ ಅತ್ಯಗತ್ಯ ಮತ್ತು ಐತಿಹಾಸಿಕವಾಗಿ ವಂಚಿತ ವರ್ಗಗಳಿಗೆ ಮತದಾನವು ರಾಜಕೀಯ ಶಿಕ್ಷಣದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ’’ ಎಂಬ ಅಂಬೇಡ್ಕರ್ ಅವರ ವಾದವು ಭಾರತದ ಮತದಾನದ ಹಕ್ಕುಗಳಿಗೆ ಪ್ರಮುಖವಾಗಿದೆ.

ದೇಶದ ಪ್ರತೀ ಪ್ರಜೆಯೂ ತನ್ನ ಸುರಕ್ಷತೆಯನ್ನು ತನ್ನ ಮತದಾನದ ಮೂಲಕವೇ ಕಟ್ಟಿಕೊಳ್ಳಬೇಕು. ತನ್ನ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗೆ ತನ್ನ ಮತವೇ ಬುನಾದಿ ಎಂಬ ವಾಸ್ತವಿಕ ನೆಲೆಗಟ್ಟಿಗೆ ಬರಬೇಕು. ತನ್ನ ಹಕ್ಕನ್ನು ತಾನು ಚಲಾಯಿಸುವಂತಹ ಜವಾಬ್ದಾರಿಯನ್ನು ವಿವೇಕದಿಂದ ಚಲಾಯಿಸಬೇಕು. ‘ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದೇ ಮೌಲ್ಯ’ ಎಂಬ ಸಿದ್ಧಾಂತದ ಮೇಲೆ ಭಾರತದಂತಹ ಭಿನ್ನತೆ ಇರುವ ರಾಷ್ಟ್ರದಲ್ಲಿ ಸದ್ಯಕ್ಕೆ ನಾವು ರಾಜಕೀಯವಾಗಿ ಮಾತ್ರ ಸಮಾನರು.

ಆದರೆ ನಾವು ಇನ್ನೂ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆಯನ್ನು ಸಾಧಿಸಬೇಕಿದೆ. ಪ್ರಜ್ಞಾವಂತಿಕೆಯ ಮತದಾನ ನಮ್ಮ ಧ್ಯೇಯಯವಾಗಬೇಕು ಮತ್ತು ಮೊದಲಿಗೂ ಮತ್ತು ಕಟ್ಟ ಕಡೆಗೂ ನಾನೊಬ್ಬ ಭಾರತೀಯನೆಂಬ ರಾಷ್ಟ್ರ ಪ್ರೇಮ ನಮಗಿರಬೇಕು.

ಲೇಖಕರು:
ಶಿವ ಅಷ್ಠಗಿ, ದಲಿತ ಚಳವಳಿ ಸಂಚಾಲಕರು.
ಜಿಲ್ಲಾ ಉಪಾಧ್ಯಕ್ಷರು, ಬಿಜೆಪಿ ಯುವ ಮೋರ್ಚಾ ಕಲಬುರಗಿ

emedialine

Recent Posts

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

2 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

4 hours ago

ತುರ್ತಾಗಿ ಬರ ಪರಿಹಾರ ಒದಗಿಸಲು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಒತ್ತಾಯ

ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…

5 hours ago

ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗಪ್ರಶಸ್ತಿಗೆ ಆಹ್ವಾನ

ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…

5 hours ago

ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಸಾವು

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…

5 hours ago

ಹುಬ್ಬಳ್ಳಿಯ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…

5 hours ago