ಕಲಬುರಗಿ: ಈ ಸಲದ ಸಾರ್ವತ್ರಿಕ ಚುನಾವಣೆ ಮಹತ್ವದ್ದಾಗಿದೆ. ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಹೀಗಾಗಿ ನೀವು ಯೋಚಿಸಿ ಮತದಾನ ಮಾಡಿ. ನಿಮ್ಮ ಮತಗಳಿಂದಾಗಿ ನಾವೆಲ್ಲ ಇಂದು ಅಧಿಕಾರದಲ್ಲಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಿಸಿದ್ದಿರಿ. ಆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಹೇಳಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಜೊತೆಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ನಗರದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ನಾವು ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿಗಳ ಜಾರಿಗೆ ಅಧಿಸೂಚನೆ ಹೊರಡಿಸಿದೆವು. ನಮ್ಮ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಸೇರಿದಂತೆ ಬಿಜೆಪಿ ಯ ಎಲ್ಲರೂ ಟೀಕೆ ಮಾಡಿದರು. ಜಾರಿಗೆ ತಂದರೆ ಖಜಾನೆ ಖಾಲಿಯಾಗುತ್ತದೆ ಎಂದು ಹೇಳಿದ್ದರು. ಆದರೆ ನಮ್ಮ ಹಣಕಾಸಿನ ಸ್ಥಿತಿಗತಿಯನ್ನು ಪರಾಮರ್ಶಿಸಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ಬಡವರು ಹೊಟ್ಟೆ ತುಂಬಾ ಊಟ ಮಾಡಲಿ ಎಂದು ನಾವು ಹತ್ತು ಕೆಜಿ ಅಕ್ಕಿ ಕೊಟ್ಟರೆ, ಹತ್ತು ಕೆಜಿ ಅಕ್ಕಿಯನ್ನು ಐದು ಕೇಜಿಗೆ ಇಳಿಸಿದ್ದು ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಹಣ ಕೊಡುತ್ತೇವೆ ಐದು ಕೆಜಿ ಅಕ್ಕಿ ಕೊಡಿ ಎಂದು ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ನಿಮಗೆ ಅಕ್ಕಿ ಕೊಡುವ ನಮ್ಮ ನಿರ್ಧಾರಕ್ಕೆ ಅಡ್ಡ ಬರುವ ಮೋದಿಗೆ ಓಟು ಹಾಕಬೇಕಾ? ಅಕ್ಕಿ ಕೊಡಿ ಅಂತ ಹೇಳದ ಜಾಧವನಿಗೆ ಮತ್ತೆ ಗೆಲ್ಲಿಸುತ್ತೀರಾ? ಬಡವರ ಹೊಟ್ಟೆಯ ಮೇಲೆ ಹೊಡೆದ ಬಿಜೆಪಿಗರಿಗೆ ದಯಮಾಡಿ ಓಟು ಹಾಕಬೇಡಿ. ಅಕ್ಕಿ ಕೊಡುವಂತೆ ಬೇರೆ ಬೇರೆ ರಾಜ್ಯಗಳ ಸಿಎಂ ಅವರಿಗೆ ಪತ್ರ ಬರೆದೆ ಆದರೆ ಎಲ್ಲಿಯೂ ಅಕ್ಕಿ ಸಿಗಲಿಲ್ಲ. ಹಾಗಾಗಿ, ಅಕ್ಕಿ ಖರೀದಿಗೆ ಪ್ರತಿಯೊಬ್ಬರಿಗೆ ರೂ 170 ಕೊಡುತ್ತಿದ್ದೆವೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಒಳಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಜೂನ್ ನಿಂದ ಇದೂವರೆಗೆ 196 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ರೂ 2000 ಕೊಡುತ್ತಿದ್ದೇವೆ. ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆ ಬಸ್ ಟಿಕೇಟಿನ ಹಾರ ಹಾಕಿದ್ದಾರೆ ಇದಕ್ಕಿಂತ ಖುಷಿಯ ವಿಚಾರ ಏನಿದೆ? . ಈ ಎಲ್ಲ ಯೋಜನೆಗಳಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಿದೆ. ನಮಗೆ ಬಸವಾದಿ ಶರಣರೇ ಪ್ರೇರಣೆ. ಅಸಮಾನತೆ ಹೋಗಿ ಸಮಾನತೆ ಬರಲಿ ಎಂದು ಬಾಬಾಸಾಹೇಬರು ಸಂವಿಧಾನದ ಮೂಲಕ ಹೇಳಿದ್ದಾರೆ. ಅದರಂತೆ, ವಿಶ್ವಗುರು ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೆವೆ. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಮಾಡಿದ್ದಾರ? ಬಸವಣ್ಣನವರ ಹೆಸರು ಹೇಳಲು ಇವರಿಗೆ ನಾಚಿಕೆಯಾಗಬೇಕು. ಬಸವಕಲ್ಯಾಣ ದಲ್ಲಿ ಅನುಭವ ಮಂಟಪ ಪುನರುಜ್ಜೀವನ ಮಾಡಲು ಕ್ರಮಕೈಗೊಳ್ಳಲಾಗಿದೆ. ಬಸವಣ್ಣನವರಿಗೆ ಹೂವಿನ ಮಾಲೆ ಹಾಕಿದರೆ ಸಾಲದು. ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮೋದಿ ಹೇಳಿದಂತೆ ಯಾರಿಗಾದರೂ 15 ಲಕ್ಷ ಬಂತಾ ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು, ಕೊಟ್ಟರಾ? ಇವರ ಮಾತು ನಂಬಿ ಯುವಕರು ಮೋದಿ ಮೋದಿ ಮೋದಿ ಅಂದಿದ್ದರು. ಹತ್ತು ವರ್ಷದಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಠಿಸಬೇಕಿತ್ತು. ಇಪ್ಪತ್ತು ಲಕ್ಷ ಹುದ್ದೆ ಸೃಷ್ಠಿಸಲಿಲ್ಲ. ಇವರಿಗೆ ಮಾನ ಮರ್ಯಾದೆ ಇದೆಯಾ?
ದಿನಬಳಕೆ ವಸ್ತು, ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಿ ಅಚ್ಚೇ ದಿನ್ ತರುವುದಾಗಿ ಹೇಳಿದ್ದರು. ಈಗ ಎಲ್ಲ ಬೆಲೆಗಳು ಏರಿವೆ. ಎಲ್ಲಿದೆ ಅಚ್ಚೇದಿನ್? ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಆದಾಯ ದುಪ್ಪಟ್ಟು ಆಯ್ತಾ? ಸಾಲ ಮನ್ನಾ ಮಾಡಿದ್ದಾರೆಯೇ? ಮನಮೋಹನ ಸಿಂಗ್ ಅಧಿಕಾರದಲ್ಲಿ ಇದ್ದಾಗ 72,000 ಕೋಟಿ ಹಾಗೂ ನಾನು ಅಧಿಕಾರದಲ್ಲಿದ್ದಾಗ ರೂ 8165 ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಬಿಜೆಪಿಯವರು ಸಾಲ ಮನ್ನಾ ಮಾಡಿದ್ದಾರ? ಈಗ ಮತ್ತೆ ಮೋದಿ ಗ್ಯಾರಂಟಿ ಎಂದು ಬಂದಿದ್ದಾರೆ. ಅವೆಲ್ಲ ಸುಳ್ಳು ಗ್ಯಾರಂಟಿಗಳು. ಅವೆಲ್ಲ ಪೇಪರ್ ನಲ್ಲಿ ಬರುವ ಗ್ಯಾರಂಟಿಗಳು. ನಮ್ಮ ಗ್ಯಾರಂಟಿಗಳು ಜನರಿಗೆ ಮುಟ್ಟಿಸುವಂತ ಗ್ಯಾರಂಟಿಗಳು.
ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು 25 ಗ್ಯಾರಂಟಿಗಳನ್ನು ಘೋಷಿಸಿ ಅವುಗಳಲ್ಲಿ 5 ಗ್ಯಾರಂಟಿಗಳಿಗೆ ರಾಹುಲ್‌ಹಾಗೂ ಖರ್ಗೆ ಸಹಿ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಕೋಡಲಾಗುತ್ತದೆ. ಜಾತಿ ಗಣತಿ, ಕಾರ್ಮಿಕ ನ್ಯಾಯ, ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೇವೆ. ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡಲಾಗುವುದು. ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಲು ಕಾನೂನು ತರುತ್ತೇವೆ. ಸ್ವಾಮಿನಾಥನ್ ವರದಿ ಜಾರಿಗೊಳಿಸಲಾಗುವುದು. ನಮ್ಮ ಮೇಲೆ ವಿಶ್ವಾಸ ಇದೆಯಲ್ಲ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಗ್ಯಾರಂಟಿ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ನಂಬಿ ಐದು ವರ್ಷಗಳ ಕಾಲ ಗ್ಯಾರಂಟಿ ಮುಂದುವರೆಸುತ್ತೇವೆ. ಈಗ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಎಲ್ಲ ಗ್ಯಾರಂಟಿ ಜಾರಿಗೊಳಿಸುತ್ತೇವೆ.
ನಿಮ್ಮಿಂದ ಆಯ್ಕೆಯಾದ ಜಾಧವ್ ಸೇರಿದಂತೆ ರಾಜ್ಯದಿಂದ ಆಯ್ಕೆಯಾದ 25 ಸಂಸದರು ನಮ್ಮ ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆಯೇ? ಜಾಧವ್ ನಿಂದ ಬಡವರಿಗೆ, ದಲಿತರಿಗೆ ಅನುಕೂಲವಾಗಿದೆಯಾ? ಮತ್ತೆ ಅವರಿಗೆ ಯಾಕೆ ಓಟು ಕೊಡಬೇಕು?. ನಿಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದ ಖರ್ಗೆ ಅವರನ್ನೇ ಸೋಲಿಸಿದ್ದೀರಿ, ಯಾಕೆ? ಈ ಭಾಗಕ್ಕೆ ಆರ್ಟಿಕಲ್ 371 ಜೆ ಜಾರಿಗೆ ತಂದದ್ದು ಖರ್ಗೆ ಹಾಗೂ ಧರಂ ಸಿಂಗ್ ಇದನ್ನು ನೀವು ಅರಿತುಕೊಳ್ಳಬೇಕು. ಕೇಂದ್ರದಲ್ಲಿ ಆಗ ಅಧಿಕಾರ ದಲ್ಲಿದ್ದ ಬಿಜೆಪಿ ಸರ್ಕಾರ ಇದನ್ನು ನಿರಾಕರಿಸಿತ್ತು.
ಮೀಸಲಾತಿ ತೆಗೆದುಹಾಕುವಂತೆ ಬಿಜೆಪಿಯ ಎಂಪಿ ರಾಮಾಜೋಯಿಷ್ ಸುಪ್ರಿಂ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಬಿಜೆಪಿಯವರು ಹಾಗೂ ಮೋದಿ ಮೀಸಲಾತಿ ವಿರೋಧಿಯಾಗಿದ್ದಾರೆ. ಅದಕ್ಕಾಗಿ ಮೋದಿ ಮೀಸಲಾತಿ ಕುರಿತಂತೆ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ. ಕೋಲಿ ಸಮಾಜವನ್ನು ಎಸ್ ಟಿ ಸೇರಿಸುವಂತೆ ನಾನೇ ಮೂರು ಸಲ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ಕುರುಬ ಹಾಗೂ ಗೊಂಡ ಕುರುಬರನ್ನೂ ಎಸ್ ಟಿ ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದ್ದೇನೆ ಅದನ್ನೂ ಮಾಡಿಲ್ಲ. ಕೋಲಿ ಅಥವಾ ಕುರುಬರು ಬಿಜೆಪಿಗೆ ಯಾಕೆ ಓಟು ಹಾಕಬೇಕು? ಕೋಲಿ ಸಮಾಜಕ್ಕೆ, ಕುರುಬರಿಗೆ ಅಲ್ಪಸಂಖ್ಯಾತರಿಗೆ ಟಿಕೇಟು ಕೊಟ್ಟಿಲ್ಲ ನೀವು ಬಿಜೆಪಿಗೆ ಓಟು ಹಾಕಬಾರದು ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…