ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ – ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ, ಕಳವಳ, ಸಂಕಟ, ಮತ್ತೊಂದೆಡೆಸಂತಸ, ಸಂಭ್ರಮ, ಸಡಗರ.

ದೊಡ್ಡ ನದರಿನ ನಮ್ಮ ಅಜ್ಜ ಗುರಪ್ಪ ಯಜಮಾನ ಹಾಗೂ ಬನದ ಕರಡಿಯಂತೆ ದುಡಿದ ಆ‍ ಶಿವಮ್ಮ ಮತ್ತು ಕೇವಲ ನಮ್ಮ ಕುಟುಂಬಕ್ಕಲ್ಲದೆ ಇಡೀ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದ ಅಪ್ಪ ಲಿಂಗೈಕ್ಯರಾದದ್ದು ಈ ಎರಡು ತಿಂಗಳಲ್ಲೇ.

ಜೂನ್ 18ರಂದು ನಾವೆಲ್ಲ ಸೇರಿ ಹಿರಿಯರ ಸ್ಮರಣೋತ್ಸವ ನಿಮಿತ್ತ ಸತ್ಯಂಪೇಟೆಯಲ್ಲಿ ಹಮ್ಮಿಕೊಳ್ಳುವ ಬಸವವಾದ ಸಮಾವೇಶ ಹಾಗೂ ಶರಣ ಹಕ್ಕಿಗಳ ಕಲರವ ಕಾರ್ಯಕ್ರಮವನ್ನು ಮರಣವೇ ಮಹಾನವಮಿ ರೀತಿಯಲ್ಲಿ ಆಚರಿಸುತ್ತೇವೆ. ಅಪ್ಪ ಲಿಂಗಣ್ಣ ಸತ್ಯಂಪೇಟೆಯವರ ನಿಗೂಢ ಸಾವಿನ ತರುವಾಯ ಅವರು ಹೊರತರುತ್ತಿದ್ದ ಬಸವ ಮಾರ್ಗವನ್ನು ಶರಣಮಾರ್ಗವನ್ನಾಗಿ ಪರಿವರ್ತಿಸಿ ಪತ್ರಿಕೆ ಆರಂಭಿಸಿದ್ದು ಕೂಡ ಇದೇ ಜುಲೈ ತಿಂಗಳಲ್ಲಿ. ಹೀಗಾಗಿ ನಮಗೆಲ್ಲ ಒಂದೆಡೆ ದುಃಖ, ದುಮ್ಮಾನ. ಇನ್ನೊಂದೆಡೆ ಸಡಗರ- ಸಂಭ್ರಮ, ಹಬ್ಬ.

ಅದಿರಲಿ, ಈಗ ನಿಮ್ಮೊಂದಿಗೆ ಶರಣ ಮಾರ್ಗ ನಡೆದು ಬಂದ ದಾರಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡ ಬೇಕೆಂದಿರುವೆ. ನಮಗೆ ಯಾರನ್ನಾದರೂ ಹಾಳು ಮಾಡಬೇಕು ಇಲ್ಲವೇ ಅವರ ವಿರುದ್ಧ ಸೇಡು ತೀರಿಸಿ ಕೊಳ್ಳಬೇಕೆಂದಿದ್ದರೆ ಅವರಿಗೆ ಹಳೆಯ ಲಾರಿ ಕೊಡಿಸಬೇಕು. ಇಲ್ಲವೇ ಪತ್ರಿಕೆ ಆರಂಭಿಸಬೇಕು ಎಂದು ಸಲಹೆ ಕೊಡಬೇಕಂತೆ! ಇಂತಹ ಸಲಹೆಯನ್ನು ಬಳುವಳಿಯಾಗಿ ಪಡೆದ ನಾನು, ಗೊತ್ತಿದ್ದು, ಗೊತ್ತಿದ್ದು ಪತ್ರಿಕೆ ಆರಂಭಿಸಿದೆ.

ಸುಮಾರು ಹತ್ತಿಪ್ಪತ್ತು ಪತ್ರಿಕೆಗಳನ್ನು ಪ್ರಕಟಿಸುತ್ತ ಪ್ರಾರಂಭಿಸಿದ ಈ ಪತ್ರಿಕೆ ಇಂದು 2800 ಪ್ರತಿಗಳನ್ನು ಪ್ರಕಟಿಸುವ ಹಂತಕ್ಕೆ ಬಂದು ತಲುಪಿದೆ. ಕಷ್ಟವೋ ಸುಖವೋ ಪ್ರತಿ ತಿಂಗಳುಇಷ್ಟು ಪ್ರತಿಗಳನ್ನು ಪ್ರಿಂಟ್ ಮಾಡಿ ಪತ್ರಿಕೆಯ ಚಂದಾದಾರರಿಗೆ ತಲುಪಿಸುವ ಕೆಲಸವನ್ನು ಅಂದಿನಿಂದ ಇಂದಿನವರೆಗೆ ಚಾಚೂ ತಪ್ಪದೆ ಪಾಲಿಸುತ್ತ ಬಂದಿರುವೆ.

ನನ್ನನ್ನು ನೋಡಿದವರು, ನನ್ನ ಸಂಪರ್ಕದಲ್ಲಿರುವವರಿಗೆ ಪತ್ರಿಕೆ ನಢಸುವುದು ಬಹಳ ಸುಲಭ ಅನ್ನಿಸಬಹುದು. ಸರ್ಕಾರದ ಯಾವುದೇ ಸಹಾಯವಿಲ್ಲದೆ, ಕೇವಲ ಚಂದಾದಾರ, ಹಿತೈಷಿಗಳ, ಸಹೃದಯಿಗಳ ಸಹಾಯದಿಂದ ಪತ್ರಿಕೆ ಮುನ್ನಡೆಸಿಕೊಂಡು ಬಂದಿದ್ದೇನೆ.

ಪ್ರತಿ ತಿಂಗಳು ಪತ್ರಿಕೆ ಪ್ರಿಂಟಾಗಿ ಓದುಗರ ಕೈ ಸೇರಬೇಕಾದರೆ ಸುಮಾರು 25 ಸಾವಿರ ರೂ. ಅಗತ್ಯವಾಗಿದ್ದು, ಅದನ್ನು ಸಂಗ್ರಹಿಸಲು ನಾನು ಅನುಭವಿಸುವ ಅಪಮಾನ, ಸಂಕಟ, ಪಡುವ ಕಷ್ಟ ಅಷ್ಟಿಷ್ಟಲ್ಲ. ಹೀಗಾಗಿ ಒಮ್ಮೊಮ್ಮೆ ಯಾಕಾದರೂ ಈ ಕ್ಷೇತ್ರ, ಅದರಲ್ಲೂ ಶರಣಮಾರ್ಗವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಎಂದು ನನ್ನಷಕ್ಕೆ ನಾನೇ ಕಣ್ಣೀರು ತಂದುಕೊಂಡದ್ದು ಉಂಟು.

ಆದರೆ ಬಸವಾದಿ ಶರಣರ ಅಭಿಮಾನಿ, ಅನುಯಾಯಿಗಳು, ಅಪ್ಪನ ಒಡನಾಡಿಗಳು ಪತ್ರಿಕೆ ಮುಟ್ಟಿದ ಕೂಡಲೇ ಅವರು ನನ್ನೊಂದಿಗೆ ಮಾತನಾಡಿ ಮೆಚ್ಚುಗೆ ಸೂಚಿಸುವುದನ್ನು ಕೇಳಿದರೆ ಎಷ್ಟೇ ಕಷ್ಟ ಬಂದರೂ ಈ ಕಾಯಕ ಬಿಡಬಾರದು ಎಂದೆನಿಸುತ್ತದೆ. ಅದೇವೇಳೆಗೆ ಮನೆ, ಮಡದಿ, ಮಕ್ಕಳು ಅವರ ವಿದ್ಯಾಭ್ಯಾಸ ಇವೆಲ್ಲವುಗಳನ್ನು ನೆನೆದರೆ ಮುಂದೇನು? ಎಂದು ಗದ್ಗದಿತನಾಗುತ್ತೇನೆ.

ಅಪ್ಪನಾದರೆ ಎಲ್ಲ ಕಡೆ ಸುತ್ತಾಡಿ ಚಂದಾ ಹಣ ಹೊಂದಿಸುತ್ತಿದ್ದರು. ಮೇಲಾಗಿ ಅವರಿಗೆ ಶಿಕ್ಷಕ ವೃತ್ತಿಯ ಹಣ ಕೂಡ ಬರುತ್ತಿತ್ತು. ಆದರೆ ನಾನು ಮಾತ್ರ ಇದನ್ನೆ ಹೊದ್ದು ಹಾಸಿಕೊಂಡಿರುವಾಗ ಮುಂದಿನ ದಿನಗಳನ್ನು ಹೇಗೆ ನೀಗಿಸಬೇಕೆಂದು ಭಯವಾಗುತ್ತಿದೆ. ಅದೇ ವೇಳೆಗೆ ‘ಮನುಷ್ಯ ಕಷ್ಟಪಟ್ಟು ದುಡಿಯಬೇಕು. ಆ ದಿಸೆಯಲ್ಲಿ ಸದಾ ಪ್ರಯತ್ನಿಸಬೇಕು. ಬಸವನೆಂದರೆ ಸಾಕು ದೆಸೆಗೆಟ್ಟು ಹೋಗುವುದು ಪಾಪ. ಬಸವಾ, ಬಸವಾ ಎಂದು ಜೀವನ ಸಾಗಿಸಬೇಕು’ ಎಂದು ಅಪ್ಪ ಹೇಳುತ್ತಿದ್ದ ಮಾತುಗಳನ್ನು ಸತ್ಯ, ಶುದ್ಧನಾಗಿ ಪಾಲಿಸುತ್ತ ಬಂದಿರುವೆ. ಹೀಗಾಗಿ ಅಸಾಧ್ಯವೂ ಸಾಧ್ಯವಾಗುತ್ತಿವೆ. ಈ ಎಲ್ಲ ಏಳು ಬೀಳುಗಳ ಮಧ್ಯೆ ಪತ್ರಿಕೆ ಹತ್ತನೇ ವರ್ಷದ ಹೊಸ್ತಿಲಿಗೆ ಕಾಲಿಟ್ಟಿದೆ. ಅದನ್ನು ಕೈ ಹಿಡಿದು ಬೆಳೆಸುವುದು ಓದುಗ ಸಹೃದಿಗಳಾದ ನಿಮ್ಮ ಕೈಯಲ್ಲಿದೆ.

10ನೇ ವರ್ಷದ ಸಂಭ್ರಮದ ಹಿನ್ನಲೆ ಯಲ್ಲಿ ಒಂದು ಅರ್ಥಪೂರ್ಣವಾದ ಮತ್ತು ಸಂಗ್ರಹಯೋಗ್ಯವಾದ ಕಲರ್ ಫುಲ್ ವಿಶೇಷ ಸಂಚಿಕೆಯನ್ನು ಜುಲೈ ಕೊನೆ ವಾರ ಇಲ್ಲವೇ ಆಗಸ್ಟ್ ತಿಂಗಳಲ್ಲಿ ಹೊರ ತರಲಾಗುವುದು. ಪತ್ರಿಕೆಯ ಆಹ್ವಾನ ಮನ್ನಿಸಿ ಈಗಾಗಲೇ ನಾಡಿನ ಶರಣ ವಿದ್ವಾಂಸರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯರು, ನಾಡೋಜ ಡಾ. ಬಸವಲಿಂಗಪಟ್ಟದ್ದೇವರು, ಹಾರಕೂಡ ಶ್ರೀಗಳು, ನಾಡೋಜ ಗೋರುಚ, ಡಾ. ವೀರಣ್ಣ ರಾಜೂರ, ಡಾ. ಬಸವರಾಜ ಸಾದರ, ಡಾ. ಬಸವರಾಜ ಸಬರದ, ರಂಜಾನ್ ದರ್ಗಾ, ಜಯಶ್ರೀ ಸುಕಾಲೆ, ಡಾ. ಶಕುಂತಲಾ ದುರಗಿ, ಡಾ. ಜಯಶ್ರೀ ವೀರಣ್ಣ ದಂಡೆ, ಡಾ. ರಾಜಶೇಖರ ನಾರನಾಳ, ಸಿದ್ದಪ್ಪ ಮೂಲಗೆ, ಲಲಿತಾ ಹೊಸಪ್ಯಾಟಿ ಸೇರಿದಂತೆ ಅನೇಕರು
ತಮ್ಮ ಲೇಖನ ಕಳಿಸಿದ್ದಾರೆ.

ಸಹೃದಯಿಗಳು ಜಾಹೀರಾತು ನೀಡಿ ತನು, ಮನ ಧನದ ದಾಸೋಹ ಸೇವೆಗೈಯ್ದಿದ್ದಾರೆ. ಕನಿಷ್ಠ 100 ಪುಟಗಳುಳ್ಳ ಈ ವಿಶೇಷ ಸಂಚಿಕೆ ಮುದ್ರಣವಾಗಿ ಹೊರ ಬರಲು 1.25 ಲಕ್ಷಕ್ಕೂ ಅಧಿಕ ಹಣ ಬೇಕು. ಅದನ್ನು ಅಂಚೆ ಮೂಲಕ ತಲುಪಿಸುವುದು, ವಿಶೇಷ ಸಂಚಿಕೆ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳುವುದು ಸೇರಿದಂತೆ ಒಟ್ಟು ಎರಡರಿಂದ ಮೂರು ಲಕ್ಷ ರೂ. ಹಣ ಬೇಕು. ಆದರೆ ಜಮೆ ಆಗಿದ್ದು ಮಾತ್ರ ಸರಾಸರಿ.

ವಿಶೇಷ ಸಂಚಿಕೆ ಹೊರ ತರಲಿಕ್ಕಾಗಿ ಉಳ್ಳವರನ್ನು ಕೇಳಿದ್ದೇನೆ. ಕೆಲವರು ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಇನ್ನೂ ಹಲವರು ಈಗ ಬಾ, ಆಗ ಬಾ ಎಂದು ಸತಾಯಿಸಿದ್ದಾರೆ. ಕೆಲವರು ಫೋನ್ ರಿಸಿವ್ ಮಾಡಿಲ್ಲ. ಸಹಾಯ ಕೇಳಿ ಮನೆಗೆ ಹೋದರೆ ಅವಮಾನ, ಅಪಮಾನವಾಗುವಂತೆ ನಡೆದುಕೊಂಡಿದ್ದಾರೆ.

ಕೆಲವರಂತೂ ನಿಮ್ಮ ತಂದೆಯವರ ಕೈಯಲ್ಲಿ ಆಗಲೇ ಕೊಟ್ಟಿದ್ದೇವೆ ಎಂದು ಕೈ ತೊಳೆದುಕೊಂಡಿದ್ದಾರೆ.
ಎಲ್ಲವನ್ನು, ಎಲ್ಲರನ್ನೂ ವ್ಯವಹಾರ ದೃಷ್ಟಯಿಂದ ನೋಡಲಾಗುವ ಈ ದಿನಮಾನಗಳಲ್ಲಿ ನಾನೇಕೆ ಪತ್ರಿಕೆ ನಡೆಸಬೇಕು? ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.

ಆದರೂ ಪತ್ರಿಕೆ ಮುನ್ನಡೆಸಬಲ್ಲೆ ಎಂಬ ತಾಕತ್ತು ಬಂದಿದೆ. ಬಸವಾದಿ ಶರಣರ ವಿಚಾರಗಳ ಟಾನಿಕ್ ಸಮಾಜಕ್ಕೆ ನೀಡಬೇಕು ಎಂಬ ತುಡಿತ ಮತ್ತೆ ಮತ್ತೆ ಉಂಟಾಗುತ್ತಿದೆ. ಏಕೆಂದರೆ ನನ್ನ ಈ ತಾಕತ್ತಿಗೆ ನೀವು ತಾನೆ ಟಾನಿಕ್ ! ಏನಂತಿರಿ?

ದಯವಿಟ್ಟು ಸಹಕರಿಸಿ: ಇಂದಿನ ಕಲುಷಿತಗೊಂಡಿರುವ ವಾತಾವರಣದಲ್ಲಿಯೂ ಬಸವಾದಿ ಶರಣರ ಸತ್ಯ ಶುದ್ಧ ಕಾಯಕ ದಾಸೋಹ ತತ್ವಗಳನ್ನು ಜನಮಾಸನಕ್ಕೆ ತಲುಪಿಸುತ್ತಿರುವ ಈ ಶರಣ ಮಾರ್ಗಕ್ಕೆ ತಾವೆಲ್ಲರೂ ನೀರೆರೆದು ಪೋಷಿಸಬೇಕು. ನಮ್ಮ ನಾಡಿನ ಅನೇಕ ಮಠ ಮಾನ್ಯಗಳ ಒಡೆಯರು, ವಿಶ್ವವಿದ್ಯಾಲಯ, ಕಾಲೇಜು ಪ್ರಾಧ್ಯಾಪಕರು ದೊಡ್ಡ ದೊಡ್ಡ ಉದ್ಯಮಿಗಳು ನನ್ನ ಈ ಕಾಯಕಕ್ಕೆ ತನು, ಮನ, ಧನದಿಂದ ದಾಸೋಹ ಮಾಡಿದರೆ ನೆಲದ ಮರೆಯ ನಿಧಾನದಂತಿರುವ ವಚನ ಸಾಹಿತ್ಯದ ತವನಿಧಿಯನ್ನು ನಾವೆಲ್ಲರೂ ಪಡೆಯಬಹುದಾಗಿದೆ. ಇದು ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ. ನಿಮ್ಮೆಲ್ಲರಸಹಾಯ, ಸಹಕಾರ ಅಗತ್ಯವೆಂದು ನಾನು ಭಾವಿಸಿದ್ದೇನೆ. ದಯವಿಟ್ಟು ಸಹಕರಿಸಿ.- ಸಂಪಾದಕ

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

2 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420