ಕಲಬುರಗಿ: ಕಲೆಗಳು ಕಾಲಕ್ರಮೇಣ ಕಣ್ಮರೆಯಾಗುತ್ತಿವೆ. ಅಮೂಲ್ಯ ಕಲೆಗಳನ್ನು ಉಳಿಸಿ ಬೆಳೆಸಲು ಪ್ರತ್ಯೇಕ ವಸ್ತುಸಂಗ್ರಹಾಲವನ್ನು ಸ್ಥಾಪಿಸಬೇಕು ಎಂದು ಹಿರಿಯ ಚಿತ್ರಕಲಾವಿದ ಹಾಗೂ ವಿಜುವೆಲ್ ಆರ್ಟ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ವಿ.ಜಿ. ಅಂದಾನಿ ಅವರು ಇಲ್ಲಿ ಸಲಹೆ ಮಾಡಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಮನದಾಳದ ಮಾತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲೆಗಳು ನಾಗರಿಕತೆ ಹಾಗೂ ಸಮಾಜದ ಪ್ರತಿಬಿಂಬವಾಗಿವೆ. ಸಾಹಿತ್ಯ ಒಂದು ವೇಳೆ ಸುಳ್ಳು ಹೇಳಬಹುದು. ಆದಾಗ್ಯೂ, ಚಿತ್ರಕಲೆ ಸತ್ಯವನ್ನೇ ಹೇಳುತ್ತದೆ. ಸತ್ಯವೇ ಚಿತ್ರಕಲೆ, ಚಿತ್ರಕಲೆಯೇ ಸತ್ಯ ಎಂದು ವ್ಯಾಖ್ಯಾನಿಸಿದರು.
ಕಲಾ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕವು ಅತ್ಯಂತ ಶ್ರೀಮಂತವಾಗಿದೆ ಎಂದು ತಿಳಿಸಿದ ಅವರು, ಪುರಾತನ ಕಾಲದ ಕಲೆ ಹಾಗೂ ಸ್ಮಾರಕಗಳನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಾನು ಕಲಬುರ್ಗಿ ತಾಲ್ಲೂಕಿನ ಹೊನ್ನಕಿರಣಗಿಯಲ್ಲಿ ಜನಿಸಿದೆ. ನಗರದ ಶ್ರೀ ಶರಣಬಸವೇಶ್ವರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ. ಆ ಸಂದರ್ಭದಲ್ಲಿಯೇ ನನ್ನತವನ್ನು ನಾನು ಬೆಳೆಸಿಕೊಂಡೆ. ಇಡೀ ವಿದ್ಯಾರ್ಥಿ ಜೀವನದಲ್ಲಿ ಐವರು ಶಿಕ್ಷಕರು ನನ್ನ ಜೀವನದಲ್ಲಿ ಬಹಳಷ್ಟು ಪರಿಣಾಮ ಬೀರಿದರು. ಬೇರೆಯವರನ್ನು ಅನುಕರಿಸುವುದರಿಂದ ನಾನೂ ದೂರ ಇದ್ದೆ. ಹೀಗಾಗಿ ಆ ವ್ಯಕ್ತಿತ್ವವೇ ನಾನು ಕಲಾವಿದನಾಗಲು ಪ್ರೇರೆಪಿಸಿತು ಎಂದು ಅವರು ಹೇಳಿದರು.
ವಿದ್ಯಾರ್ಥಿಯಾಗಿದ್ದಾಗ ನಾನು ಆಕಳಿನ ಚಿತ್ರವೊಂದನ್ನು ಬಿಡಿಸಿದೆ. ಆ ಚಿತ್ರವನ್ನು ನೋಡಿದ ನನ್ನ ಶಿಕ್ಷಕ ಭಂಕೂರಿನ ತಿಕೋಟಾ ಮಾಸ್ಟರ್ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದರು. ಹೀಗಾಗಿ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಿ ಕಲಾವಿದನಾಗಲು ಕಾರಣವಾಯಿತು. ನಂತರ ಇಲ್ಯುಸ್ಟ್ರೇಟೆಡ್ ವಾರ ಪತ್ರಿಕೆಯೊಂದು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಆ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ನನ್ನ ಚಿತ್ರಕ್ಕೆ ಬಹುಮಾನ ಬಂದಿತು. ಆಗ ಇಡೀ ಕಾಲೇಜಿಗೆ ನಾನೇ ನಾಯಕನಾದೆ. ತಿಕೋಟಾ ಮಾಸ್ಟರ್ ಅವರಿಂದ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂತು. ಸೆಕ್ಸ್‌ಪಿಯರ್ ಮತ್ತು ಕ್ಲಿಯೋಪಾತ್ರ ಕುರಿತು ಅವರ ಅದ್ಭುತ ಪಾಠವು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದವು. ಹೀಗಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳು ನನ್ನ ಜೀವನದ ಭಾಗಗಳಾದವು ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕವು ಆ ಸಂದರ್ಭದಲ್ಲಿ ನಿಜಾಂನ ಆಡಳಿತಕ್ಕೆ ಒಳಪಟ್ಟಿತ್ತು. ನಿಜಾಮನ ರಾಜ್ಯಭಾರವಾಗಿದ್ದರಿಂದ ನಗರದಿಂದಲೇ ಎಲ್ಲ ಹಳೆಯ ಚಲನಚಿತ್ರಗಳು ಬಿಡುಗಡೆ ಆಗುತ್ತಿದ್ದವು. ನಗರದ ಹಳೆಯದಾದ ತಿರಂದಾಜ್, ಲಕ್ಷ್ಮೀ, ಮದನ್ ಚಿತ್ರಮಂದಿರಗಳಲ್ಲಿ ರಾಜಕಪೂರ್, ಬಿ.ಆರ್. ಪಂತಲು ನಿರ್ದೇಶನದ ಸ್ಕೂಲ್ ಮಾಸ್ಟರ್ ಚಲನಚಿತ್ರ ವೀಕ್ಷಿಸಿದೆ. ಆ ಚಲನಚಿತ್ರವು ನನ್ನ ಕಣ್ಣಲ್ಲಿ ನೀರು ತರಿಸಿತು. ಆ ಚಲನಚಿತ್ರವನ್ನು ನೋಡಲು ಮಹಾರಾಷ್ಟ್ರದಿಂದ ನಗರಕ್ಕೆ ಆಗಮಿಸುತ್ತಿದ್ದರು. ಅಷ್ಟೊಂದು ಜನಪ್ರೀಯ ಚಲನಚಿತ್ರವಾಗಿತ್ತು. ಟಾಂಗಾಗಳಲ್ಲಿ ಚಲನಚಿತ್ರದ ಪ್ರಚಾರದ ಕರಪತ್ರಗಳನ್ನು ಎಸೆಯುತ್ತಿದ್ದರು. ಆ ನೆನಪುಗಳು ಇನ್ನೂ ನನ್ನ ಕಣ್ಮುಂದೆ ಇವೆ ಎಂದು ಅವರು ವಿವರಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಅನೇಕ ಸ್ಮಾರಕಗಳು, ಜೈನ ಬಸದಿಗಳಿವೆ. ಮದ್ರಕಿಯಲ್ಲಿ ಸೂರ್ಯನ ವಿಗ್ರಹ ಇತ್ತು. ಗ್ರಾಮಸ್ಥರು ಆ ವಿಗ್ರಹವನ್ನು ದೆವ್ವವೆಂದೇ ಭಾವಿಸಿದ್ದರು. ಗ್ರಾಮದಲ್ಲಿ. ಯಾರಾದರೂ ಅಸುನೀಗಿದರೆ ಶವ ಸಂಸ್ಕಾರದ ಸಂದರ್ಭದಲ್ಲಿ ಶವವನ್ನು ಆ ವಿಗ್ರಹದ ಬಳಿ ಇಟ್ಟು, ವಿಗ್ರಹಕ್ಕೆ ಕಲ್ಲಿನಿಂದ ಹೊಡೆದು ನಂತರ ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯ ಸಂಸ್ಕಾರ ಮಾಡುತ್ತಿದ್ದರು ಎಂದು ಹೇಳಿದ ಅವರು, ವಿಗ್ರಹಗಳ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆಯ ಕೊರತೆ ಇದೆ ಎನ್ನುವುದಕ್ಕೆ ಮದರಕಿ ಗ್ರಾಮವೇ ಸಾಕ್ಷಿ. ಒಂದು ವೇಳೆ ಅರಿವು ಇದ್ದರೆ ವಿಗ್ರಹಕ್ಕೆ ಕಲ್ಲಿನಿಂದ ಹೊಡೆಯುತ್ತಿರಲಿಲ್ಲ ಎಂದರು.
ನಮ್ಮಲ್ಲಿ ವಸ್ತು ಸಂಗ್ರಹಾಲಯಗಳಿಲ್ಲ. ಇದರಿಂದ ಪುರಾತನ ವಸ್ತುಗಳ ಕುರಿತು ನಮಗೆ ಸರಿಯಾದ ತಿಳುವಳಿಕೆ ಮೂಡಿಸಲು ಆಗುತ್ತಿಲ್ಲ. ವಸ್ತು ಸಂಗ್ರಹಾಲಯವು ನಮಗೆ ಇತಿಹಾಸವನ್ನು ತಿಳಿಸುತ್ತವೆ ಎಂದು ಹೇಳಿದ ಅವರು, ಗುಂಬಜ್‌ಗಳಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸುವುದು ಸರಿಯಲ್ಲ. ಗುಂಬಜ್‌ಗಳಲ್ಲಿ ತಂಪು ವಾತಾವರಣ ಇರುವುದರಿಂದ ಐತಿಹಾಸಿಕ ವಸ್ತುಗಳು ಹಾಳಾಗುತ್ತವೆ. ಆದ್ದರಿಂದ ಪ್ರತ್ಯೇಕ ವಸ್ತುಸಂಗ್ರಹಾಲಯಗಳು ಆಗಬೇಕು ಎಂದು ಪ್ರತಿಪಾದಿಸಿದರು.
ವಿದೇಶಿ ಲೇಖಕ ಮಿಡಲ್ ಸ್ಟೇಲರ್ ಕಲ್ಯಾಣ ಕರ್ನಾಟಕದ ಕುರಿತು ೯ ಪುಸ್ತಕಗಳನ್ನು ಬರೆದ. ಆತ ಲ್ಯಾಂಡ್ ಸ್ಕೇಪ್ ಕಲಾವಿದನೂ ಆಗಿದ್ದ. ಆತ ಬಳಸಿದ ಖುರ್ಚಿಯನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಅದನ್ನು ನೋಡಲು ಆತನ ಮೊಮ್ಮಗ ಜರ್ಮನಿಯಿಂದ ಇಲ್ಲಿಗೆ ಬಂದ. ಆದಾಗ್ಯೂ, ಅದು ಹುಳು ತಿಂದು ಹಾಳಾಗಿದ್ದರಿಂದ ಆತ ತೀವ್ರ ನೊಂದುಕೊಂಡ ಎಂದು ಅವರು ಗುಂಬಜ್‌ದಲ್ಲಿನ ವಸ್ತುಸಂಗ್ರಹಾಲಯದಿಂದ ಕಲೆ ಉಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ನಿದರ್ಶನವೊಂದನ್ನು ನೀಡಿದರು.
ಸಿಲೋನ್‌ನಿಂದ ಇಲ್ಲಿಗೆ ಬಂದಿದ್ದ ಆನಂದಕುಮಾರಸ್ವಾಮಿ ಅವರು ಈ ಭಾಗದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರು ಭಾರತೀಯ ಸಂಸ್ಕೃತಿ ಕುರಿತು ಅನೇಕ ಪುಸ್ತಕಗಳನ್ನು ಸಹ ಬರೆದರು. ಅವರ ಕುರಿತು ಈ ಭಾಗದವರಿಗೆ ಪರಿಚಯವೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮೈಂದಗಿ ಗ್ರಾಮದಲ್ಲಿ ಕಿಳ್ಳೆಕ್ಯಾತರು ತೊಗಲು ಬೊಂಬೆಯಾಟದ ಮೂಲಕ ರಾತ್ರಿ ಸಮಯದಲ್ಲಿ ರಾಮಾಯಣ, ಮಹಾಭಾರತದ ಕುರಿತು ಪ್ರದರ್ಶನ ಮಾಡುತ್ತಿದ್ದರು. ಇಂತಹ ಕಲೆಗಳು ಈಗ ದೂರವಾಗುತ್ತಿವೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ವಿಜಯಪೂರದ ಆದಿಲ್ ಶಹಾನು ತನ್ನ ಪುತ್ರಿ ಹೀರಾ ಹೆಸರಿನಲ್ಲಿ ಹೀರಾಪೂರದಲ್ಲಿ ಅನೇಕ ಬಾವಿಗಳನ್ನು ತೋಡಿಸಿದ. ಆದಾಗ್ಯೂ, ಆ ಬಾವಿಗಳನ್ನು ರಕ್ಷಿಸಲು ಯಾರೂ ಕ್ರಮ ಕೈಗೊಳ್ಳದೇ ಇದ್ದುದರಿಂದ ಆ ಬಾವಿಗಳು ಮುಚ್ಚಿ ಹೋದವು. ಮೂರು ಅಂತಸ್ತಿನ ಬಾವಿಗಳ ನಿರ್ಮಾಣ ಅವರದ್ದೇ ಕಲ್ಪನೆ. ಅದೇ ರೀತಿ ಮೊಘಲರು ಉದ್ಯಾನವನ ನಿರ್ಮಿಸಿದರು. ಆ ಕಲ್ಪನೆ ಮಾತ್ರ ಅದ್ಭುತ ಎಂದು ಬಣ್ಣಿಸಿದ ಅವರು, ಜರ್ಮನಿಯಿಂದ ಬಂದಿದ್ದ ಕಲಾವಿದ ಅಲೆಕ್ಸಾಂಡರ್ ಗಾಂಧರ್ವ ವಿಲೇಜ್ ಕಲ್ಪನೆಯನ್ನು ಹುಟ್ಟು ಹಾಕಿದರು. ಬಿಳಿ ಕಲ್ಲಿನಲ್ಲಿ ಚಿತ್ರಕಲೆ ನಿರ್ಮಾಣ ಮಾಡಿರುವುದು ಇಡೀ ಭಾರತದಲ್ಲಿ ಎಲ್ಲಿಯೂ ಇಲ್ಲ. ಅದು ೨,೪೦೦ ವರ್ಷಗಳ ಇತಿಹಾಸವನ್ನು ತಿಳಿಸುವ ಅಂತಹ ಚಿತ್ರಕಲೆ ಕೇವಲ ಸನ್ನತಿಯಲ್ಲಿ ಇದೆ ಎಂಬ ಸೋಜಿಗದ ಸಂಗತಿಯನ್ನು ಅಂದಾನಿ ಅವರು ಬಹಿರಂಗಪಡಿಸಿದರು.
ಚಿತ್ರಕಲೆ ಕುರಿತು ಅಸಡ್ಡೆ ಹೆಚ್ಚುತ್ತಿದೆ. ಎಸ್‌ಎಸ್‌ಎಲ್‌ಸಿ ಆದ ನಂತರ ಚಿತ್ರಕಲೆಯನ್ನು ಐದು ವರ್ಷಗಳವರೆಗೆ ಕಲಿಯಬೇಕಾಗುತ್ತದೆ. ಹೀಗಾಗಿ ಆ ಕುರಿತು ವಿದ್ಯಾರ್ಥಿಗಳು ಕೀಳರಿಮೆಯಿಂದ ನೋಡುತ್ತಿದ್ದಾರೆ. ದೃಶ್ಯಕಲೆ ಅದ್ಭುತ ಮಾಧ್ಯಮ. ಆ ಕುರಿತು ನಮ್ಮ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ನಮ್ಮ ಕಲೆ, ಸಂಸ್ಕೃತಿ ಹಾಳಾಗಲು ನಾವೇ ಕಾರಣರು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಚಿತ್ರಕಲಾವಿದರಾದ ಡಾ. ಬಸವರಾಜ್ ಜಾನೆ, ಬಸವರಾಜ್ ಉಪ್ಪಿನ್, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್, ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಗವೀಶ್ ಹಿರೇಮಠ್, ಬಸವರಾಜ್ ಪಾಟೀಲ್, ಡಾ. ಕೆ.ಎಸ್. ಬಂಧು, ಡಾ. ಬಸವರಾಜ್ ಕಲೆಗಾರ್, ಅರ್ಜುನ್ ಜಮಾದಾರ್, ಸುರೇಶ್ ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಸಿ.ಎಸ್. ಮಾಲಿಪಾಟೀಲ್ ಅವರು ಪ್ರಾರ್ಥನಾಗೀತೆ ಹಾಡಿದರು. ವೀರಸಂಗಪ್ಪಾ ಸೋಲೆಗಾಂವ್ ಅವರು ಸ್ವಾಗತಿಸಿದರು. ಡಾ. ಭೀಮರಾವ್ ಅರಕೇರಿ ಅವರು ಕೊನೆಯಲ್ಲಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…