- ದಯಾನಂದರಾವ್ ವಕೀಲರು, ಹುಮನಾಬಾದ್
“ಪಾಟೀಲರು ನಮ್ಮ ದೇಶದ ಪುರಾಣಗಳಲ್ಲಿ ಬರುವ ದದೀಚಿ ಋಷಿ ಇದ್ದ ಹಾಗೆ. ಒಮ್ಮೆ ದೇವರು ಮತ್ತು ದಾನವರು(ರಾಕ್ಷಸರ) ಮಧ್ಯೆ ಯುದ್ದ ನಡೆಯುವ ಪ್ರಸಂಗ ಬಂದಾಗ ಬೃಹಸ್ಪತಿ ಏನು ಹೇಳಿದ ಎಂದರೆ ದಾನವರು ಬಹಳ ಶಕ್ತಿವಂತರಾಗಿದ್ದು ಅವರನ್ನು ನೀವು ನಿಮ್ಮಲ್ಲಿರುವ ಶಸ್ತ್ರಾಸ್ತಗಳಿಂದ ಯುದ್ದ ಮಾಡಿ ಸೋಲಿಸಲು ಹೋದರೆ ನೀವು ಯಶಸ್ವಿಯಾಗುವುದಿಲ್ಲ.
ನೀವು ಅವರನ್ನು ಸಂಹಾರ ಮಾಡಬೇಕೆಂದರೆ ಯಾವುದಾದರೂ ಋಷಿಯ ದೇಹದ ಮೂಳೆಯಿಂದ ಬಾಣಮಾಡಿ ಅವುಗಳಿಂದ ನೀವು ದಾನವರಿಗೆ ಹೊಡೆದರೆ ಅವರು ಸಂಹಾರವಾಗುತ್ತಾರೆ. ಆಗ ದೇವರು ಅನೇಕ ಋಷಿಗಳನ್ನು ಭೇಟಿಯಾಗಿ ಅವರಿಗೆ ತಮ್ಮ ದೇಹವನ್ನು ತ್ಯಾಗಮಾಡಲು ಕೋರಿದಾಗ ನಾ ಒಲ್ಲೆ ನಾ ಒಲ್ಲೆ ಎಂದು ದೂರ ಸರಿಯುತ್ತಾರೆ. ಕೊನೆಗೆ ದದೀಚಿ ಋಷಿ ತನ್ನ ದೇಹವನ್ನು ತ್ಯಾಗಮಾಡಲು ಸಜ್ಜಾಗುತ್ತಾನೆ ಮತ್ತು ತ್ಯಾಗಮಾಡುತ್ತಾನೆ. ಇರದ ಪರಿಣಾಮವಾಗಿ ದೇವರು ದಾನವರ ವಿರುದ್ಧ ಜಯ ಗಳಿಸುತ್ತಾರೆ. ವೈಜನಾಥ ಆ ದದೀಚಿ ಋಷಿ ತರಹ. ಸಮಾಜದಲ್ಲಿ ಯಾವಾಗ ಯಾವಾಗ ಕೆಟ್ಟ ದಾನವರು ಬೆಳೆದಿದ್ದಾರೆ ಆಗ ಅವರ ಸಂಹಾರ ಮಾಡಲಿಕ್ಕೆ ನಾನು ನನ್ನ ದೇಹವನ್ನು ತ್ಯಾಗ ಮಾಡುತ್ತೇನೆ ಎಂದು ಮುಂದಾಗುವ ಸ್ವಭಾವದವರು ವೈಜನಾಥ.
ಯಾವುದೇ ಕೆಲಸಕ್ಕೆ ತನ್ನ ಕಿಸೆಯಿಂದ ಖರ್ಚುಮಾಡಲು ಹಿಂದೇಟು ಹಾಕಿದವರಲ್ಲ. ತನ್ನಲ್ಲಿ ಎಷ್ಟು ರೊಕ್ಕ ಇದೆ ಅದು ಖರ್ಚಾಗುವ ತನಕ ಖರ್ಚುಮಾಡುತ್ತಾ ಹೋಗುವ ಸ್ವಭಾವದವರು ಅವರು. ಎಲ್ಲಾ ಖಾಲಿಯಾದ ಮೇಲೆ ಮೇರೆ ಪಾಸ್ ಪೈಸೆ ನಹಿ ಹೈ ಇಸ್ಕಿ ಮಾಕಿ ಕ್ಯಾ ಕರ‍್ನಾ?(ನನ್ನ ಹತ್ರ ರೊಕ್ಕ ಇಲ್ಲಾ, ಅವನವ್ವನ ಏನ್ ಮಾಡ್ಬೇಕು?) ಹಮಾರ ಪೆನ್ಷನ್ ಮೆ ಕುಚ್ ಹೈ ಕೀ ಯಾ ನಹೀ ಕೀ ದೇಖೇಂಗೆ( ಏನಾದರೂ ಪೆನ್ಷನ್ ನಿಂದ ಬಂದ ಹಣ ಏನದ್ರೂ ಉಳಿದದೇನು ನೋಡೋಣ) ಎಂದು ಕೇಳಿ ಅದು ಇದ್ದರೆ ಅದನ್ನೂ ಕೂಡ ಖರ್ಚು ಮಾಡಿಬಿಡೋರು. ಔರೊಂಕೇಲಿಯೇ ಜೀನೇಮೇಬೀ ಕುಚ್ ಸಂಸ್ಕೃತಿ ಹೈ, ಓ ಸಬ್ ಸೇ ಬಡೀ ಸಂಸ್ಕೃತಿ ಹೈ (ಬೇರೆಯರ ಏಳಿಗೆಗಾಗಿ ತನ್ನ ಜೀವನವನ್ನು ಮುಡಿಪಾಗಿಡುವುದು ಸಂಸ್ಕೃತಿ ಇದೆ, ಅದು ಬಹು ದೊಡ್ಡ ಸಂಸ್ಕೃತಿ ಇದೆ).
ಇದು ವೈಜನಾಥ ಅವರು ಬದುಕಿ-ಬಾಳಿದ ರೀತಿ”.ಸದಾ ಒಂದಲ್ಲಾ ಮತ್ತೊಂದು ಹೋರಾಟದಲ್ಲಿ ತಲ್ಲೀನರಾಗಿರುತಿದ್ದ ಪಾಟೀಲರಿಗೆ ಪುಸ್ತಕ ಓದುವ ಹವ್ಯಾಸದ ಜೊತೆಗೆ ಹಳೇ ಹಿಂದಿ ಹಾಡುಗಳನ್ನು ಕೇಳುವುದೆಂದರೆ ತುಂಬಾ ಇಷ್ಟ. ಸಾಮಾನ್ಯವಾಗಿ ಅವರು ಲೋಹಿಯಾ, ಮಧು ಲಿಮೆ ಮತ್ತಿತರರು ಬರೆದ ಸೋಷಿಯಾಲಿಸ್ಟ್ ಪುಸ್ತಕಗಳನ್ನು ಓದುತಿದ್ದರು. ಅಲ್ಲದೆ ಅವರಿಗೆ ಮುಖೇಶ ಅವರ ಹಾಡುಗಳನ್ನು ಆಲಿಸುವುದೆಂದರೆ ಬಹಳ ಇಷ್ಟವಾಗಿತ್ತು.