ಕಲಬುರ್ಗಿ ಫೆ. ೦೫: (ಶ್ರೀವಿಜಯ ಪ್ರಧಾನ ವೇದಿಕೆ) : ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಬೋಧನೆ ಖಾತ್ರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ಬೇಕಾದ ಎಲ್ಲ ಪೂರಕ ಕಾರ್ಯತಂತ್ರಗಳನ್ನು ಸರ್ಕಾರ ಕೈಗೊಳ್ಳಲು ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಕಲಬುರ್ಗಿಯಲ್ಲಿ ಏರ್ಪಡಿಸಲಾಗಿರುವ ೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಮೃದ್ಧಿಯೊಂದಿಗೆ ಆಡುಭಾಷೆಯಾಗಿಯೂ ತನ್ನ ಕಂಪು ಪಸರಿಸಬೇಕು. ಇತರ ಭಾಷೆಗಳ ಜ್ಞಾನ ನಮ್ಮ ಯೋಚನೆಯ ಪರಿಧಿಯನ್ನು ವಿಸ್ತರಿಸಲಿ, ಆದರೆ ನಮ್ಮ ಆಲೋಚನೆಗಳು ಕನ್ನಡದಲ್ಲಿಯೇ ಇರಲಿ. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಬೋಧನೆ ಖಾತ್ರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುತ್ತಿರುವ ಬಗ್ಗೆ ಮತ್ತು ಸರ್ಕಾರಿ ಶಾಲೆಗಳ ಸಬಲೀಕರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಇತರ ಸದಸ್ಯರನ್ನೊಳಗೊಂಡು ಶಿಕ್ಷಣ ಸಚಿವರ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ.
ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಮೂಲಭೂತ ಸೌಕರ್ಯ, ಶಿಕ್ಷಕರ ತರಬೇತಿ ಕಾರ್ಯಕ್ರಮ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಸಮುದಾಯದ ಬೆಂಬಲವಿಲ್ಲದೆ ಸರ್ಕಾರಿ ಶಾಲೆಗಳನ್ನು ಉಳಿಸುವುದು ಕಷ್ಟ ಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಪೋಷಕರೂ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಿ, ಸರ್ಕಾರಿ ಶಾಲೆಗಳ ಬಗ್ಗೆ ಒಲವು ಬೆಳೆಸಿಕೊಂಡಾಗ ಮಾತ್ರ ಶಾಲೆಗಳನ್ನು ಉನ್ನತಿಗೇರುತ್ತವೆ ಎಂದು ಸರ್ಕಾರಿ ಶಾಲೆಗಳ ಬಗ್ಗೆ ಆಶಯ ವ್ಯಕ್ತಪಡಿಸಿದರು.
೨ ವರ್ಷಕ್ಕೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ : ಹೈದ್ರಾಬಾದ್-ಕರ್ನಾಟಕ ಪ್ರದೇಶ ಹೆಸರಿನಲ್ಲಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲೆಡೆ ಪಸರಿಸುವಂತಾಗಲು ಪ್ರತಿ ಎರಡು ವರ್ಷಕ್ಕೊಮ್ಮೆ ‘ಕಲ್ಯಾಣ ಕರ್ನಾಟಕ ಉತ್ಸವ’ ಹೆಸರಿನಲ್ಲಿ ರಾಜ್ಯ ಮಟ್ಟದ ಉತ್ಸವ ಆಚರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಘೋಷಿಸಿದರು.
ಪ್ರಾತಿನಿಧ್ಯ ಒದಗಿಸಲು ಬದ್ಧ : ಕನ್ನಡ ಉದ್ಯೋಗದ ಭಾಷೆಯಾಗಬೇಕು ಎಂಬ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಖಾಸಗಿ ವಲಯದಲ್ಲೂ ಕನ್ನಡಿಗರಿಗೇ ಪ್ರಥಮ ಆದ್ಯತೆ ನೀಡುವ ಕುರಿತು ಆದೇಶ ಹೊರಡಿಸಿದೆ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳು, ಅಕಾಡೆಮಿಗಳು, ಪ್ರಶಸ್ತಿ ಆಯ್ಕೆ ಸಮಿತಿಗಳು ಇತ್ಯಾದಿಗಳಲ್ಲಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲವೆಂಬ ಕೂಗು ಬಹಳ ದಿನಗಳಿಂದಲೂ ಇದೆ. ಈ ಕೊರತೆಯನ್ನು ನಿವಾರಿಸಲು ನಮ್ಮ ಸರ್ಕಾರ ಈ ಭಾಗಕ್ಕೆ ಸಲ್ಲಬೇಕಾದ ಪ್ರಾತಿನಿಧ್ಯ ಒದಗಿಸಲು ಬದ್ಧವಾಗಿದೆ ಎಂದರು.
ನೆಲ ಜಲ ರಕ್ಷಣೆಗೆ ಕಟಿಬದ್ಧ : ಪ್ರಸ್ತುತ ಮಹಾರಾಷ್ಟçದಲ್ಲಿರುವ ಸಮ್ಮಿಶ್ರ ಸರ್ಕಾರ ಮತ್ತೆ ಗಡಿ ತಂಟೆಗೆ ಮುಂದಾಗಿದೆ. ಮಹಾಜನ್ ವರದಿ ಜಾರಿಗೆ ವರದಿ ಮಂಡನೆಯಾದ ದಿನದಿಂದಲೂ ಅಡ್ಡಿಗಳು ಎದುರಾಗಿವೆ. ಕೇವಲ ರಾಜಕೀಯ ಕಾರಣಕ್ಕಾಗಿ ಆಗಾಗ ಗೊಂದಲವೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ. ವಿವಾದ ಸುಪ್ರೀಂಕೋರ್ಟಿನಲ್ಲಿದೆ. ಇದಕ್ಕೆ ತಾರ್ಕಿಕ ಅಂತ್ಯ ದೊರೆತು ನಮ್ಮ ನೆಲ ಮತ್ತು ಜಲದ ರಕ್ಷಣೆ ಮಾಡಿಕೊಳ್ಳಲು ಪೂರಕವಾದ ಕಾರ್ಯತಂತ್ರವನ್ನು ನಮ್ಮ ಸರ್ಕಾರ ರೂಪಿಸಲಿದೆ ಎಂದರು.
ಮಾನಸಿಕವಾಗಿಯೂ ನಾವೆಲ್ಲ ಒಂದು : ಅಭಿವೃದ್ಧಿ, ಉದ್ಯೋಗ ಲಭ್ಯತೆ, ಸಂಘ ಸಂಸ್ಥೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಇತ್ಯಾದಿ ಕಾರಣಗಳಿಗೆ ನಾಡಿನ ಒಳಗಡೆ ಒಡಕಿನ ಧ್ವನಿ ಆಗಾಗ ಕೇಳಿ ಬರುವುದುಂಟು. ಏಕೀಕರಣ ಪ್ರತ್ಯೇಕೀಕರಣಕ್ಕೆ ಎಡೆಯಾಗಬಾರದು. ಕೇವಲ ಭೌಗೋಳಿಕ ಮತ್ತು ಭಾಷೆಯ ಕಾರಣಕ್ಕಷ್ಟೇ ನಾವು ಒಂದಾಗಿಲ್ಲ. ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ನಾವೆಲ್ಲ ಒಂದಾಗಿದ್ದೇವೆ. ಈ ಏಕತೆಗೆ ಯಾವುದೇ ಧಕ್ಕೆಯಾಗದಂತೆ ನಮ್ಮೊಳಗಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಯಾವುದೇ ಪ್ರದೇಶ ಹಿಂದುಳಿಯಬಾರದು. ಎಲ್ಲ ಪ್ರದೇಶಗಳನ್ನು ಸಮಾನವಾಗಿ ಪರಿಗಣಿಸಿ, ಅಗತ್ಯವನ್ನು ಅನುಸರಿಸಿ ಅನುದಾನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಅಭಿವೃದ್ಧಿಪರ ಚರ್ಚೆಯ ವೇದಿಕೆಯಾಗಲಿ : ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ಚಿತ್ರ ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕನ್ನಡದ ವಿಶಿಷ್ಟ ಪ್ರಕಾರವಾದ ಭಾವಗೀತೆಗಳ ಮೂಲಕ ಜನ ಮಾನಸದಲ್ಲಿ ನೆಲೆಯೂರಿದವರು. ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಸಹ ಅತ್ಯಂತ ಔಚಿತ್ಯಪೂರ್ಣವಾಗಿದೆ. ಸಾಹಿತ್ಯ ಸಮ್ಮೇಳನ ಸಾಹಿತ್ಯದೊಂದಿಗೆ ನೆಲ, ಜಲ, ಭಾಷೆಯ ವಿವಿಧ ಆಯಾಮಗಳ ಕುರಿತು, ಜ್ವಲಂತ ವಿಷಯಗಳ ಕುರಿತು ಆರೋಗ್ಯಕರ ಚರ್ಚೆಯ ವೇದಿಕೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಈ ಭಾಗದ ಅಭಿವೃದ್ಧಿಯೂ ಪ್ರಮುಖ ವಿಷಯವೇ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನಿಕಟಪೂರ್ವ ಸಮ್ಮೇಳನಾ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಅವರು ಧ್ವಜ ಹಸ್ತಾಂತರ ಮಾಡಿದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಆಶಯ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಾಲಾಜಿ, ಸಂಸದ ಡಾ. ಉಮೇಶ್ ಜಾಧವ್, ಶಿಲ್ಪ ಕಲಾ ಕಲಾವಿದ ಡಾ. ಜೆ.ಎಸ್. ಖಂಡೇರಾವ್, ಶಾಸಕರುಗಳಾದ ಡಾ. ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ, ಎಂ.ವೈ. ಪಾಟೀಲ, ಸುಭಾಷ್ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮುಡು, ಕನಿಜ ಫಾತೀಮಾ, ಅವಿನಾಶ ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್. ಜನ್ನು, ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಜಿಲ್ಲಾಧಿಕಾರಿ ಬಿ. ಶರತ್, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ನಗರ ಪೊಲೀಸ್ ಆಯುಕ್ತ ಎಂ.ಎಸ್. ನಾಗರಾಜ, ಜಿಪಂ ಸಿಇಒ ಡಾ. ಪಿ. ರಾಜಾ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…