ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುವ ಕಲಬುರಗಿ ಭಾರತದಲ್ಲೇ ಭಾವೈಕ್ಯ ಬಿಂಬಿಸುವ ಪ್ರಮುಖ ತಾಣ ಎಂದು ಗುರುತಿಸಲಾಗುತ್ತಿದೆ. ಬಸವಾದಿ ಶರಣರ ಕಾಯಕ-ದಾಸೋಹ ಸೂತ್ರ ಪಾಲಿಸಿದ ಶರಣಬಸವೇಶ್ವರರು, ಶ್ರೇಷ್ಠ ಸೂಫಿ ಸಂತ ಖ್ವಾಜಾ ಬಂದೇನವಾಜ್‌ರು ನಡೆದು ನುಡಿದ ಸಮನ್ವಯತೆಯ ಪವಿತ್ರನೆಲವಿದು. ಮೌರ್ಯ-ಶಾತವಾಹನರು, ಕಲ್ಯಾಣಿ ಚಾಲುಕ್ಯರು ಮತ್ತು ಕಲಚೂರಿಗಳು, ವಿಜಯನಗರ ಅರಸರು, ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿ, ಸುರಪುರದ ನಾಯಕರು ಮತ್ತು ನಿಜಾಮರು ಆಳಿದ ಈ ನಾಡು ಐತಿಹಾಸಿಕ, ಭೌಗೋಳಿಕ ದೃಷ್ಟಿಯಿಂದಲೂ ತುಂಬಾ ಪ್ರಮುಖವಾದ ಜಿಲ್ಲಾ ಕೇಂದ್ರವಾಗಿದೆ.
ಜಿಲ್ಲೆಯಲ್ಲಿ ಕೃಷ್ಣಾ-ಭೀಮಾ ನದಿಗಳೇ ಪ್ರಮುಖ ಜೀವನದಿಗಳಾಗಿದ್ದು, ಬೆಣ್ಣೆ ತೊರಾ, ಅಮರ್ಜಾ, ಮುಲ್ಲಾ ಮಾರಿ, ಬೋರಿ, ಕಮಲಾವತಿ ಇತರ ತೊರೆಗಳನ್ನು ಸಹ ಹೊಂದಿದೆ. ಕಪ್ಪು ಮಣ್ಣಿನ ಫಲವತ್ತಾದ ಭೂಮಿಯ ಜೊತೆಗೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಪ್ರದೇಶವಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕೇಂದ್ರ ಸ್ಥಾನವಾಗಿರುವ ಕಲಬುರಗಿ, ಶಹಾಬಾದ್ ಕಲ್ಲಿನ ಪರ್ಶಿ, ಅಪಾರ ನೈಸರ್ಗಿಕ ಖನಿಜ ಸಂಪತ್ತಿನಿಂದ ಕೂಡಿದೆ. ರಾಜಕೀಯವಾಗಿಯೂ ತನ್ನದೇ ಆದ ಇತಿಹಾಸ ಹೊಂದಿರುವ ಸ್ಥಳ ಇದಾಗಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕನ್ನಡದ ಮೊಟ್ಟ ಮೊದಲ ಗ್ರಂಥ ಶ್ರೀವಿಜಯನ ಕವಿರಾಜ ಮಾರ್ಗ ಇದೇ ಜಿಲ್ಲೆಯದು.
ವಚನ, ದಾಸರ ತವರೂರಾದ ಈ ಜಿಲ್ಲೆ ತತ್ವಪದಕಾರರ ನೆಲೆವೀಡಾಗಿದೆ. ಜನಪದ ಕಲೆ, ಸಾಹಿತ್ಯ, ಕ್ರೀಡೆಯ ದೃಷ್ಟಿಯಿಂದಲೂ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಜೋಳ, ಹತ್ತಿ ಮುಂತಾದ ಬೆಳೆಗಳಲ್ಲದೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿಯನ್ನು ಯಥೇಚ್ಛವಾಗಿ ಬೆಳೆಯುವುದರಿಂದ ಕಲಬುರಗಿ ಜಿಲ್ಲೆಯನ್ನು “ತೊಗರಿ ಕಣಜ” ಎಂದು ಗುರುತಿಸಲಾಗುತ್ತದೆ.
ಮಹಾಗಣಿತಜ್ಞ ಮಹಾವೀರಾಚಾರ್ಯ, ವಚನ ಸಾಹಿತ್ಯದ ಮುಂಗೋಳಿ ದೇವರ ದಾಸಿಮಯ್ಯ, ಕುಳಗೇರಿಯ ನಾಗಚಂದ್ರ, ಕೊಂಡಗುಳಿ ಕೇಶಿರಾಜ, ಮರತೂರಿನ ವಿಜ್ಞಾನೇಶ್ವರ, ಆಳಂದದ ಏಕಾಂತರಾಮಯ್ಯ, ನೆಲೋಗಿಯ ಕೋಲ ಶಾಂತಯ್ಯ, ಮಳಖೇಡದ ಟೀಕಾಚಾರ್ಯರು, ಕಡಕೋಳ ಮಡಿವಾಳಪ್ಪ, ಚೆನ್ನೂರ ಜಲಾಲ್ ಸಾಬ, ಖೈನೂರ ಕೃಷ್ಣಪ್ಪ, ರಸ್ತಾಪುರದ ಭೀಮಕವಿ, ಅಂಬಲಗಿ ಚೆನ್ನಮಲ್ಲ ಕವಿ, ಕೊಡೇಕಲ್ ಬಸವಣ್ಣ, ತಿಂಥಣಿ ಮೌನೇಶ್ವರ, ದೇವಪುರದ ಲಕ್ಷ್ಮೀಶ, ರಾಮಪುರದ ಬಕ್ಕಪ್ಪ, ಐನೂಲಿ ಕರಿಬಸವಾರ್ಯ, ಕೂಡಲೂರ ಬಸವಲಿಂಗ ಶರಣರು, ಜಂಬಗಿ ಶರಣ, ರಸ್ತಾಪುರದ ಭೀಮಕವಿ, ಮೋಟ್ನಳ್ಳಿ ಹಸನ್‌ಸಾಬ, ತವಗ ಬೀಮಸೇನರಾವ ಮುಂತಾದವರ ಕವಿ-ಕಾವ್ಯ ಪರಂಪರೆ ಹೊಂದಿರುವ ಅವಿಭಜಿತ ಕಲಬುರಗಿ ಜಿಲ್ಲೆಗೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಈ ಭಾಗದ ಸಾಹಿತ್ಯ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.
ಜಿಲ್ಲೆಯ ಸೌಹಾರ್ದ ಸಾಮಾಜಿಕ ಸ್ಥಿತಿಗತಿ, ಸಮನ್ವಯತೆಯ ಧಾರ್ಮಿಕ ಸ್ಥಿತಿಗತಿ ಹಾಗೂ ವಿಮೋಚನಾ ಚಳವಳಿಯ ಹೋರಾಟದಿಂದಾಗಿ ಗಂಡು ಮೆಟ್ಟಿನ ನೆಲ ಎಂದು ಗುರುತಿಸಿಕೊಂಡಿದೆ. ಅಂತೆಯೇ ಅಂದಿನಿಂದ ಇಂದಿನವರೆಗೆ ಈ ನೆಲದಿಂದ ಮೂಡಿ ಬಂದ ಸಾಹಿತ್ಯ ಕೂಡ ತನ್ನದೇ ಆದ ಕಸುವು ಉಳಿಸಿಕೊಂಡು ಬಂದಿದೆ. ಕಲಬುರ್ಗಿ ಎಂಬ ಅಚ್ಚಕನ್ನಡದ ಮೂಲ ಹೆಸರು ಹೊಂದಿರುವ ಈ ಹೆಸರು ಪಾಶರಸೀಕರಣಗೊಂಡ ಬಳಿಕ ಗುಲ್ಬರ್ಗ ಎಂತಲೂ ಕರೆದರು. ಆದರೆ ಕಲಬುರಗಿ ಎಂಬುದೇ ಇದರ ನಿಜವಾದ ಹೆಸರು ಎಂದು ವಿದ್ವಾಂಸರು ಮತ್ತು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
“ಕುರಿತೋದಯಂ ಕಾವ್ಯ ಪ್ರಯೋಗ
ಪರಿಣತ ಮತಿಗಳ್ ಈ ನಾಡವರ್ಗಳ್”
ಎನ್ನುವ ಕವಿರಾಜ ಮಾರ್ಗಕಾರನ ಕಾವ್ಯಕ್ಕೆ ತಕ್ಕಂತೆ ಅವಿಭಜಿತ ಕಲಬುರಗಿ ಜಿಲ್ಲೆ ಕನ್ನಡ ಸಾಹಿತ್ಯ ಪರಂಪರೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ.
ಜಾನಪದ ಸಾಹಿತ್ಯ: ಈ ಭಾಗದ ಜನಪದ ಸಾಹಿತ್ಯ ಕೂಡ ತುಂಬಾ ವಿಶಿಷ್ಟವಾದುದಾಗಿದೆ. ಜನಪದ ಹಾಡು, ಕಥೆ, ಪುರಾಣ, ಬಯಲಾಟ, ಗಾದೆ, ಒಡಪುಗಳು, ಜಾತ್ರೆ, ಉತ್ಸವಗಳು ಈ ಪ್ರದೇಶದ ವೈಶಿಷ್ಟ್ಯವನ್ನು ಮರೆಯುತ್ತವೆ. ಉದಾಹರಣೆಗೆ ಹೇಳುವುದಾದರೆ, ಬ್ಯಾಸಿಗಿ ದಿವಸಕ ಬೇವಿನ ಮರ ತಂಪ ಬೀಮರತಿಯೆಂಬ ಹೊಳಿ ತಂಪ! ಹಡದವ್ವ
ನೀ ತಂಪ ನನ್ನ ತವರಿಗೆ.
ಇಲ್ಲಿನ ಹರದೇಶಿ-ನಾಗೇಶಿ ಪದಗಳು, ದುಮ್ಮಸು ಪದಗಳು, ದೀವಳಿಗೆ ಹಾಡುಗಳು, ಮೋಹರಂ ಪದಗಳು, ತತ್ವಪದಗಳು ತುಂಬಾ ಪ್ರಸಿದ್ಧವಾಗಿವೆ. ಈ ಜಿಲ್ಲೆಯಲ್ಲಿ ಸಿಗುವಷ್ಟು ಜನಪದ ಕಲಾ ತಂಡಗಳು ಬೇರೆಲ್ಲೂ ಸಿಗುವುದಿಲ್ಲ. ಗೀಗೀ-ಲಾವಣಿ ಪದಗಳಿಗೆ ಅಗ್ರ ಸ್ಥಾನವಿದೆ.
ತತ್ವಪದ ಸಾಹಿತ್ಯ: ಕಲಬುರಗಿ ಜಿಲ್ಲೆಯ ತತ್ವಪದಕಾರರಲ್ಲಿ ಪ್ರಮುಖವಾಗಿ ಕಡಕೋಳದ ಮಡಿವಾಳಪ್ಪ, ರಾಮಪೂರದ ಬಕ್ಕಪ್ಪ, ಐನೂಲಿ ಕರಿಬಸವಾರ್ಯರು, ಬೇನೂರ ಕಾಕಪೀರ, ದೇಗಾಂವ ಗುಂಡಪ್ಪ, ಚನ್ನೂರ ಜಲಾಲ್‌ಸಾಬ, ಮೋಟನಹಳ್ಳಿ ಹಸನ್‌ಸಾಬ, ಖೈನೂರು ಕೃಷ್ಣಪ್ಪ, ಸಿರಗಾಪುರ ಬಂಡೆಪ್ಪ, ಸಾವಳಗಿ ಮಹ್ಮದ್ ಸಾಹೇಬ್, ತೆಲಗಬಾಳ ದೇವಪ್ಪ, ಕಡ್ವಾಡ ಸಿದ್ದಪ್ಪ, ಇನ್ನಿತರರು ರಚಿಸಿದ ಅನುಭಾವದ ಹಾಡುಗಳು ಸಮಾಜದಲ್ಲಿ ಸಾಕಷ್ಟು ಪರಿಣಾಮ ಬೀರುವಂತಿವೆ.
ಶರಣ ಸಾಹಿತ್ಯ: ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಬೀಡಾಗಿರುವ ಕಲಬುರಗಿ ಜಿಲ್ಲೆಯ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ವಚನ ವಸಂತದ ಕೊನೆಯ ಕೋಗಿಲೆ ಎಂದು ಕರೆಯಲಾಗುತ್ತದೆ. ಮುದನೂರಿನ ಜೇಡರ ದಾಸಿಮಯ್ಯನವರು ಆದ್ಯ ವಚನಕಾರರು. ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ಚೆಂದಿಮರಸ, ನೆಲೋಗಿಯ ಕೋಲ ಶಾಂತಯ್ಯ, ಆಳಂದದ ಏಕಾಂತ ರಾಮಯ್ಯ, ಸಗರದ ಬೊಮ್ಮಯ್ಯ, ಮುನ್ನೋಳಿಯ ಗಜೇಶ ಮಸಣಯ್ಯ ಮುಂತಾದವರು ರಚಿಸಿದ ವಚನಗಳು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿವೆ.
ದಾಸ ಸಾಹಿತ್ಯ: ದಾಸ ಸಾಹಿತ್ಯದ ಪ್ರಮುಖರಾದ ಸುರಪುರದ ಆನಂದ ದಾಸರು, ಅಫಜಲಪುರ ತಾಲ್ಲೂಕಿನ ಮಣ್ಣೂರ ದಾಸರು, ನಾಯಕಲ್ ರಾಮಾಚಾರ್ಯರು, ಐಕೂರ ನರಸಿಂಹಚಾರ್ಯ, ಅಸ್ಕಿಹಾಳದ ಗೋವಿಂದ ದಾಸರು ಮುಂತಾದವರು ಭಕ್ತಿ ಮಾರ್ಗದ ಜೊತೆಗೆ ಸಮಾಜಕ್ಕೆ ಉತ್ತಮ ಸಂಸ್ಕೃತಿ ಸಂದೇಶ ನೀಡಿದ್ದಾರೆ.
ಸೂಫಿ ಸಾಹಿತ್ಯ: ಕರ್ನಾಟಕದ ಸೂಫಿ ಪರಂಪರೆಗೆ ಕಲಬುರಗಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ದಖ್ಖನಿ ಉರ್ದುವಿನ ಪ್ರಸ್ಥ ಭೂಮಿ ಎನಿಸಿಕೊಂಡಿರುವ ಕಲಬುರಗಿಯನ್ನು ಸೂಫಿ ತತ್ವದ ತೊಟ್ಟಿಲು ಎಂದು ಕರೆಯುತ್ತರೆ. ಹಸನ್‌ಗಂಗೂ ಬಹಮನಿಯೊಂದಿಗೆ ಆತನ ಆಹ್ವಾನದ ಮೇರೆಗೆ ಕಲಬುರಗಿಗೆ ಬಂದವರು ಸೈಯದ್ ಮಹ್ಮದ್ ಹುಸೈನಿ ಗೇಸುದರಾಜ್ ಈತನನ್ನು ಜನರು ಖ್ವಾಜಾ ಬಂದೇನವಾಜ್ ಎಂದು ಕರೆಯುತ್ತಾರೆ. ಇದೇ ಕಾಲಕ್ಕೆ ಕಲಬುರಗಿಗೆ ಬಂದ ಇನ್ನೊಬ್ಬ ಸೂಫಿರುಕ್ಮುದೀನ್ ಖಾದ್ರಿ. ಕಲಬುರಗಿಯ ಆಹಸಾನುದ್ದೀನ್ ಖಾದ್ರಿ ಬಗ್ದಾದಿ, ಶಹಾಪುರ್ ಖಾದ್ರಿ, ಅಫಜಲಪೂರ (ಹೂವಿನ ಹೆಗ್ಗಿ) ಖಾಜಾ ಸಾಬ್, ಗೋಗಿ ಚಂದಾ ಹುಸೇನಿ, ಭೈರಾಮಡಗಿಯ ದಾವುಲ್ಮಲಿಕ್, ಚಿತ್ತಪುರ (ವಾಚ್ಚಾ) ನಸೀರುದ್ದೀನ್, ಮಂದೇವಾಲ ಮುನ್ನಾಪೀರ, ಪಡಸಾವಳಿಯ ಮಲಿ ಸಾಹೇಬ್ ಹೀಗೆ ನೂರಾರು ಜನರ ಪಟ್ಟಿಯನ್ನು ಇನ್ನೂ ಬೆಳೆಸುತ್ತ ಹೋಗಬಹುದು.
ನಾಟಕ-ರಂಗಭೂಮಿ: ಬೇರೆ ಕಡೆಯಿಂದ ಇಲ್ಲಿಗೆ ಬರುವ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಪ್ರದರ್ಶಿಸುವ ನಾಟಕಗಳು ಜಿಲ್ಲೆಯಲ್ಲಿನ ರಂಗಭೂಮಿಯ ಮನಸ್ಸು ಹದಗೊಳ್ಳಲು ಕಾರಣವಾದವು. ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ನೂತನ ವಿದ್ಯಾಲಯ ಸಂಸ್ಥೆಯ ವಿ.ಪಿ. ದೇವಳಗಾಂವಕರ್, ದತ್ತಾತ್ರೇಯ ಹೇರೂರ್ ಅವರುಗಳು ಹವ್ಯಾಸಿ ರಂಗ ಚಟುವಟಿಕೆಗಳು ಗರಿಗೆದರಲು ಕಾರಣರಾದರು. ನಾಗಪ್ಪ ಶೆಟ್ಟರ್ ಅವರ “ಕನ್ನಡಮ್ಮನ ಕರೆ” ಎಂಬ ಐತಿಹಾಸಿಕ ನಾಟಕ ಸಮಕಾಲೀನ ಸಂದರ್ಭಕ್ಕೆ ಅನ್ವಯಿಸುತ್ತಿತ್ತು.
ಆನಂತರದಲ್ಲಿ ಎ.ಕೆ. ರಾಮೇಶ್ವರ, ಮೋಹನಚಂದ ಕೀರಣಗಿ, ಎಲ್.ಬಿ. ಕೆ. ಆಲ್ದಾಳ, ಕೋಡ್ಲಿ ಕಂಠೆಪ್ಪ ಮಾಸ್ತರ, ಡಾ. ಎಸ್.ಎಂ. ಹಿರೇಮಠ, ರಮಾನಂದ ಹಿರೇಜೇವರ್ಗಿ, ಚಂದ್ರಕಾಂತ ಕುಸನೂರ, ಗವೀಶ ಹಿರೇಮಠ, ಪ್ರಭಾಕರ ಸಾಥಖೇಡ, ಡಾ. ಸ್ವಾಮಿರಾವ ಕುಲಕರ್ಣಿ, ಶೋಭಾ ರಂಜೋಳಕರ್, ಶಂಕ್ರಯ್ಯ ಘಂಟಿ, ಡಾ. ಬಸವರಾಜ ಸಬರದ, ಪ್ರೊ. ಆರ್.ಕೆ. ಹುಡಗಿ, ಪ್ರಭಾಕರ ಜೋಶಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ವಿಶ್ವನಾಥ ಬೆಳಗುಂಪಿ, ಅಶೋಕ ತೋಟ್ನಳ್ಳಿ, ಸಂದೀಪ, ವಿಶ್ವರಾಜ ಮುಂತಾದವರು ನಾಟಕ ರಚನೆಯ ಜೊತೆಗೆ ತಾವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಹವ್ಯಾಸಿ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಚಿತ್ರಕಲೆ: ನಾಡೋಜ ಜೆ.ಎಸ್. ಖಂಡೇರಾವ, ಡಾ. ವಿ.ಜಿ. ಅಂದಾನಿ, ಡಾ. ಎ.ಎಸ್. ಪಾಟೀಲ, ಮಲ್ಲಿಕಾರ್ಜುನ ಸಿ. ಬಾಗೋಡಿ, ಡಾ. ಪಿ. ಪರುಶುರಾಮ, ಡಾ. ಎಸ್.ಎಂ. ನೀಲಾ, ಡಾ. ಅಶೋಕ ಶೆಟಕಾರ, ಪ್ರೊ. ಮಂತಟ್ಟಿ, ಮೊಹ್ಮದ್ ಅಯಾಜುದ್ದೀನ್, ಪಾಶಾ, ಪ್ರೊ. ಜಾನೆ, ಬಸವರಾಜ ಉಪ್ಪಿನ್, ಸಂಗಣ್ಣ ದೋರನಹಳ್ಳಿ ಇತರರು ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಅನುವಾದ ಸಾಹಿತ್ಯ: ದತ್ತಾತ್ರೇಯ ಹೇರೂರ, ಪ್ರೊ. ದೇವುಳಗಾಂವಕರ್, ಡಾ. ವಸಂತ ಕುಷ್ಟಗಿ, ಪ್ರೊ. ಎಸ್.ಜಿ. ಡೊಳ್ಳೆಗೌಡರು, ಪ್ರೊ. ಬಾಲಚಂದ್ರ ಜಯಶೆಟ್ಟಿ, ಪ್ರೊ. ಆರ್.ಕೆ. ಹುಡಗಿ, ಡಾ. ಕಾಶೀನಾಥ ಅಂಬಲಗೆ, ಡಾ. ಪರಿಮಳಾ ಅಂಬೇಕರ್ ಮುಂತಾದವರು ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಡಾ. ಚೆನ್ನಣ್ಣ ವಾಲೀಕಾರ, ಶಿವಶರಣ ಪಾಟೀಲ ಜಾವಳಿ, ರೇವಣಸಿದ್ದಯ್ಯ ರುದ್ರಸ್ವಾಮಿ ಮಠ, ಬಸವೇಶ್ವರ ನಾಥ ಸೂಗೂರ ಮಠ, ಲಿಂಗಣ್ಣ ಸತ್ಯಂಪೇಟೆ, ಚಂದ್ರಕಾಂತ ಕರದಳ್ಳಿ ಮುಂತಾದವರಲ್ಲದೆ ಡಾ. ಎಂ.ಜಿ. ಬಿರಾದಾರನಾಡೋಜ ಗೀತಾ ನಾಗಭೂಷಣ, ಡಾ. ವಸಂತ ಕುಷ್ಟಗಿ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಡಾ. ಬಸವರಾಜ ಸಬರದ, ಡಾ. ವಿಜಯಶ್ರೀ ಸಬರದ, ಡಾ. ವಿ.ಜಿ. ಪೂಜಾರ, ಡಾ. ಡಿ.ಬಿ. ನಾಯಕ, ಡಾ. ಮೀನಾಕ್ಷಿ ಬಾಳಿ, ಡಾ. ಎಚ್.ಟಿ. ಪೋತೆ, ಪ್ರೊ. ಆರ್.ಕೆ. ಹುಡಗಿ, ಡಾ. ಮಹಾದೇವ ಬಡಿಗೇರ, ಡಾ. ವಿಕ್ರಮ ವಿಸಾಜಿ, ಪ್ರೊ. ಕಲ್ಯಾಣರಾವ ಪಾಟೀಲ, ಡಾ. ಅಪ್ಪಗೆರೆ ಸೋಮಶೇಖರ, ಎಸ್. ಪಿ. ಸುಳ್ಳದ, ಕೆ. ನೀಲಾ, ಡಾ. ಶಾಂತಾ ಮಠ, ಡಾ. ಶ್ರೀಶೈಲ ನಾಗರಾಳ, ಸಂಧ್ಯಾ ಹೊನಗುಂಟಿಕರ್, ಜ್ಯೋತಿ ಕುಲಕರ್ಣಿ, ಡಾ. ಕಾಶೀನಾಥ ಅಂಬಲಗೆ, ಪ್ರೊ. ಬಾಲಚಂದ್ರ ಜಯಶೆಟ್ಟಿ, ಅಪ್ಪಾರಾವ ಅಕ್ಕೋಣಿ, ಲಕ್ಷ್ಮಣ ಕೌಂಟೆ, ಡಾ. ಹನುಮಂತರಾವ ದೊಡ್ಡಮನಿ, ಡಾ. ಚಿ.ಸಿ. ನಿಂಗಣ್ಣ, ಲಿಂಗಾರೆಡ್ಡಿ ಶೇರಿ, ಎಚ್.ಬಿ. ತೀರ್ಥೆ, ಭೀಮರಾಯ ಹೆಮನೂರ, ಶಿವರಂಜನ್ ಸತ್ಯಂಪೇಟೆ, ಮಹಿಪಾಲರೆಡ್ಡಿ ಮುನ್ನೂರ್, ಸಿದ್ಧರಾಮ ಹೊನ್ಕಲ್, ವಿಶ್ವಾರಾಧ್ಯ ಸತ್ಯಂಪೇಟೆ, ನರಸಿಂಗರಾವ ಹೇಮನೂರ, ಪ್ರಭಾಕರ ಜೋಶಿ, ಡಾ. ಶಿವಗಂಗಾ ರುಮ್ಮಾ, ಡಾ. ನಾಗಾಬಯಿ ಬುಳ್ಳಾ, ಪ್ರಭುಲಿಂಗ ನೀಲೂರೆ, ಬಿ.ಎಚ್. ನಿರಗುಡಿ, ಡಾ. ಸೂರ್ಯಕಾಂತ ಸುಜ್ಯಾತ, ಡಾ. ಶಿವರಾಮ ಅಸುಂಡಿ, ಡಾ. ಬಸವರಾಜ ಕೋಡಗುಂಟಿ, ಡಾ. ಸುಜಾತ ಜಂಗಮಶೆಟ್ಟಿ, ಡಾ. ನೀಲಾಂಬಿಕಾ ಶೇರಿಕಾರ, ನಾಗರಾಜ ಹೂವಿನಹಳ್ಳಿ, ವಿಠ್ಠಲ್ ವಗ್ಗನ್, ಎಚ್.ಎಸ್, ಬೇನಾಳ, ಶಿವಾನಂದ ಭಂಟನೂರ, ಶ್ರೀನಿವಾಸ ಸಿರನೂರಕರ್, ಶಿವಣ್ಣ ಇಜೇರಿ, ಡಾ. ಶರಣಪ್ಪ ಮಾಳಗಿ, ರವಿಂದ್ರ ಕರ್ಜಗಿ, ಡಾ. ಶಂಭುಲಿಂಗ ವಾಣಿ, ಡಾ. ಅಮೃತಾ ಕಟಕೆ, ಡಾ. ಸತೀಶಕುಮಾರ ಹೊಸಮನಿ, ಡಾ. ಈಶ್ವರಯ್ಯ ಮಠ, ಶಾಂತಪ್ಪ ಬೂದಿಹಾಳ, ಡಾ. ರಾಜಶೇಖರ ಮಾಂಗ್, ಶಿವಾನಂದ ಅಣಜಗಿ, ಸಂಗಣ್ಣ ಹೋತಪೇಟ, ಡಾ. ಗಾಳೆಪ್ಪ ಪೂಜಾರಿ, ದೇವಿಂದ್ರ ಹೆಗ್ಗಡೆ, ಡಾ. ಶಕುಂತಲಾ ದುರಗಿ, ಸಂಗಮನಾಥ ರೇವತಗಾಂವ, ಸುಭಾಷ ಬಣಗಾರ ಡಾ. ಶೈಲಜಾ ಬಾಗೇವಾಡಿ, ಡಾ. ಸೂರ್ಯಕಾಂತ ಪಾಟೀಲ ಇತರರು ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದಾರೆ.
(ಕೃಪೆ: ಉದಯವಾಣಿ, ಕನ್ನಡ ಕಂಪು ಸಾಹಿತ್ಯ ಸಮ್ಮೇಳನ ವಿಶೇಷ ಸಂಚಿಕೆ)
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…