ನಾಡು, ನುಡಿ, ಗಡಿ, ಪತ್ರಿಕೋದ್ಯಮದ ವಿಷಯ ಬಂದಾಗ ನಮಗೆ ಥಟ್ಟನೆ ನೆನಪಾಗುವ ಹೆಸರೆಂದರೆ ಪಾಟೀಲ ಪುಟ್ಟಪ್ಪನವರದು. ಇವುಗಳ ಸಂವರ್ಧನೆಗಾಗಿಯೇ ಇಡೀ ತಮ್ಮ ಬದುಕನ್ನು ಗಂಧದಂತೆ ಸವೆಸಿದವರು.
ಪಾಪು ಎಂದೇ ಖ್ಯಾತರಾದ ಈ ಪುಟ್ಟಪ್ಪನವರು ಹಾವೇರಿ ಜಿಲ್ಲೆಯ ‘ಹಲಗೇರಿ’ ಎಂಬ ಸಾಮಾನ್ಯ ಹಳ್ಳಿಗಾಡಿನಲ್ಲಿ (೧೪-೧.೧೯೧೯) ಹುಟ್ಟಿ ಬೆಳೆದ ಸಾಮಾನ್ಯ ವ್ಯಕ್ತಿ ಪುಟ್ಟಪ್ಪ ತಮ್ಮ ಕಠಿಣ ಪರಿಶ್ರಮ, ಶ್ರದ್ಧೆ, ಆದರ್ಶಗಳನ್ನು ಇಟ್ಟುಕೊಂಡು ಎತ್ತರಕ್ಕೆ ಬೆಳೆದು ನಾಡ ಕಣ್ಮಣಿಗಳೆನಿದ್ದು ಅಚ್ಚರಿಯೇ ಹೌದು.
ಪಾಟೀಲ ಪುಟ್ಟಪ್ಪನವರ ಉತ್ಸಾಹ, ಹೋರಾಟ ಮನೋಭಾವ ಕಂಡು ಬೆರಗಾದ ಕನ್ನಡದ ಹಿರಿಯ ಕವಿ ಡಿ.ವ್ಹಿ. ಗುಂಡಪ್ಪನವರು ‘ನೀವೊಂದು ವಿದ್ಯುತ್ ತಂತಿ’ ಎಂದು ಬಣ್ಣಿಸಿದರು. ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎನ್ನುವ ಕವಿ ಕುವೆಂಪು ಅವರ ವಾಣಿಯನ್ನು ಶಿರಸಾವಹಿಸಿ ಅನುಸರಿಸಿ ಅನುಷ್ಠಾನಕ್ಕೆ ತರುವ ಮೂಲಕ ಹೋರಾಟದ ಮಿಂಚಾದವರು. ಆ ಮಿಂಚಿನ ಬೆಳಕಿನಲ್ಲಿ ಹೊಸ ಪ್ರಪಂಚದ ದರ್ಶನ ಮೂಡಿಸಿದವರೇ ಈ ನಮ್ಮ ಪಾಟೀಲ ಪುಟ್ಟಪ್ಪನವರು.
ಅವರು ಕನ್ನಡಿಗ, ಕರ್ನಾಟಕ ಏಕೀಕರಣದ ಹೋರಾಟಗಾರರು. ಅಖಂಡ ಕರ್ನಾಟಕದ ಕನಸಿಗರು, ಸಾಹಿತ್ಯ, ಪತ್ರಿಕೆಗಳ ನಾವಿಕರು, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ, ವಾಗ್ಮಿ. ಕಪಟವಿಲ್ಲದ ನಿರ್ಮೋಹ, ನಿರ್ಮತ್ಸರದ ವ್ಯಕ್ತಿ, ಹೃದಯವಂತ. ಸಂಸದ, ಕನ್ನಡದ ಕಾವಲುಗಾರ ಹೀಗೆ ಅವರ ವ್ಯಕ್ತಿತ್ವ ಒಂದು ಸಾಂಸ್ಕೃತಿಕ ಶಕ್ತಿಯಾಗಿದೆ. ಅವರೊಬ್ಬ ಸತ್ಯ ಸ್ನೇಹಿ, ದಿಟ್ಟ ಹೋರಾಟಗಾರ. ಅವರು ನಿರಪೇಕ್ಷ ಮನೋಭಾವದಿಂದ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಂವರ್ಧನೆಗೆ ಅರ್ಹನಿಷಿ ಶ್ರಮಿಸಿದ್ದಾರೆ.
ಪಾಟೀಲ ಪುಟ್ಟಪ್ಪನವರು ತಮ್ಮ (ಸಿದ್ಧಲಿಂಗಪ್ಪಗೌಡ-ಮಲ್ಲಮ್ಮ) ತಂದೆ-ತಾಯಿ, ಗುರುಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅವರು ತುಂಬ ಕಠಿಣವಾದಿಗಳು, ಸ್ವಾಭಿಮಾನಿಗಳೂ ಹೌದು. ಅವರು ಎಷ್ಟು ಕಠಿಣವಾದಿಗಳೆಂದರೆ ತಪ್ಪು ಮಾಡಿದವರು ಯಾರೇ ಇರಲಿ, ಹಿಂದು ಮುಂದು ನೋಡದೆ ಮುಖದ ಮೇಲೆ ಹೊಡೆದಂತೆ ಮಾತನಾಡುವರು. ಅನೇಕರು ಅವರ ಎದುರಿನಲ್ಲಿ ಅಸತ್ಯವನ್ನು ಮಾತನಾಡಲು ಹೆದರುತ್ತಾರೆ. ಜನರಿಗೆ ಅವರನ್ನು ಕಂಡರೆ ಅತಿಯಾದ ಪ್ರೀತಿ, ಗೌರವ, ಅವರ ಸಿಟ್ಟು ಕೇವಲ ವಿಷಯಾಧಾರಿತವೇ ಹೊರತು.
ವ್ಯಕ್ತಿತ್ವಗತವಾದುದಲ್ಲ. ಅವರಲ್ಲಿ ಸತ್ಯ, ನಿಷ್ಠೆ, ಸ್ವಾಭಿಮಾನ, ತಾಯ್ತನದ ಸಹನೆ, ಮಮತೆಯ ಜೀವನ ಪ್ರೀತಿಯಂಥ ಉದಾತ್ತ ಗುಣಗಳು ಮನೆಮಾಡಿವೆ. ಪುಟ್ಟಪ್ಪನವರು ಪ್ರಪಂಚದೆತ್ತರಕ್ಕೆ ಬೆಳೆದ ಚೇತನ. ಈ ಚೇತನ ತಮ್ಮ ಬಾಳ ದಾರಿಯಲ್ಲಿ ಅನೇಕ ಕಷ್ಟ ನಷ್ಟ, ಆಘಾತಗಳ ಕಹಿಯನ್ನು ಉಂಡಿದ್ದಾರೆ. ಆದರೆ ಅವುಗಳನ್ನು ಸರಿಸಮನಾಗಿ ಬೇವು-ಬೆಲ್ಲದಂತೆ ಸ್ವೀಕರಿಸಿ ತಮ್ಮದೇ ಆದ ಉದಾತ್ತತೆಯನ್ನು ಮೆರೆದಿರುವರು.
ಬದುಕಿನ ಸಂಘರ್ಷದ ಒಳ ಹರವಿನಲ್ಲಿ ಮಾಗಿದ ವ್ಯಕ್ತಿತ್ವ ಅವರದು. ಅನ್ಯಾಯ, ಅವ್ಯವಸ್ಥೆ ಕಂಡಾಗ ಉಗ್ರ ಕೋಪ ತಾಳುವಷ್ಟೇ, ಒಳ್ಳೆಯದನ್ನು ಕಂಡಾಗ ತುಂಬ ಪ್ರೀತಿಯಿಂದ ನೋಡುತ್ತಾರೆ. ಪುಟ್ಟಪ್ಪನವರು ತಮ್ಮ ಜೀವನದಲ್ಲಿ ಅನ್ಯಾಯವನ್ನು ಸಹಿಸುವುದು. ಅಧಿಕಾರಕ್ಕಾಗಿ ತಲೆಬಾಗಿ, ಹಲ್ಲು ಗಿಂಜುವುದು ಮಾಡಿದುದೇ ಇಲ್ಲ. ಇಂಥ ನೇರ ನಡೆ ನುಡಿಯ ಈ ಹೋರಾಟಗಾರ ಕನ್ನಡದ ಕಟ್ಟಾಳುವಿನ ಬದುಕಿನ ಹಂದರವನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ನನ್ನದಾಗಿದೆ.
ನನ್ನೊಳಗಿನ ‘ನಾಡೋಜ’ ನಿಮ್ಮೆದುರಿಗೆ
ಹೆಸರಾಂತ ಪತ್ರಿಕೋದ್ಯಮಿ, ಬರಹಗಾರ ಡಿ.ವಿ.ಜಿ ಅವರು ಡಾ. ಪಾಟೀಲ ಪುಟ್ಟಪ್ಪ ಅವರ ಬಗ್ಗೆ ಹೇಳಿದ ‘ನೀನು ಜೀವಂತ ವಿದ್ಯುತ್ ತಂತಿ; ನೀನು ಯಾವುದನ್ನದರೂ ಜೀವಂತವಾಗಿ ಮಾಡಬಲ್ಲೆ”ಎಂಬ ಮಾತು ಪುಸ್ತಕವೊಂದರಲ್ಲಿ ಓದಿದ ನೆನಪು. ಇದನ್ನು ಓದಿದಂದಿನಿಂದ ನನ್ನೊಳಗೆ ಆ ಮಾತು ರಿಂಗುಣಿಸುತ್ತಲೇ ಇತ್ತು.
ಇದಕ್ಕೆ ಪೂರಕವೆಂಬಂತೆ ನನ್ನ ತಂದೆಯವರಾದ ಲಿಂಗಣ್ಣ ಸತ್ಯಂಪೇಟೆಯವರು ಕೂಡ ವಾರ, ವಾರವು ಪ್ರಪಂಚ ಪತ್ರಿಕೆಗೆ ಬರೆಯುತ್ತಿದ್ದರು. ನಮ್ಮ ಭಾಗದ ಐರಾವಣ-ಮೈರಾವಣರಾಗಿ ಮೆರೆಯುತ್ತಿದ್ದ ಭ್ರಷ್ಟರ ಬಗ್ಗೆ, ಪುಢಾರಿಗಳ ಬಗ್ಗೆ ತನಿಖೆ ಮಾಡಿ ವರದಿ ಕಳಹಿಸಿದಾಗಲೂ ಅದನ್ನು ಸ್ವಲ್ಪವೂ ಬದಲಿಸದೆ ಪ್ರಕಟಿಸುತ್ತಿದ್ದರು. ಇದು ಪಾಟೀಲ ಪುಟ್ಟಪ್ಪನವರು ನನ್ನ ತಂದೆಯವರ ಮೇಲಿಟ್ಟಿದ್ದ ನಂಬಿಕೆಯಾಗಿತ್ತು. ನಾನು ಬೆಳೆಯುತ್ತ ಹೋದಂತೆ ನನ್ನ ಬೌದ್ಧಿಕ ವಿಕಾಸದ ಜೊತೆಗೆ ಪಾಪು ಕೂಡ ನನಗರಿವಿಲ್ಲದೆ ನನ್ನೊಳಗೆ ಬೆಳೆಯತೊಡಗಿದರು.
ವಾರ-ವಾರವೂ ಹೊಸ ಆವಿಷ್ಕಾರದೊಂದಿಗೆ ಹೊರ ಬರುತ್ತಿದ್ದ ಪ್ರಪಂಚ ನನ್ನೊಳಗೆ ಪ್ರಾಪಂಚಿಕ ಅರಿವನ್ನು ತುಂಬಿತು. ಆದರ್ಶ ಬದುಕಿನ ಕಲ್ಪನೆ ನನ್ನೊಳಗೆ ಮೂಡಿಸತೊಡಗಿತ್ತು. ಯಾರ, ಯಾವ ಹಂಗು, ದಾಕ್ಷಿಣ್ಯಕ್ಕೆ ಒಳಗಾಗದೆ ಇದ್ದುದನ್ನು ಇದ್ದಂತೆ ನೇರವಾಗಿ ಹೇಳಿ ಬಿಡುವ ಪಾಪು ಅವರ ಸರಳ ಮತ್ತು ಸ್ಪಷ್ಟ ಮಾತುಗಳನ್ನು ಓದುತ್ತ ಹೋಗುತ್ತಿರುವಂತೆ ಪಾಪು ಅವರೇ ನನ್ನೆದುರು ಕುಳಿತು ಹೇಳುತ್ತಿದ್ದಾರೆಂದು ಭಾಸವಾಗುತ್ತಿತ್ತು.ಇದು ಇಂದಿಗೂ ನನ್ನಲ್ಲುಂಟಾಗುವ ಅನುಭವ ಕೂಡ.
ಇಂತಹ ಹಿರಿದಾದ ಚೇತನವೊಂದರ ಕುರಿತು ನನ್ನೊಳಗೆ ಜಿಜ್ಞಾಸೆ ಮೂಡತೊಡಗಿತು. ಆಗ ನಾನು ಅವರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸತೊಡಗಿದೆ. ಕಥೆ, ಕಾವ್ಯ, ಸಂಶೋಧನಾತ್ಮಕ ಹಾಗೂ ಪತ್ರಿಕಾ ಬರವಣಿಗೆಯಲ್ಲಿ ಅವರು ಭಾಷೆಯನ್ನು ದುಡಿಸಿಕೊಳ್ಳುವ ಬಗೆಯನ್ನು ಕಂಡು ಅಚ್ಚರಿಗೊಂಡೆ.
ಆರಂಭದಲ್ಲಿ ನನ್ನ ಕವನ, ಲೇಖನಗಳನ್ನು ಅವರ ಪತ್ರಿಕೆಗೆ ಬರೆದು ಕಳಿಸುತ್ತಿದ್ದೆ. ನಾನು ಕಳುಹಿಸಿದ ಕವನ, ಲೇಖನಗಳಿಗೆ ಚೆನ್ನಾಗಿ ಸಾಣೆ ಹಿಡಿದು ತಿದ್ದಿ ಪ್ರಕಟಿಸುತ್ತಿದ್ದರು ಅವರು. ನನ್ನಂತಹ ಸಣ್ಣ ಹುಡಗನಿಗೂ ಅವರು ತೋರುವ ಪ್ರೋತ್ಸಾಹದಿಂದಾಗಿ ಅವರ ಬಗೆಗೆ ಇನ್ನಷ್ಟು ಅಭಿಮಾನ ಹುಟ್ಟಿಕೊಂಡಿತು. ತಾವು ನಂಬಿದ ಮೌಲ್ಯಗಳಿಗಾಗಿ “ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ’ ಎಂಬ ಸಾತ್ವಿಕ ಹಟದ ಬಗ್ಗೆ ಬೇರೆಯವರಿಂದ ಮತ್ತು ನನ್ನ ತಂದೆಯವರಿಂದ ಕೇಳಿದ ಮೇಲಂತೂ ಪಾಪು ನನ್ನೊಳಗೆ ತುಂಬಿಬಿಟ್ಟರು.
ನನ್ನೊಳಗೆ ತುಂಬಿದ ಈ ಹಿರಿದಾದ ಜೀವ ಹೊರ ಬರಲು ಒಂದೇ ಸಮ ತವಕಿಸುತ್ತಿತ್ತು.
ಆಗ ನನ್ನದು ಎಂ.ಎ. ಮುಗಿದಿದ್ದರಿಂದ ಎಂ.ಫಿಲ್ ಮಾಡುವ ಯೋಚನೆ. ಮೊದಲೇ ನಿರ್ಧರಿಸಿಕೊಂಡಂತೆ ಡಾ. ಪಾಟೀಲ ಪುಟ್ಟಪ್ಪ ಮತ್ತು ಕನ್ನಡ ಎಂಬ ಶಿರ್ಷಿಕೆ ಅಡಿಯಲ್ಲಿ ಎಂ.ಫಿಲ್ ವ್ಯಾಸಾಂಗ ಕೈಗೊಂಡೆ. ಇದಕ್ಕೂ ಪೂರ್ವದಲ್ಲಿ ನನ್ನ ಸಂಶೋಧನಾ ಮಾರ್ಗದರ್ಶಕರಾದ ನಾಡಿನ ನುರಿತ ಜಾನಪದ ವಿದ್ವಾಂಸ ಡಾ. ವೀರಣ್ಣ ದಂಡೆಯವರು ಕೂಡ ನನಗಿಂತಲೂ ಹೆಚ್ಚಿನ ಆಸಕ್ತಿ ತೋರಿಸಿ ಪಾಪು ಅವರ ಹಿರಿದಾದ ವ್ಯಕ್ತಿತವವನ್ನು ಕಿರಿದರಲ್ಲಿ ಹಿಡಿದಿಡುವ ಬಗ್ಗೆ ಸಾಕಷ್ಟು ಮಾರ್ಗದರ್ಶನ ಮಾಡಿ ನನ್ನಿಂದ ಈ ಕಿರು ಪ್ರಬಂಧ ಹೊರ ಬರುವಂತೆ ಮಾಡಿದರು.
ತರುವಾಯ ಪಾಪು ಬದುಕು ಬರಹ ಕುರಿತಾಗಿ ಪಿಎಚ್.ಡಿ. ಮಾಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಾಪು ಅವರ ಒಪ್ಪಿಗೆ ಪತ್ರ ಬೇಕಾಗಿತ್ತು. ಹೆಸರು ನೋಂದಾಯಿಸುವುದಕ್ಕೆ ಒಂದೇ ದಿನ ಬಾಕಿಯಿದ್ದಾಗ, ಪಾಪು ಅವರಿಗೆ ಫೋನ್ ಮಾಡಿದೆ. ಅದೇ ವೇಳೆಯೇ ಹುಬ್ಬಳ್ಳಿಯ ಪ್ರಪಂಚ ಪತ್ರಿಕಾ ಕಚೇರಿಯಲ್ಲಿ ಕುಳಿತು ಒಪ್ಪಿಗೆ ಪತ್ರ ಬರೆದು ಸ್ವತಃ ತಾವೇ ಬಸ್ ನಿಲ್ದಾಣಕ್ಕೆ ಬಂದು ಬಸ್ ಚಾಲಕನ ಕೈಯಲ್ಲಿ ಪತ್ರವನ್ನು ಕೊಟ್ಟು, ನನಗೆ ಫೋನ್ ಮಾಡಿ ತಿಳಿಸಿದ್ದು ನನಗಿನ್ನೂ ನೆನಪಿದೆ.
ಆದರೆ ಆಲಸಿತನ ಮತ್ತು ಅನಿವಾರ್ಯ ಕಾರಣಗಳಿಂದ ಆಗ ಪಿಎಚ್.ಡಿ ಮುಂದುವರಿಸಲಾಗಲಿಲ್ಲ. ನಂತರದ ದಿನಗಳಲ್ಲಿ ಅವರ ಕುರಿತಾಗಿಯೇ ಪಿಎಚ್.ಡಿ ಮಾಡಬೇಕೆನ್ನುವಷ್ಟರಲ್ಲಿ ಧಾರವಾಡ ವಿವಿಯಲ್ಲಿ ಈ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ ಎಂಬುದನ್ನು ಕೇಳಿ ಸುಮ್ಮನಾದೆ.
ಇದಾಗಿ ಸುಮಾರು ಹತ್ತೆಂಟು ವರ್ಷಗಳಾಗಿವೆ. ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕ/ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಹುಬ್ಬಳ್ಳಿಗೆ ವರ್ಗವಾಯಿತು. ಆ ಸಂದರ್ಭದಲ್ಲಿ ಪಾಪು ಅವರ ಮನೆಗೆ ಹೋದಾಗ ಅವರ ಪತ್ನಿ ಇಂದುಮತಿ ತಾಯಿ ಹಾಗೂ ಅವರು ಇಬ್ಬರೂ ಒಂದೆಡೆ ಕುಳಿತಿದ್ದರು.
ಅಪ್ಪನ (ಲಿಂಗಣ್ಣ ಸತ್ಯಂಪೇಟೆ) ಸಾವಿನ ಕುರಿತಾದ ತನಿಖೆಯ ಬಗ್ಗೆ ವಿಚಾರಿಸಿದರು. ಆ ಸಂದರ್ಭದಲ್ಲಿ ಗುಲ್ಬರ್ಗ-ಹುಬ್ಬಳ್ಳಿಯಿಂದ ಶುರುವಾದ ಅವರ ಮಾತುಗಳು ಮತ್ತೆ ಕರ್ನಾಟಕ ಏಕೀಕರಣ, ಭಾರತದ ಸ್ವಾತಂತ್ರ್ಯದ ಕಡೆಗೆ ತಿರುಗಿದವು.
ಆಗಾಗ ಮನೆಗೆ ಬರುತ್ತಿರು ಎಂದು ನನಗೆ ಹೇಳಿದರು. ಆದರೆ ನಾನೇ ಹುಬ್ಬಳ್ಳಿಯಲ್ಲಿ ಬಹಳ ದಿನ ಉಳಿಯಲಿಲ್ಲ. ಇದಾಗಿ ಎರಡು ತಿಂಗಳಾಗಿರಬೇಕು ಅವರ ಪತ್ನಿ ಇಂದುಮತಿಯವರು ಸಾವನ್ನಪ್ಪಿದ (02-10-2013) ಸುದ್ದಿ ಕೇಳಿ ತುಂಬಾ ವ್ಯಥೆ ಆಯಿತು.
98ರ ಈ ಇಳಿ ವಯಸ್ಸಿನಲ್ಲೂ ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. (16-03-2020) ನಿಧನರಾದ ಸುದ್ದಿ ಕೇಳಿ ತೀರಾ ಹತ್ತಿರದಿಂದ ಬಲ್ಲ ನನಗೆ ಅವರ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…