ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಾಟ್‍ಸ್ಪಾಟ್ ರಾಜ್ಯಗಳೆಂದು ಗುರುತಿಸಲಾಗಿರುವ ಮಹಾರಾಷ್ಟ್ರ, ತೆಲಂಗಾಣ ಹಾಗೂ ಹೊರ ಜಿಲ್ಲೆಗಳಿಂದ ಕಲಬುರಗಿ ಜಿಲ್ಲೆಗೆ ಬರುವ ಜನರನ್ನು ತಡೆಯಬೇಕು. ಒಂದು ವೇಳೆ ಕದ್ದುಮುಚ್ಚಿ ಒಳಗೆ ಬರುವಂತಹ ಜನರÀನ್ನು ಆಯಾ ತಾಲ್ಲೂಕಿನ ಹಾಸ್ಟೆಲ್‍ಗಳಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಾಂಟೈನ್‍ನಲ್ಲಿಡುವಂತೆ ಕಲಬುರಗಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಕೋವಿದ್-19 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕರೆದಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ತಾಲ್ಲೂಕಿನ ಮೊರಾರ್ಜಿ ವಸತಿ ಶಾಲೆ ಮತ್ತಿತರ ವಸತಿ ನಿಲಯಗಳನ್ನು ಗುರುತಿಸಬೇಕು. ಪ್ರತಿನಿತ್ಯ ಹೊರಗಿನಿಂದ ಬರುವವರನ್ನು 14 ದಿನ ಪ್ರತ್ಯೇಕವಾಗಿಟ್ಟು ನಿಗಾವಹಿಸಬೇಕು ಎಂದು ತಿಳಿಸಿದರು.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಮಾತನಾಡಿ, ಪ್ರತಿದಿನ ಹೊರರಾಜ್ಯದಿಂದ ಜನರನ್ನು ಜಿಲ್ಲೆಯಲ್ಲಿ ಬಿಟ್ಟುಕೊಂಡರೆ, ಕೆಲವೇ ದಿನಗಳಲ್ಲಿ ಕಲಬುರಗಿ ಚೀನಾದ ವುಹಾನ್ ನಗರದಂತೆ ಹಾಟ್‍ಸ್ಪಾಟ್ ಆದರೂ ಅಚ್ಚರಿಯಿಲ್ಲ. ಹಾಗಾಗಿ ಕಲಬುರಗಿ ಜಿಲ್ಲೆಗೆ ಸೇರಿದವರು ಪ್ರಸಕ್ತ ಎಲ್ಲಿದ್ದಾರೋ ಅಲ್ಲಿಯೇ ಇರಲಿ, ಅಲ್ಲಿಯ ಅಧಿಕಾರಿಗಳ ಜೊತೆ ಮಾತನಾಡಿ, ಊಟ ಮತ್ತು ವಸತಿ ಕಲ್ಪಿಸೋಣ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ ಅವರು, ಕ್ವಾರಾಂಟೈನ್‍ಗಾಗಿ ಈಗಾಗಲೇ ವಸತಿ ನಿಲಯಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶರತ್. ಬಿ ಅವರು, ಹಿರಿಯ ಅಧಿಕಾರಿಗಳು ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಸಂದರ್ಭದಲ್ಲಿ ಈಗ ಜನ ಎಲ್ಲಿ ಇರುತ್ತಾರೋ ಅಲ್ಲಿಯೇ ಇರಬೇಕು. ಯಾರನ್ನು ಜಿಲ್ಲೆಯ ಒಳಗಡೆ ಬಿಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ಅದರೆ, ಬೇರೆಡೆಯಿಂದ ಜನರು ಬರುವುದು ಮಾತ್ರ ನಿಲ್ಲುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದಕ್ಕೆ ಧ್ಚನಿಗೂಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ 500-600 ಕಿಲೋ ಮೀಟರ್ ದೂರದಿಂದ ಬರುತ್ತಾರೆ. ಒಂದು ವೇಳೆ ಜಿಲ್ಲೆಯ ಗಡಿಯಲ್ಲಿ ತಡೆದರೂ, ಹೊಲಗಳ ಮಧ್ಯೆ ಕಾಲುದಾರಿಗಳಲ್ಲಿ ಅವರವರ ಊರು ಸೇರಿಕೊಳ್ಳುತ್ತಾರೆ ಎಂದು ವಿವರಿಸಿದರು.
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ. ಪ್ರಸಾದ್ ಮಾತನಾಡಿ, ಬೇರೆಡೆಯಿಂದ ಬರುವÀವರನ್ನು ದಾರಿಮಧ್ಯೆಯೇ ತಡೆದು, ಆಯಾ ಜಿಲ್ಲೆಗಳು ಅವರನ್ನು ಕ್ವಾರಾಂಟೈನ್ ಮಾಡಬೇಕು. ಅದರೆ, ಈ ಕೆಲಸ ಮಾಡುತ್ತಿಲ್ಲವಾದ್ದರಿಂದ ಜನತೆ ತಮ್ಮ-ತಮ್ಮ ಹಳ್ಳಿಗಳಿಗೆ ಬರುತ್ತಾರೆ. ಇಂತಹವರ ಹೆಸರು ಮತ್ತು ಮೊಬೈಲ್ ನಂಬರ್‍ಗಳನ್ನು ಸಂಗ್ರಹಿಸಬೇಕು. ಪೊಲೀಸರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ನಿತ್ಯ ಗ್ರಾಮಗಳಿಗೆ ಭೇಟಿ ನೀಡಿ, ಹೊಸದಾಗಿ ಬರುವವರ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.
ಕಲಬುರಗಿ ನಗರ ಪೊಲೀಸ್ ಅಯುಕ್ತ ಸತೀಶ್ ಕುಮಾರ್ ಅವರು ಮಾತನಾಡಿ, ಆರೋಗ್ಯ ಮತ್ತಿತರ ಅನಿವಾರ್ಯ ಕಾರ್ಯಗಳ ನಿಮಿತ್ತ ಕೋವಿದ್ ಪಾಸ್‍ಗಳನ್ನು ಪಡೆದು ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ಹೋದವರು ಅಲ್ಲಿಯೇ ಇರಬೇಕು. ಒಂದು ವೇಳೆ ವಾಪಸ್ ಬಂದಲ್ಲಿ ಅವರನ್ನು 14 ದಿನ ಹೋಂ ಕ್ವಾರಾಂಟೈನ್‍ನಲ್ಲಿಡಲಾಗುತ್ತದೆ ಎಂದು ವಿವರಿಸಿದರು.
ವೈದ್ಯರೇ ದೇವರು: ವೈದ್ಯರು ದೇವರಿದ್ದಂತೆ, ಅದರಲ್ಲೂ ಕೋವಿದ್-19 ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುವ ಸೇವೆ ಗುರುತರವಾದುದು. ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ್ ಮುಂತಾದವರ ಒಗ್ಗೂಡಿ ಕೊರೋನಾ ವೈರಸ್ ರೋಗಿಗಳ ಗುಣಮುಖರನ್ನಾಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದ ಸಂಸದ ಉಮೇಶ್ ಜಾಧವ್ ಅವರು, ಇವರಿಗಾಗಿ 50 ಲಕ್ಷ ರೂಪಾಯಿ ವಿಮೆ ಸೌಲಭ್ಯವಿದೆ. ಇಂತಹ ಸೌಲಭ್ಯ ದೇಶದ ಸೈನಿಕರಿಗೂ ಸಹ ಇಲ್ಲ ಎಂದು ಉಲ್ಲೇಖಿಸಿ, ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ವೈದ್ಯರಿಗೂ ಕ್ವಾರಾಂಟೈನ್: ಇಎಸ್‍ಐಸಿ ಮತ್ತು ಜಿಮ್ಸ್ ಅಸ್ಪತ್ರೆಯಲ್ಲಿ ಕೋವಿದ್ -19 ಐಸೋಲೇಶನ್ ವಾರ್ಡ್‍ಗಳಲ್ಲಿ ಸೇವೆಸಲ್ಲಿಸುವ ಕೆಲ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ್ ಇನ್ನಿತರರು ಕರ್ತವ್ಯದ ಬಳಿಕ ಅವರವರ ಮನೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಸದರು, ವೈದ್ಯರು ಮತ್ತು ಸಿಬ್ಬಂದಿಯನ್ನೂ ಕ್ವಾರಾಂಟೈನ್ ಮಾಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇದಕ್ಕೆಂದೇ ಗ್ರ್ಯಾಂಡ್ ಹೊಟೇಲ್ ಕೂಡ ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಸಿಇಓ ಡಾ. ರಾಜಾ ಅವರು ಕೂಡ ಇಎಸ್‍ಐ ಆಸ್ಪತ್ರೆಯಲ್ಲಿ ಇದಕ್ಕೆಂದೇ 40 ಕೊಠಡಿಗಳನ್ನು ಗುರುತಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗೂ ಸಹ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಯಾರೂ ಕ್ವಾರಾಂಟೈನ್ ಅಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ನಿಮ್ಮ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಕ್ವಾರಾಂಟೈನ್ ಆಗಬೇಕು ಎಂದು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ಮನವಿ ಮಾಡಿದ ಅವರು, ಕೂಡಲೇ ಈ ಕುರಿತು ಕ್ರಮವಹಿಸಬೇಕು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಬ್ಬಾರ್ ಅವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೋವಿದ್-19 ರೋಗಿಗಳ ನೋಡಿಕೊಳ್ಳುತ್ತಿರುವ ವೈದ್ಯರಿಗೆ ಇಎಸ್‍ಐಸಿಯಲ್ಲಿ ಸಾಮಾನ್ಯ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಹಾರ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ವೈದ್ಯರು, ನರ್ಸ್ ಮುಂತಾದವರಿಗೆ ಪ್ರತ್ಯೇಕವಾಗಿ ಗುಣಮಟ್ಟದ ಆಹಾರ ಮತ್ತು ಉತ್ತಮ ಪರಿಸರ ಕಲ್ಪಿಸಬೇಕೆಂದು ಒತ್ತಿ ಹೇಳಿದರು.
ಪಡಿತರ ಜೊತೆಗೆ ಕೇಂದ್ರದ ಸೂಚನೆಯಂತೆ ಪ್ರತಿಕಾರ್ಡ್‍ಗೆ ಮಾಸಿಕ ಒಂದು ಕೆಜಿಯಂತೆ ಕೂಡಲೇ ಮೂರು ತಿಂಗಳು ತೊಗರಿ ಬೇಳೆ ವಿತರಿಸಲು ಕ್ರಮ ವಹಿಸಬೇಕು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಅವರು ಸೂಚಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು, ದಾಲ್ ಮಿಲ್ ಸೇರಿದಂತೆ ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಉತ್ತರ ಪ್ರದೇಶ, ಛತ್ತೀಸ್‍ಘಡ ಮುಂತಾದ ರಾಜ್ಯಗಳ ಕಾರ್ಮಿಕರು ಇದ್ದು, ಅವರಿಗೂ ಪಡಿತರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಇಂತಹ ಹೊರರಾಜ್ಯದ ಕಾರ್ಮಿಕರ ಪಟ್ಟಿ ಪಡೆದು, ಪಡಿತರ ವಿತರಣೆಗೆ ಕ್ರಮವಹಿಸಬೇಕು. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂದು ಮಾನವೀಯತೆಯ ಮಾತು ನುಡಿದರು,
ಜ್ವರದಂತಹ ಫ್ಲೂ, ಶ್ವಾಸಕೋಶ ತೊಂದರೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಕೋವಿದ್-19 ಇದೆಯೇ ಎಂಬ ಬಗ್ಗೆ ಪರೀಕ್ಷಿಸಿ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲಾ ವೈದ್ಯರಿಗೂ ಸೂಚನೆ ನೀಡಬೇಕು ಎಂದು ತಿಳಿಸಿದರು.
ಕಲಬುರಗಿ ಮಹಾನಗರ ಹಾಗೂ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿವಾರಣಾ ಔಷಧಿ ಸಿಂಪಡಿಸಬೇಕು ಹಾಗೂ ಫಾಗಿಂಗ್ ಮಾಡಬೇಕು ಎಂದು ತಿಳಿಸಿದರು.
ಕೊರೋನಾ ವೈರಸ್ ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚಳ ಕುರಿತು ಕಳವಳ ವ್ಯಕ್ತಪಡಿಸಿದ ಸಂಸದರು, ರೋಗಿಗಳ ಕೆ-ಶೀಟ್ ತರಿಸಿಕೊಂಡು ಪರಿಶೀಲನೆ ನಡೆಸಿದರು.
ಬುಧವಾರ ಕೌವಲಗಾದ ಒಂದು ವರ್ಷದ ಗಂಡು ಮಗುವಿಗೆ ಕೊರೋನಾ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಅವರ ಪ್ರವಾಸ ಪರಿಶೀಲಿಸಿದಾಗ ಇತ್ತೀಚೆಗೆ ಮಗುವಿನೊಂದಿಗೆ ತಂದೆಯೂ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ತಂದೆಗೆ ಸೋಂಕು ಇರುವುದಿಲ್ಲ. ಆದರೆ ಮಗನಿಗೆ ಸೋಂಕು ಬಂದಿರುತ್ತದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ಪಿ. ರಾಜಾ ಅವರು ಸಭೆಗೆ ಮಾಹಿತಿ ನೀಡಿದರು.
ಜಾತ್ರೆ ನಿಷೇಧ: ಚಿತ್ತಾಪುರ ತಾಲ್ಲೂಕಿನ ರಾವೂರಿನಲ್ಲಿ ನಡೆದ ರಥೋತ್ಸವ ಪ್ರಸ್ತಾಪಿಸಿದ ಸಂಸದರು, ಜಿಲ್ಲೆಯಲ್ಲಿ ಯಾವುದೇ ಜಾತ್ರೆ, ಸಭೆ-ಸಮಾರಂಭ ನಡೆಯಬಾರದು. ಜಾತ್ರೆ, ಮಹೋತ್ಸವ ನಡೆಸದಂತೆ ಪೂಜಾರಿ/ಆರ್ಚಕರಿಗೆ ತಿಳಿ ಹೇಳಬೇಕು ಎಂದು ಅವರು ಪೊಲೀಸರಿಗೆ ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮುತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಅಯುಕ್ತ ರಾಹುಲ್ ಪಾಂಡ್ವೆ, ಇಎಸ್‍ಐಸಿ ಡೀನ್ ನಾಗರಾಜ್, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ ಮುಂತಾದವರು ಹಾಜರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…