ಬಿಸಿ ಬಿಸಿ ಸುದ್ದಿ

ವಚನಗಳಲ್ಲಿ ಅಡಗಿರುವ ಬೀಜಗಣಿತ

ಕನ್ನಡ ಭಾಷೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನೂ ಇಲ್ಲ! ಕನ್ನಡ ಸಾಹಿತ್ಯದಲ್ಲಿ ವಿಜ್ಞಾನವಿದೆಯೇ? ವೈಚಾರಿಕತೆ ಅಡಗಿದೆಯೇ? ಎಂದು ಮುಂತಾಗಿ ಮೂಗು ಮುರಿಯುವ ಕಾಲವೊಂದಿತ್ತು. ಕನ್ನಡ ಕುರಿತು ಅನ್ಯ ಭಾಷಿಕರು ಕೆಲವು ಕೊಂಕು ಮಾತುಗಳನ್ನು ಸಹ ಆಡುತ್ತಿದ್ದರು. ಇಂತಹ ಅಪಾದನೆಗಳಿಗೆ ಸವಾಲು ಎಸೆಯುವವರಿಗೆ ಉತ್ತರ ಎಂಬಂತೆ ಕನ್ನಡದಲ್ಲಿ ಏನಿಲ್ಲ. ಯಾಕಿಲ್ಲ. ನಿಮಗೆ ಏನು ಬೇಕು? ಎಂದು ಅದನ್ನು ಅತ್ಯಂತ ಸಮರ್ಥವಾಗಿ ರುಜುವಾತುಪಡಿಸಿದ ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ತನ್ನದೇ ಆದ ಶ್ರೇಷ್ಠ ಕೊಡುಗೆ ನೀಡಿದೆ.

ನಾವು ಹಗಲು ರಾತ್ರಿ ದುಡಿಯುತ್ತೇವೆ. ಆದರೂ ಬದುಕಿನಲ್ಲಿ ಸುಖ, ಶಾಂತಿಯಿಲ್ಲ. ಅದಕ್ಕಾಗಿ ಮಾಡುವುದು, ನೀಡುವುದು ಮಾಡುತ್ತೇವೆ. ಆದರೆ ನೀಡಿದ ಧರ್ಮ ನಮ್ಮನ್ನು ಪ್ರಾಪಂಚಿಕ ಮೋಹ ಬಂಧನದಿಂದ ಮೇಲೆತ್ತಲಿಲ್ಲ. ಇದೆಲ್ಲ ಏಕೆ? ಹೇಗೆ? ಎಂಬುದು ಇನ್ನೂ ನಿಗೂಢವಾದ ವಿಷಯ. ಆದರೆ ಕರ್ಮಯೋಗಿಗಳಾಗಿದ್ದ ಬಸವಾದಿ ಶರಣರು ಲೋಕದ ಹಿತಕ್ಕಾಗಿ ಸಮಾಜದಲ್ಲಿ ಜಾಗೃತಿ ತುಂಬುವ ಕೆಲಸ ಮಾಡಿದರು. ಅಂತೆಯೇ ಅವರು ಸುಖದ ಜೀವನವನ್ನು ಕಂಡರು. ಸಮಾಜೋದ್ಧಾರ್ಮಿಕ ಚಿಂತಕರಾಗಿದ್ದ ಅವರು, ಆತ್ಮ ಜ್ಞಾನದ ದೀವಟಿಗೆಯನ್ನು ಉರಿಸಿದರು.

ಜನಭಾಷೆಯನ್ನು ದೇವಭಾಷೆಯನ್ನಾಗಿಸಿದ ವಚನಕಾರರು ಬದುಕಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ಶರಣರು ಬದುಕು ಹಾಗೂ ಬದುಕಿನಾಚೆಗೂ ಇರುವ ಲೋಕಗಳ ಬಗ್ಗೆ ಮಾತನಾಡಿದ್ದಾರೆ. ಭೂತ, ಭವಿಷ್ಯದ ಬಗ್ಗೆ ಮಾತನಾಡಿದ ಅವರು ವರ್ತಮಾನಕ್ಕೆ ಬಹಳ ಹತ್ತಿರವಾಗಿದ್ದಾರೆ. ವಿಜ್ಞಾನ, ಗಣಿತದಂತಹ ಕ್ಲೀಷ್ಟ ವಿಷಯಗಳ ಕುರಿತು ಸಹ ಹೌದೌದು ಎನ್ನುವಂತೆ ಮಾತನಾಡಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳ ಅರಿವಿದ್ದ ಬಸವಣ್ಣನವರು ದೀನ, ದಲಿತ, ಬಡವರ ಪಾಲಿನ ಸೂರ್ಯ. ಅವರಿವರಂತೆ ಏಕಾಂತದ ಗುಹೆಗಳಲ್ಲಾಗಲಿ, ಗಿಡದ ನೆರಳಿನಲ್ಲಾಗಲಿ ತಪಗೈಯದೆ ಜನರ ನಡುವೆಯೇ ಬಾಳಿ ಬದುಕುವ ಮೂಲಕ ಲೋಕಜ್ಞಾನವನ್ನು ಪಡೆದ ಮಹಾನ್ ಜ್ಞಾನಿ. ಎಲ್ಲೋ ಕುಳಿತು ಧ್ಯಾನ, ತಪ್ಪಸ್ಸು ಮಾಡುವುದರಿಂದ ಜನರ ಸಂಕಷ್ಟಗಳಿಗೆ ಪರಿಹಾರ ದೊರೆಯುವುದಿಲ್ಲ. ಜೀವನ ಒಂದು ರಣರಂಗ. ಅದನ್ನು ಜೀವಿಸುವ ಮೂಲಕ ಗೆಲ್ಲಬೇಕು ಎಂಬ ಗಟ್ಟಿಯಾದ ನಿಲುವು ಬಸವಣ್ಣನವರದಾಗಿತ್ತು.

ನಾವು ಮಾಡುವ ಕಾಯಕ ಸತ್ಯಶುದ್ಧವಾಗಿರಬೇಕು. ಸತ್ಯಶುದ್ಧ ಕಾಯಕದಿಂದ ಮಾತ್ರ ದೇವರ ಒಲವು ಕಟ್ಟಿಟ್ಟ ಬುತ್ತಿ ಎಂಬದನ್ನು ಅರಿತಿದ್ದ ಅವರು, ನಾವು ಯಾವ ಕಾರ್ಯವನ್ನು ಮಾಡಿದರೂ ಒಮ್ಮನಸ್ಸಿನಿಂದ ಮಾಡಬೇಕು. ನಾವು ಮಾಡುವ ಕಾಯಕದಲ್ಲಿ ಒಂದುವೇಳೆ ಮನಸ್ಸು ಚಂಚಲತೆಗೆ ಒಳಗಾದರೆ ಆ ಕಾಯಕ ಫಲ ನೀಡುವುದಿಲ್ಲ. “ಮನಸ್ಸಿದ್ದಲ್ಲಿ ಮಾರ್ಗ ಉಂಟು” ಎಂಬುದನ್ನು ಅವರು ಅರಿತಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಅರ್ಥ ಮಂತ್ರಿಯಾಗಿದ್ದ ಅವರು ಸೂಕ್ಷ್ಮ ಸಂವೇದನಾಶೀಲರಾಗಿದ್ದರು.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳೊಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ

ನಾವು ಮಾಡುವ, ನೀಡುವ ಕೆಲಸ ಮನಸ್ಸಿನಿಂದ ನಿಜೈಕ್ಯವಾಗಿರಬೇಕು. ಅಂದಾಗ ಮಾತ್ರ ಕೂಡಲಸಂಗಮನ ಸನ್ನಿಧಾನ ಸಾಧ್ಯ ಎಂದು ಮೇಲ್ನೋಟಕ್ಕೆ ತಿಳಿಸುವಂತಿರುವ ಈ ವಚನದಲ್ಲಿ ಸಂಕಲನ, ವ್ಯವಕಲನದಂತಹ ಗಣಿತ ಭಾಷೆ ಅಡಗಿದೆ ಎಂದು ಹೇಳಿದರೆ ಥಟ್ಟನೆ ನಮಗೆ ಹೊಳೆಯವುದೇ ಇಲ್ಲ. ಯಾರೂ ಇದನ್ನು ಒಪ್ಪುವುದಿಲ್ಲ ಕೂಡ. ಆದರೆ ಸೂಕ್ಷ್ಮವಾಗಿ ಗ್ರಹಿಸಿದರೆ ಇದರಲ್ಲಿನ ಗಣಿತ ಭಾಷೆ ಅರ್ಥವಾಗಬಲ್ಲುದು.

ಮಾಡಿ+ ಮಾಡಿ-ಮನವಿಲ್ಲದೆ= ಕೆಟ್ಟರು
ನೀಡಿ+ ನೀಡಿ-ನಿಜವಿಲ್ಲದೆ= ಕೆಟ್ಟರು
ಮಾಡುವ+ನೀಡುವ+ನಿಜಗುಣವುಳ್ಳೊಡೆ= ಕೂಡಿಕೊಂಬ ಕೂಡಲಸಂಗಮದೇವ

ಕೂಡಿಸುವ, ಕಳೆಯುವ ಲೆಕ್ಕದ ಜೊತೆಗೆ ಕೂಡಲಸಂಗಮದೇವ ಯಾರಿಗೆ ಒಲಿಯುತ್ತಾನೆ? ಎಂಥವರನ್ನು ಆತ ಕೂಡುತ್ತಾನೆ ಎಂದು ಹೇಳುತ್ತಾರೆ. ಅದಕ್ಕಾಗಿ ನಾವು ನಿರ್ಮಲ ಮನಸ್ಸಿನಿಂದ ಮಾಡುವುದನ್ನು, ನೀಡುವುದನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಬಸವಣ್ಣನವರ ಈ ವಚನ ಅವರಲ್ಲಿನ ಒಬ್ಬ ಗಣಿತಜ್ಞನನ್ನು ನಮಗೆ ಪರಿಚಯ ಮಾಡಿಸುತ್ತದೆ. ಕೂಡಿಸುವುದು, ಕಳೆಯುವುದು ಒತ್ತಟ್ಟಿಗಿರಲಿ ಗಣಿತ ಎಂಬುದು ಏನೆಂಬುದೇ ನಮಗೆ ಗೊತ್ತಾಗದೆ ಇರುವ ಕಾಲದಲ್ಲಿ ಬೀಜಗಣಿತದ ಅಂಶಗಳನ್ನು ಸೇರಿಸಿ ವಚನ ರಚನೆ ಮಾಡಿರುವುದು ಬಸವಣ್ಣನವರ ವಿಶೇಷ ಎಂದು ಹೇಳಬಹುದು.

ಕೂಡಿಸಿ, ಕಳೆದಾಗ ಬರುವ ಉತ್ತರವೇ ನಾವು ಜೀವನದಲ್ಲಿ ಪಡೆದುಕೊಳ್ಳುವ ಉತ್ತರ ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ಮಾಡಿದೆನೆಂಬುದು, ನೀಡಿದೆನೆಂಬುದು ಮನದಲ್ಲಿ ಹೊಳೆದರೆ ಅಂಥವರ ಬಳಿ ಕೂಡಲಸಂಗಮದೇವ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದ ಬಸವಣ್ಣನವರು ಅಂಥವರನ್ನು ಶಿವನ ಡಂಗುರ ಏಡಿಸಿ ಕಾಡುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ದೇವರು ಅನ್ನ, ವಸ್ತ್ರ, ಒಡವೆ, ವೈಭವ ಏನೆಲ್ಲ ಕೊಟ್ಟರೆ ಮಾತ್ರ ನಾವು ಸಂತುಷ್ಟರಾಗಿರುತ್ತೇವೆ. ಆದರೆ ಕೊಡದಿದ್ದರೆ ದುಃಖಿತರಾಗುತ್ತೇವೆ. ಆದರೆ ನಾವು ಮಾಡುವ, ನೀಡುವ ಕಾಯಕದಲ್ಲಿ ತಪ್ಪಿದ್ದೆಲ್ಲಿ ಎಂಬುದನ್ನು ಯೋಚಿಸುವುದೇ ಇಲ್ಲ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago