ಜಗತ್ತಿನಾದ್ಯಂತ ಇಂದು ‘ಕೊರೊನಾ’ ಎಂಬ ಕರಾಳ ಕತ್ತಲು ಆವರಿಸಿರುವುದರಿಂದ ಎಲ್ಲೆಲ್ಲೂ ಪಕ್ಷಿಗಳ ಕಲರವ ಕೇಳಿ ಬರುತ್ತಿದೆ. ಪ್ರಕೃತಿಯಲ್ಲಿನ ಗಿಡ-ಮರಗಳು ನಳನಳಿಸುತ್ತಿವೆ. ನೀರು ಸ್ವಚ್ಛವಾಗಿದೆ, ನಿಲಾಕಾಶ ನಿರಾಳವಾಗಿದೆ. ಪ್ರಕೃತಿ ಸ್ವಚ್ಛಂದವಾಗಿ ಹಸಿರು ಸಿರೆಯನ್ನುಟ್ಟು ಸುಂದರವಾಗಿ ಕಾಣುತ್ತಿದ್ದಾಳೆ. ಇಂತಹ ಒಂದು ಸೊಬಗನ್ನು ನಾವು ಕಣ್ಣು ತುಂಬಿಕೊಳ್ಳುವುದೇ ಆನಂದ. ರಸ್ತೆಗಳು ಬಿಕೋ ಎನ್ನುತ್ತಿದ್ದರೂ ಪ್ರಾಣಿ, ಪಕ್ಷಿಗಳು ಯಾವುದೇ ದಿಗ್ಬಂಧನವಿಲ್ಲದೇ ರಾಜಾರೋಷವಾಗಿ ರಸ್ತೆಗಿಳಿದು ಓಡಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಆದರೆ ಮನುಷ್ಯ ಮಾತ್ರ ಕಣ್ಣಿಗೆ ಕಾಣದ ವೈರಾಣುವಿಗೆ ಹೆದರಿ ಗೃಹ ಬಂಧನದಲ್ಲಿ ಅಡಗಿ ಕುಳಿತಿದ್ದಾನೆ. ಹಿಂದಿನ ಕಾಲದ ಹಳೆಯ ಸಂಪ್ರದಾಯಗಳೇ ಮತ್ತೆ ಮರಳಿ ಬಂದಿರುವುದು ಗಮನಾರ್ಹವಾಗಿದೆ. ಹೊರಗಿನಿಂದ ಬಂದ ತಕ್ಷಣ ಕೈ-ಕಾಲು ತೊಳೆದುಕೊಳ್ಳವುದು ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಡುವಂತೆ ಮಾಡಿದೆ. ಕೈ, ಕಾಲು, ಕಣ್ಣು, ಮೂಗು ಮೇಲಿಂದ ಮೇಲೆ ಸ್ವಚ್ಛವಾಗಿಟ್ಟುಕೊಂಡು ಮನೆಯಲ್ಲಿಯೇ ಇದ್ದರೆ ಕೊರಾನಾ ನಮ್ಮಲ್ಲಿಗೆ ಬರುವುದಿಲ್ಲ. ಹಾಗಾಗಿ ಮನೆಯೇ ಮಹಾಮನೆಯಾಗಿದೆ. ಲಾಕ್ ಡೌನ್‌ನಿಂದ ಹೆಚ್ಚಿನ ಸಮಯ ಮನೆಯವರ ಜೊತೆ ಕಳೆಯುವಂತಾಗಿದೆ.
ಸರಸ, ವಿರಸ ಎರಡನ್ನೂ ಸಮವಾಗಿ ಅನುಭವಿಸುತ್ತ ಮಕ್ಕಳ ಜೊತೆ ಮಕ್ಕಳಾಗಿ ಆಟ, ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅವರೊಡನೆ ಭಾಗಿಯಾಗಿ ಹೊಸ ವಿಷಯಗಳ ಪರಿಚಯ ಕೂಡ ಆದಂತಾಗಿದೆ. ಮಕ್ಕಳ ಕಿರಿ ಕಿರಿ, ಜಿದ್ದು, ಮೊಬೈಲ್, ಟಿವಿ ಮುಂದೆ ಕುಳಿತುಕೊಂಡೇ ಇರುವುದು ನೋಡಿ ಒಂದೊಂದು ಸಲ ಬಹಳ ಬೇಜಾರು ಆಗುತ್ತದೆ. ಆದರೂ ಒಬ್ಬ ತಾಯಿಯಾಗಿ ಸಹನೆ, ತಾಳ್ಮೆಯಿಂದ ಇರ್ತೀವಿ. ಇಡೀ ದಿವಸ ವಿಶ್ರಾಂತಿಯಿಲ್ಲದೆ ಗಂಡ, ಮಕ್ಕಳಿಗೆ ವಿವಿಧ ಬಗೆಯ ತಿಂಡಿ ತನಿಸುಗಳನ್ನು ಮಾಡಿ ಪಾತ್ರೆಗಳನ್ನು ತೊಳೆಯುತ್ತ, ಬಟ್ಟೆ ಒಗೆಯುತ್ತ, ನೆಲ ಒರೆಸುತ್ತ ಹೀಗೆ ದಿನದ ಕಾಯಕ ಮಾಡುವಲ್ಲಿ ನಿರತಳಾದ ಗೃಹಿಣಿಯ ಪಾಡು ಕೇಳುವವರು ಯಾರು? ಈ ಲಾಕ್ ಡೌನ್‌ನಿಂದಾಗಿ ಅವಳಿಗೆ ವಿಶ್ರಾಂತಿಯಿಲ್ಲದೆ ಕೆಲವೊಮ್ಮೆ ಜಿಗುಪ್ಸೆ ಕೂಡ ಬಂದಿರುವುದುಂಟು. ಅಂತೆಯೇ ಈ ಲಾಕ್ ಡೌನ್ ಯಾವಾಗ ಮುಗಿಯುತ್ತದೆ ಅಂತ ಚಾತಕಪಕ್ಷಿಯಂತೆ ಕಾದು ಕುಳಿತಿದ್ದೇವೆ.
ಮೇಲಿನದೆಲ್ಲವೂ ಒಂದು ಬಗೆಯಾದರೆ ಮುಂದೇನು? ಎಂಬ ಪ್ರಶ್ನೆ ಗಂಭೀರವಾಗಿ ನಮ್ಮನ್ನೆಲ್ಲ ಕಾಡುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸ್ತೀವಿ? ಮಕ್ಕಳ ಶಿಕ್ಷಣದ ಖರ್ಚಿಗೆ ಏನು ಮಾಡಬೇಕು? ಹೀಗೆ ಹತ್ತು ಹಲವಾರು ಚಿಂತೆಗಳು ಕಾಡುತ್ತಿವೆ. ಹೊರಗೆ ಹೋಗಿ ದುಡಿಯುವಂತಿಲ್ಲ, ಒಳಗೆ ಉದ್ಯೋಗವಿಲ್ಲದೆ ಹೇಗೆ ಕುಳಿತುಕೊಳ್ಳುವುದು? ಮುಂದೆ ಸಂಸಾರದ ಬಂಡಿ ಹೇಗೆ ಸಾಗಿಸುವುದು ಎಂಬ ಪ್ರಶ್ನೆ ಒಂದೇ ಸಮ ನಮ್ಮನ್ನು ಕಾಡುತ್ತಿದೆ.
ಇದೇವೇಳೆಯಲ್ಲಿ ಮುಂದಿನ ದಿನಗಳು ಹೇಗೋ ಏನೋ ಈಗ ಇದ್ದುದರಲ್ಲಿಯೇ ಕಾಯ್ದಿಟ್ಟುಕೊಂಡು ಸರಳ ಜೀವನ ನಡೆಸಬೇಕು ಎಂಬ ಎಚ್ಚರಿಕೆಯ ಪಾಠ ಕೂಡ ಕಲಿಸಿದೆ. ಪ್ರಕೃತಿ ಸ್ವಚ್ಛವಾದಂತೆ ಮಾನವನ ಅಂತರಂಗದಲ್ಲಿರುವ ಮಾಲಿನ್ಯ ಸ್ವಚ್ಛವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಹೋಗುವುದರ ಜೊತೆಗೆ ಉಳಿಸಿಕೊಂಡು ಹೋಗುವ ಪ್ರಜ್ಞೆ ನಮ್ಮಲ್ಲಿ ಬರಬೇಕು. ಇತ್ತೀಚಿಗಂತೂ ಮಾನವ ಒಬ್ಬರಿಗಿಂತ ಒಬ್ಬರು ನಾ ಮೇಲು, ನೀ ಮೇಲು, ಒಬ್ಬರನ್ನು ಕಂಡರೆ ಒಬ್ಬರಿಗೆ ದ್ವೇಷಾಸೂಹೆ, ಜಿಗುಪ್ಸೆ ಎಲ್ಲರಲ್ಲೂ ತಾಂಡವವಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಹಂ ಭಾವನೆ ಬಿಟ್ಟು ‘ನಾವು- ನಮ್ಮವರು’ ಎಂದು ಹೊಂದಾಣಿಕೆ ಮಾಡಿಕೊಂಡು ಬದುಕಬೇಕು ಎಂಬುದನ್ನು ನೆನಪಿಸುತ್ತಿದೆ.
ದುಷ್ಚಟಗಳ ದಾಸರಾಗದೆ ಅವುಗಳನ್ನು ವರ್ಜಿಸುವ ಮೂಲಕ ನಮ್ಮ ಆರೋಗ್ಯವನ್ನ ಹೇಗೆ ಉತ್ತಮವಾಗಿಟ್ಟುಕೊಳ್ಳಬೇಕು ಎಂಬುದನ್ನು ಮನಗಾಣಿಸಿದೆ. ಪಿಜ್ಜಾ, ಬರ್ಗರ್, ಜಂಕ್ ಫುಡ್ಸ್, ಕೋಲ್ಡ್ಡ್ರಿಂಕ್ಸ್ ಇಲ್ಲದೆಯೂ ಕೂಡ ಬದುಕಬಹುದು ಎಂಬುದಕ್ಕೆ ಈ ಲಾಕ್ ಡೌನ್ ಸಮಯ ಒಳ್ಳೆಯ ನಿದರ್ಶನವಾಗಿದೆ. ರಜೆಯ ವೇಳೆಯಲ್ಲಿ ಸಿನಿಮಾ, ಟೂರ್, ಶಾಪಿಂಗ್ ಹೋಗುವ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದೆ. ಆಹಾರದ ಬೆಲೆ, ಸಮಯದ ಬೆಲೆ, ಸಂಬಂಧಗಳ ಬೆಲೆ ಮನದಟ್ಟಾಗಿಸಿದೆ. ಇಂತಹ ಒಂದು ಸಮಯ ಮತ್ತೆ ಎಂದಿಗೂ ಬರುವುದಿಲ್ಲ. ಬರಬಾರದು ಕೂಡ. ಆದರೆ ಇಂತಹ ಕ್ಲೀಷ್ಟಕರ ಸಮಯದ ಸದುಪಯೋಗ ಮಾಡಿಕೊಂಡವನೇ ಜಾಣನಾಗುತ್ತಾನೆ.
ಕೊರೊನಾ ಎಂಬ ವೈರಾಣುವಿನಿಂದ ತಲ್ಲಣ, ತಳಮಳಗೊಂಡಿರುವ ಈ ಜಗತ್ತಿನ ಜನರ ಸುರಕ್ಷತೆಗಾಗಿ ವೈದ್ಯರು, ಪೊಲೀಸರು, ಮಾಧ್ಯಮದವರು, ನರ್ಸ್,ಆಶಾ ಕಾರ್ಯಕರ್ತೆಯರು ಮುಂತಾದ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ಮಾಡಿದ್ದಾರೆ. ಇವರಿಗೆ ನನ್ನ ಹೃಯಪೂರ್ವಕ ಅಭಿನಂದನೆಗಳು. ಕರುಣೆಯಿಲ್ಲದ ಕೊರೊನಾ ಹಿಮ್ಮೆಟ್ಟಿಸಲು ಸದ್ಯಕ್ಕೆ ಎಚ್ಚರಿಕೆಯೊಂದೇ ಅಸ್ತ್ರ. ಸಕಲ ಜೀವಾತ್ಮರಿಗೆ ಲೇಸಾಗಲಿ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…