ಮುಂದೆ ಸಡಗರ ನೋಡರಿ.. ಯಡರಾಮಿ.. ಎಂದು ನಮ್ಮ ಕಡಕೋಳ ಮಡಿವಾಳಪ್ಪನವರ ಸಮಕಾಲೀನ ಅನುಭಾವಿ ಕವಿ ಖೈನೂರು ಕೃಷ್ಣಪ್ಪ ಹಾಡಿ ಹರಸಿದ ಊರು ಯಡ್ರಾಮಿ. ಒಂದು ವರುಷದ ಹಿಂದೆಯೇ ಯಡ್ರಾಮಿ ತಾಲೂಕು ಕೇಂದ್ರವಾಗಿ ಖೈನೂರು ಕೃಷ್ಣಪ್ಪ ಕವಿಯ ಹಾರೈಕೆ ಖರೇ ಖರೇ ಈಡೇರಿದಂತಾಗಿದೆ.
ಸುತ್ತ ಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಊರು ಯಡ್ರಾಮಿ. ನಮ್ಮ ಊರಿನಂತಹ ಹತ್ತು ಹಲವು ಹಳ್ಳಿಗಳ ಎಲ್ಲ ಬೆಳವಣಿಗೆಗೆ ಈ ಊರು ನಮಗೊಂದು ಬಗೆಯ ರೋಲ್ ಮಾಡೆಲ್. ಈ ಊರಿನ ಸಂತೆ ನಾನು ಪ್ರಕಟಿಸಿದ ಹಲವಾರು ಕತೆಗಳಲ್ಲಿ ಪ್ರಸ್ತಾಪಗೊಂಡಿದೆ. ಸಂತೆಯ ಉಸ್ತುವಾರಿಗಳಂತಿರುವ ಈ ಊರಿನ ವಣಿಕರೆಲ್ಲ ಸಾಹುಕಾರರೆಂಬ ಬಿರುದಾಂಕಿತರು.
ಅಂತೆಯೇ ಹಸುಗೂಸುಗಳ ಕಿವಿಗಳಿಗೆ ಆಗ ಮುರುವು ಚುಚ್ಚುತ್ತಿದ್ದ ಅಕ್ಕಸಾಲಿಗರ ಕಲ್ಲಪ್ಪನವರನ್ನು ನಾವೆಲ್ಲ ಕಲ್ಲಪ್ಪ ಸಾಹುಕಾರನೆಂತಲೇ ಕರೀತಿದ್ವಿ. ಅವರು ಆಗ ಆಯ್ದ ಕೆಲವು ಕಾಯಿಲೆಗಳಿಗೆ ಪೆಟೆಂಟ್ ಔಷಧಿ ನೀಡುತ್ತಿದ್ದ ನೆನಹು ನನ್ನದು.
ಹೇಳಲೇಬೇಕಾದ ಮತ್ತೊಂದು ಸಂಗತಿ ಎಂದರೆ.. ಪತರಾಸು ಹಾಕಿದ ಕಲ್ಲಪ್ಪ ಸಾಹುಕಾರರ ಮನೆಯ ಮುಂಚಾವಣಿ ಪ್ರವೇಶಿಸುತ್ತಿದ್ದಂತೆ ಅವರು ಸಾಕಿದ ಪಂಜರದ ಅರಗಿಳಿಗಳ ಮುದ್ದು ಮುದ್ದಾದ ಸ್ವಾಗತ.. ಕುಶಲೋಪರಿಯ ಕಚಗುಳಿ. ಆ ಗಿಣಿಮಾತುಗಳೆಂದರೆ ನನಗೆ ಕೌತುಕವೇ ಕೌತುಕ.
ಅಷ್ಟಕ್ಕು ನಾನು ಯಡ್ರಾಮಿ ಸಂತೆ ನೋಡಿದ್ದು ಮೂರನೇ ಈಯತ್ತೆ ಸೇರಿದ ಮೇಲೆ. ಅದುವರೆಗೆ ಯಡ್ರಾಮಿ ಸಂತೆ ಕುರಿತು ನನ್ನ ವಾರಗೆಯವರಲ್ಲಿ ಕುತೂಹಲ ಭರಿತ ಕತೆಗಳು.
” ಅಲ್ಲಿ ರುದ್ರಯ್ಯ ಮುತ್ಯಾನ ಹೋಟೆಲ್.. ಸಾಲಿ ಕಲಿಯುವ ಹುಡುಗರಿಗೆ ಪುಗಸಟ್ಟೆಯಾಗಿ ಪೂರಿ ಕೊಡ್ತಾರಂತೆ.. ಚಟ್ನಿಗೆ ಕೇಳಿದಷ್ಟು ಸಕ್ರೆ ಹಾಕ್ತಾರಂತೆ.. ಮಲ್ಲೇದ ನಿಂಗಪ್ಪ ಸಾಹುಕಾರ ಅಂಗಡಿಯಲ್ಲಿ ದೊಡ್ಡವರ ಸೈಜಿನ ರೆಡಿಮೇಡ್ ಅಂಗಿಗಳಿರ್ತಾವಂತೆ , ಇನ್ನೂ ಅನೇಕ ಅಂಗಡಿಗಳ ಕುರಿತಾಗಿ ಚಮತ್ಕಾರದ ಚರ್ಚೆಗಳು. ಮೂರಂತಸ್ತಿನ ಫರ್ತಬಾದಿಯವರ ಬಿಗ್ ಬಜಾರ ” ನೋಡುವುದೇ ಆಗಿನ ನಮ್ಮ ಬಹುದೊಡ್ಡ ಕನಸು.
ಎರಡನೇ ಈಯತ್ತೆವರೆಗೂ ನಮ್ಮಪ್ಪ ನನಗೆ ಯಡ್ರಾಮಿ ಬಯಲು ಸಂತೆಯ ಬಟ್ಟೆ ಗಂಟುಗಳ ಮಮ್ಮಣಿಗರ ಬಳಿ ತರುತ್ತಿದ್ದ ಉದ್ದನೆ ಕಮೀಜದಂತಹ ಅಂಗಿ ನನ್ನ ಮರ್ಯಾದೆ ಕಾಪಾಡುತ್ತಿತ್ತು.
ಯಾಕಂದ್ರೆ ಅಪ್ಪ ಚೆಡ್ಡಿ ತರುತ್ತಿರಲಿಲ್ಲ. ಹೀಗಾಗಿ ನಾನು ಚೆಡ್ಡಿ ತೊಡಲು ಆರಂಭಿಸಿದ್ದು ಮೂರನೇ ಈಯತ್ತೆ ಸೇರಿದ ಮೇಲೆಯೇ. ಮೆಟ್ರಿಕ್ ಓದುವಾಗ ಅಪ್ಪ ಟೈರ್ ಚಪ್ಪಲಿ ಕೊಡಿಸಿದ್ದರು. ನನ್ನ ಜೀವನದ ಮೊದಲ ಪಾದರಕ್ಷೆಗಳಾದ ಆ ಟೈರ್ ಚಪ್ಪಲಿಗಳು ಕಳೆದು ಹೋದ ಕತೆ ಇನ್ನೊಮ್ಮೆ ಹೇಳುವೆ.
ನೀವೇನೇ ಅಂದ್ಕೊಳ್ರೀ… ನನಗೆ ಈಗಿನ ಹಣಮಂದೇವರ ಗುಡಿ ಬಳಿಯ ಸಂತೆ ಒಂದಿಷ್ಟೂ ಖುಷಿ ಕೊಟ್ಟಿಲ್ಲ. ನನಗೆ ಹಳೇ ಬಜಾರದ ಸಂತೆಯ ಖುಷಿಯೇ ಖುಷಿ. ನಾವು ನಮ್ಮ ಹಳ್ಳಿಗಳಿಂದ ತಲೆ ಮೇಲೆ ಹೊತ್ತು ತಂದ ಜೋಳ, ಸಜ್ಜೆ , ಗೋಧಿ, ಹುರಳಿ,..ಹೀಗೆ ನಾವು ಹೊಲದಲ್ಲಿ ಬೆಳೆದ ದವಸ ಧಾನ್ಯಗಳನ್ನು ಸಂತೆಯಲ್ಲಿ ಮಾರಾಟ ಮಾಡಿ ಸಂಜೆ ಹೊತ್ತು ಸಂತೆ ಮಾಡ್ತಿದ್ವಿ.
ಒಮ್ಮೆ ನಾನು, ನಮ್ಮವ್ವ ಹೊತ್ತು ತಂದ ಜೋಳ ಮಾರಾಟವಾಗದೇ, ಸಂಜೆ ಸಂತೆ ಮಾಡದೇ ವಾಪಸು ಹೋಗಿ ಅಪ್ಪನಿಂದ ಬೈಸಿ ಕೊಂಡಿದ್ವಿ. ಅಲ್ಲಾಪುರದ ಬಸಣ್ಣನಂಗಡಿಯ ಬೇಸನುಂಡಿ, ಜಿಲೇಬಿ, ಬೆಲ್ಲದ ಸಿಣ್ಣಿ, ಕೆಂಪ್ಸಿಣ್ಣಿ, ಕರ್ದಂಟ, ತಿನ್ನುವ, ಗರ್ದಿ ಗಮ್ಮತ್ತು ನೋಡುವ ಆ ವಾರದ ನನ್ನ ಖಂಡುಗ, ಖಂಡುಗ ಕನಸು ಪೆಂಡಿಂಗ್ ಉಳೀತು.
ಆಗ ಊರಿಗೊಬ್ಬಿಬ್ಬರು ಮಾತ್ರ ಸೇಂದಿ ಕುಡುಕರು ಇರ್ತಿದ್ರು. ಅವರಿಗೆಲ್ಲ ಈ ಸಂತೆಯದೇ ಸೌಭಾಗ್ಯ. ಕಿರಾಣಿ ಅಂಗಡಿ ವ್ಯಾಪಾರಗಳು, ಡಂಬಳದವರ ಅಂಗಡಿಯ ಕುರ್ಪಿ, ಕುಡ, ಕುಡುಗೋಲು., ರೈತಾಪಿ ವಸ್ತು ಭಂಡಾರ… ಹೀಗೆ ಹಳೇ ಯಡ್ರಾಮಿಯ ಹಳೇ ಸಂತೆಯ ಜವಾರಿತನದ ಸಂಪ್ರೀತಿ ಒಂದು ಸಂಚಿಕೆಯ ಬರಹಕ್ಕೆ ತೀರುವಂತಹದಲ್ಲ. ಸಧ್ಯಕ್ಕಿಷ್ಟು ಸಾಕು.
-ಮಲ್ಲಿಕಾರ್ಜುನ ಕಡಕೋಳ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…